ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ವರ್ಣಿಸಲಾರದ್ದಾಗಿದೆ. ಕಳೆದು ಹೋಗುತ್ತಿರುವ ಮಲೆನಾಡನ್ನು ನೋಡಿದಾಗ ಅವರ ಅಂದಿನ ಮಲೆನಾಡಿನ ವರ್ಣನೆ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಇಂತಹ ಕವಿಯ ಬಗ್ಗೆ ಮಹಾನ್ ಸಾಹಿತಿ, ಕವಿಗಳು ತಮ್ಮದೇ ರೀತಿಯಲ್ಲಿ ಗುರು ವಂದನೆ ಸಲ್ಲಿಸಿರುವುದನ್ನು ನಾವು ಕಾಣಬಹುದಾಗಿದೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಹಿರಿಯರು ಏನೆಲ್ಲ ಹೇಳಿದ್ದಾರೆ ಎಂಬುದನ್ನು ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ.
ಕುವೆಂಪು ತಮ್ಮ ’ರಾಮಾಯಣ ದರ್ಶನಂ’ ಮಹಾನ್ ಕೃತಿ ರಚನೆಯ ಪ್ರಾರಂಭದಲ್ಲಿ ಜಗತ್ತಿನ ಕೆಲವು ಕವಿಶ್ರೇಷ್ಠರಿಗೆ, ಅಗ್ರಜರಿಗೆ, ಗುರುವೃಂದಕ್ಕೆ ಭಕ್ತಿ ಗೌರವಗಳಿಂದ ಪ್ರಥಮ ನಮನ ಸಲ್ಲಿಸಿದ್ದು ಗಮನನಾರ್ಹ ವಾಗಿದೆ. ಅವರು ಹೋಮರ್‌ಗೆ ವರ್ಜಿಲ್ ಗೆ ಡಾಂಟೆ ಮೇಣ್ ಮಿಲ್ಟನ್‌ಗೆ, ನಾರಣಪ್ಪಂಗೆ ಮೇಣ್ ಪಂಪನಿಗೆ ಋಷಿವ್ಯಾಸ, ಭಾಸ ಭವಭೂತಿ ಮೇಣ್ ಕಾಳಿದಾಸ ಆದ್ಯರಿಗೆ, ನರಹರಿ ತುಲಸೀದಾಸ ಮೇಣ್ ಕೃತ್ತಿವಾಸಾದಿ, ನನ್ನಯ್ಯ ಫ಼ಿರ್ದೂಸಿ ಕಂಬ ಅರವಿಂದರಿಗೆ. ಇಡೀ ಕೃತಿಯನ್ನು ತಮ್ಮ ನೆಚ್ಚಿನ ಗುರು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿರುವ ಜತೆಗೆ ಇನ್ನಿತರ ಗುರು, ಸಹೋದ್ಯೋಗಿ, ಬಂಧು-ಮಿತ್ರರಿಗೂ ಕೃತಜ್ಞತೆ ಸಲ್ಲಿಸಿದ್ದು ಅವರಲ್ಲಿದ್ದ ಅಪೂರ್ವಗುಣ ಅಮೋಘ ಮನಸ್ಥಿತಿಯನ್ನು ಪ್ರತಿ ಬಿಂಬಿಸುತ್ತದೆ.

