ಹುಣಸೂರು(ಮನುಕುಮಾರ್): ಧಾರ್ಮಿಕ ಶಿಕ್ಷಣದ ಜೊತೆಗೆ ಮಕ್ಕಳು ಲೌಕಿಕ ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಪೋಷಕರು ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ದೊರೆಯುವಂತೆ ಪ್ರೋತ್ಸಾಹಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.
ನಗರದ 23ನೇ ವಾರ್ಡ್ನ ಆಶ್ರಯ ಬಡಾವಣೆಯ ನಿವಾಸಿಗಳು ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುವ ಈ ಸಣ್ಣ ಬಡಾವಣೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವುದು ಸಂತೋಷದ ಸಂಗತಿ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ಸಂದೇಶ ಹಾಗೂ ಆದರ್ಶಗಳ ಕುರಿತು ಧಾರ್ಮಿಕ ಗುರುಗಳು ನೀಡುವ ಪ್ರವಚನಗಳಲ್ಲಿನ ಉತ್ತಮ ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಡಾವಣೆಯ ಮಕ್ಕಳು ಪ್ರತಿದಿನ ಬೆಳಗಿನ ಜಾವ ನಮಾಜ್ ನಂತರ ಧಾರ್ಮಿಕ ಶಿಕ್ಷಣ ಪಡೆಯಲು ತೆರಳುತ್ತಿರುವುದು ಸಂತಸದ ವಿಷಯ. ಇದರೊಂದಿಗೆ ಮಕ್ಕಳು ಶಾಲಾ ಶಿಕ್ಷಣ, ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ಸಮುದಾಯಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ನಿವೇಶನಕ್ಕೆ ನೆರವು ನೀಡುವ ಭರವಸೆ: ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿರುವ ನಿವಾಸಿಗಳು ಮದರಸಾ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದಾರೆ. ಸ್ಥಳೀಯರು ಸೂಕ್ತ ಜಾಗವನ್ನು ಗುರುತಿಸಿ ಮುಂದಿನ ಕ್ರಮಕ್ಕೆ ಮುಂದಾದರೆ, ತಮ್ಮ ಕೈಲಾದ ವೈಯಕ್ತಿಕ ನೆರವು ನೀಡುವುದರ ಜೊತೆಗೆ ವಕ್ಫ್ ಮಂಡಳಿ ಹಾಗೂ ಸರ್ಕಾರದ ಅನುದಾನ ದೊರಕಿಸಿಕೊಡಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬೆಂಕಿ ಅವಘಡದಿಂದ ಸಂಕಷ್ಟಕ್ಕೀಡಾದ ಕುಟುಂಬಕ್ಕೆ ನೆರವು: ಇದೇ ಸಂದರ್ಭದಲ್ಲಿ ಆಶ್ರಯ ಬಡಾವಣೆಯ ನಿವಾಸಿ ಮೊಹಮ್ಮದ್ ಗೌಸ್ ಅವರ ಬ್ಯಾಟನ್ ಶೆಡ್ಗೆ ಕೆಲವು ದಿನಗಳ ಹಿಂದೆ ಬೆಂಕಿ ತಗುಲಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದ ಹಿನ್ನೆಲೆಯಲ್ಲಿ, ಅವರ ನಿವಾಸಕ್ಕೆ ಭೇಟಿ ನೀಡಿದ ಎಚ್.ಪಿ. ಮಂಜುನಾಥ್ ಕುಟುಂಬದ ಸದಸ್ಯರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.

ಅವಘಡದಿಂದ ಜೀವನದಲ್ಲಿ ಕುಗ್ಗದೆ ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ನಿಮ್ಮೊಂದಿಗೆ ನಾನಿದ್ದೇನೆ ಎಂದು ಸಾಂತ್ವನ ಹೇಳಿದ ಅವರು, ಇತರ ಕೆಲವು ಸ್ಥಳೀಯ ನಿವಾಸಿಗಳಿಗೂ ಸಹಾಯಹಸ್ತ ಚಾಚಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ರಂಜಿತಾ, ಹರೀಶ್, ಜಬಿವುಲ್ಲಾ ಖಾನ್, ವಕ್ಫ್ ಮಂಡಳಿ ಸದಸ್ಯ ಅಜ್ಗರ್ ಪಾಷಾ, ಬ್ಲಾಕ್ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಫೈಸಲ್, ಯಾಸಿರ್ ಖಾನ್, ಕೃಷ್ಣ, ಸದ್ದಾಂ, ಮೋಹನ್, ನಾಗು, ಇದಾಯತ್, ಗೌಸ್, ವಸೀಂ, ಮುಬಾರಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








