LatestNews

ವಚನಗಳ ಬೆಳಕಿನಲ್ಲಿ ವೈಚಾರಿಕತೆಯ ದೀಪ ಬೆಳಗಿಸಿದವರು ಎಂ. ಎಂ. ಕಲಬುರ್ಗಿ: ರೂಪ ಕುಮಾರಸ್ವಾಮಿ

ಮೈಸೂರು: “ವಚನಗಳ ಬೆಳಕಿನಲ್ಲಿ ವೈಚಾರಿಕತೆಯ ದೀಪ ಬೆಳಗಿಸಿದವರು ಡಾ. ಎಂ.ಎಂ. ಕಲಬುರ್ಗಿ” ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಡಾ. ಎಂ. ಎಂ. ಕಲಬುರ್ಗಿ ಅವರ ಸ್ಮರಣಾರ್ಥ, ದಯಾನಂದ್ ಬೆಶಿ ಹಾಗೂ ಎನ್. ಶಿವಪ್ರಸಾದ್ ಅವರ ದತ್ತಿ ನಿಧಿಯ ಅಂಗವಾಗಿ ಆಯೋಜಿಸಿದ್ದ 32ನೇ ವಚನಗ್ರಾಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ನಾಡಿನ ಹೆಸರಾಂತ ಸಂಶೋಧಕ, ವಿದ್ವಾಂಸ, ಸಾಹಿತಿ ಹಾಗೂ ವೈಚಾರಿಕ ಚಿಂತಕರಾಗಿದ್ದ ಡಾ. ಎಂ. ಎಂ. ಕಲಬುರ್ಗಿ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂದರು.

ವಿಶೇಷವಾಗಿ ವಚನ ಸಾಹಿತ್ಯ, ಶರಣ ಪರಂಪರೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಕುರಿತು ಅವರು ನಡೆಸಿದ ಆಳವಾದ ಸಂಶೋಧನೆಗಳು ಕನ್ನಡ ಜ್ಞಾನಲೋಕಕ್ಕೆ ಮರೆಯಲಾಗದ ಸಂಪತ್ತಾಗಿವೆ. ಅವರ ಅಧ್ಯಯನ, ಸಂಶೋಧನೆ ಹಾಗೂ ವೈಚಾರಿಕ ಚಿಂತನೆಗಳು ಕನ್ನಡಿಗರ ಜ್ಞಾನಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಅವರು, ಅಪಾರ ಪಾಂಡಿತ್ಯದ ಜೊತೆಗೆ ಪ್ರಶ್ನಿಸುವ ಮನೋಭಾವ, ಸತ್ಯಾನ್ವೇಷಣೆ ಹಾಗೂ ವೈಚಾರಿಕ ನಿಲುವುಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದರು.

ಸಂಪ್ರದಾಯಗಳನ್ನು ಕೇವಲ ಒಪ್ಪಿಕೊಳ್ಳುವುದಕ್ಕಿಂತ ಅವುಗಳ ಹಿಂದಿರುವ ಸತ್ಯವನ್ನು ಹುಡುಕುವ ವೈಚಾರಿಕ ದೃಷ್ಟಿಕೋನವನ್ನು ಸಮಾಜದಲ್ಲಿ ಬೆಳೆಸಲು ಶ್ರಮಿಸಿದರು.

“ಕನ್ನಡ ಮತ್ತು ಬಸವಣ್ಣ ಇವರಿಬ್ಬರಿಗಾಗಿ ಬದುಕಿದ್ದೇನೆ” ಎಂಬ ಅವರ ನಿಲುವನ್ನು ಸ್ಮರಿಸಿದ ಅವರು, ವಚನಗಳ ಬೆಳಕಿನಲ್ಲಿ ಸಮಾಜದಲ್ಲಿ ವೈಚಾರಿಕತೆಯ ದೀಪ ಬೆಳಗಿಸಿದ ಮಹತ್ವದ ಚಿಂತಕರಾಗಿ ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಸ್ಮರಣೀಯರು ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ವಚನ ಸಾಹಿತ್ಯವು ವಿಶ್ವದ ಯಾವುದೇ ಭಾಗದಲ್ಲಿಯೂ ಕಂಡುಬರದ ವಿಶಿಷ್ಟವಾದ ಅನುಭಾವಿಕ ಸಾಹಿತ್ಯವಾಗಿದೆ. ಸುಮಾರು ಒಂಬೈನೂರು ವರ್ಷಗಳು ಕಳೆದರೂ ತನ್ನ ಮಹತ್ವ, ಪ್ರಸ್ತುತತೆ ಹಾಗೂ ಮೌಲ್ಯವನ್ನು ಕಳೆದುಕೊಳ್ಳದೆ ಇಂದಿಗೂ ಜನರ ಬದುಕಿಗೆ ಬೆಳಕನ್ನು ನೀಡುತ್ತಿರುವುದು ವಚನ ಸಾಹಿತ್ಯದ ವೈಶಿಷ್ಟ್ಯವಾಗಿದೆ ಎಂದರು.

