ArticlesLatest

ಕರುನಾಡಿನಲಿ ಕನ್ನಡವಿರಲಿ ಸಂಗಡ… ಕನ್ನಡವೆಂದರೆ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವೇ?

ಶರವೇಗದಲ್ಲಿ ಓಡುತ್ತಿರುವ ಎಐ ತಂತ್ರಜ್ಞಾನದ ಈ ಯುಗದಲ್ಲಿ, ಭಾಷೆಯೆನ್ನುವುದು ಕೇವಲ ಕೋಡ್ ಮತ್ತು ಸಂಖ್ಯೆಗಳಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ.  ಸಂವಹನಕ್ಕೆ ಬಂದರೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಮಣೆ ಹಾಕುವುದನ್ನು ಐ.ಟಿ.ಕಂಪನಿಗಳಲ್ಲಿ ಕಾಣುತ್ತಿದ್ದೇವೆ. ಇದರಾಚೆಗೆ ಬಂದರೆ ಅಲ್ಲೂ ಕೂಡ ನೆಲದಮೂಲದ ಭಾಷೆಗೆ ಮಾನ್ಯತೆಯೇ ಇಲ್ಲ. ಕರ್ನಾಟಕದ ಯಾವುದೇ ಭಾಗದಲ್ಲಿ ಹೋಗಿ ನೋಡಿ, ಕನ್ನಡ ಭಾಷಿಗರಿಗಿಂತ ಅನ್ಯ ಭಾಷೆ ಮಾತನಾಡುವವರ ಸಂಖ್ಯೆಯೇ ಅತ್ಯಧಿಕ. ಅದರಲ್ಲೂ ಝೆನ್ ಜೀ ಮತ್ತು ಅಲ್ಫಾ ಜನರೇಷನ್ ಮಕ್ಕಳಿಗೆ ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. 

ಕನ್ನಡ ಮಾತನಾಡಲು ನಾಲಗೆಯ ತಿರುಗುವುದಿಲ್ಲ. ಇದು ಭಾಷೆಯ ಮೇಲಿನ ಅಸಡ್ಡೆಯೋ, ಅಥವಾ ಫ್ಯಾಷನ್ ನೆಪದಲ್ಲಿ ಪರದೇಶಿ ಭಾಷೆಯ ವ್ಯಾಮೋಹವೋ ತಿಳಿಯದಾಗಿದೆ.  ಸದ್ಯದ ಪರಿಸ್ಥಿತಿಯಲ್ಲಿ ಯಾರಾದರೂ ಕನ್ನಡದ ಬಗ್ಗೆ ಮಾತನಾಡುತ್ತಿದ್ದಾರೆ ಅಥವಾ ಕನ್ನಡದ ಬಾವುಟಗಳು ರಾರಾಜಿಸುತ್ತೀವೆ ಎಂದರೆ ರಾಜ್ಯೋತ್ಸವ ಹತ್ತಿರ ಬಂತೆಂದು ತಿಳಿಯುತ್ತಾರೆಯೆ ವಿನಹ, ಕನ್ನಡವೆನ್ನುವುದು ಕೇವಲ ಹೆಸರಲ್ಲ, ಅದು ನಮ್ಮ  ಉಸಿರು ಎನ್ನುವ ಅರಿವು ಮೂಡುವುದಾದರೂ ಯಾವಾಗ?  ಕನ್ನಡವೆಂದರೆ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವೇ? ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡವೇ? ಉಳಿದ ಹನ್ನೊಂದು ತಿಂಗಳು ಕಂಗ್ಲೀಷ್, ಎನ್ನಡ, ಎಕ್ಕಡ, ಎವಂಡಿ,    ವಾಂಗ, ಪೊಂಗ ಇದೆ ಧ್ವನಿಗಳು ಮಾರ್ದನಿಸುತ್ತವೆ.

ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಾದರೆ ಇಲ್ಲಿದ್ದ ಕನ್ನಡ ಭಾಷಿಗರು ವಲಸೆ  ಹೋಗಿದ್ದಾರೆಯೇ ಅಥವಾ ಕನ್ನಡ ಭಾಷೆ ಮಾತನಾಡುವುದನ್ನು ಮರೆತಿದ್ದಾರೆಯೇ? ಕನ್ನಡ ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ಕಲಿಸುವುದನ್ನು ಅವಮಾನವೆಂದು ಭಾವಿಸಿದರೇ? ಅಥವಾ ಮಾತೃಭಾಷೆಯ ಬಗ್ಗೆ ತಿರಸ್ಕಾರವೇ? ಹೀಗೆ ಯೋಚಿಸುತ್ತ ಹೋದಂತೆ ಪ್ರಶ್ನೆಗಳ ಸರಮಾಲೆ ನಿಮ್ಮನ್ನು ಕಾಡುತ್ತದೆಯಲ್ಲವೇ?

ಬ್ರಾಹ್ಮಿ ಲಿಪಿ ಆಧಾರದಿಂದ ಬೆಳೆದು ಬಂದ ನಮ್ಮ ಕನ್ನಡ ಭಾಷೆ ಅತ್ಯಂತ ಪ್ರಬುದ್ಧ ಭಾರತೀಯ ಭಾಷೆಗಳಲ್ಲೊಂದಾಗಿದೆ. ಬರೆದದ್ದನ್ನೆ ಓದುವ ಮತ್ತು ಓದಿದ್ದನ್ನೇ ಬರೆಯುವ ಅಮೋಘ ಭಾಷೆಯಾಗಿದೆ. ಸರಳ, ಸುಂದರ, ಸ್ಪಷ್ಟವಾಗಿ ಉಚ್ಚರಿಸುವ, ಸ್ವರ ಮಾಧರ್ಯಗಳಿಂದ ಕೂಡಿದ ನಮ್ಮ ಭಾಷೆಗೆ ಐತಿಹಾಸಿಕ ಹಿನ್ನೆಲೆಯಿದೆ. ನಮ್ಮ ಭಾಷೆ,  ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳ ಪ್ರತಿಬಿಂಬ. ಇದನ್ನು ನಾವು ಮನಗಾಣಬೇಕು ಆಗ ನಮ್ಮ ಭಾಷೆಯ ಮೌಲ್ಯ ನಮಗೆ ಅರಿವಾಗುತ್ತದೆ.

ನಮ್ಮ ಹಿಂದಿನ ತಲೆಮಾರಿನವರು ಭಾಷೆಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು. ಕರ್ನಾಟಕದಲ್ಲಿ ಎಲ್ಲರೂ ಇರಲಿ, ಆದರೆ ಕನ್ನಡವನ್ನು ಮೊದಲು ಕಲಿಯಲಿ ಎಂಬ ದಿಟ್ಟ ನುಡಿಯಿಂದ ಕನ್ನಡ ಭಾಷೆಗೆ ನವ ಚೈತನ್ಯ ತುಂಬಿದ ಕನ್ನಡದ ಹೋರಾಟಗಾರ ಅ.ನ.ಕೃ. ಇವರಿಂದಾಗಿ ಅಂದಿನ ೧೯೬೦ ರ ದಶಕದಲ್ಲಿ ಬೆಂಗಳೂರಿನಲ್ಲಿದ್ದ ಮದ್ರಾಸಿಗರ ಪ್ರಭಾವವನ್ನು ಕ್ರಮೇಣ ಕಡಿಮೆಗೊಳಿಸಿ, ಸ್ಥಳೀಯ ಕಲಾವಿದರಿಗೆ ಸ್ಥಾನವನ್ನು ದೊರಕಿಸಿಕೊಟ್ಟಿದ್ದರು. ಆಗಿನ ಪೀಳಿಗೆಯ ಜನರ ಉಸಿರಿನ ಕಣಕಣದಲ್ಲೂ ಕನ್ನಡಾಭಿಮಾನ ಉಕ್ಕಿ ಹರಿಯುತ್ತಿತ್ತು.

