ದಸರಾ ಸಂದರ್ಭ ಆಯುಧ ಪೂಜೆಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಮೈಸೂರು ಅರಮನೆಯಲ್ಲಿ ನಡೆಯುವ ಆಯುಧ ಪೂಜಾ ಕಾರ್ಯಕ್ರಮಗಳು ಮಾತ್ರ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿರುತ್ತವೆ. ಆಯುಧಪೂಜೆ ಪುರಾಣ ಕಾಲದಿಂದಲೂ ಬಂದಿದ್ದು, ರಾಜರ ಕಾಲದಲ್ಲಿ ಆಯುಧವೇ ಮುಖ್ಯವಾಗಿದ್ದರಿಂದ ಆಯುಧಗಳಿಗೆ ಪೂಜೆಯನ್ನು ಮಾಡಲಾಗುತ್ತಿತ್ತು. ಅದನ್ನು ಮೈಸೂರು ರಾಜವಂಶಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.

ಮೈಸೂರಿನ ಐತಿಹಾಸಿಕ ಅರಮನೆಯಲ್ಲಿ ರಾಜವಂಶಸ್ಥರು ನಡೆಸಿಕೊಂಡು ಬಂದ ಪೂಜಾ ವಿಧಿವಿಧಾನಗಳನ್ನು ಇದೀಗ ಯುವರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಸಂಪ್ರದಾಯದಂತೆ ಆಯುಧ ಸೇರಿದಂತೆ ತಮ್ಮಲ್ಲಿರುವ ವಾಹನ ಪಟ್ಟದ ಆನೆ, ಕುದುರೆ ಹಸುಗಳಿಗೆ ಪೂಜೆಯನ್ನು ಮಾಡಲಾಗುತ್ತದೆ.

ಈ ಪೂಜಾ ಕೈಂಕರ್ಯ ಹೇಗಿರುತ್ತದೆ ಎಂದರೆ ಪ್ರಾತಃಕಾಲದಲ್ಲಿ ಆರಂಭವಾಗುವ ಪೂಜಾ ಕಾರ್ಯ ಮಧ್ಯಾಹ್ನದವರೆಗೂ ನಡೆಯುತ್ತದೆ. ಮೊದಲಿಗೆ ಅರಮನೆಯ ಆವರಣದಲ್ಲಿ ಆಯುಧಪೂಜೆಯನ್ನು ರಾಜಪರಂಪರೆಯಂತೆ ಆರಂಭಿಸಲಾಗುತ್ತದೆ.

ಇದೇ ವೇಳೆ ಸಾಲಿಗ್ರಾಮ ಪೂಜೆ ನಡೆಯುತ್ತದೆ. ಆ ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿಗೊಳಿಸಿ ಬಳಿಕ ಪೂಜೆ ನೆರವೇರಿಸಲಾಗುತ್ತದೆ.

ಇದೇ ಸಮಯದಲ್ಲಿ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವಿಧ ಪೂಜೆ ಹೋಮ ಹವನಗಳನ್ನು ನೇರವೇರಿಸುತ್ತಾರೆ. ಈ ಸಮಯದಲ್ಲಿ ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಗುತ್ತದೆ.

ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ಖಾಸಗಿ ದರ್ಬಾರ್ ಆರಂಭವಾಗುವ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ವಿಸರ್ಜಿಸಲಾಗುತ್ತದೆ.

ಬೆಳಗ್ಗೆ ಚಂಡಿಕಾ ಹೋಮ ಆರಂಭಿಸಿ ಬಳಿಕ ಪೂರ್ಣಾಹುತಿ ನಡೆಯುತ್ತದೆ. ಇದಾದ ನಂತರ ಕರಿಕಲ್ಲು ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆಯ ವಿವಿಧ ಕ್ರಮಗಳನ್ನು ನೆರವೇರಿಸುತ್ತಾರೆ. ಬಳಿಕ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಹಿಂದಿನ ಕಾಲದಿಂದ ಬಂದಿರುವ ಸಂಪ್ರದಾಯದಂತೆಯೇ ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಒಟ್ಟಾರೆ ಮೈಸೂರು ಅರಮನೆಯಲ್ಲಿ ನಡೆಯುವ ಆಯುಧಪೂಜೆ ವೈಶಿಷ್ಟ್ಯಪೂರ್ಣವಾಗಿದ್ದು, ಇಂತಹದೊಂದು ಆಯುಧಪೂಜೆಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂಬುದಂತು ನಿಜ.
ಮೈಸೂರು ದಸರಾಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ








