LatestMysore

ಹಾಲಿಗೆ ₹8 ಏರಿಕೆ ನೆಪದಲ್ಲಿ ಕಾಫಿ, ಟೀಗೆ ₹5 ಹೆಚ್ಚಳ: ವೈಜ್ಞಾನಿಕ  ಬೆಲೆ ನಿಗದಿಗೆ ಎಬಿಜಿಪಿ ಮನವಿ

​ಮೈಸೂರು: ಒಂದು ಲೀಟರ್ ಹಾಲಿನ ದರ ₹8 ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ನಗರದ ಹೋಟೆಲ್‌ಗಳಲ್ಲಿ ಪ್ರತಿ ಲೋಟ ಕಾಫಿ ಹಾಗೂ ಟೀ ಬೆಲೆಯನ್ನು ಏಕಾಏಕಿ ₹5 ರಷ್ಟು ಹೆಚ್ಚಿಸಿರುವುದಕ್ಕೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯಕರ್ತರು ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರು

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ .ನಾರಾಯಣಗೌಡ ರವರನ್ನು ಭೇಟಿ ಮಾಡಿ ಹೋಟೆಲ್ ಮಾಲೀಕರ ಸಂಘವು ಮಧ್ಯಪ್ರವೇಶಿಸಿ ಕಾಫಿ .ಟೀ ಬೆಲೆ ಹೆಚ್ಚಳದ ಕುರಿತು ಮರುಪರಿಶೀಸಲು ಮನವಿ ಸಲ್ಲಿಸಲಾಯಿತು

​ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್‌ಗಳ ನಿರ್ವಹಣಾ ವೆಚ್ಚದಲ್ಲಿ ಸ್ವಲ್ಪ ವ್ಯತ್ಯಾಸವಾಗಿರ ಬಹುದು. ಆದರೆ ಸಾಮಾನ್ಯವಾಗಿ ಒಂದು ಲೀಟರ್ ಹಾಲಿನಲ್ಲಿ ಹಲವು ಲೋಟ ಕಾಫಿ-ಟೀ ತಯಾರಾಗುವಾಗ, ಕೇವಲ ₹8 ಲೀಟರ್ ಏರಿಕೆಗೆ ಪ್ರತಿ ಲೋಟಕ್ಕೆ ₹5 ಹೆಚ್ಚಳ ಮಾಡುವುದು ಯಾವ ಲೆಕ್ಕಾಚಾರದ ಆಧಾರದ ಮೇಲೆ ಎಂದು ಅವರು ಪ್ರಶ್ನಿಸಿದ್ದಾರೆ.

​ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದಿನನಿತ್ಯದ ಕಾಫಿ, ಟೀ ಕೂಡ ಹೊರೆಯಾಗುತ್ತಿದೆ. ಹಾಲಿನ ದರ ಏರಿಕೆಯ ನೆಪವೊಡ್ಡಿ ಸಾರ್ವಜನಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರುವುದು ನ್ಯಾಯಸಮ್ಮತವಲ್ಲ ಎಂದು ಅವರು ತಿಳಿಸಿದ್ದಾರೆ.

​ಆದ್ದರಿಂದ ಹೋಟೆಲ್ ಮಾಲೀಕರ ಸಂಘವು ಕೂಡಲೇ ಮಧ್ಯಪ್ರವೇಶಿಸಿ, ಈ ಹಠಾತ್ ಬೆಲೆ ಹೆಚ್ಚಳದ ಕುರಿತು ಮರುಪರಿಶೀಲನೆ ನಡೆಸಬೇಕು. ಬಳಕೆಯಾಗುವ ಹಾಲಿನ ಪ್ರಮಾಣ, ಸಕ್ಕರೆ ಹಾಗೂ ಇಂಧನ ವೆಚ್ಚಗಳನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ, ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಅನ್ಯಾಯವಾಗದ ರೀತಿಯಲ್ಲಿ ಸೂಕ್ತ ದರ ನಿಗದಿಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು

ಹಾಲಿನ ದರ ಏರಿಕೆಯ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ಹೆಚ್ಚಿಸಿರುವ ವಿಚಾರವಾಗಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು, ಕೇವಲ ಹಾಲಿನ ದರ ಮಾತ್ರವಲ್ಲದೆ ಪ್ರತಿನಿತ್ಯವೂ ಒಂದಲ್ಲ ಒಂದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೋಟೆಲ್‌ಗಳಲ್ಲಿ ಬೆಲೆ ಹೆಚ್ಚಳ ಮಾಡಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೂ ಈ ವಿಚಾರವಾಗಿ ಒಂದು ಬಾರಿ ಹೋಟೆಲ್ ಮಾಲೀಕರೊಂದಿಗೆ ಚರ್ಚೆ ನಡೆಸಿ, ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ ಹೋಟೆಲ್ ಮಾಲೀಕರಿಗೂ ನಷ್ಟವಾಗದಂತೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನಿಗದಿಪಡಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಕೆ ಎಂ ನಿಶಾಂತ್, ದಯಾನಂದ ನಾಯಕ್, ಜತ್ತಿ ಪ್ರಸಾದ್, ದೀಪಕ್, ಸುಬ್ರಹ್ಮಣ್ಯರಾಜ್ ಅರಸ್, ನಿವೃತ ಶಿಕ್ಷಕ ಮಹದೇವಸ್ವಾಮಿ, ಶಿವಲಿಂಗ ಸ್ವಾಮಿ, ಜಗದೀಶ್, ಹಾಗೂ ಇನ್ನಿತರರು ಹಾಜರಿದ್ದರು

 

admin
the authoradmin

Leave a Reply