ಕುವೆಂಪು ಅವರನ್ನು ಯಾರೆಲ್ಲ ಹೇಗೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡಿದ್ದೇ ಆದರೆ ಅವರೊಬ್ಬ ಸಾಹಿತ್ಯಚಕ್ರವರ್ತಿ, ಮಹಾಜ್ಞಾನಿ, ಬರಹಬ್ರಹ್ಮ, ವಿಶ್ವಮಾನವ, ಕನಸುಗಾರ, ವರ್ಣರಂಜಿತ ವ್ಯಕ್ತಿ-ಶಕ್ತಿ! ಆದ್ದರಿಂದಲೆ ’ಜಗದಕವಿ ನೀ ಯುಗದಕವಿ!’ ಎಂದು ವರಕವಿ ದ.ರಾ.ಬೇಂದ್ರ (ಅಂಬಿಕಾತನಯದತ್ತ ) ಬಣ್ಣಿಸಿರುವುದನ್ನು ನಾವು ಕಾಣಬಹುದಾಗಿದೆ. ಇನ್ನು ಹಿಮಾಲಯದೆತ್ತರ ಕನ್ನಡ ಬೆಳೆಸಿದ ನುಡಿ ನಿರ್ಮಾತೃ ಎಂದು ಪ್ರೊ.ದೊಡ್ಡರಂಗೇಗೌಡರು ಹೊಗಳಿದ್ದಾರೆ.
ಭಾರತದ ಅಂದಿನ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಕುವೆಂಪುರವರು ರವೀಂದ್ರನಾಥ ಟಾಗೂರರ ಉತ್ತರಾಧಿಕಾರಿ ಎಂದು ಹೇಳಿದರೆ, ಕನ್ನಡದ ಕಣ್ವ ಪ್ರೊ.ಬಿ.ಎಂ.ಶ್ರೀರವರು ಕುವೆಂಪುರವರ ಪ್ರತಿಭೆ, ವ್ಯಕ್ತಿತ್ವ ಪ್ರತಿಯೊಬ್ಬ ಗುರುವನ್ನೂ ಆಕರ್ಷಿಸುತ್ತವೆ ಎಂದಿದ್ದಾರೆ. ಆಚಾರ್ಯ ತೀ.ನಂ.ಶ್ರೀ ಕುವೆಂಪುರವರಿಂದಾಗಿ ಕನ್ನಡ ಸಾಹಿತ್ಯವು ಶ್ರೀಮಂತವಾಗುತ್ತಿದೆ ಎಂದೂ ತತ್ವಶಾಸ್ತ್ರಜ್ಞ ಪ್ರೊ.ಎ.ಆರ್.ವಾಡಿಯ ಅವರು ಎಲ್ಲಗುರುಗಳ ಅಪೇಕ್ಷೆಯಂತೆ ನಾನೂ ಪುಟ್ಟಪ್ಪನಂಥ ಶಿಷ್ಯೋತ್ತಮನನ್ನೆ ಪಡೆಯಬಯಸುತ್ತೇನೆ ಎಂದು ಹೇಳಿದ್ದರು.

ವಿಮರ್ಷಾಭೀಷ್ಮ ಪ್ರೊ.ತ.ಶು.ಶಾಮರಾಯರು ಕುವೆಂಪು ಅವರ ಪ್ರತಿಯೊಂದು ನಾಟಕವೂ ದಿವ್ಯಭಾವಗಳ ಹೆಗ್ಗುರಿಯಲ್ಲಿ ಮುನ್ನಡಿ ಇಟ್ಟಿದೆ ಎಂದು ನುಡಿದರೆ, ಕನ್ನಡದ ಅಶ್ವಿನಿ ದೇವತೆಗಳೆನಿಸಿದ್ದ ಕುವೆಂಪು ಗುರುದ್ವಯರು ಪ್ರೊ.ಟಿ.ಎಸ್.ವೆಂಕಣ್ಣಯ್ಯ- ಪ್ರೊ.ಎ.ಆರ್.ಕೃಷ್ಣ ಶಾಸ್ತ್ರಿ ಅವರು ನಮ್ಮ ಇಡೀ ಪ್ರಾಧ್ಯಾಪಕ ವೃತ್ತಿಜೀವನದಲ್ಲಿ ನಾವು ಕಂಡ ಅಸಾಧಾರಣ ಮತ್ತು ಅಪ್ರತಿಮ ಶಿಷ್ಯೋತ್ತಮ ಎಂದು ಬಣ್ಣಿಸಿದ್ದಾರೆ. ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು ಒಮ್ಮೆ ಕುವೆಂಪು ಕವನ ಪಂಕ್ತಿಗಳನ್ನು ಅವರಿಂದಲೇ ಓದಿಸಿ ಕೇಳಿದ ನಂತರ ಹೇಳಿದ್ದು: “ಏನಯ್ಯಾ ಪುಟ್ಟಪ್ಪ, ಪ್ರಪಂಚದ ಬೇರಾವ ಕವಿ ಇಂಥ ಪದ್ಯವನ್ನು ಬರೆದಿದ್ದಾನೆ ಹೇಳು?”ಎಂದು ಕೇಳಿದಾಗ ಕುವೆಂಪು ರೋಮಾಂಚನಗೊಂಡರಂತೆ!