ಅಂದು ಫ. ಗು. ಹಳಕಟ್ಟಿಯವರು ಮನೆ ಮನೆಗೆ ತೆರಳಿ ತಾಳೆಗರಿಗಳಲ್ಲಿದ್ದ ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಮಹತ್ವದ ಕಾರ್ಯ ಮಾಡಿದರು. ಅದೇ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇಂದು ಶರಣು ವಿಶ್ವವಚನ ಫೌಂಡೇಷನ್ ಮೂಲಕ ಮನೆ ಮನೆಗೆ ತೆರಳಿ ವಚನ ಪುಸ್ತಕಗಳನ್ನು ತಲುಪಿಸುವ ಮೂಲಕ ವಚನಗಳ ಮೌಲ್ಯವನ್ನು ಜನರ ಬದುಕಿಗೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಅಂದು ಹಳಕಟ್ಟಿಯವರು ಮನೆ ಮನೆಗೆ ಅಲೆದು ವಚನಗಳನ್ನು ಸಂಗ್ರಹಿಸಿದರು; ಇಂದು ನಾವು ಮನೆ ಮನೆಗೆ ತೆರಳಿ ವಚನಗಳನ್ನು ತಲುಪಿಸುತ್ತಿದ್ದೇವೆ. ಅಂದಿನ ಸಂಗ್ರಹ ಕಾರ್ಯ ವಚನಗಳನ್ನು ಉಳಿಸಿತು; ಇಂದಿನ ವಿತರಣಾ ಕಾರ್ಯ ವಚನ ಮೌಲ್ಯಗಳನ್ನು ಜನರ ಬದುಕಿನಲ್ಲಿ ಉಳಿಸುವ ಪ್ರಯತ್ನವಾಗಿದೆ” ಎಂದು ವಚನ ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ವಚನ ಸಾಹಿತ್ಯವು ಮನುಷ್ಯನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ವಚನಗಳನ್ನು ಅಧ್ಯಯನ ಮಾಡಿ, ಅವುಗಳ ಆಶಯದಂತೆ ಬದುಕು ಸಾಗಿಸಿದಾಗ ಎಂತಹ ಕಷ್ಟದ ಸಂದರ್ಭವನ್ನೂ ಎದುರಿಸುವ ಶಕ್ತಿ ದೊರೆಯುತ್ತದೆ. ನಂತರ ಮಂಗಲ ಗ್ರಾಮದ ಪ್ರತೀ ಮನೆಗೆ ಉಚಿತವಾಗಿ ವಚನ ಪುಸ್ತಕ ವಿತರಿಸಿ ವಚನಗ್ರಾಮ ಎಂದು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಕೋಶಾಧ್ಯಕ್ಷ ಎನ್. ಶಿವಪ್ರಸಾದ್, ವಕೀಲರಾದ ಎನ್. ವಿರೂಪಾಕ್ಷ, ದತ್ತಿ ದಾಸೋಹಿ ದಯಾನಂದ್ ಬೆಶಿ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಗ್ರಾಮದ ಮುಖಂಡರಾದ ಮಾದಪ್ಪ, ಬಸವರಾಜು, ಪುಟ್ಟಣ್ಣ, ಸುರೇಶ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಮಹದೇವಸ್ವಾಮಿ ಪ್ರಾರ್ಥಿಸಿದರು. ಪಿ ಮಹದೇವಪ್ಪ ಸ್ವಾಗತಿಸಿದರು. ಉಪನ್ಯಾಸಕ ಮಹದೇವಸ್ವಾಮಿ ವಂದಿಸಿದರು. ಪುಟ್ಟಣ್ಣ ನಿರೂಪಿಸಿದರು.

admin
the authoradmin

Leave a Reply