ಬೇರೆಯವರಿಗೆ ಮಾತನಾಡಲು ಬೇರೆ ಬೇರೆ ಭಾಷೆಗಳಿರಬಹುದು, ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ. ಅದನ್ನು ಉಳಿಸಿ, ಬೆಳೆಸುವ ಹೊಣೆ ಕನ್ನಡಿಗರದ್ದು ಎಂಬ ಸಂದೇಶವನ್ನು ನೀಡಿದ್ದ ಮಹಾನ್ ಕನ್ನಡಿಗರು ಇವರಾಗಿದ್ದರು.  ಕನ್ನಡಾಭಿಮಾನ ಮಾತಿಗೆ ಸೀಮಿತವಾಗದೇ  ನಡೆ ನುಡಿ, ಕೃತಿಯಲ್ಲಿ ಛಾಪು ಮೂಡಿಸಬೇಕೆಂದು ಅಂದಿನವರು ಶ್ರಮಿಸಿದರು.  ನಮ್ಮ ಕವಿಪುಂಗವರು ನಮ್ಮ ಕನ್ನಡ ಭಾಷೆಯ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ.

ಎಲ್ಲಾದರೂ ಇರು

ಎಂತಾದರೂ ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ..ಎಂದು  ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ಸಾಲುಗಳು ಭಾಷಾಭಿಮಾನದ ದ್ಯೋತಕ.

ಕನ್ನಡ ಎನೆ ಕುಣಿದಾಡುವುದೆನ್ನೆದೆ

ಕನ್ನಡ ಎನೆ ಕಿವಿ ನಿಮಿರುವುದು ||

ಕಾಮನ ಬಿಲ್ಲನು ಕಾಣುವ ಕವಿಯೊಳು

ತೆಕ್ಕನೆ ಮನ ಮೈ ಮರೆಯುವುದು||

ಸ್ವರ ಮಾಧುರ್ಯದಿಂದ ಕೂಡಿದ ಕಸ್ತೂರಿ ಕನ್ನಡ ಭಾಷೆಯೆಂದರೆ ಮನವು ಕುಣಿಯುತ್ತದೆ. ಕನ್ನಡದ ನುಡಿಗಳನ್ನು ಕೇಳಿದ ತಕ್ಷಣ ಕಿವಿಯು ನೆಟ್ಟಗಾಗುತ್ತದೆ. ಕಾಮನಬಿಲ್ಲಿನ ಬಣ್ಣ ಮತ್ತು ಸೌಂದರ್ಯಕ್ಕೆ ಮೋಹಗೊಂಡಂತೆ ಮನಸ್ಸು ಪ್ರಪುಲ್ಲಿತವಾಗುವುದು. ಕನ್ನಡವಿದು ಮಾತನಾಡಲು ಸರಳವಾಗಿದ್ದು ಸಿಹಿಯನ್ನು ಸವಿದಂತೆ.

