ನಟಿ ಮಂಜುಳಾ ಅವರು ಇವತ್ತು ನಮ್ಮೊಂದಿಗಿಲ್ಲ.. ಆದರೆ ಅವರ ನಟನೆಯ ಸಿನಿಮಾಗಳನ್ನು ನೋಡುವಾಗಲೆಲ್ಲ ನಿಜಕ್ಕೂ ಖುಷಿಯಾಗುತ್ತದೆ.. ಅವತ್ತಿನಿಂದ ಇವತ್ತಿನವರೆಗೆ ನೂರಾರು ನಟಿಯರು ಬೆಳ್ಳಿಪರದೆಯಲ್ಲಿ ಮಿಂಚಿದ್ದರೂ ಮಂಜುಳಾ ತನ್ನದೇ ಆದ ನಟನೆಯ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ಬರೆದಿದ್ದಾರೆ…
ಸಿನಿಮಾ ನಟ ನಟಿಯರ ಕುರಿತ ಲೇಖನಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…
“ಅಂತಿಂಥ ಹೆಣ್ಣು ನಾನಲ್ಲ, ನನ್ನಂಥಹೆಣ್ಣು ಯಾರೂ ಇಲ್ಲ” ಹಾಡುತ್ತ ನೋಡುಗರ ಕಣ್ಣು ಕುಕ್ಕುವಂತೆ ಇಡೀ ಹಳ್ಳಿಯನ್ನು ತನ್ನ ಹದ್ದು ಬಸ್ತಿನಲ್ಲಿ ಇಟ್ಟುಕೊಂಡ ಬಜಾರಿ ಪಾತ್ರದ ದುರ್ಗಿಯನ್ನಾಗಲೀ, ತನ್ನ ಓರಗೆ ಹುಡುಗೀರನ್ನು ಮರಕ್ಕೆ ಕಟ್ಟಿ ತಲೆಕೂದಲು ಕತ್ತರಿಸಿ ಗೋಳು ಹೊಯ್ ಕೊಂಡ ಸಾಹುಕಾರ್ ಸಿದ್ಧಪ್ಪನ ಮಗಳನ್ನಾಗಲೀ ಮರೆಯಲಾದೀತೇ?

ತುಮಕೂರು ನಗರದ ಪೊಲೀಸ್ ಇನ್ನ್ ಪೆಕ್ಟರ್ ಶಿವಣ್ಣ ಮತ್ತು ಶ್ರೀಮತಿ ದೇವೀರಮ್ಮನ ಮುದ್ದಿನ ಮಗಳಾಗಿ ಹೊನ್ನೇನಹಳ್ಳಿಯಲ್ಲಿ 8.11.1954ರಂದು ಜನಿಸಿದ “ಪುಷ್ಪ” ಸಿನಿಮಾರಂಗಕ್ಕೆ ಕಾಲಿಟ್ಟಾಗ “ಮಂಜುಳ” ಎಂದು ಪುನರ್ ನಾಮಕರಣವಾಯ್ತು. ಸಂಪ್ರದಾಯಬದ್ಧ ಅಪ್ಪ-ಅಮ್ಮನ ಕಟ್ಟುನಿಟ್ಟು ಪೋಷಣೆಯಿಂದ ಕಾಲೇಜು ಶಿಕ್ಷಣಕ್ಕೆ ಅವಕಾಶ ಆಗಲಿಲ್ಲ.
1965ರಲ್ಲಿ ಶಾಲಾ ವಿದ್ಯಾರ್ಥಿನಿ ಆಗಿದ್ದಾಗ ಬೇಸಿಗೆ ರಜೆ ಪ್ರಯುಕ್ತ ಬೆಂಗಳೂರಲ್ಲಿದ್ದ ನೆಂಟರ ಮನೆಗೆ ಆಗಮನ. ಈಕೆಯ ಬಂಧುಗಳಿಗೆ ತುಸು ಪರಿಚಯವಿದ್ದ ನಟ ನಿರ್ಮಾಪಕ ನಿರ್ದೇಶಕ ಸಿ.ವಿ.ಶಿವಶಂಕರ್ ಕೃಪೆಯಿಂದ 1966ರ ‘ಮನೆಕಟ್ಟಿನೋಡು’ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ನಂತರ ಸತತ ಮೂರು ಚಿತ್ರಗಳಲ್ಲಿ ಬಾಲಕಿ ಪಾತ್ರದ ಅವಕಾಶ. ಕ್ರಮೇಣ ಆಕಸ್ಮಿಕವಾಗಿ ಕೆಲವರ ಸಹಾಯದಿಂದ ಖ್ಯಾತ ಚಿತ್ರೋದ್ಯಮಿ ಎಂ. ಆರ್.ವಿಠಲ್ ಪರಿಚಯವಾದರು.
