ArticlesLatest

ಅವಲೋಕನ 102.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಕ.ಸಾ.ಪ.ಬೆಳ್ಳಿಬಿಟ್ಟಬಳ್ಳಿ-23 ಕೃತಿ: ದಾಸಪ್ಪ-ಜೋಗಪ್ಪ

ಪ್ರಧಾನಸಂಪಾದಕ:ಹಂಪ ನಾಗರಾಜಯ್ಯ

ಸಂಪಾದಕ : ಹಿ.ಚಿ.ಬೋರಲಿಂಗಯ್ಯ

ಪ್ರಕಾಶನ:ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು,

ಪುಟಗಳು:212, ಬೆಲೆ:ರೂ.4-50,

ಮೊದಲ ಮುದ್ರಣ:1981

ಕರ್ನಾಟಕ ಏಕೀಕರಣದ ಬೆಳ್ಳಿ ಹಬ್ಬವನ್ನು ರಾಜ್ಯದ ಕ.ಸಾ.ಪ. ರಾಜ್ಯದಾದ್ಯಂತ ವ್ಯಾಪಕ ಮತ್ತು ವ್ಯವಸ್ಥಿತವಾಗಿ ಆಚರಿಸುತ್ತಿದೆ. ತತ್ಸಂಬಂಧ “ಬೆಳ್ಳಿಬಿಟ್ಟಬಳ್ಳಿ” ಹೆಸರಿನ ಪುಸ್ತಕ ಪ್ರಕಟಣೆ ಮಾಲೆ ಅಡಿಯಲ್ಲಿ ನೂರಕ್ಕು ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಲಾಗಿದ್ದು ಈ ಪೈಕಿ 23ನೇ ಕೃತಿಯಾಗಿ ‘ದಾಸಪ್ಪ-ಜೋಗಪ್ಪ’ ಲೋಕಾರ್ಪಣೆ ಗೊಂಡುದು ಸಂತಸಕರ ಸಂಗತಿ.

ಈ ಕೃತಿಯ “ಮುನ್ನುಡಿ”ಯನ್ನು ಪುಸ್ತಕದ ಪ್ರಧಾನ ಸಂಪಾದಕರೂ, ಕ.ಸಾ.ಪ. ಅಧ್ಯಕ್ಷರೂ ಆಗಿರುವ ಹಂ.ಪ. ನಾಗರಾಜಯ್ಯ ಬರೆದಿದ್ದಾರೆ. ಇವರೊಬ್ಬ ಖ್ಯಾತ ವಾಗ್ಮಿ, ಉತ್ತಮ ಲೇಖಕ, ಕನ್ನಡದ ಕಟ್ಟಾಳು, ಸರಳಸಜ್ಜನಿಕೆ ಸಾಕಾರಮೂರ್ತಿ. ಖ್ಯಾತ ಜಾನಪದ ತಜ್ಞ ಹಿ.ಚಿ. ಬೋರ ಲಿಂಗಯ್ಯ ಇದರ ಸಂಪಾದಕರಾಗಿ ಧನ್ಯಾತ್ಮಕ ಸಾರ್ಥಕ್ಯ ಮೆರೆದಿದ್ದಾರೆ.

ಮುನ್ನುಡಿ, ಕೃತಜ್ಞತೆಗಳು, ಪ್ರಸ್ತಾವನೆ, ಈ ಪುಟಗಳ ನಂತರ ಬರುವ ಗ್ರಂಥದ ಪರಿವಿಡಿ ಹೀಗಿದೆ: *ದಾಸಪ್ಪ, *ದಾಸಯ್ಯಗಳ ತಿರುಪತಿ ಯಾತ್ರೆ, *ದಾಸಪ್ಪನ ಪದಗಳು, *ದಾಸಪ್ಪನ ಸಂದರ್ಶನ, *ಜೋಗಪ್ *ಜೋಗಪ್ಪನ ಪದಗಳು *ಜೋಗಪ್ಪನ ಸಂದರ್ಶನ *ಅನುಬಂಧ  *ನಿರೂಪಕರ ಪರಿಚಯ *ಅರ್ಥಕೋಶ

ಆದಿ ಕಾಲದಿಂದ ಕನ್ನಡ ನಾಡಿನಲ್ಲೂ ಶೈವರು ಮತ್ತು ವೈಷ್ಣವರು ಎರಡೂ ಪ್ರಧಾನ ಪಂಗಡಗಳು. ಇದರಲ್ಲಿರುವ ಎರಡು ಒಳಪಂಗಡಗಳು ಅವರವರ ಮನೆತನದ ಪೌರೋಹಿತ್ಯಕ್ಕೆ ಅಥವ ಪಂತಗಳ ಧಾರ್ಮಿಕತೆಗೆ ತಕ್ಕಂತೆ, ಅವರವರ ಕುಟುಂಬಕ್ಕೆ ಒದಗಿ ಬಂದಂತೆ ಹುಟ್ಟು-ಬದುಕು-ಸಾವು ಜನನ-ಜೀವನ- ಮರಣ ಪದ್ಧತಿಯು ಪರಂಪರಾನುಗತವಾಗಿ ರೂಢಿಯಲ್ಲಿದೆ.