ಪುಣ್ಯ ಪುರುಷರು ಜನಿಸಿದ ಕರುನಾಡು

ಮಲೆನಾಡಿನ ಮಣ್ಣಿನ ಘಮಲು ನೋಡು

ಸಮೃದ್ಧ ಭಾವೈಕ್ಯತೆಯ ಹೊನ್ನಿನ ಗೂಡು

ದಾಸರ ಕೀರ್ತನೆಗಳನು ನಿತ್ಯವೂ ಹಾಡು||

ಪಾಲಿಸಲು ವಚನಗಳ ಬೋಧಿಸಿದ ಶರಣ

ತೀರಿಸಲಾಗದು ಕನ್ನಡಮ್ಮನ ಮಣ್ಣ  ಋಣ

ತೊಡಿಸು ಕಸ್ತೂರಿ ಕನ್ನಡದ ನುಡಿ ಆಭರಣ

ಕನ್ನಡದ ಉತ್ಸವ ದಿನನಿತ್ಯ ಆಚರಿಸೋಣ||

ಕನ್ನಡವಿಲ್ಲದೇ ಬಾಳಿಲ್ಲ. ಪ್ರತಿಯೋರ್ವರ ನಡೆ ನುಡಿಗಳಲ್ಲಿ ಕನ್ನಡವಿದ್ದರೆ, ಕನ್ನಡ ಭಾಷೆಯ ಏಳಿಗೆಯಾಗುತ್ತದೆ. ಕನ್ನಡಮ್ಮನ ಸೇವೆ ಮಾಡಿದಂತಾಗುತ್ತದೆ.‌ ಕನ್ನಡಿಗರಾದ ನಾವೆಲ್ಲರೂ ನಮ್ಮ ಭಾಷೆಯನ್ನು ಪ್ರೀತಿಸೋಣ. ಗೌರವದೊಂದಿಗೆ ಆಧರಿಸಿ, ಆಸ್ವಾಧಿಸಿ, ಇತರರಿಗೂ ಕನ್ನಡವನ್ನು ಕಲಿಸೋಣ.

ಎಲ್ಲೆಡೆ ಕನ್ನಡದ ಪತಾಕೆ  ಮೊಳಗಲಿ

ಕನ್ನಡ ನಮ್ಮಯ ನಡೆ ನುಡಿಯಾಗಲಿ

ಕನ್ನಡವೇ ಸತ್ಯ ಕನ್ನಡವೇ ನಿತ್ಯವಾಗಲಿ

ಉಸಿರಾಗಿ ಕನ್ನಡ ವಿಶ್ವಮಾನ್ಯವಾಗಲಿ|| ಎಂಬ ಆಶಯ ನಮ್ಮೆಲ್ಲರದ್ದು. ಆದರೆ ವಾಸ್ತವ ಹೇಗಿದೆ ಗೊತ್ತ. ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಅಂಕಿ ಅಂಶಗಳನ್ನು ಗಮನಿಸಿದಾಗ ಒಮ್ಮೆ ಉಸಿರೇ ನಿಂತಂತಾಗುತ್ತದೆ.

ಸುವರ್ಣ ಕರ್ನಾಟಕ ರಥವೇನೋ ರಾಜ್ಯದಾದ್ಯಂತ ಕಳೆದ ವರ್ಷ ಸಂಚರಿಸಿ, ಕನ್ನಡಿಗರನ್ನು ‌ಜಾಗೃತಗೊಳಿಸಲು ಪ್ರಯತ್ನಿಸಿತು.‌ ಆದರೆ ಕರುನಾಡಿನಲ್ಲಿ  ಕನ್ನಡ ಭಾಷೆ ಉಸಿರಾಗಲಿಲ್ಲವೆನ್ನುವುದು ಕಹಿಸತ್ಯ. ಇಲ್ಲಿನ ನೆಲ, ಜಲ, ಗಾಳಿ, ಅಧಿಕಾರ, ಸಂಪತ್ತು, ಸಾರಿಗೆ, ಸೌಲಭ್ಯ ಎಲ್ಲಾ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ. ಇದೆಂತಹ ದುರದೃಷ್ಟ.  ಹೊಗಳು ಬಟರು, ಭಟ್ಟಂಗಿಗಳ ಕೈಯಲ್ಲಿ ನಮ್ಮ ಕನ್ನಡ ಸೊರಗುತ್ತಿದೆ.  ಉತ್ತರ ಭಾರತದವರು ತಾವುಗಳು ಬಂದು ಬೆಂಗಳೂರನ್ನು ಬೆಳೆಸಿದ್ದೇವೆ. ತಾವಿಲ್ಲದಿದ್ದರೇ ಬೆಂಗಳೂರು ಖಾಲಿ ಖಾಲಿಯೆಂದು ಉಡಾಫೆಯ ಮಾತನ್ನಾಡುತ್ತಾರೆ.

