LatestState

ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಅದ್ದೂರಿ ಕಲಾಸಂಗಮ ಕಾರ್ಯಕ್ರಮ

ಕುಶಾಲನಗರ (ಆರ್ ಹೆಚ್) : ಪಟ್ಟಣದ ಬೈಚನಹಳ್ಳಿಯ ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಪದವಿ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅದ್ದೂರಿ ಕಲಾಸಂಗಮ 2026 ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳ ತಂಡ ದೇಶಭಕ್ತಿ, ದೇಶದ ಭಾವೈಕ್ಯತೆ,ಕಲೆ,ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಅದ್ಭುತ ಹಾಡುಗಳಿಗೆ ನೃತ್ಯ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮನಸೂರೆಗೊಳಿಸಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಮೈನವಿರೇಳಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಮಾತನಾಡಿ,ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ನೃತ್ಯ, ಸಂಗೀತ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದು ಸಲಹೆ ನೀಡಿದರಲ್ಲದೆ,  ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗದ ಸ್ಥಾನಕ್ಕೆ ಏರಬಹುದು. ಸತತ ಪ್ರಯತ್ನ, ಸಮಯ ಪಾಲನೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಖಂಡಿತ ಯಶಸ್ಸು ನಿಮ್ಮ ಪಾಲಾಗುತ್ತದೆ ಎಂದರು.

ವಿದ್ಯಾರ್ಥಿಗಳ ಯಶಸ್ವಿ ಹಿಂದೆ ಉಪನ್ಯಾಸಕರ ಜೊತೆ ಪೋಷಕರ ಜವಾಬ್ದಾರಿ ಕೂಡ ಇದೆ.ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮಾದಕವಸ್ತು ಸೇವನೆ ಹಾಗೂ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ಆದ್ದರಿಂದ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಜೊತೆಗೆ ಇನ್ನಿತರ ಚಟುವಟಿಕೆಗಳ ಕುರಿತು ಪೋಷಕರು ಹೆಚ್ಚಿನ ನಿಗವಹಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕು. ಅಂಕಗಳ ಜೊತೆಗೆ ಜೀವನಮೌಲ್ಯಗಳು ಅತ್ಯಗತ್ಯ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಿವೇಕಾನಂದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ,ವಿಧ್ಯಾರ್ಥಿ ಜೀವನ ಅಮೂಲ್ಯವಾದುದು, ಶೈಕ್ಷಣಿಕ ಸಾಧನೆಯೊಂದಿಗೆ ಇತರೆ ಚಟುವಟಿಕೆಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡು ಏನಾದರೂ ಸಾಧಿಸುವ ಛಲ ಹೊಂದಬೇಕು. ವಿಧ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ‌ ಪ್ರಾಂಶುಪಾಲೆ ಕ್ಲಾರರೆಷ್ಮ,ಎಂಜಿಎಂ  ಪದವಿ ಕಾಲೇಜಿನ‌ ಪ್ರಾಂಶುಪಾಲೆ ಟಿ.ಎ.ಲಿಖಿತಾ , ಉಪನ್ಯಾಸಕ, ಸಿಬ್ಬಂದಿ ವರ್ಗ ಹಾಗೂ ಪೋಷಕರು ಪಾಲ್ಗೊಂಡಿದ್ದರು. ಇದೇ ಸಂದರ್ಭ  ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು‌ ಪೋಷಕರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ‌ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು  ಕಲಾಸಂಗಮದ ಅಂಗವಾಗಿ ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು

admin
the authoradmin

Leave a Reply