ಜಯಶ್ರೀ ಜೆ. ಅಬ್ಬಿಗೇರಿ… ಇವರು ಒಂಥರಾ ‘ರೈಟಿಂಗ್ ಮಷಿನ್’ ಏಕೆಗೊತ್ತಾ?
*ಇದು ಬರೀ ಲೇಖನವಲ್ಲ.. ವೃತ್ತಿ ಬದುಕಿನಾಚೆಗಿನ ಮಹಿಳೆಯೊಬ್ಬರ ಸಾಧನೆಯ ಹೆಜ್ಜೆಗುರುತು...!

ಕಾಲೇಜಿನಲ್ಲಿ ಬೆಳಿಗ್ಗೆಯಿಂದ ಸಂಜೆತನಕ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಬರುವ ಶಿಕ್ಷಕರು, ಅಧ್ಯಾಪಕರು, ಉಪನ್ಯಾಸಕರಿಗೆ ಅಬ್ಬಾ ಸಾಕಪ್ಪಾ ಎಂದೆನಿಸುವುದು ಸಹಜ… ಹೀಗಿದ್ದರೂ ವೃತ್ತಿ, ಮತ್ತು ಕುಟುಂಬ ನಿರ್ವಹಣೆಯ ಜತೆ, ಜತೆಗೆ, ವೃತ್ತಿಯಾಚೆಗೂ ಪ್ರವೃತ್ತಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕಿನಲ್ಲಿ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಬರುತ್ತಿರುವವರು ಹಲವರಿದ್ದಾರೆ ಅಂಥವರ ಪೈಕಿ ಒಬ್ಬರು ಜಯಶ್ರೀ ಜಯಪ್ರಕಾಶ್ ಅಬ್ಬಿಗೇರಿ…
ಸಾಮಾನ್ಯವಾಗಿ ಪತ್ರಿಕೆ ಓದುವವರಿಗೆ ಇವರ ಪರಿಚಯ ಇದ್ದೇ ಇರುತ್ತದೆ. ಜಯಶ್ರೀ ಜೆ ಅಬ್ಬಿಗೇರಿ ಹೆಸರಿನಲ್ಲಿ ಹಲವಾರು ಪತ್ರಿಕೆಗಳಿಗೆ ಸಾವಿರಾರು ಲೇಖನಗಳನ್ನು ಬರೆದಿರುವ ಇವರು ಕ್ರಿಯಾಶೀಲ ಜೀವಿ.. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವುದರಿಂದ ಆರಂಭಿಸಿ, ನಿರೂಪಕರಾಗಿ, ಲೇಖಕಿಯಾಗಿ, ಹಾಡುಗಾರ್ತಿಯಾಗಿ, ಆಪ್ತಸಮಾಲೋಚಕರಾಗಿ… ಹೀಗೆ ಇವರ ಕಾರ್ಯ ಚಟುವಟಿಕೆಯ ಕ್ಷೇತ್ರಗಳ ಪಟ್ಟಿ ಮುಂದುವರೆಯುತ್ತಾ ಸಾಗುತ್ತವೆ…
ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ವಿಭಿನ್ನಶೈಲಿಯಲ್ಲಿ ಓದುಗರಿಗೆ ಮನಮುಟ್ಟುವಂತೆ ಬರೆಯುವುದನ್ನು ಸಿದ್ದಿಸಿಕೊಂಡಿರುವ ಇವರು ‘ಜನಮನಕನ್ನಡ’ಕ್ಕೂ ಬರೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ… ಎಲ್ಲರೂ ಎಲ್ಲವನ್ನೂ ಬರೆದು ಬಿಡಬಹುದು.. ಆದರೆ ಓದಿದ ಮೇಲೆಯೂ ಓದುಗನ ಮನದಲ್ಲಿ ಗಿರಕಿಹೊಡೆಯುವಂತೆ ಮಾಡುವುದಿದೆಯಲ್ಲ ಅದು ಸುಲಭಲ್ಲ… ಆದರೆ ಅಂತಹದೊಂದು ಗಟ್ಟಿತನ ಜಯಶ್ರೀ ಅವರ ಲೇಖನಗಳಲ್ಲಿರುತ್ತವೆ ಎನ್ನುವುದು ಅತಿಶಯೋಕ್ತಿಯಲ್ಲ.