ಕನ್ನಡಿಗರನ್ನು ಮತ್ತು ಬೆಂಗಳೂರಿಗರನ್ನು  ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳಲ್ಲಿ‌ ಕಿಚಾಯಿಸುತ್ತಾರೆ. ನರಸತ್ತವರು, ಹೆದರುಪುಕ್ಕರು ಇತ್ಯಾದಿ ಪದಗಳನ್ನು ಬಳಸುತ್ತಾರೆ. ಆದರೂ ನಾವುಗಳು ತಾಳ್ಮೆಯಿಂದ ಅವರ ಶೋಗಳನ್ನು ನೋಡಿ, ನಕ್ಕು ಸುಮ್ಮನಾಗಿತ್ತೇವೆ. ನನಗೇಕೆ ಬೇಕು ಈ ವಿಷಯ ಎಂಬ ಅಸಡ್ಡೆ ನಮ್ಮೆಲ್ಲರಲ್ಲೂ ಬೆಳೆಯುತ್ತಿದ್ದೆ ಅಲ್ಲವೇ? ನನ್ನ ಮತ್ತು ನನ್ನ ಕುಟುಂಬದವರ ಹೊರತಾಗಿ ಭಾಷೆ, ನೆಲ, ಜಲದ ಬಗ್ಗೆ ಕಿಂಚಿತ್ತೂ ಯೋಚಿಸಲು ನಮಗೆ ಸಮಯವಿಲ್ಲ ಅಲ್ವೆ? ಎಂತಹ ಪರಮ ಸ್ವಾರ್ಥಿಗಳು ನಾವು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬದುಕು ಬಲು ಹೀನ ನಿಧಿಯು, ಸದಭಿಮಾನದ ಗೂಡು ಎಂದು ಮತ್ತೊಮ್ಮೆ ಹುಯಿಲ್ಗೋಳ ನಾರಾಯಣರು ಎಲ್ಲರನ್ನೂ ಎಚ್ಚರಿಸಬೇಕಾಗಿದೆ.

ಕನ್ನಡದ ಸೌಲಭ್ಯ ಪಡೆದವರೇ ಕನ್ನಡವನ್ನು  ಉಪೇಕ್ಷೆ ಮಾಡುವುದು ತಾಯಿ ಭುವನೇಶ್ವರಿಯ ಕರುಳು ಹಿಂಡಿದಂತಲ್ಲವೇ? ಕನ್ನಡಮ್ಮನ ಎದೆ ಹಾಲು ಕುಡಿದವರೇ ಕನ್ನಡ ಬರುವುದಿಲ್ಲವೆಂದು  ತಾತ್ಸಾರದ ಮಾತನಾಡಿದರೆ, ರೋಷ ಉಕ್ಕುವುದಿಲ್ಲವೇ?  ಮಾತೃಭಾಷೆಗೆ ಪ್ರಾಮುಖ್ಯತೆ ಕೊಡುವುದರೊಂದಿಗೆ, ಸ್ಥಳೀಯ ಭಾಷೆಯನ್ನು ಎಲ್ಲರೂ ಕಡ್ಡಾಯವಾಗಿ ಕಲಿಯಬೇಕಲ್ಲವೇ?  ಇಂದು ಭಾಷೆ ಕಲಿಕೆ ಕಳಪೆಯಾಗಿರುವುದರಲ್ಲಿ ಸಂದೇಹವಿಲ್ಲ.‌ ಮೀಸಲಾತಿಯ ಬರದಲ್ಲಿ ಭಾಷೆ ಬೋಧಿಸುವವರ ಭಾಷಾ ಗುಣಮಟ್ಟ ಕೊಚ್ಚಿ ಹೋಗಿದೆ.  ‘ಅ’ ಕಾರ ‘ಹ” ಕಾರ, ‘ಸ’ ‘ಶ’, ‘ಲ’ ,’ಳ’ ಇವುಗಳ ವ್ಯತ್ಯಾಸವನ್ನು ತಿಳಿಯದೇ ಇರುವ ಹಲವರು ಇಂದು ಕನ್ನಡದ ಶಿಕ್ಷಕ/ಶಿಕ್ಷಕಿಯರಾಗಿದ್ದಾರೆ.