ಇವರ ನಿರ್ದೇಶನದ “ಯಾರ ಸಾಕ್ಷಿ”ಚಿತ್ರದ ಮೂಲಕ 1972ರಲ್ಲಿ ಚಂದನವನಕ್ಕೆ ಅಧಿಕೃತ ಎಂಟ್ರಿ ಪಡೆದ ಪುಷ್ಪ ಉರುಫ್ ಕುಮಾರಿಮಂಜುಳ ತಾನು ನಟಿಸಿದ ಪ್ರಥಮ ಚಿತ್ರಕ್ಕೆ ಬಂದಂಥ ಪ್ರಶಸ್ತಿ ಸುರಿಮಳೆ ಕಂಡು ಆನಂದಬಾಷ್ಪ ಸುರಿಸಿದರು!

ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜ ಎ.ವಿ. ಶೇಷಗಿರಿರಾವ್ ನಿರ್ದೇಶನದಲ್ಲಿ 1974ರಲ್ಲಿ ತೆರೆಕಂಡು ದೇಶದಾದ್ಯಂತ ಸಂಚಲನ ಉಂಟುಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಹಲವಾರು ದಾಖಲೆಗೈದ ಡಾ.ರಾಜ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ “ಸಂಪತ್ತಿಗೆಸವಾಲ್” ಮೂಲಕ ಪೂರ್ಣ ಪ್ರಮಾಣದ ಹೀರೋಯಿನ್ನಾಗಿ ಧೂಳೆಬ್ಬಿಸಿದ್ದು ಇತಿಹಾಸ.
ಈ ಚಿತ್ರದ ದುರ್ಗಿಯ ಪಾತ್ರಕ್ಕೆ ಮೊದಲೇ ನಿರ್ಧಾರ ಆಗಿದ್ದ ಅಭಿನಯ ಶಾರದೆ ಜಯಂತಿ ನಟಿಸಬೇಕಾಗಿತ್ತು? ಆದರೆ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಪಾರ್ವತಮ್ಮ ರಾಜ್ ಕುಮಾರ್ ದಂಪತಿ ಮಂಜುಳಾ ನಟಿಸುವಂತೆ ಮನವರಿಕೆ ಮಾಡಿದರೂ ಸಹ “ಇದು ನನ್ನಿಂದ ಸಾಧ್ಯವಿಲ್ಲ” ಎಂದು ಸ್ವಯಂ ಮಂಜುಳಾ ಹಿಂಜರಿದರು.
ಕಡೆಗೂ ಈಕೆ ಒಪ್ಪುವಂತೆ ಮಾಡಲಾಗಿ ಇವರ ಜೀವಿತಾವಧಿ ನಂತರವೂ ಚಿರಕಾಲ ಉಳಿವಂಥ ಚಿರಸ್ಮರಣೀಯ “ದುರ್ಗಿ”ಯ ಪಾತ್ರದಲ್ಲಿ ನಟಿಸುವ ಸುವರ್ಣವಾಕಾಶ ದೊರಕಿತು. ಸಂಪತ್ತಿಗೆ ಸವಾಲ್ ಚಿತ್ರವು ಬಿಡುಗಡೆಯಾಗಿ ಹಣ, ಕೀರ್ತಿ ಎಲ್ಲವನ್ನು ಗಳಿಸಿಕೊಟ್ಟ ನಂತರ ಜಯಂತಿ ಸೇರಿದಂತೆ ಕನ್ನಡನಾಡಿನ ಪ್ರತಿಯೊಬ್ಬರೂ ಹೊಗಳುವಂತೆ ತಮ್ಮ ಪಾತ್ರವನ್ನು ನಿಭಾಯಿಸಿದ ಮಂಜುಳಾ ಮತ್ತೆಂದು ಹಿಂದಿರುಗಿ ನೋಡಲೇಇಲ್ಲ.

