ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಯಾರೂ ಇಲ್ಲದವರು ಅನಾಥರಲ್ಲ. ಎಲ್ಲರೂ ಇದ್ದು ಇಲ್ಲದವರು ಅನಾಥರು ಎಂದು ಹುಣಸೂರು ಶಾಸಕರಾದ ಜಿ.ಡಿ ಹರೀಶ್ ಗೌಡ ರವರು ಹೇಳಿದರು.
ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಯ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ನಿರ್ಗತಿಕ ವೃದ್ದರಿಗೆ ಗೌರಿಗಣೇಶ ಹಬ್ಬದ ಪ್ರಯುಕ್ತ ಬಟ್ಟೆ ವಿತರಣೆ ಮಾಡಿ ಮಾತನಾಡಿ, ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥರಾದ ನಿಂಗರಾಜ್ ಮಲ್ಲಾಡಿ ರವರು ಕಳೆದ 20 ವರ್ಷಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಯಾವುದೇ ಜಾತಿಬೇಧವಿಲ್ಲದೆ ನೊಂದ ಜನರಿಗೆ ಸಂತೈಸುತ್ತಾ ಅವರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಾ ಬರುತ್ತಿದ್ದಾರೆ. ನೆಲೆಯಿಲ್ಲದೆ ದಿಕ್ಕು ದನಿಯಿಲ್ಲದ ಜನರಿಗೆ ನೆಲೆ ಕಲ್ಪಿಸುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ.

ಕುಟುಂಬದವರಿಂದ ತಿರಸ್ಕಾರಕ್ಕೆ ಒಳಗಾಗಿ ಅನಾಥ ಭಾವನೆಯಿಂದ ಬದುಕು ದೂಡುತ್ತಿರುವ ನಿರ್ಗತಿಕ ವೃದ್ಧರನ್ನು ಗುರುತಿಸಿ ಅವರಿಗೆ ಸಾಂತ್ವಾನದ ಮಾತನ್ನು ಹೇಳಿ ಅವರಲ್ಲಿದ್ದ ಅನಾಥ ಭಾವನೆಯನ್ನು ಹೋಗಲಾಡಿಸಿ ಭರವಸೆಯ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. 40 ನಿರ್ಗತಿಕ ವೃದ್ಧರಿಗೆ ಇಂದು ನಮ್ಮ ಕೈಯಿಂದಲೇ ಹೊಸ ಬಟ್ಟೆಯನ್ನು ಕೊಡಿಸಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಇವರ ಈ ಕಾರ್ಯವು ಸಮಾಜಮುಖಿಯಾಗಿದೆ.
ಇಂತಹ ಮಾನವೀಯತೆಯ ಕೆಲಸಗಳಿಗೆ ನನ್ನ ಸಹಕಾರ ಸದಾ ಇರುತ್ತದೆ. ನನ್ನ ಕೈಯಿಂದ ಹೊಸ ಬಟ್ಟೆಯನ್ನು ಪಡೆದುಕೊಂಡ ವಯಸ್ಸಾದ ವೃದ್ಧರು, ಅಂಗವಿಕಲರು ಮಂದಹಾಸದಿಂದ ಹೃದಯತುಂಬಿ ಹಾರೈಸುತ್ತಿರುವುದು ನನಗೆ ಭಗವಂತನಿಂದಲೇ ಆಶೀರ್ವಾದ ಪಡೆದಂತಿದೆ ಎಂದರು.
