ಚುಂಚನಕಟ್ಟೆಯಲ್ಲಿ ಕಳೆಕಟ್ಟಿದ ಸಂಭ್ರಮ… ಜಾನುವಾರು ಜಾತ್ರೆಗೆ ಕ್ಷಣಗಣನೆ ಆರಂಭ… ನೀವೂ ಬನ್ನಿ..!
ಇದೀಗ ರೈತರು ಕೂಡ ತಮ್ಮೂರಲ್ಲಿ ನಡೆಯುವ ಜಾತ್ರೆಗೆ ಸಜ್ಜಾಗುತ್ತಿದ್ದು, ತಾವು ಮಾತ್ರವಲ್ಲದೆ ತಮ್ಮ ಜಾನುವಾರುಗಳನ್ನು ಜಾತ್ರೆಗೆ ಅಣಿಗೊಳಿಸುತ್ತಿದ್ದಾರೆ

ಮೈಸೂರು: ಸುಗ್ಗಿಕಾಲದಲ್ಲೀಗ ಜಾತ್ರೆಗಳ ಭರಾಟೆ ಎಲ್ಲೆಡೆ ಆರಂಭವಾಗಿದೆ. ಮೈಸೂರು ಭಾಗದಲ್ಲಿ ನಡೆಯುವ ಜಾತ್ರೆಗಳ ಪೈಕಿ ಕೆ.ಆರ್.ನಗರ ವ್ಯಾಪ್ತಿಯ ಚುಂಚನಕಟ್ಟೆ ಜಾತ್ರೆಯೂ ಒಂದಾಗಿದ್ದು, ಇದು ಜಾನುವಾರುಗಳ ಜಾತ್ರೆಯಾಗಿ ಪ್ರಸಿದ್ಧಿ ಹೊಂದಿದೆ. ಹೊಸವರ್ಷದಿಂದಲೇ(ಜನವರಿ 1) ಆರಂಭವಾಗಲಿರುವ ಜಾತ್ರೆಗೆ ಈಗಿನಿಂದಲೇ ಸಿದ್ಧತೆಗಳು ಆರಂಭಗೊಂಡಿದ್ದು, ಸುತ್ತಮುತ್ತಲ ಊರುಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಈ ಜಾತ್ರೆಗೆ ಮೈಸೂರು, ಮಂಡ್ಯ, ಚಾಮರಾಜ ನಗರ, ರಾಮನಗರ, ಹಾಸನ ಜಿಲ್ಲೆಯ ಜತೆಗೆ ಧಾರವಾಡ, ಕಲಬುರಗಿ, ರಾಯಚೂರು, ಬಿಜಾಪುರದ ರೈತರು ತಮ್ಮ ಜಾನುವಾರುಗಳೊಂದಿಗೆ ಆಗಮಿಸಲಿದ್ದು, ಜಾನುವಾರುಗಳ ವ್ಯಾಪಾರ ಜೋರಾಗಿ ನಡೆಯಲಿದೆ. ಇನ್ನು ರಾಜ್ಯ ಮಾತ್ರವಲ್ಲದೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳ ರೈತರೂ ಇಲ್ಲಿಗೆ ಆಗಮಿಸಿ ಹೋರಿಗಳನ್ನು ಖರೀದಿಸುವುದು ಹಿಂದಿನಿಂದಲೂ ನಡೆದು ಬಂದಿದೆ.
ಸುಗ್ಗಿಯ ನಂತರ ನಡೆಯುವ ಮೊದಲ ಜಾತ್ರೆ ಇದಾಗಿದ್ದು, ರೈತರು ತಮ್ಮ ಪ್ರೀತಿಯ ಜೋಡೆತ್ತುಗಳನ್ನು ಉತ್ತಮವಾಗಿ ಸಾಕಿ ಸಿಂಗಾರ ಮಾಡಿ ಕರೆತರುತ್ತಾರೆ. ಅದಕ್ಕಾಗಿಯೇ ಪೆಂಡಾಲ್‌ಗಳನ್ನು ನಿರ್ಮಿಸಿ, ಜೋಪಾನವಾಗಿ ಕಾಪಾಡುವುದಲ್ಲದೆ ಜೋಡೆತ್ತುಗಳ ಭರ್ಜರಿ ಪ್ರದರ್ಶನ ಮತ್ತು ಮಾರಾಟ ಜೋರಾಗಿರುತ್ತದೆ. ಈಗಾಗಲೇ ಚುಂಚನಕಟ್ಟೆಯ ಹೋರಿ ಮಾಳ, ಹೊಲ ಗದ್ದೆಗಳು ಸೇರಿದಂತೆ ಗ್ರಾಮದೆಲ್ಲೆಡೆ ಜಾತ್ರೆಯ ಚಟುವಟಿಕೆ ಗಳು ಗರಿಗೆದರುತ್ತಿದ್ದು, ಜಾತ್ರೆಗೆ ಸಾಂಪ್ರದಾಯಿಕ ಕಳೆ ಬರಲಾರಂಭಿಸಿದೆ.