ಕೇವಲ 15 ವರ್ಷದಲ್ಲಿ 90 ಕನ್ನಡ ಚಿತ್ರಗಳಲ್ಲದೆ ತಮಿಳು ತೆಲುಗು ಭಾಷೆ ಸಿನಿಮಾ ಸೇರಿದಂತೆ ಒಟ್ಟಾರೆ 118 ಚಿತ್ರಗಳಲ್ಲಿ ನಟಿಸುವ ಮೂಲಕ ಬೊಂಬಾಟ್ ದರ್ಬಾರ್ ನಡೆಸಿ ದಾಖಲೆ ನಿರ್ಮಿಸಿದರು.
ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್, ಅನಂತನಾಗ್, ಶಂಕರನಾಗ್, ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್, ಲೋಕೇಶ್, ರಾಮಕೃಷ್ಣ, ಚಂದ್ರಶೇಖರ್, ಕಮಲಾ ಹಾಸನ್, ಕಾಂತರಾವ್ ಮುಂತಾದ ಅತಿರಥ ಮಹಾರಥ ನಟರೊಡನೆ ನಟಿಸುವ ಅವಕಾಶ ದೊರೆತ ಚಂದನವನದ ಏಕೈಕ ಯುವ ನವನಟಿ ಎನಿಸಿದರು. ಪ್ರಣಯರಾಜ ಶ್ರೀನಾಥ್-ಮಂಜುಳ ಅಪೂರ್ವ ಜೋಡಿ ಎನಿಸಿತು. ಇವರಿಬ್ಬರ ತಾರಾಗಣದಲ್ಲಿ ಅತಿಹೆಚ್ಚು ಸಿನಿಮಾ ಬಿಡುಗಡೆಯಾಗಿ ಧೂಳೆಬ್ಬಿಸಿದವು.
ಹಲವು ವರ್ಷಕಾಲ ಕೆಲವು (ಗಾಳಿ)ಸುದ್ದಿ ಪ್ರಕಾರ ಈ ತಾರಾಜೋಡಿ ತಾರಾದಂಪತಿ ಆಗುತ್ತಾರೆಂಬ ಅಂತೆಕಂತೆ ವದಂತಿಯೂ ಹರಿದಾಡಿತ್ತು. ಇವರ ಚಿತ್ರಗಳು ಜ್ಯುಬ್ಲಿ ಪ್ರದರ್ಶನ ಕಂಡವು, ಇವರ ಶ್ರೇಷ್ಠ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಹಾಗೂ ಫಿಲಂಫೇರ್ ಪ್ರಶಸ್ತಿ ದೊರಕಿತು. ಕಾಲಕ್ರಮೇಣ ಮಂಜುಳಾ ಚಂದನವನದಲ್ಲಿ ಶಾಶ್ವತವಾಗಿ ನೆಲೆಯೂರಿದರು ಹಾಗೂ ತಮ್ಮ ತಾಯಿಯೊಡನೆ ಬೆಂಗಳೂರಿನಲ್ಲಿ ನೆಲೆಸಿದರು.

ಅಚ್ಚ ಕನ್ನಡದ ಸ್ವಚ್ಚ ಸೌಂದರ್ಯದ ಸ್ವಚ್ಚಂದ ಮನಸ್ಸಿನ ಗ್ರಾಮೀಣ ಸೊಗಡಿನ ಇಚ್ಚಾಪೂರ್ಣ ಅಭಿನೇತ್ರಿ ಪುಟ್ಟ ಹುಡುಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ತನ್ನ ಅಮೋಘ ಪ್ರತಿಭೆಯಿಂದ ಅತಿ ಕಡಿಮೆ ಅವಧಿಯಲ್ಲಿ ಅಭಿನಯದ ಪರ್ವತವಾಗಿ ಬೆಳೆದರು.