ಒಂದು ಪಂಗಡ ಶಿವದಾರ ಧರಿಸಿ/ಧರಿಸದೇ ‘ಜೋಗಿ’ ಬಿಡಿಸಿಕೊಂಡು ಕಾಲ ಭೈರವನ ರೂಪದಲ್ಲಿ ಶಿವನನ್ನ ಆರಾಧಿಸುತ್ತ ಜೋಗಪ್ಪ (ಜೋಗಿ) ಮನೆತನವನ್ನು ಅನುಸರಿಸುತ್ತಿದೆ. ಮತ್ತೊಂದು ಪಂಗಡವು ಜನಿವಾರ ಧರಿಸಿ/ಧರಿಸದೆ ದಾಸಪ್ಪನಾಗಿ ದೇವರ ದೀಕ್ಷೆ ತೆಗೆದುಕೊಂಡು ವಿಷ್ಣುವನ್ನು ಆರಾಧಿಸುತ್ತ ದಾಸ ಮನೆತನವನ್ನು ಅನುಸರಿಸುತ್ತಿದೆ.

ಇವೆರಡು ಮುಖ್ಯ ಸಂಪ್ರದಾಯಗಳ ಅಭ್ಯಾಸಗಳನ್ನು ಸಾಧ್ಯವಾದಷ್ಟು ವಿಸ್ತಾರವಾಗಿ ಎಲ್ಲರಿಗು ಅರ್ಥವಾಗುವಂತೆ ಜಾನಪದ ಮಿಶ್ರಿತ ಸರಳ ಕನ್ನಡ ಭಾಷೆಯಲ್ಲಿ ಸಂಪಾದಕ ಬೋರಲಿಂಗಯ್ಯನವರು ಎಳೆ ಎಳೆಯಾಗಿ ಬಿಡಿಸಿ ಬರೆದಿದ್ದಾರೆ. ಸಂದರ್ಭೋಚಿತವಾಗಿ ಅಲ್ಲಲ್ಲಿ ನೂರಾರು ಭಾವಚಿತ್ರಗಳ ಸಹಿತ ಗದ್ಯ-ಪದ್ಯ ಎರಡೂ ಪ್ರಾಕಾರಗಳಲ್ಲಿ ಅತ್ಯಂತ ಉಪಯುಕ್ತ ಲೇಖನಗಳನ್ನು ಅಚ್ಚುಹಾಕಿಸುವ ಉಪಕಾರ ಮಾಡಿದ್ದಾರೆ.

ದಾಸಪ್ಪನ ಹಿನ್ನೆಲೆಯನ್ನು ತಿಳಿಸುವಾಗ ಧಾರ್ಮಿಕೇತಿಹಾಸ ಆಧಾರದ ಮೇಲೆ ವೆಂಕಟರಮಣನ ಪ್ರತಿನಿಧಿ ಎನಿಸಿಕೊಂಡ ಓರ್ವ ಆಧ್ಯಾತ್ಮಿಕ ಗುರುವಿನಿಂದ ದೇವರ ದೀಕ್ಷೆ ಪಡೆದವನೇ ದಾಸಪ್ಪ ಎಂದೂ ಅರ್ಥ ಗರ್ಭಿತವಾಗಿ ಬರೆದಿದ್ದಾರೆ. ಲೇಖಕರು ಹೇಳಿರುವ ದಾಸಪ್ಪಗಳು ಗುರುವಿನಿಂದ ದೇವರ ದೀಕ್ಷೆ ಪಡೆದ ಗುರುತಿಗಾಗಿ ‘ಮುದ್ರೆ’ ಹಾಕಿಕೊಳ್ಳುತ್ತಾರೆ, ದೇವರ ‘ಲಾಂಛನ’ ವನ್ನೂ ಸ್ವೀಕರಿಸುತ್ತಾರೆ.