ಕನ್ನಡಕ್ಕೆ ಹಾಸ್ಯದ ಉಸಿರು ನೀಡಿದ ಪ್ರೊ.ನಾ.ಕಸ್ತೂರಿ ಅವರು ಆಕೃತಿಯಲ್ಲಿ ‘ಪುಟ್ಟಅಪ್ಪ’ ನಾದರೂ ಸಾಹಿತ್ಯದಲ್ಲಿ ‘ಬಲುದೊಡ್ಡಅಪ್ಪ’ ನನ್ನ ಪ್ರಿಯ ಮಿತ್ರ ಕೆ.ವಿ.ಪುಟ್ಟಪ್ಪ ಎಂದು ಹಾಸ್ಯಮಯವಾಗಿ ಬಣ್ಣಿಸಿದರೆ, ನಾಡೋಜ ಪ್ರೊ.ದೇಜಗೌರವರು, ಕುವೆಂಪು ಸಾಹಿತ್ಯದಲ್ಲಿ ಪಾರಮಾರ್ಥಿಕ ಲೌಕಿಕಗಳೆರಡೂ ಪರಸ್ಪರ ಹೆಣೆದುಕೊಂಡಿವೆ, ಅವರ ಕಾವ್ಯ ಜೀವನ ಲೋಕ ಜೀವನ ಎರಡರಲ್ಲೂ ಸಾಮರಸ್ಯವಿದೆ. ಅಂಕಣಕಾರರಾರು ಸಾಹಿತಿಗಳೂ ಆಗಿದ್ದ ಪ್ರೊ.ಎಚ್ಚೆಸ್ಕೆ ಅವರು ವಾಮನನಾಗಿ ಬಂದವನು ತ್ರಿವಿಕ್ರಮನಾದಂತೆ, ಬಿಡಿಯಿಂದ ಬ್ರಹ್ಮಾಂಡಕ್ಕೂ ಜಿಗಿಯುವುದು ಕುವೆಂಪುರವರ ಸಾಮರ್ಥ್ಯ ಎಂದಿದ್ದಾರೆ.

