ಕೆ ಆರ್ ನಗರ(ಸಂಘಟನೆ ಮಂಜುನಾಥ್): ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಬಸವಣ್ಣನವರು ನಮಗೆ ನೀಡಿದ್ದಾರೆ. ದುಡಿಯುವ ಕೈಗೆ ಕೆಲಸ ಕೊಡಬೇಕು. ವೃತ್ತಿ ಯಾವುದೇ ಆದರೂ ಅದನ್ನು ಗೌರವಿಸಬೇಕು. ಕಾಯಕ ಮಾಡಿ ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು, ಉಳಿಸಿದ್ದನ್ನು ಈ ಸಮಾಜಕ್ಕೆ ದಾಸೋಹದ ಮೂಲಕ ವಿನಿಯೋಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಡಾ. ರಾಜಕುಮಾರ್ ಬಾನಂಗಳದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ಈ ಜಗತ್ತಿನ ಬೆಳಕು ಎಂದು ಹೇಳಿದರು.

ಇಂದು ಸಮಾಜದಲ್ಲಿ ದ್ವೇಷ, ಅಸೂಯೆ, ಅಶಾಂತಿ ಇದೆ. ಧರ್ಮದ ಹೆಸರಲ್ಲಿ ಕೆಲವರು ವಿಷಬೀಜ ಬಿತ್ತುತ್ತಾ ಸಮಾಜದ ಶಾಂತಿಯನ್ನೇ ಕದಡುತ್ತಿದ್ದಾರೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಧರ್ಮ ಎಂದರೇನು ಎಂಬುದನ್ನು ಒಂದು ಸರಳ ವಾಕ್ಯದಲ್ಲಿ ತಿಳಿಸಿದ್ದರು. ದಯೆ ಇಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲ ಎಂಬ ಸಂದೇಶ ಸಾರಿದರು ಎಂದರು.
ಬಸವಣ್ಣನವರು 900 ವರ್ಷಗಳ ಹಿಂದೆ ಸಮಸಮ ಜ ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು ಅವುಗಳೆಲ್ಲವನ್ನು ಇಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿ ಅದನ್ನು ಜಾರಿಗೆ ತರುವಂತೆ 76 ವರ್ಷಗಳ ಹಿಂದೆ ಭಾರತದ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅರ್ಪಿಸಿದರು ಆದರೆ ಅದು ಇಂದು ಸಂಪೂರ್ಣ ಜಾರಿಯಾಗಲು ಹಲವರು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಧರ್ಮವನ್ನು ಒಡೆದಾಳುವ ಕೆಲವರು ಜಾತಿ ಜಾತಿಯನ್ನು ಎತ್ತು ಕಟ್ಟಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು ಬಹಳ ನೋವಿನ ಸಂಗತಿ ಪ್ರತಿಯೊಂದು ಜಾತಿ ಪ್ರತಿಯೊಂದು ಧರ್ಮದಲ್ಲಿಯೂ ಬಡವರು ಹಿಂದುಳಿದವರು ಇರುವುದರಿಂದಲೇ ಅದನ್ನು ಮನಗೊಂಡ ನಾನು ಎಂಟು ವರ್ಷಗಳ ಕಾಲ ನನ್ನ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಡವನು ಶ್ರೀಮಂತರ ಸಾಲಿನಲ್ಲಿ ನಿಲ್ಲಬೇಕೆಂದು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ಮತ್ತು ನಾನು ಹಿಂದೂ ಧರ್ಮಕ್ಕಿಂತ ಜೈನ ಮತ್ತು ಬೌದ್ಧ ಧರ್ಮವನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ವಿಜಯೇಂದ್ರ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವೀರಶೈವ ಲಿಂಗಾಯಿತರು ಸೇರಿದಂತೆ ಸರ್ವಧರ್ಮಗಳ ಮಠಮಾನ್ಯಗಳನ್ನು ಗೌರವಿಸುವ ಜೊತೆಗೆ ಬಸವಣ್ಣನವರು ಹಾಕಿಕೊಟ್ಟ ತೋರಿಸಿಕೊಟ್ಟ ದಾರಿಯಲ್ಲಿಯೇ ನಡೆದ ನಾಯಕರಾಗಿದ್ದು ಸಮ ಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟು ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ನೀಡಿದ ಆಡಳಿತವನ್ನೇ ನೀಡಿದರು ಎಂದು ತಿಳಿಸಿದರು.