ಜಯಶ್ರೀ ಜೆ ಅಬ್ಬಿಗೇರಿ ಅವರು ವೃತ್ತಿಯಾಚೆಗೂ ಮಾಡುತ್ತಾ ಬಂದಿರುವ ಕೆಲಸ ಕಾರ್ಯಗಳನ್ನು ಅರ್ಥಾತ್ ಸಾಧನೆಯ ಹೆಜ್ಜೆ ಗುರುತುಗಳನ್ನು ಹಾಗೆ ಸುಮ್ಮನೆ ಕೆದಕುತ್ತಾ ಹೋದರೆ ಬೆರಗಾಗುತ್ತದೆ… ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಾ? ಎಂಬ ಪ್ರಶ್ನೆಯೊಂದು ಸದ್ದಿಲ್ಲದೆ ಎದ್ದು ನಿಲ್ಲುತ್ತದೆ. ಬಹುಶಃ ಅವರಿಗೂ ಒಂದು ಕ್ಷಣ ಹಾಗೆನಿಸಿದರೆ ತಪ್ಪೇನಿಲ್ಲ… ನಿಜವಾದ ಸಾಧಕರಿಗೆ ಕೆಲಸ ಮಾಡುವುದಷ್ಟೆ ಗೊತ್ತಿರುತ್ತದೆ.. ಅದೊಂದು ಸಾಧನೆ ಎಂಬುದು ಅರಿವಿಗೆ ಬಂದಿರುವುದಿಲ್ಲ… ಅದನ್ನು ಜನಸಾಧನೆಯಾಗಿ ಗುರುತಿಸಿದಾಗಲೂ ಮುಗುಳ್ನಕ್ಕು ಮುನ್ನಡೆಯುತ್ತಾರೆ…
ಹಾಗೆನೋಡಿದರೆ ಜಯಶ್ರೀ ಜೆ ಅಬ್ಬಿಗೇರಿ ಅವರು ಸದ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರ ಸರಕಾರಿ ಎಸ್.ಪಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದ ಕಿತ್ತೂರಾದರೆ, ಸ್ವಂತ ಊರು ಗದಗ ಜಿಲ್ಲೆಯ ಜಕ್ಕಲಿ (ಇತಿಹಾಸ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಶ್ರೀ.ಅಂದಾನಪ್ಪ ದೊಡ್ಡಮೇಟಿಯವರ ಊರು ಗಾಂಧೀಜಿಯವರು ಭೇಟಿ ನೀಡಿದ ಊರು.) ತಂದೆ: ಡಾ. ಆರ್.ವಿ.ಪಾಟೀಲ, ತಾಯಿ: ಸರೋಜಿನಿ.