ಖ್ಯಾತ ಬರಹಗಾರ ಪ್ರೊ.ಪ್ರಭುಶಂಕರರವರು 20ನೇ ಶತಮಾನದ ಕನ್ನಡ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಒಬ್ಬ ಯುಗಪುರುಷ ಕುವೆಂಪು, ಪ್ರೊ.ಪು.ತಿ.ನ.: ಕುವೆಂಪುರವರು ಪುರೋಹಿತಶಾಹಿ ವಿರೋಧಿಯಾಗಿದ್ದರೇ ಹೊರತು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ಕೇರಳ ರಾಜಮನೆತನದ ಸ್ವಾಮಿ ಶ್ರೀಸಿದ್ಧೇಶ್ವರಾನಂದರವರು ಪುಟ್ಟಪ್ಪನನ್ನು ನನ್ನ ಮಾನಸ ಪುತ್ರನನ್ನಾಗಿ ಸ್ವೀಕರಿಸಿರುವೆ ಎಂದಿದ್ದಾರೆ. ಸ್ವಾಮಿ ವೀತಮೋಹಾನಂದಜೀ,ರಾಮಕೃಷ್ಣಮಠ,ಕಲ್ಕತ್ತ ಅವರು ವಿವೇಕಾನಂದವಾಣಿ ಕುವೆಂಪು ಮೂಲಕ ಕನ್ನಡದಲ್ಲಿ ಅಸ್ತಿತ್ವ ಕಂಡು ರೂಪಾಂತರ ಹೊಂದಿದೆ. ಡಾ.ರಾಜ್ ಕುಮಾರ್ ವರು ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ…, ಎಲ್ಲಾದರು ಇರು ಎಂಥಾದರು ಇರು, ಮುಂತಾದ ಕನ್ನಡ ಮಂತ್ರಗಳನ್ನು ಹೇಳಿಕೊಟ್ಟ ಕನ್ನಡ ಕುಲಪುರೋಹಿತರು ಎಂದು ಬಣ್ಣನೆ ಮಾಡಿದ್ದಾರೆ.

1969ರಲ್ಲಿ ಕುವೆಂಪುರವರು ಯಾರೀ… ಕುಮಾರಕವಿ..? ಎಂದು ಉದ್ಘರಿಸಿದ ಆ ಹುಡುಗ ಮುಂದೆ 1977ರಲ್ಲಿ ಬರೆದ ತನ್ನ ಚೊಚ್ಚಲ “ಕವನಸುಧೆ” ಸಂಕಲನಕ್ಕೆ ಆಶೀರ್ವಚನ ಬರೆಸಿಕೊಂಡರು. ಕುವೆಂಪು ಎಂಬುದರರ್ಥ ಕನ್ನಡ ಕಾವ್ಯಸಂಸ್ಕೃತಿ; ಅವರ ಸಾಹಿತ್ಯ ಅನಂತತೆ ಕ್ಷಿತಿಜದಷ್ಟಿದ್ದರೆ, ಅಸ್ಮಿತೆಯ ವರ್ಣನೆಯು ಸಾಗರದಷ್ಟಿದೆ: ಎಂದು ಬಿ.ಎನ್.ನಟರಾಜ್ ತಮ್ಮ ’ಕನ್ನಡ ಡಿಂಡಿಮ’ ಕವನ ಸಂಕಲನದಲ್ಲಿ ಬರೆದುಕೊಂಡಿದ್ದಾರೆ. ಕುವೆಂಪುರವರ ಬಾಯಿಂದ ಹೊರಟ ಕುಮಾರಕವಿ ಎಂಬ ಕಾವ್ಯನಾಮದಿಂದ 42ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ!

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು, ಕನ್ನಡಕ್ಕಾಗಿ ಕೊರಳೆತ್ತು ನಿನ್ನ ಕೊರಳು ಪಾಂಚಜನ್ಯ ಆಗುವುದು, ಝೇಂಕಾರವನ್ನು ಸ್ವಯಂ ಪುಟ್ಟಪ್ಪನವರೆ ಅಳವಡಿಸಿಕೊಂಡು ಪ್ರಪಂಚದಾದ್ಯಂತ ಕನ್ನಡ ಭಾಷೆ-ಸಾಹಿತ್ಯ ಪಸರಿಸಲು ಬೇಕಾದ ಸೂಕ್ತ ಕ್ರಮ ಕೈಗೊಂಡರು. ಆಸ್ತಿಕ, ನಿರಹಂಕಾರಿ, ನಿಸ್ವಾರ್ಥಿ, ಸಾತ್ವಿಕ ಆಹಾರ, ತಾತ್ವಿಕ ವಿಚಾರದ ಶ್ರೇಷ್ಠಮಾನವ. ಇವರನ್ನು ಪಡೆದ ಭಾರತೀಯರು/ಕನ್ನಡಿಗರು ಧನ್ಯರು! ಈ ಮಹಾಕವಿಯ ಬಗ್ಗೆ ಹಾಗೂ ಇವರ ಸಾಹಿತ್ಯದ ಬಗ್ಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಹಲವಾರು ಬಗೆಯಲ್ಲಿ ಪ್ರೌಢಪ್ರಬಂಧ ಮಂಡಿಸಿ ಡಾಕ್ಟರೇಟ್ (PhD) ಗಳಿಸಿದ್ದಾರೆ ಎನ್ನುವುದೇ ಹೆಮ್ಮೆ ಪಡುವ ವಿಚಾರವಾಗಿದೆ.

ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ… ಇದು ಜಗದಕವಿ ಯುಗದಕವಿಯ ಬದುಕು-ಬರಹದ ಕಥೆ









Excellent exciting article about KUVEMPU
Excellent exciting article about KUVEMPU the legendary poet 👏 👍
Thank you so much Lava sir
ಕುವೆಂಪು ಎಂಬ ಹಿಮಾಲಯದೆತ್ತರ ಕವಿಪುಂಗವರ ಬಗ್ಗೆ ಉತ್ತಮ ಲೇಖನ ಬರೆದ ಮತ್ತು ಅವರಿಂದ ಆಶೀರ್ವಚನ ಪಡೆದ ಲೇಖಕ ಕುಮಾರಕವಿಯವರ ಬಗ್ಗೆ ನಮಗೆಲ್ಲ ಹೆಮ್ಮೆ. ಇಂಥವರ ಲೇಖನ ಪ್ರಕಟಿಸಿದ ನಮ್ಮ ನೆಚ್ಚಿನ ಕನ್ನಡ ಜನಮನ ಪತ್ರಿಕೆಯ ಬಗ್ಗೆ ಇನ್ನೂ ಹೆಚ್ಚಿನ ಹೆಮ್ಮೆಇದೆ, ಧನ್ಯವಾದ
R.ರಾಜಶೇಖರ, ಲೇಖಕ, ವಿಮರ್ಶಕ, ದಾವಣಗೆರೆ.
ಕುವೆಂಪು ಎಂಬ ಹಿಮಾಲಯದೆತ್ತರ ಕವಿಪುಂಗವರ ಬಗ್ಗೆ ಉತ್ತಮ ಲೇಖನ ಬರೆದ ಮತ್ತು ಅವರಿಂದ ಆಶೀರ್ವಚನ ಪಡೆದ ಲೇಖಕ ಕುಮಾರಕವಿಯವರ ಬಗ್ಗೆ ನಮಗೆಲ್ಲ ಹೆಮ್ಮೆ. ಇಂಥವರ ಲೇಖನ ಪ್ರಕಟಿಸಿದ ನಮ್ಮ ನೆಚ್ಚಿನ ಕನ್ನಡ ಜನಮನ ಪತ್ರಿಕೆಯ ಬಗ್ಗೆ ಇನ್ನೂ ಹೆಚ್ಚಿನ ಹೆಮ್ಮೆಇದೆ, ಧನ್ಯವಾದ, ನಮಸ್ಕಾರ ಆರ್.ರಾಜಶೇಖರ, ಲೇಖಕ, ವಿಮರ್ಶಕ, ದಾವಣಗೆರೆ.