ಸರಳ ಸಜ್ಜನಿಕೆಯ ಸುಸಂಸ್ಕೃತ ಕುಟುಂಬದ ಮುದ್ದುಮೊಗದ ಮಂಜುಳಾ ಕೈ ಹಿಡಿಯಲು ನಾಮುಂದು ತಾಮುಂದು ಎನ್ನುತ್ತಿದ್ದ ಕಾಲವದು. ಅನೇಕ ಯುವಕರು ಶೂಟಿಂಗ್ ಸ್ಥಳಕ್ಕೆ ತೆರಳಿ ಆಟೋಗ್ರಾಫ್ ಪಡೆಯುವ ನೆಪದಲ್ಲಿ ಪ್ರಪೋಸ್ ಕೂಡ ಮಾಡುತ್ತಿದ್ದ ಉದಾಹರಣೆಯುಂಟು. ಕೆಲವು ಖ್ಯಾತ ಉದ್ಯಮಿಗಳು ಈಕೆಯ ಸಂಬಂಧ ಬೆಳೆಸಲು ಹಪಹಪಿಸಿ ನಿರಾಶರಾದರು.
ಇವರನ್ನು ವಿವಾಹವಾಗಲು ಕನ್ನಡನಾಡಿನ ನೂರಾರು ಕಲಾವಿದರು ತಂತ್ರಜ್ಞರು ವಿದ್ಯಾವಂತರು ತುದಿಗಾಲಲ್ಲಿ ನಿಂತಿದ್ದರು. ಆದರೆ ವಿಧಿವಿಲಾಸ ಎಂಬಂತೆ ತಮಿಳುನಾಡಿನ ಓರ್ವ ಸಾಧಾರಣ ಚಿತ್ರೊದ್ಯಮಿ ಅಮೃತಂ ಎಂಬುವರನ್ನು ತುಂಬಾ ಹಚ್ಚಿಕೊಂಡು ಹೆಚ್ಚು ಮೆಚ್ಚಿಕೊಂಡು ವಿವಾಹವಾದರು. ಇವರಿಬ್ಬರ ದಾಂಪತ್ಯ ಜೀವನವು ಪ್ರಾರಂಭದಿಂದಲೂ ಅಷ್ಟೇನು ಸರಿಯಿರಲಿಲ್ಲ. ಇಬ್ಬರೂ ಪರಸ್ಪರ ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾದರು.

ದಿನದಿಂದ ದಿನಕ್ಕೆ ಎಡವಟ್ಟುಗಳು ಹೆಚ್ಚಾದ ಪರಿಣಾಮ, ಇವರಿಂದ ಅಮೃತಂ ದೂರ ಬಲುದೂರ ಹೊರಟು ಹೋದರು. ಮಂಜುಳಾರವರ ಅನಾರೋಗ್ಯ ಕಾಲದಲ್ಲೂ ತಿರುಗಿ ನೋಡಲಿಲ್ಲ. ಫೋನ್ ಮೂಲಕ ವಿಚಾರಿಸುವ ಕನಿಷ್ಟ ಕಾಳಜಿಯನ್ನೂ ತೋರಲಿಲ್ಲ. ಇದೇ ಚಿಂತೆಯಿಂದ ಕೊರಗಿ ಕೃಶವಾದರು. ಗಾಯದಮೇಲೆ ಬರೆಎಳೆದಂತೆ ಇವರ ತಾಯಿ ಕಡೆಯಿಂದಲೂ ಆದ ಲಘು ಆರ್ಥಿಕ (ಅ)ವ್ಯವಹಾರ ಘಟನೆಯಿಂದ ತುಸು ಆಘಾತಕ್ಕೆ ಒಳಗಾದರು.
ಇದೆಲ್ಲದರ ಪರಿಣಾಮವಾಗಿ ಕೇವಲ 32ನೇ ವಯಸ್ಸಿಗೆ ಆವರಿಸಿದ ಚಿಂತೆಯಿಂದ ಪ್ರತಿಕ್ಷಣ ನೊಂದು ಬೆಂದು ಜಿಗುಪ್ಸೆ ತಾಳಿದರು. ಇದ್ದಕ್ಕಿದ್ದಂತೆ ಒಂದು ದುರ್ದಿನ ವಕ್ಕರಿಸಿ ಬಂದು ರಾಜ್ಯದ ಪ್ರತಿಯೊಬ್ಬರೂ ಆಶ್ಚರ್ಯ ಚಕಿತರಾಗುವಂತೆ ಆತ್ಮಹತ್ಯೆ ಮಾಡಿಕೊಂಡರು. ಅನ್ಯಾಯವಾಗಿ ಅನಗತ್ಯವಾದ ಆತುರ ನಿರ್ಧಾರದ ದುರಂತ ಬದುಕಿಗೆ ಬಲಿ ಆದರು. ತನ್ಮೂಲಕ ಕನ್ನಡಚಿತ್ರರಂಗಕ್ಕೆ ತುಂಬಲಾರದ ಅಪಾರನಷ್ಟ ಉಂಟುಮಾಡಿ 12.9.1986ರಂದು ಬೆಂಗಳೂರಲ್ಲಿ ಕೊನೆ ಉಸಿರೆಳೆದರು.

