LatestNews

ಅರಣ್ಯ ರಕ್ಷಕರೇ ಭಕ್ಷಕರಾದರೇ?.. ಕುಶಾಲನಗರ ಅಂಚೆ ಕಚೇರಿಯಲ್ಲಿ   ಮರಗಳ ಮಾರಣಹೋಮ… ಕರವೇ ಸ್ವಾಭಿಮಾನಿ ಸೇನೆ ಆಕ್ರೋಶ

ಕುಶಾಲನಗರ: ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಸರ್ಕಾರಿ ಅಂಚೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆಯ ಅನುಮತಿ ಮೀರಿ ಏಳು ಬೃಹತ್ ಮರಗಳನ್ನು ಕಡಿದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಚೆ ಇಲಾಖೆಯ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಕೇವಲ ಎರಡು ಮರಗಳನ್ನು ಕಡಿಯಲು ಅನುಮತಿ ನೀಡಿ, 2025ರ ಏಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿತ್ತು ಎನ್ನಲಾಗಿದೆ. ಆದರೆ ಅನುಮತಿ ನೀಡಿದ ಎರಡು ಮರಗಳ ಬದಲಾಗಿ ಒಟ್ಟು ಏಳು ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದ್ದು, ಈಗಾಗಲೇ ಮೂರು ಕ್ಯಾಂಟರ್ ಲಾರಿಗಳಲ್ಲಿ ಮರದ ತುಂಡುಗಳನ್ನು ಸಾಗಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ಮಧು ಕುಮಾರ್ ಅವರನ್ನು ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಪ್ರಶ್ನಿಸಿದಾಗ, ಕೇವಲ ಎರಡು ಮರಗಳನ್ನು ಕಡಿಯಲು ಮಾತ್ರ ಅನುಮತಿ ನೀಡಿದ್ದು, ಉಳಿದ ಮರಗಳ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಮುಖಂಡರು, ಅರಣ್ಯ ಇಲಾಖೆಯ ಸಿಬ್ಬಂದಿ ಮೇಲ್ವಿಚಾರಣೆ ಇಲ್ಲದೆ ಇಷ್ಟೊಂದು ಮರಗಳನ್ನು ಕಡಿದು ಸಾಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅವರನ್ನು ವಿಚಾರಿಸಿದಾಗ, ಮರ ಕಡಿಯುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಆದೇಶದ ಪ್ರತಿ ತಮಗೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯೂ ಅಂಚೆ ಇಲಾಖೆಯ ಗಮನಕ್ಕೆ ತರದೆ ಮರಗಳನ್ನು ಕಡಿದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ ಎರಡು ಮರಗಳಿಗೆ ಅನುಮತಿ ನೀಡಿ ಉಳಿದ ಐದು ಮರಗಳನ್ನು ಕಡಿದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಟೆಂಡರ್‌ದಾರರು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಂಚೆ ಕಚೇರಿ ಹಾಗೂ ಅರಣ್ಯ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಸೇನೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಗೌರವಾಧ್ಯಕ್ಷರಾದ ನಂಜಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಮಣಿಕಂಠ ಮತ್ತು ಸಂಘಟನಾ ಕಾರ್ಯದರ್ಶಿ ಖಾಸಿಂ ಮತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಶಿವ ಮತ್ತು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭವ್ಯ ಮತ್ತು ತಾಲ್ಲೂಕು ಗೌರವಾಧ್ಯಕ್ಷ ರವೀಂದ್ರ ಮತ್ತು ನಗರ ಘಟಕದ ಗೌರವಾಧ್ಯಕ್ಷ ವಿಲ್ಸನ್ ಮತ್ತು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

admin
the authoradmin

Leave a Reply