ಪಂಚಾಯತ್ ರಾಜ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ ಬಸವಕಲ್ಯಾಣದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿ ಬರುವ ಬಸವಜಯಂತಿಯ ವೇಳೆಗೆ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.
ತಾವು 2016ರಲ್ಲಿ ಪೌರಾಡಳಿತ ಸಚಿವರಾಗಿದ್ದಾಗ ಆತ್ಯಾಧುನಿಕ ಅನುಭವ ಮಂಟಪ ನಿರ್ಮಾಣ ಮಾಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿಯೋಗದಲ್ಲಿ ತೆರಳಿ ಮನವಿ ಅರ್ಪಿಸಿದಾಗ, ಖ್ಯಾತ ಚಿಂತಕ ಡಾ.ಗೊ.ರು. ಚನ್ನಬಸಪ್ಪ ಅವರ ನೇತೃತ್ವದ ತಜ್ಞರ ಸಲಹಾ ಸಮಿತಿ ರಚಿಸಿ, ಬಜೆಟ್ ನಲ್ಲಿ ಘೋಷಣೆಯನ್ನೂ ಮಾಡಿದ್ದರು.
ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯನವರು ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳಾಗಿದ್ದು, ಮತ್ತೆ 2023ರಲ್ಲಿ ಮುಖ್ಯಮಂತ್ರಿಗಳಾದ ತರುವಾಯ 280 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ಸಾಗಿದೆ. ಇದಕ್ಕಾಗಿ ತಾವೆಲ್ಲರೂ ಅವರಿಗೆ ಆಭಾರಿಗಳಾಗಿದ್ದೇವೆ ಎಂದು ತಿಳಿಸಿದರು.

ಶರಣರ ಸಂಭಾಷಣೆಗೆ ರೊಬೋಟಿಕ್ ತಂತ್ರಜ್ಞಾನ ಬಳಕೆ…
ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದೇ ಬಸವಕಲ್ಯಾಣದ ಅನುಭವ ಮಂಟಪ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಶರಣರ ಚಿಂತನ ಮಂಥನವನ್ನು ಇಂದಿನ ಯುವಪೀಳಿಗೆಗೆ ದೃಶ್ಯ ಶ್ರವಣದ ಮೂಲಕ ತಲುಪಿಸುವ ಸಲುವಾಗಿ ರೊಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ವಿವರಿಸಿದರು.
ಈ ತಂತ್ರಜ್ಞಾನದ ನೆರವಿನಿಂದ ಅಲ್ಲಮಪ್ರಭು, ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ 20 ಶರಣರ ರೊಬೋಟ್ ಪುತ್ಥಳಿಗಳನ್ನು ನಿರ್ಮಿಸಲಾಗುತ್ತಿದ್ದು ಆ ರೊಬೋಟ್ ಪುತ್ಥಳಿ ಗಳು ಸಂಭಾಷಣೆಯನ್ನು ನಡೆಸುವ ಮೂಲಕ ಅಂದಿನ ಅನುಭವ ಮಂಟಪದ ಚಿತ್ರಣವನ್ನು ಸಾಕ್ಷಾತ್ಕರಿಸಲಿವೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಇಷ್ಟಲಿಂಗಪೂಜೆಯ ವೈಜ್ಞಾನಿಕ ಅನುಭವಕ್ಕೂ ಅವಕಾಶ…