ಎಂ.ಎ. ಬಿ.ಇಡಿ. ಶಿಕ್ಷಣ ಪಡೆದಿರುವ ಜಯಶ್ರೀ ಅವರು, 1998ರಲ್ಲಿ ಸರಕಾರಿ ಸೇವೆಗೆ ಸೇರಿದರು. ಅಲ್ಲಿಂದ ಇಲ್ಲಿವರೆಗೆ ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಲೇ ಬಂದಿದ್ದಾರೆ. ಇವತ್ತು ಇವರು ಬರೀ ಉಪನ್ಯಾಸಕರಾಗಿ ಉಳಿದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಅದರ ಬಗ್ಗೆ ಅಧ್ಯಯನ ಮಾಡಿ ಅದಕ್ಕೊಂದು ಪರಿಹಾರ ಕಂಡು ಹಿಡಿಯುವಲ್ಲಿಯೂ ಸಿದ್ಧಹಸ್ತರಾಗಿದ್ದಾರೆ.. ಇವರೊಬ್ಬ ಬೆಸ್ಟ್ ಆಪ್ತಸಮಾಲೋಚಕರು ಎನ್ನುವುದರಲ್ಲಿ ಎರಡು ಮಾತಿಲ್ಲ.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವತ್ತ ಸದಾ ಚಿಂತನಶೀಲರಾಗಿರುವ ಇವರು ಅವರಿಗೆ ಬೆನ್ನುಲುಬಾಗಿ ನಿಂತು ಕಾರ್ಯನಿರ್ವಹಿಸಿರುವ ಪರಿಣಾಮ ಇವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇವತ್ತು ನಾಡಿನ ವಿವಿಧ ಇಲಾಖೆಗಳಲ್ಲಿ ಮೇಲಾಧಿಕಾರಿಗಳಾಗಿ ಉತ್ತಮ ಶಿಕ್ಷಕರಾಗಿ, ಸರಕಾರದ ಉನ್ನತ ಹುದ್ದೆಗಳಲ್ಲಿ ನೌಕರರಾಗಿ, ಡಾಕ್ಟರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಡಿಕಾಯುವ ಸೈನಿಕರಾಗಿ ಸೇವೆಸಲ್ಲಿಸುತ್ತಿರುವ ಇವರ ಅನೇಕ ಶಿಷ್ಯಂದಿರು ಇವರು ಕಲಿಸಿದ ಹಿಂದಿಭಾಷೆಯನ್ನು ಇಂದಿಗೂ ನೆನೆಯುತ್ತಾರೆ ಎನ್ನುವುದು ಹೆಮ್ಮೆ ತರುವ ವಿಚಾರವಾಗಿದೆ.

ಇನ್ನು ಸ್ಪರ್ಧಾತ್ಮಕ ಜಗತ್ತಿಗೆ ಅನಿವಾರ್ಯವಾದ ಇಂಗ್ಲೀಷ್ನ್ನು ಗ್ರಾಮೀಣ ಮಕ್ಕಳಿಗೆ ಕಲಿಸಿ ಅವರ ಬಾಳುಬೆಳಗಲು ಶ್ರಮಿಸುತ್ತಿದ್ದಾರೆ ಎನ್ನವುದು ಇವರ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಇನ್ನು ಸಾಂಸ್ಕೃತಿಕ ಸಂಘದ ಸಂಚಾಲಕರಾಗಿ ಎನ್ಎಸ್ಎಸ್ ಉಪಶಿಬಿರಾಧಿಕಾರಿಗಳಾಗಿ ಅನೇಕ ವಿದ್ಯಾರ್ಥಿಗಳಲ್ಲಿ ಸಭಾಕಂಪನವನ್ನು ಹೋಗಲಾಡಿಸಿದ್ದಾರೆ. ಸ್ವತಃ ಉತ್ತಮ ವಾಗ್ಮಿಯಾಗಿ, ನಿರೂಪಕಿಯಾಗಿ, ಹಾಡುಗಾರ್ತಿಯಾಗಿ ಅತ್ಯುತ್ತಮ ವಾಕ್ಪಟುಗಳನ್ನು ಸಂಗೀತಗಾರರನ್ನು ನಿರೂಪಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಆಕಾಶವಾಣಿ ಧಾರವಾಡದಲ್ಲಿ ಕನ್ನಡ ಇಂಗ್ಲೀಷ್ ಭಾಷಣಗಳು ಹಿಂದಿಪಾಠಗಳು ಸಾರಥ್ಯ ವಹಿಸಿದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಕೆಎಲ್ ಇ ವೇಣು ಧ್ವನಿ ಎಫ್ಎಮ್ ನಲ್ಲಿ ಸಂದರ್ಶನದ ಜೊತೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಂಗ್ಲೀಷ್ ಉಪನ್ಯಾಸಕರಾಗಿದ್ದುಕೊಂಡು ಕನ್ನಡ ಸಾಹಿತ್ಯದಲ್ಲಿ ಅಪೂರ್ವ ಸೇವೆಯನ್ನು ಸಲ್ಲಿಸಿದ್ದಕ್ಕೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳು (ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ, ವಿಜಯವಾಣಿ, ವಿಶ್ವವಾಣಿ, ಪ್ರಿಯಾಂಕ. ಭಾವನಾ. ಅಡ್ವೆಂಚರ್ಸ್, ಸುಧಾ, ಕರ್ಮವೀರ, ಪ್ರಜಾವಾಣಿ, ಹೊಸದಿಗಂತ, ಈಸಂಜೆ ಹೀಗೆ ಅನೇಕ ಪತ್ರಿಕೆಗಳು) ಇವರ ಅಕ್ಷರದ ರುಚಿಕಂಡಿವೆ. ವಿಶ್ವದಾದ್ಯಂತ ಹರಡಿಕೊಂಡಿರುವ ಹೊರನಾಡ ಕನ್ನಡಿಗರು (ದುಬೈ, ಲಂಡನ್, ಅಮೇರಿಕಾ ಮಸ್ಕತ್ ಸಿಂಗಾಪುರ) ಇವರ ಆನ್ಲೈನ್ ಪತ್ರಿಕೆಗಳ ಓದುಗ ಅಭಿಮಾನಿಗಳಾಗಿದ್ದಾರೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.