ಇದೀಗ ರೈತರು ಕೂಡ ತಮ್ಮೂರಲ್ಲಿ ನಡೆಯುವ ಜಾತ್ರೆಗೆ ಸಜ್ಜಾಗುತ್ತಿದ್ದು, ತಾವು ಮಾತ್ರವಲ್ಲದೆ ತಮ್ಮ ಜಾನುವಾರುಗಳನ್ನು ಜಾತ್ರೆ ಅಣಿಗೊಳಿಸುತ್ತಿದ್ದಾರೆ. ಹೀಗಾಗಿ ರಾಸುಗಳ ದರ್ಭಾರ್ ಅಲ್ಲಲ್ಲಿ ಕಾಣಿಸುತ್ತಿದ್ದು, ಜಾತ್ರೆಯ ಖುಷಿ ರೈತರ ಮೊಗದಲ್ಲಿ ಕಾಣಿಸುತ್ತಿದೆ. ಕಳೆದ ವರ್ಷ ಅಕಾಲಿಕ ಮಳೆ ಭತ್ತ ಕಟಾವಿಗೆ ತೊಂದರೆ ಕೊಟ್ಟಿತ್ತು. ಈ ಬಾರಿ ಭತ್ತದ ಕಟಾವು ಕಾರ್ಯ ಸೇರಿದಂತೆ ಎಲ್ಲ ಕೃಷಿ ಚಟುವಟಿಕೆಗಳು ಮುಗಿದಿದ್ದು ರೈತರು ನಿಟ್ಟುಸಿರುವ ಬಿಡುವಂತಾಗಿದೆ. ಹೀಗಾಗಿಯೇ ಅವರು ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ.
ಮಳೆಗಾಳಿ ಎನ್ನದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದವರು ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿದ ಸಂತಸದಲ್ಲಿದ್ದು ಎಲ್ಲ ಜಂಜಾಟವನ್ನು ಬದಿಗೊತ್ತಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹಲವು ಬಗೆಯ ತಳಿಯ ರಾಸುಗಳು ಸೇರುವ ನಿರೀಕ್ಷೆಯಿದೆ. ಹೊಸ ವರ್ಷದಿಂದಲೇ ಆರಂಭವಾಗುವ ಜಾನುವಾರು ಜಾತ್ರೆಗೆ ಈಗಾಗಲೇ ಜಿಲ್ಲೆ ಹಾಗೂ ಇತರೆ ಜಿಲ್ಲೆಯ ನಾನಾ ಭಾಗಗಳ ರೈತರು ಹೊಲ, ಗದ್ದೆಗಳು ಹಾಗೂ ಹೋರಿ ಮಾಳದ ಆವರಣಗಳ ಸ್ವಚ್ಛತೆಯೊಂದಿಗೆ ತಮ್ಮ ನೆಚ್ಚಿನ ರಾಸುಗಳನ್ನು ಕಟ್ಟಲು ದವಣಿಗಳ ಚಪ್ಪರ ಹಾಕುವ ಪೂರ್ವ ತಯಾರಿ ಜೋರಾಗಿದೆ.

ಗ್ರಾಮದ ಮುಖ್ಯ ರಸ್ತೆಗಳು, ಬಸವನ ಪ್ರತಿಮೆ ಹಾಗೂ ವೃತ್ತ ಸೇರಿದಂತೆ ದೇವಾಲಯಕ್ಕೆ ಹಲವು ಬಗೆಯ ಬಣ್ಣ, ಬಣ್ಣ ಚಿತ್ತಾರದ ಮ್ಯೂಸಿಕಲ್ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಈಗಾಗಲೇ ಗ್ರಾಮದ ಮುಖ್ಯ ರಸ್ತೆಗಳು ಹಾಗೂ ಬಸವ ವೃತ್ತ ಸೇರಿದಂತೆ ಇನ್ನಿತಿರ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾರ್ಯ ನಡೆಯುತ್ತಿದೆ, ಸಾರ್ವಜನಿಕ ಕುಡಿಯುವ ನೀರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಸಿಹಿ ತಿಂಡಿ ತಿನಿಸುಗಳ, ಕಡ್ಲೆ ಪುರಿ ಇನ್ನಿತರೆ ಅಂಗಡಿ, ಮಳಿಗೆ ಕಟ್ಟುವ ಕಾರ್ಯವೂ ಭರದಿಂದ ಸಾಗುತ್ತಿದೆ. ಒಟ್ಟಾರೆ ಚುಂಚನಕಟ್ಟೆ ಜಾತ್ರೆ ಕ್ಷಣಗಣನೆ ಆರಂಭವಾಗಿದ್ದು ನೀವೂ ಬನ್ನಿ…
ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆ… ಚುಂಚನಕಟ್ಟೆಯ ಸ್ಥಳ ಮಹಿಮೆ ಏನು?