ಅರ್ಧ ಗಂಟೆ ಅವರ ನಿರೂಪಣೆಯ ಉಚ್ಚಾರಣೆ ಕೇಳಿಸಿಕೊಳ್ಳಲು ನಮಗೇ ಹಿಂಸೆಯಾಗುವಾಗ,‌ ಇನ್ನು ಅವರಿಂದ ಕನ್ನಡ ಶಿಕ್ಷಣ ಪಡೆದ ಮಕ್ಕಳ ಗತಿಯೇನು? ಕನ್ನಡ ಕಲಿಸುವವರೇ ಹೀಗಿರುವಾಗ, ಇನ್ನು ಅವರಿಂದ ಕನ್ನಡ ಕಲಿತ ಮಕ್ಕಳ ಭಾಷೆ ಹೇಗಿರಬಹುದು.  ಮೀಸಲಾತಿ ಅಥವಾ ಶಿಫಾರಸ್ಸು ಮೇಲೆ ಶಿಕ್ಷಕ/ಶಿಕ್ಷಕಿಯಾದವರು ಕನ್ನಡ ಭಾಷಾಭಿಮಾನ ಹೊಂದಿರುತ್ತಾರೆಯೇ?  ಇನ್ನು ಆಡಳಿತದಲ್ಲಿರುವವರ ಕನ್ನಡ ಬಳಕೆ ಕೇಳಲು ಅಸಾಧ್ಯ.‌ ನಮ್ಮವರಿಂದಲೇ ನಮ್ಮ ಭಾಷೆ ನಲುಗುತ್ತಿದೆ ಎಂಬುದನ್ನು ಮನನ ಮಾಡಿಕೊಳ್ಳೋಣ.

ಕನ್ನಡ ಬರೊಲ್ಲ ಎನ್ನುವ ಕನ್ನಡದ ಕಂದನ ಆತ್ಮವಂಚನೆಯ ಆ ಕ್ಷಣ ಲಜ್ಜೆಗೆಟ್ಟವರ ಮುಂದೆ ಏನು ಹೇಳಬೇಕು ಎಂಬ ಪ್ರಶ್ನೆ ಕಾಡುತ್ತೆ. ಇಲ್ಲಿ ನಮ್ಮವರೇ ನಮ್ಮ ಭಾಷೆಗೆ ಹಿತ ಶತೃಗಳಾಗಿದ್ದಾರೆ.  ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಎಂದು ಮಕ್ಕಳಿಗೆ ಹೇಳಿ ಕೊಡುವ ಅಮ್ಮಂದಿರೇ, ಎಚ್ಚರಗೊಳ್ಳಿ. ಮುಂದೆ ಆ ಮಕ್ಕಳು ಮಾತೃಭಾಷೆಯನ್ನು ಮಾತ್ರವಲ್ಲ, ನಿಮ್ಮನ್ನು, ಜನ್ಮಭೂಮಿಯನ್ನು, ಸಂಸ್ಕಾರ, ಸಂಸ್ಕೃತಿಗಳನ್ನೆಲ್ಲ ಮರೆಯುತ್ತಾರೆ. ಶಾಲೆಯಲ್ಲಿ ವಿವಿಧ ಭಾಷೆ ಕಲಿಯುತ್ತಾರೆ. ಮನೆಯಲ್ಲಿಯು ಇಂಗ್ಲೀಷ್ ಭಾಷೆಯೆ ಬೇಕೆಂಬ ಮೋಹವೇಕೆ. ಕನ್ನಡ ಕಲಿತು, ಕನ್ನಡದಲ್ಲಿ ವ್ಯವಹರಿಸಿದರೆ, ಭಾಷಾ ಜ್ಞಾನ ಬೆಳೆಯುತ್ತದೆಯಲ್ಲವೇ? ನಮಗೂ ನಿಮಗೂ ಇದು  ಹೆಮ್ಮೆಯ ವಿಷಯವಲ್ಲವೇ?