ಐಐಟಿ ಹೈದ್ರಾಬಾದ್ ಮತ್ತು ಐಐಟಿ ಖರಗ್ಪುರದ ನೆರವಿನಿಂದ ವೈದ್ಯಕೀಯ ಉಪಕರಣವೊಂದನ್ನು ವಿಶೇಷವಾಗಿ ರೂಪಿಸಲಾಗಿದ್ದು, ಅನುಭವ ಮಂಪಟಕ್ಕೆ ಬರುವ ಬಸವ ಭಕ್ತರಿಗೆ ಹಾಗೂ ಸಂದರ್ಶಕರಿಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು, ಮೆದುಳು ಮತ್ತು ದೇಹದ ಮೇಲೆ ಆಗುವ ಪರಿಣಾಮದ ಸಾಕ್ಷಾತ್ ಅನುಭವ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಇಲ್ಲಿ ಮೊದಲಿಗೆ ಸಂದರ್ಶಕರ ಹೃದಯ ಬಡಿತ, ನಾಡಿ ಮಿಡಿತ, ಮೆದುಳಿನ ರಕ್ತ ಸಂಚಾರ ಮೊದಲಾದ ಅಂಶಗಳನ್ನು ದಾಖಲಿಸಿ ನಂತರ ಅವರಿಗೆ ಇಷ್ಟ ಲಿಂಗ ಪೂಜೆ ಮಾಡಲು ಅವಕಾಶ ನೀಡಲಾಗುವುದು. ನಂತರ ನಾಡಿ ಮಿಡಿತ, ಹೃದಯ ಬಡಿತದ ಪರೀಕ್ಷೆ ಮಾಡಿ ಅವರಲ್ಲಾಗುವ ಶಾರೀರಿಕ ಬದಲಾವಣೆಯ ವಿವರವನ್ನು ತಿಳಿಸಲಾಗುವುದು. ಮನಸ್ಸನ್ನು ನಿರಾಳಗೊಳಿಸುವಲ್ಲಿ ಇಷ್ಟಲಿಂಗ ಪೂಜೆ ಎಷ್ಟು ಸಹಕಾರಿ ಎಂಬುದನ್ನು ಈ ವೈದ್ಯಕೀಯ ಉಪಕರಣ ಸಾಬೀತು ಪಡಿಸಲಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಆಧುನಿಕ ಅನುಭವ ಮಂಟಪ ಒಂದು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸಮ್ಮಿಲನದ ಕೇಂದ್ರವಾಗಿದ್ದು, ಯುವ ಪೀಳಿಗೆಗೆಯಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯ ಹೆಚ್ಚಿಸಲಿದ್ದು, ಅನುಭವಮಂಟಪ ಲೋಕಾರ್ಪಣೆಯಾದ ಬಳಿಕ ದೇಶದ ಮಹತ್ವದ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸಮಾರಂಭದ ಅಧ್ಯಕ್ಷ ಲಾಲನಹಳ್ಳಿ ಮಹೇಶ್, ಅಖಿಲ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕ ಅಧ್ಯಕ್ಷ ಸಿಪಿ ರಮೇಶ್ ಮಾತನಾಡಿದರು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶ ಕೇಂದ್ರ ಮಹಾಸ್ವಾಮಿಜಿ ಸಿದ್ದಗಂಗಾ ಶಿವಸಿದ್ದೇಶ್ವರ ಕಿರಿಯ ಸ್ವಾಮೀಜಿ ಗೌಡಗೆರೆಯ ಶ್ರೀ ನಟರಾಜ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೌಟೆಲ್ಯ ರಘು ಮಾಜಿ ವಿಧಾನ ಪರಿಷತ್ ಸದಸ್ಯ ತೊಂಟದಾರ್ಯ, ಮೈಸೂರು ಚಾಮರಾಜನಗರ ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ, ಸಾಲಿಗ್ರಾಮ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ನಟರಾಜ್, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಚಂದ್ರಶೇಖರ್, ಎ ಎಸ್ ಚನ್ನಬಸಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ವೀರಶೈವ ಸಂಘಟನೆಗಳ ಒಕ್ಕೂಟದ ಸದಸ್ಯರಾದ ಉಮಾ ಶಂಕರ, ಮಹದೇವಪ್ಪ, ರಾಜಶೇಖರ, ಜಗದೀಶ, ಶಿವು, ಕೊಡೆಯಾಲು ಮಹೇಶ್ ಪ್ರದೀಪ್ ಸೇರಿದಂತೆ ಇನ್ನಿತರರು ಹಾಜರಿದ್ದರು.








