ArticlesDasaraLatest

ಅರಮನೆ ಆಕರ್ಷಣೆ ಕಂಚಿನ ಹುಲಿಗಳು… ಇವುಗಳನ್ನು ಇಲ್ಲಿ ಸ್ಥಾಪನೆ ಮಾಡಿದ್ದು ಏಕೆ?

ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆಯನ್ನು ವೀಕ್ಷಿಸಲು ಬರುವರ ಪ್ರವಾಸಿಗರನ್ನು ಅರಮನೆ ಆವರಣದಲ್ಲಿರುವ ಕಂಚಿನ ಹುಲಿಗಳು ಗಮನಸೆಳೆಯದಿರದು. ಬಹಳಷ್ಟು ಮಂದಿ ಇದರ ಪಕ್ಕ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಾರೆ. ನೋಡಲು ಆಕರ್ಷಕವಾಗಿರುವ ಇವುಗಳು ಕುತೂಹಲವನ್ನು ಕೆರಳಿಸುತ್ತವೆ.

ಅರಮನೆ ಆವರಣದ ವಿವಿಧ ಕಡೆಗಳಲ್ಲಿ ಒಟ್ಟು ಎಂಟು ಹುಲಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆಗಳ ನಿರ್ಮಾಣದ ಹಿಂದೆ ರೋಚಕ ಇತಿಹಾಸ ಇರುವುದನ್ನು ಕಾಣಬಹುದಾಗಿದೆ.

ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅರಮನೆಯ ಹೊರ ಆವರಣದಲ್ಲಿ  ಆಗಾಗ್ಗೆ ಹುಲಿಗಳು ಕಾಣಿಸಿಕೊಳ್ಳುತ್ತಿದ್ದವಂತೆ ಆದರೆ ಅವು ಯಾರಿಗೂ ತೊಂದರೆ ನೀಡುತ್ತಿರಲಿಲ್ಲವಂತೆ. ಸೌಮ್ಯತೆಯಿಂದ ವರ್ತಿಸುತ್ತಿದ್ದ ಹುಲಿಗಳನ್ನು ನೋಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಖುಷಿಪಡುತ್ತಾ ದಿನ ಕಳೆಯುತ್ತಿದ್ದರಂತೆ.

ಆದರೆ ಕೆಲವು ವರ್ಷಗಳ ನಂತರ ಹುಲಿಗಳು ಬರುವುದನ್ನು ನಿಲ್ಲಿಸಿ ಬಿಟ್ಟವು. ಇದು ಅವರಿಗೆ ಅತೀವ ವೇದನೆಯನ್ನುಂಟು ಮಾಡಿತಂತೆ. ಮುಂದೆ ಈ ವಿಚಾರವನ್ನು ಅವರು ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೇಳಿದ್ದರಂತೆ. ಇದನ್ನು ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಅರಮನೆ ಆವರಣದಲ್ಲಿ ಹುಲಿಗಳು ಅಡ್ಡಾಡುತ್ತಿದ್ದ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುವ ತೀರ್ಮಾನ ಮಾಡಿದರು.

ಹುಲಿಗಳ ಪ್ರತಿಮೆ ನಿರ್ಮಾಣ ಮಾಡಲು ಶಿಲ್ಪಿಗಳನ್ನು ಹುಡುಕುತ್ತಿದ್ದರಂತೆ ಅದೇ ಸಂದರ್ಭ ಅರಮನೆ ವೀಕ್ಷಣೆಗೆ ಬಂದಿದ್ದ ಪ್ರಖ್ಯಾತ ಶಿಲ್ಪ ತಜ್ಞ ಬ್ರಿಟನ್‌ನ ರಾಯಲ್ ಅಕಾಡೆಮಿಯ ರಾಬರ್ಡ್ ವಿಲಿಯಂ ಕಾಲ್ಟನ್ ಅವರೊಂದಿಗೆ ಮಾತನಾಡುತ್ತಾ ತಮ್ಮ ಮನದ ಇಂಗಿತವನ್ನು ತಿಳಿಸಿದರು.

ಆಗ  ರಾಬರ್ಡ್ ವಿಲಿಯಂ ಕಾಲ್ಟನ್ ಅವರು ಮೂರು ತಿಂಗಳ ಅವಧಿಯೊಳಗೆ ಹುಲಿಗಳ ಪ್ರತಿಮೆಯನ್ನು ಮಾಡಿಕೊಡಲು ಒಪ್ಪಿದರು. ಅದರಂತೆ 1909ರ ಅವಧಿಯಲ್ಲಿ ಅರಮನೆಯ ತೊಟ್ಟಿಯ ಭಾಗದ ನಾಲ್ಕು ಕಡೆ ಕಂಚಿನ ಹುಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಯಿತು.

ಇವತ್ತು ನಾವು ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕು ಅಲ್ಲದೆ, ಜಯಮಾರ್ತಂಡ, ವರಾಹ, ಜಯರಾಮ ಮತ್ತು ಬಲರಾಮ ದ್ವಾರಕ್ಕೆ ಎದುರಾಗಿ ಹಾಗೂ ಕಲ್ಯಾಣ ಮಂಟಪ ಹತ್ತಿರವಿರುವ ತೆರೆದ ತೊಟ್ಟಿಯ ಭಾಗ (ಜಟ್ಟಿ ಕಾಳಗ ಸ್ಥಳ)ದಲ್ಲಿ ಹೀಗೆ ಒಟ್ಟು ಎಂಟು ಕಡೆ ಕಂಚಿನ ಹುಲಿಗಳನ್ನು ಕಾಣಬಹುದಾಗಿದೆ.

 

admin
the authoradmin

Leave a Reply