ಕೆ.ಆರ್.ನಗರ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಎಸ್ ಪ್ರಸಾದ್, ಉಪಾಧ್ಯಕ್ಷರಾಗಿ ಕೆ ಬಿ ಗಂಗಾಧರ್ ಆಯ್ಕೆ


ಕೆ ಆರ್ ನಗರ(ಜಿಟೆಕ್ ಶಂಕರ್): ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾಗಿ ಎಸ್ ಪ್ರಸಾದ್, ಉಪಾಧ್ಯಕ್ಷರಾಗಿ ಕೆ ಬಿ ಗಂಗಾಧರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್ .ಶಿವರಾಜ್ ಆಯ್ಕೆಯಾದರು. ಪಟ್ಟಣದ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 137 ಸದಸ್ಯ ಮತದಾರ ಪೈಕಿ 133 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಎಸ್ ಪ್ರಸಾದ್ 59 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಅವರ ಪ್ರತಿ ಸ್ಪರ್ಧಿಯಾಗಿದ್ದ ಕೆ.ಎಸ್.ದಿಲೀಪ್ 38 ಮತಗಳನ್ನು ಪಡೆದು ಪರಾಭಗೊಂಡರೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಎಲ್.ಎಂ. ಚೇತನ್ 25 ಮತಗಳು, ಹೆಚ್.ಎಸ್. ಉದಯಕುಮಾರ್ 5, ಬಿ.ಕೆ.ನೂತನ್ ಕುಮಾರ್ 6 ಮತಗಳನ್ನು ಪಡೆಯುವಲ್ಲಿ ತೃಪ್ತಿಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ವಿ.ಗಂಗಾಧರ್ 85 ಮತಗಳನ್ನು ಪಡೆದು ವಿಜಯಶಾಲಿ ಆದರೆ 43 ಮತಗಳನ್ನು ಪಡೆದ ಪ್ರಭಾವತಿ ಸೋಲುಂಡರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವರಾಜ್ 65 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ ಅವರ ವಿರುದ್ಧ ಸ್ಪರ್ಧೆ ಒಡ್ಡಿದ ಪ್ರದೀಪ್ ಕುಮಾರ್ 45 ಮತಗಳನ್ನು ಪಡೆದು ಸೋಲುಂಡರೆ ಇನ್ನೊಬ್ಬ ಪ್ರತಿಸ್ಪರ್ಧಿ ಕಾರ್ತಿಕ್ 24 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ದಿಲೀಪ್ ಕುಮಾರ್ 69 ಮತ ಪಡೆದು ಗೆದ್ದರೆ ಅವರ ಪ್ರತಿಸ್ಪರ್ಧಿ ಸುನಿಲ್ ಕುಮಾರ್ ಅವರು 65 ಮತ ಪಡೆದು ಕೊಂಡರು. ಮತ್ತೊಂದು ಸಹ ಕಾರ್ಯದರ್ಶಿ ಸ್ಥಾನಕ್ಕೆ ಕೆ. ಕುಮಾರಿ, ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ ಎ.ಕೆ.ವೇದಾವತಿ ರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾಧಿಕಾರಿಗಳಾಗಿ ವಿಶ್ವನಾಥ್, ಎಸ್.ಎಸ್.ಗಾಂಧಿ, ಮೂರ್ತಿ, ರುದ್ರಮೂರ್ತಿ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಎಸ್ ಪ್ರಸಾದ್ ಮಾತನಾಡಿ ಚುನಾವಣೆ ಒಂದು ಪ್ರಕ್ರಿಯೆ ಅಷ್ಟೇ ಗೆದ್ದ ನಂತರ ಎಲ್ಲಾ ವಕೀಲರು ಒಂದೇ, ಪದಾಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ವಕೀಲರುಗಳನ್ನು ಒಂದುಗೂಡಿಸಿ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರಲ್ಲದೆ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ವಕೀಲರುಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.