ಆಸ್ಟ್ರೇಲಿಯಾದಲ್ಲಿ ನಡೆದ ಜಾಗತಿಕ ಬಸವ ಸಮಿತಿಯ ಸ್ಮರಣಿಕೆಯಲ್ಲಿ ಇವರು ಬರೆದ ಲೇಖನ ಪ್ರಕಟಿತಗೊಂಡ ಕೀರ್ತಿಯ ಗರಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಾದ ಸ್ಪರ್ಧಾಸ್ಪೂರ್ತಿ, ಜೀವನಾಡಿ, ಕರ್ನಾಟಕ ಸೌರಭ, ಉದಯರಶ್ಮಿ ಸಂಗಾತಿ, ಹಾಗೂ ಇನ್ನೂ ಅನೇಕ ಪತ್ರಿಕೆಗಳಿಗೆ ಅಂಕಣಕಾರ್ತಿಯಾಗಿ ತಮ್ಮ ಸಾಹಿತ್ಯಸೇವೆಯನ್ನು ಸಲ್ಲಿಸುತ್ತಿದ್ದಾರೆ. ಡಿಜಿಟಲ್ ದುನಿಯಾದಲ್ಲಿ ಆನ್ಲೈನ್ ಪತ್ರಿಕೆಗಳಿಗೆ ತಮ್ಮ ವಿಭಿನ್ನ ಬರಹಗಳನ್ನು ಬರೆಯುವ ಮೂಲಕ ಓದುಗರ ಮನಗೆದ್ದಿದ್ದಾರೆ.

ಇವರ ವ್ಯಕ್ತಿತ್ವ ವಿಕಸನ ಲೇಖನಗಳು, ಒಲವೊನೋಲೆಗಳು, ಆಧ್ಯಾತ್ಮ ಲೇಖನಗಳು, ಚಿಂತನಪರ ಲೇಖನಗಳು, ಹಾಸ್ಯಲೇಖನಗಳು, ಮಹಿಳಾಪರಲೇಖನಗಳು ಕವನಗಳು, ಸಾಂಸ್ಕೃತಿಕ ಶೈಕ್ಷಣಿಕ ಲೇಖನಗಳು ಓದುಗರನ್ನು ಮನಸೂರೆಗೊಂಡಿವೆ. ನಿತ್ಯ ಯಾವುದಾದರೊಂದು ಪತ್ರಿಕೆಯಲ್ಲಿ ಇವರ ಲೇಖನ ಇದ್ದೇ ಇರುತ್ತದೆ. ಹೀಗಾಗಿಯೇ ಇವರ ಆಪ್ತವಲಯ, ಸಾಹಿತ್ಯ ಬಳಗದಲ್ಲಿ ಇವರನ್ನು ರೈಟಿಂಗ್ ಮಷಿನ್ಎಂದು ಕರೆಯುವುದುಂಟು. ಒಟ್ಟಿನಲ್ಲಿ ಜಯಶ್ರೀ ಅಬ್ಬಿಗೇರಿಯವರು ಒಬ್ಬ ಉಪನ್ಯಾಸಕಿಯಾಗಿ, ಲೇಖಕಿಯಾಗಿ, ಅಂಕಣಕಾರ್ತಿಯಾಗಿ ಅಕ್ಷರಸೇವೆಯಲ್ಲಿ ದಣಿವರಿಯದೆ ಮುನ್ನಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ….
ಇನ್ನು ಇವರು ಪ್ರಕಟಿಸಿದ ಲೇಖನಗಳನ್ನು ನೋಡುವುದಾದರೆ, 1 ಹೊಡೆದ ಕಲ್ಲುಗಳಿಂದಲೇ ಕೋಟೆ ಕಟ್ಟಿಕೊಳ್ಳಿ, 2 ಬದುಕೇ ವಿಸ್ಮಯ!, 3 ಮುಚ್ಚಿಟ್ಟ ಪ್ರೀತಿಯನು ಬಿಚ್ಚಟ್ಟು ಕೊಂಡು, 4 ಮನಃಶ್ಯಾಂತಿಗೆ ಇಲ್ಲಿದೆ ರಾಜಮಾರ್ಗ, 5 ಸಂತಸ ಅರಳುವ ಸಮಯ, 6 ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ ಮೇಲೇರಿಸುವ ಏಣಿಗಳು, 7 ನೀವು ನಿಮ್ಮ ಗುಳಿಗಿತುಗೊಂಡ್ರಿಲ್ಲೋ, 8 ಎದೆಯಗೂಡಿನಲ್ಲಿ ಕದ್ದು ಮುಚ್ಚಿ, 9 ಜೇನಿನಗೂಡು ನಾವೆಲ್ಲ,

10 ಹಣ್ಣು ಬೇಕೆಂದವನು ಮರಹತ್ತಬೇಕು, 11ಸಂಕಲ್ಪಗಳಿಗೆ ಈವೇಳೆಯೇ ಶುಭವೇಳೆ, 12ಸೋಲುಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ, 13ಮನೋಲ್ಲಾಸ, 14ಕುಂತರು ನಿಂತರು ನಿನ್ನದೇ ಧ್ಯಾನ, 15 ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ. 16 2026 ನೇ ಸಾಲಿಗೆ ವಿವಿಧ ಪ್ರಕಾರದ 07 ಪ್ರಕಾರಗಳು ಅಚ್ಚಿನಲ್ಲಿವೆ. ಹೀಗೆ ಒಟ್ಟು 22 ಕೃತಿಗಳು ಇವರ ಲೇಖನಿಯಿಂದ ಜನ್ಮತಾಳಿವೆ
ಇದರಾಚೆಗೆ ಸಾವಿರಾರು ಲೇಖನಗಳು ನಾಡಿನ ಎಲ್ಲ ಪ್ರಮುಖಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ To write and present a talk in English, To particicipation in discussion, To write and present a talk in kannadaHindi lessons ಎಂಬಕಾರ್ಯಕ್ರಮಗಳು ಪ್ರಸಾರಗೊಂಡಿವೆ.