ಮಂಜುಳಾ ನಟಿಸಿದ ಕೆಲವು ಅಜರಾಮರ ಚಿತ್ರಗಳು….
ಎರಡುಕನಸು, ಮಯೂರ, ಮೂರೂವರೆ ವಜ್ರಗಳು, ದಾರಿತಪ್ಪಿದಮಗ, ನೀ ನನ್ನಗೆಲ್ಲಲಾರೆ, ದೀಪಾ, ಪ್ರೊ.ಹುಚ್ಚೂರಾಯ, ದೇವರಗುಡಿ, ಬೆಸುಗೆ, ಹೆಣ್ಣುಸಂಸಾರದಕಣ್ಣು, ಪಟ್ಟಣಕ್ಕೆ ಬಂದ ಪತ್ನಿಯರು, ನಿನಗಾಗಿನಾನು, ಬಂಗಾರದ ಗುಡಿ, ಕನಸುನನಸು, ಬಯಸದೆ ಬಂದ ಭಾಗ್ಯ, ಬೆಂಕಿಚೆಂಡು, ಸೊಸೆ ತಂದ ಸೌಭಾಗ್ಯ, ಬದುಕು ಬಂಗಾರವಾಯಿತು, ಕಿಟ್ಟುಪುಟ್ಟು, ಚಿರಂಜೀವಿ, ಹುಡುಗಾಟದ ಹುಡುಗಿ, ಸೀತಾರಾಮು, ಗಲಾಟೆ ಸಂಸಾರ, ಮುಯ್ಯಿಗೆ ಮುಯ್ಯಿ, ವಸಂತಲಕ್ಷ್ಮಿ.
ತುಳಸಿ, ಭಲೇಹುಡುಗ, ಸಿಂಗಪುರದಲ್ಲಿ ರಾಜಾಕುಳ್ಳ, ರುದ್ರಿ, ಮೂಗನಸೇಡು, ಪುಟಾಣಿಏಜೆಂಟ್123, ಹದ್ದಿನಕಣ್ಣು, ಸವತಿಯನೆರಳು, ರಾಮಲಕ್ಷ್ಮಣ, ಮಲ್ಲಿಗೆಸಂಪಿಗೆ, ಅರ್ಚನ, ಮಧುರಸಂಗಮ, ಮಂಕುತಿಮ್ಮ, ಗುರುಶಿಷ್ಯರು, ಚೆಲ್ಲಿದರಕ್ತ, ಪಕ್ಕಾಕಳ್ಳ, ಜನ್ಮಜನ್ಮದಅನುಬಂಧ, ಸಿಂಹದಮರಿ ಸೈನ್ಯ, ಶಿಕಾರಿ, ಅವಳಿ ಜವಳಿ, ಅದಲು ಬದಲು, ಪಾಯಿಂಟ್ ಪರಿಮಳ, ಮರೆಯದಹಾಡು, ಮಾವಸೊಸೆ ಸವಾಲ್, ಕೆಂಪು ಹೋರಿ, ಒಂಟಿ ಧ್ವನಿ, ಕಾಳಿಂಗಸರ್ಪ, ಸಾವಿರಸುಳ್ಳು, ಭಯಂಕರ ಭಸ್ಮಾಸುರ (ಅಂತಿಮಚಿತ್ರ 1985) ನಿಧನದ ನಂತರ, ಈ ಮೊದಲೇ ಚಿತ್ರೀಕರಣವಾಗಿದ್ದ “ಮನಗೆದ್ದಮಗ” ಚಿತ್ರವು 1991ರಲ್ಲಿ ತೆರೆಕಂಡಿತು.
ಸಿನಿಮಾ ನಟ ನಟಿಯರ ಕುರಿತ ಲೇಖನಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…