ಭಾಷೆಯನ್ನು ಹೆಚ್ಚು ಹೆಚ್ಚಾಗಿ ಮಾತನಾಡಿ ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರದ್ದು. ಕನ್ನಡ ಭಾಷೆ ನಮಗೆ ನಮ್ಮ ಅಸ್ತಿತ್ವ ಸ್ವಾಭಿಮಾನ ಮತ್ತು ಸ್ವಂತಿಕೆ ನೀಡಿದೆ. ಮಾತಾಡು ಮಾತಾಡು ಕನ್ನಡವೆನ್ನುತ, ಎಲ್ಲರೊಂದಿಗೆ ಕನ್ನಡದಲ್ಲಿ ವ್ಯವಹರಿಸೋಣ. ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡ ಮಾತನಾಡುವವರು ನೆಲೆಸಿರುವಾಗ, ನಮ್ಮ ಕರ್ನಾಟಕದಲ್ಲಿರುವ ಬೇರೆ ರಾಜ್ಯದವರಿಗೆ ಕನ್ನಡ ಭಾಷೆ ಕಲಿಸಿ, ಅವರಿಗೂ ಕನ್ನಡದ ವಿಶ್ವ ಪರಂಪರೆಯನ್ನು ತಿಳಿಸಿಕೊಡುವ ಪ್ರಯತ್ನಗಳು ಆಗಬೇಕಿದೆ.   ಕನ್ನಡ ಭಾಷೆ ನಮ್ಮ ಅಭಿಮಾನದ ಧ್ಯೋತಕವಾಗಲಿ, ನಮ್ಮೆಲ್ಲರ ಉಸಿರಾಗಲಿ. ಕನ್ನಡಕ್ಕಾಗಿ ನಾವು ಬದುಕೋಣ. ಈ ನೆಲದ ಮಣ್ಣಿನ ಋಣವನ್ನು ತೀರಿಸೋಣ.

ಕನ್ನಡವೆಂದರೆ ಬರಿ ನುಡಿಯಲ್ಲ

ಹಿರಿದಿದೆ ಅದರರ್ಥ

ಜಲವೆಂದರೆ ಕೇವಲ ನೀರಲ್ಲ

ಅದು ಪಾವನ ತೀರ್ಥ

ಕನ್ನಡವೆಂದರೆ ಬರಿ ನಾಡಲ್ಲ

ಭೂಪಟ ಗೆರೆ ಚುಕ್ಕಿ

ಮರವೆಂದರೆ ಬರಿ ಕಟ್ಟಿಗೆಯೇ ಶ್ರೀಗಂಧದ ಚಕ್ಕೆ ಎನ್ನುವ ನಿಸ್ಸಾರ್ ಅಹ್ಮದ್ ಅವರ ಸಾಲುಗಳನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುತ್ತ, ಕನ್ನಡವೆಂದರೆ ಕೇವಲ ನವೆಂಬರಿಗೆ ಮಾತ್ರ ಸೀಮಿತವಲ್ಲ. ನಮ್ಮ ಧಮನಿ ಧಮನಿಯಲೂ ಭಾಷಾಪ್ರೇಮ ಉಕ್ಕಿ ಹರಿಯಲಿ, ಕನ್ನಡ ಎಲ್ಲೆಲ್ಲೂ ಮೊಳಗಲಿ, ಅನವರತ ಬೆಳಗಲಿ,  ಭಾಷೆ ಬೆಳೆಯಲಿ, ನಾಡು ಉಳಿಯಲಿ, ನೆಲದ ಸಂಸ್ಕ್ರತಿ ಪೀಳಿಗೆಯಿಂದ ಪೀಳಿಗೆಗೆ ಹರಡಲಿಯೆಂಬ ಆಶಯದೊಂದಿಗೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರೋಣವೆ? ಏನಂತೀರ?

ತಂತ್ರಜ್ಞಾನದ ಅಬ್ಬರ – ಕನ್ನಡವೇ ನಮ್ಮ ಅಕ್ಷರ…. ಎಂದೆಂದಿಗೂ ಎಲ್ಲೆಲ್ಲೂ ಮೊಳಗಲಿ.. ಬೆಳಗಲಿ..

 

admin
the authoradmin

Leave a Reply