ರಾಷ್ಟ್ರಕವಿ ಪದ್ಮಭೂಷಣ ಕುವೆಂಪುರವರ ಬಗ್ಗೆ ಕುಮಾರಕವಿಯವರ ಸಂಕ್ಷಿಪ್ತ ವಿವರದ ಅಮೋಘ ಲೇಖನ ಓದಿದ ನನಗೆ ತುಂಬ ಸಂತೋಷವಾಯ್ತು. ಧನ್ಯವಾದ ಸರ್
ರಾಷ್ಟ್ರಕವಿ ಪದ್ಮಭೂಷಣ ಕುವೆಂಪುರವರ ಬಗ್ಗೆ ಕುಮಾರಕವಿಯವರ ಸಂಕ್ಷಿಪ್ತ ವಿವರದ ಅಮೋಘ ಲೇಖನ ಓದಿದ ನನಗೆ ತುಂಬ ಸಂತೋಷವಾಯ್ತು. ಧನ್ಯವಾದ ಸರ್, ನಮಸ್ಕಾರ
ಕುವೆಂಪುರವರ ಬಾಯಿಂದ ಹೊರಟ “ಕುಮಾರಕವಿ” ಎಂಬ ಉವಾಚವನ್ನು ತಮ್ಮ ಕಾವ್ಯನಾಮ ಆಗಿಸಿಕೊಂಡು ಸಾವಿರಾರು ಕತೆ, ಕವನ, ಕಥನಕವನ, ಹನಿಗವನ, ಚುಟುಕುಚಟಾಕಿ, ಕಾದಂಬರಿ, ವಿಮರ್ಶೆ, ಜೀವನಚರಿತ್ರೆ, ನಾಟಕ,
ವ್ಯಕ್ತಿತ್ವ, ಹಾಸ್ಯಲೇಖನ, ನಾಟಕ-ಸಿನಿಮಾರಂಗ ಕ್ರೀಡಾಕೂಟ, ಮುಂತಾದ ಎಲ್ಲ ಪ್ರಾಕಾರದ ಲೇಖನಗಳನ್ನು ಬರೆಯುತ್ತಿರುವ ನಟರಾಜರವರ ಸಾಹಿತ್ಯಕೃಷಿ ದಿಟವಾಗಿಯೂ ಶ್ಲಾಘನೀಯ, ಇವರ ಪ್ರತಿಯೊಂದು ಬರವಣಿಗೆಯೂ ಆಕರ್ಷಕ ಮತ್ತು ಸಂಗ್ರಹಯೋಗ್ಯ, ಅಭಿನಂದನೆಗಳು
*ರಾ.ಗೋವಿಂದರಾಜು, ಲೇಖಕ, ವಿಮರ್ಶಕ, ಬೆಂಗಳೂರು
ಕುವೆಂಪುರವರ ಬಾಯಿಂದ ಹೊರಟ “ಕುಮಾರಕವಿ” ಎಂಬ ಉವಾಚವನ್ನು ತಮ್ಮ ಕಾವ್ಯನಾಮ ಆಗಿಸಿಕೊಂಡು ಸಾವಿರಾರು ಕತೆ, ಕವನ, ಕಥನಕವನ, ಹನಿಗವನ, ಚುಟುಕುಚಟಾಕಿ, ಕಾದಂಬರಿ, ವಿಮರ್ಶೆ, ಜೀವನಚರಿತ್ರೆ, ನಾಟಕ,
ವ್ಯಕ್ತಿತ್ವ, ಹಾಸ್ಯಲೇಖನ, ನಾಟಕ-ಸಿನಿಮಾರಂಗ ಕ್ರೀಡಾಕೂಟ, ಮುಂತಾದ ಎಲ್ಲ ಪ್ರಾಕಾರದ ಲೇಖನಗಳನ್ನು ಬರೆಯುತ್ತಿರುವ ನಟರಾಜರವರ ಸಾಹಿತ್ಯಕೃಷಿ ದಿಟವಾಗಿಯೂ ಶ್ಲಾಘನೀಯ, ಇವರ ಪ್ರತಿಯೊಂದು ಬರವಣಿಗೆಯೂ ಆಕರ್ಷಕ ಮತ್ತು ಸಂಗ್ರಹಯೋಗ್ಯ, ಅಭಿನಂದನೆಗಳು, ಶುಭವಾಗಲಿ
*ರಾ.ಗೋವಿಂದರಾಜು, ಲೇಖಕ, ವಿಮರ್ಶಕ, ಬೆಂಗಳೂರು