ಸಂಸ್ಥೆಯ ಮುಖ್ಯಸ್ಥರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಬೆಳಕು ಸೇವಾ ಸಂಸ್ಥೆಯು ಹಲವಾರು ವರ್ಷಗಳಿಂದ ನೊಂದವರು, ಹಸಿದವರು, ಬೀದಿಯಲ್ಲಿ ಬಿದ್ದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಕತ್ತಲೆಯ ಬದುಕಿನಲ್ಲಿ ಬೆಳಕು ಚೆಲ್ಲುವ ಕೆಲಸ ಮಾಡುತ್ತಾ ಬರುತ್ತಿದೆ. ಅಂತೆಯೇ ಸಂಸ್ಥೆ ವತಿಯಿಂದ ಹಿರಿಯರಿಗೆ ಹಗಲು ಯೋಗಕ್ಷೇಮ ಕೇಂದ್ರವನ್ನು ಮಾಡಲಾಗಿದ್ದು, ಈ ಕೇಂದ್ರದಲ್ಲಿ ಮೊದಲ ಬಾರಿಗೆ 50 ವೃದ್ಧರಿಗೆ ಪ್ರತಿ ಶುಕ್ರವಾರ ಮಧ್ಯಾಹ್ನದ ಊಟದ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು, ಕಲೆ ಸಂಗೀತ, ಕ್ರೀಡೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದು, ಅವರಲ್ಲಿದ್ದ ತಿರಸ್ಕಾರದ ಮನೋಭಾವನೆಯನ್ನು ಹೋಗಲಾಡಿಸವುದು, ಮುಂತಾದ ಮನೋ ವಿಕಾಸದ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದೇವೆ.

ಇದರಿಂದ ನಮಗೆ ಯಾರೂ ಇಲ್ಲ ಎನ್ನುವ ಮನೋಭಾವನೆ ತೊಲಗಿ ನಮಗೆ ಯಾರೋ ಇದ್ದಾರೆ ಎಂಬ ಭರವಸೆ ಮೂಡುತ್ತಿದೆ. ಈ ಕಾರ್ಯವು ವೃದ್ಧರಿಗೆ ಬಹಳ ರೀತಿಯ ಅನುಕೂಲವಾಗುತ್ತಿದೆ. ಈ ಮಹತ್ವವಾದ ಕಾರ್ಯಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ಈ 40 ಜನ ವೃದ್ದರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಬ್ಬದ ಊಟವನ್ನು ಸಂಸ್ಥೆಯ ಮುಖ್ಯಸ್ಥರಾದ ಶೈಲಿನ್ ಮನು ರವರು ಅತ್ಯಂತ ಪ್ರೀತಿಯಿಂದ ಖುದ್ದು ತಯಾರಿಸಿದ್ದರು. ವೃದ್ದರಿಗೆ ಊಟವನ್ನು ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾದ ಗಣೇಶ್, ಇವರ ಪತ್ನಿ ಅರ್ಪಿತಾ ಗಣೇಶ್, ನಿಂಗರಾಜ್ ಮಲ್ಲಾಡಿ ರವರ ಮಗಳಾದ ಸ್ನೇಹಾ ಹಾಗೂ ಸಂಸ್ಥೆಯ ಮಕ್ಕಳು ಬಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಬಸವಲಿಂಗಯ್ಯ, ಹರವೆ ಶ್ರೀಧರ್, ಮಾಜಿ ಶಾಸಕರಾದ ದಿವಂಗತ ಪಾಪಣ್ಣ ರವರ ಮಗನಾದ ಸತೀಶ್ ಪಾಪಣ್ಣ, ಅಗ್ರಹಾರ ಸಾಕಯ್ಯ, ಬಿಳಿಗಿರೆ ಸಣ್ಣಯ್ಯ, ಕಟ್ಟೆಮಳಲವಾಡಿ ಹಿರಿಯರಾದ ಕಾಳಮ್ಮ, ಪರಶು, ಚಂದ್ರಯ್ಯ, ಶೋಬಮ್ಮ, ದಾಸಪ್ಪ, ಅಂಗವಿಕಲರಾದ ಕೃಷ್ಣಯ್ಯ, ಕೆರೆಯೂರು ಶಿವಶೆಟ್ಟಿ, ತಿಮ್ಮರಾಯಪ್ಪ, ಕಾರ್ತಿಕ್, ದೇವರಾಜು, ಬಚ್ಚಯ್ಯ ಮುಂತಾದ ವೃದ್ದರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.