ಇನ್ನು ಇವರ ಸಾಧನೆಯನ್ನು ಅರಸಿ ಬಂದಿರುವ ಪ್ರಶಸ್ತಿ ಸನ್ಮಾನಗಳು ಹಲವಾರು ಇದ್ದು ಅವುಗಳಲ್ಲಿ ಡಾ: ಸಜನಾಗಲೋಟಿಮಠ ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ -2007, ಕನ್ನಡ ರಾಜ್ಯೋತ್ಸವ ಸಮಿತಿ ಸವದತ್ತಿ ಇವರಿಂದ ಶಿಕ್ಷಣರತ್ನ ಪ್ರಶಸ್ತಿ ಸನ್ಮಾನ-2007, ದಸರಾ ಉತ್ಸವ ಸಮಿತಿ ಸವದತ್ತಿ ಇವರಿಂದ ಶಿಕ್ಷಣರತ್ನ ಪ್ರಶಸ್ತಿ ಸನ್ಮಾನ -2008, ಕರ್ನಾಟಕ ಪ್ರತಿಭಾ ಅಕಾಡಮಿ ಬೆಂಗಳೂರು ಇವರಿಂದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ 2010, ಮೌಲ್ಯ ಸಂಪದ ಬಳಗ ರಾಮದುರ್ಗದಿಂದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ 2012
ಚಿನ್ಮಯ ಪ್ರಕಾಶನ ಅಥಣಿ ಇವರಿಂದ ಬಸವಚೇತನ ಪ್ರಶಸ್ತಿ -2013, ಕನ್ನಡ ಸಾಂಸ್ಕೃತಿಕ ಆಕಾಡಮಿ ಬೆಂಗಳೂರು ಇವರಿಂದ ಶಿಕ್ಷಣ ರತ್ನ ಪ್ರಶಸ್ತಿ -2014, ಸಾಹಿತ್ಯ ರತ್ನ ಪ್ರಶಸ್ತಿ -2015, ಆಜೂರ ಪ್ರತಿಷ್ಠಾನ ಪ್ರಶಸ್ತಿ -2018, ಅಕ್ಷರಲೋಕದ ನಕ್ಷತ್ರ ಪ್ರಶಸ್ತಿ- 2018, ಪ್ರೊ ಎಸ್.ಆರ್.ಜೋಗ್ ಪತ್ರಕಾರ ಪ್ರಶಸ್ತಿ -2020 ಅಡೈಜರ್ ಪುಸ್ತಕ ಪ್ರಶಸ್ತಿ 2020, ಸರ್ ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ _2021, ಗುರುಕುಲ ತಿಲಕ ಪ್ರಶಸ್ತಿ -2021, ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ -2021, ಸದ್ಗುರು ಕಾಯಕಶ್ರೀ -2021, ರಾಜ್ಯೋತ್ಸವ ಪ್ರಶಸ್ತಿ –ವಿಶ್ವಕನ್ನಡ ಬಳಗ ಧಾರವಾಡ ಇವರಿಂದ- 2022, ಗಡಿನಾಡ ಶಿರೋಮಣಿ ಪ್ರಶಸ್ತಿ -2022, ಶಿಕ್ಷಣ ಶಿರೋಮಣಿ ಪ್ರಶಸ್ತಿ-2023, ಸಮಗ್ರ ಸಾಹಿತ್ಯ ಪ್ರಶಸ್ತಿ-2024, ಶಿಕ್ಷಣ ತಿಲಕ ಪ್ರಶಸ್ತಿ -2025
ಇದೆಲ್ಲವನ್ನು ಓದಿದ ಬಳಿಕ ಜಯಶ್ರೀ ಜೆ ಅಬ್ಬಿಗೇರಿ ಅವರ ನಿಸ್ವಾರ್ಥ ಸೇವೆನಿಜಕ್ಕೂ ಹೆಮ್ಮೆ ಎನಿಸುತ್ತದೆ… ಇವರ ವೃತ್ತಿ ಬದುಕಿನಾಚೆಗೂ ಬರಹಲೋಕದ ವಿಹಾರ, ಸಾಮಾಜಿಕ ಕಾರ್ಯಗಳಲ್ಲಿನ ನಿಸ್ವಾರ್ಥತೆ, ಸಮಾಜಕ್ಕೆ ಏನಾದರೂ ಕೊಡಬೇಕೆನ್ನುವ ತವಕ.. ಎಲ್ಲವೂ ಪ್ರಶಂಸನೀಯ… ಇವರ ಕಾರ್ಯ ಹೀಗೆಯೇ ಮುಂದುವರೆಯಲಿ… ಬದುಕಿನ ಪಯಣ ಸದಾ ಸಾಧನೆ ದಿಕ್ಕಿನ ಕಡೆಗೆ ಸಾಗುತ್ತಿರಲಿ…
ಕೊನೆಯದಾಗಿ ಮೇಡಂ ನಿಮಗೊಂದು ಸಲಾಂ…
B M Lavakumar









