DasaraLatestMysore

ಮೈಸೂರು ದಸರಾ ಅಂಬಾರಿ ಆನೆ ದುಬಾರೆ ಶಿಬಿರದ ಪ್ರಶಾಂತ… ಇತಿಹಾಸದಲ್ಲಿ ಹೊಸ ಮೈಲಿಗಲ್ಲು

ಮೈಸೂರು (ಆರ್ ಹೆಚ್): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲು ದುಬಾರೆ ಸಾಕಾನೆ ಶಿಬಿರದ 54 ವರ್ಷದ ಆನೆ ಪ್ರಶಾಂತ ಆಯ್ಕೆಯಾಗಿರುವುದು ಕೊಡಗು ಜಿಲ್ಲೆಯ ಅರಣ್ಯ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ. ಇದೇ ಮೊದಲ ಬಾರಿಗೆ ದುಬಾರೆ ಸಾಕಾನೆ ಶಿಬಿರದ ಆನೆಯೊಂದು ಮೈಸೂರು ದಸರಾ ಅಂಬಾರಿ ಹೊರುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ಐತಿಹಾಸಿಕ ವಿಶೇಷವಾಗಿದೆ.

ಮೈಸೂರು ದಸರಾಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿರುವ ದಸರಾ ಆನೆಗಳ ತಂಗುದಾಣಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಸೋನಲ್ ವೃಷ್ಣಿ ಹಾಗೂ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF)  ಅಭಿಷೇಕ್ ವಿ., ಐ.ಎಫ್.ಎಸ್. ಅವರು ಭೇಟಿ ನೀಡಿ, ಅಂಬಾರಿ ಆನೆ ಪ್ರಶಾಂತ ಸೇರಿದಂತೆ ಇತರ ಆನೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಂಬಾರಿ ಆನೆ ಪ್ರಶಾಂತದ ಮಾವುತರು ಹಾಗೂ ಕಾವಾಡಿಗಳಿಗೆ ಶುಭ ಹಾರೈಸಿದ ಅಧಿಕಾರಿಗಳು, ದಸರಾ ಮಹೋತ್ಸವದ ಸಂದರ್ಭದಲ್ಲಿ ಆನೆಗಳ ಪಾಲನೆ, ಪೋಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಸುಮಾರು ಐದು ದಶಕಗಳ ಅನುಭವ ಹೊಂದಿರುವ ಪ್ರಶಾಂತ ಆನೆಯ ಆಯ್ಕೆಯು ದುಬಾರೆ ಸಾಕಾನೆ ಶಿಬಿರದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆನೆಯ ತರಬೇತಿ, ಆರೈಕೆ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳ ಪರಿಶ್ರಮಕ್ಕೆ ಸಂದ ಗೌರವವೂ ಇದಾಗಿದೆ. ದುಬಾರೆಯಿಂದ ಮೈಸೂರಿನ ಅಂಬಾರಿವರೆಗೆ ಪ್ರಶಾಂತನ ಪಯಣವು ಕೊಡಗು ಜಿಲ್ಲೆಯ ಅರಣ್ಯ ಇಲಾಖೆಗೆ ಹೆಮ್ಮೆಯ ಕ್ಷಣವಾಗಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಪ್ರಶಾಂತ ಚಿನ್ನದ ಅಂಬಾರಿಯನ್ನು ಹೊರುವ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ವೆಂಕಟೇಶ್, ಸಾಕಾನೆ ಶಿಬಿರದ ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಇದ್ದರು.

ಮೈಸೂರು ದಸರಾಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

 

admin
the authoradmin

Leave a Reply