ಹೀಗಾಗಿ ಹಳ್ಳಿಗರ ಭಾವನೆಯಲ್ಲಿ ‘ದಾಸಪ್ಪ’ ಎಂದರೆ ತಿರುಪತಿ ತಿಮ್ಮಪ್ಪನ ಪ್ರತಿನಿಧಿ ಎಂದೇ ಅರ್ಥ? ಅವರ ಕಲ್ಪನೆ ಪ್ರಕಾರ ಯಾವುದೇ ವ್ಯಕ್ತಿಯು ದಾಸಪ್ಪನ ಉಡುಪು ಧರಿಸಿ ದೇವರ ಲಾಂಛನವನ್ನು ಜತೆಗೆ ತೆಗೆದುಕೊಂಡು ಹೊರಟರೆ ಸಾಕು….. ಸಾಕ್ಷಾತ್ “ವೆಂಕಟರಮಣ ಗೋವಿಂದ” ದಾಸಪ್ಪನ ರೂಪದಲ್ಲಿ ಕಾಣಿಸುತ್ತಾನೆ, ಪೂಜೆಗೆ ಕರೆದವರ ಮನೆಗಳಿಗೆ ಹೋಗುತ್ತಾನೆ ನೈವೇದ್ಯಉಣ್ಣುತ್ತಾನೆ ವಸ್ತ್ರಉಡುತ್ತಾನೆ ಎಂಬೆಲ್ಲಾ ನಂಬಿಕೆಯಿದೆ, ಅಚಲವಾದ ವಿಶ್ವಾಸವೂ ಇದೆ. ದಾಸಪ್ಪನಾದವನು ಪ್ರತಿ ದಿನವೂ ಸ್ನಾನ ಮಡಿ ಪೂಜೆ ಮಾಡದೆ ಶಂಖು ಊದದೆ ಜಾಗಟೆ ಬಾರಿಸದೆ ಆಹಾರ ನೈವೇದ್ಯ ಸೇವಿಸುವಂತಿಲ್ಲ ಎಂಜಲು ಮೈಲಿಗೆ ಮಾಡುವಂತಿಲ್ಲ.

ಜೋಗಪ್ಪನ ಹಿನ್ನೆಲೆಯುಳ್ಳ ಪುಟಗಳಲ್ಲಿ: ಮಹಾಶಿವನ ಪುರಾಣೇತಿಹಾಸ ಚರಿತ್ರೆಗಳನ್ನು ಆಧಾರವಾಗಿಟ್ಟುಕೊಂಡು ಶಿವನ ಅಂಶವಿರುವ ಕಾಲಭೈರವೇಶ್ವರನ ಬಗೆಗೆ ಅಪ (ಮೂಢ)ನಂಬಿಕೆಯುಳ್ಳ ಭಕ್ತರು ಭಯ ಭಕ್ತಿಯಿಂದ ನಂಬುವ-ನಂಬಿಕೆಯಿಂದ ಪೂಜಿಸುವ ಪರಿಯಲ್ಲಿ ಬಣ್ಣಿಸಿ ಬರೆದಿದ್ದಾರೆ! ಜೋಗಿಭಕ್ತರ ಉದ್ಧಾರಕ್ಕಾಗಿ ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರ- ಗವಿಗಂಗಾಧರೇಶ್ವರ ರೂಪಗಳಲ್ಲಿ ನೆಲೆಗೊಂಡಿರುವ ವಿಶೇಷತೆಯನ್ನು ವಿಶಿಷ್ಟವಾಗಿ ವರ್ಣಿಸಿದ್ದಾರೆ. ಈ ಮನೆತನದವರು ತಮ್ಮ ಕುಟುಂಬದ ಜೇಷ್ಠ ಪುತ್ರನನ್ನು ಕಡ್ಡಾಯವಾಗಿ ‘ಜೋಗಿ’ ಬಿಡಬೇಕು.

ಗಂಡುಮಗ ವಯಸ್ಕನಾದಾಗ ಅಥವ ಅವನ ಮದುವೆಗೆ ಮುನ್ನ ಈ ಕಾರ್ಯ ಮಾಡುವಾಗ ತಮ್ಮ ಯೋಗ್ಯತಾನುಸಾರ ಸಾರ್ವಜನಿಕರಿಗೆ ನೆಂಟರಿಷ್ಟರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಬೇಕು. ಶಕ್ತ್ಯಾನುಸಾರ ಅನ್ನಚಿನ್ನದ ದಾನ ಧರ್ಮ ಮಾಡಬೇಕು. ಜೋಗಿ ಬಿಟ್ಟಮೇಲೆ “ಜೋಗಪ್ಪ” ನಾದವನು ತನ್ನೆರಡು ಕಿವಿಗಳಿಗೆ ಚಿನ್ನ-ಬೆಳ್ಳಿ ಲೋಹದ ಕರ್ಣ ಕುಂಡಲವನ್ನು ತನ್ನ ಉಸಿರಿರುವ ತನಕ ಬಿಚ್ಚದಂತೆ ಧರಿಸಿರಲೇಬೇಕು. ನಿರಂತರ ಎಂಜಲು ತಿನ್ನದೇ ತನ್ನ ಉಡುಗೆ ತೊಡುಗೆ ಊಟ ತಿಂಡಿ ನಿದ್ದೆ ಎಲ್ಲದರಲ್ಲು ಪ್ರತ್ಯೇಕತೆ ಕಾಪಾಡಿಕೊಂಡು ಸ್ನಾನ ಪೂಜೆ ಬಳಿಕ ಕೊರಳಲ್ಲಿರುವ ಸಿಂಗನಾಥ ಊದಿದ ನಂತರವೇ ಆಹಾರ ಸೇವಿಸಬೇಕು.

ಕಾಲಭೈರವನ ಜೋಗಿ ಆದವನಿಗೆ ಅದಾವ ಪೀಡೆಪಿಶಾಚಿ ದೆವ್ವಭೂತಗಳ ಕಾಟವಿರುವುದಿಲ್ಲ, ಮಾಟ ಮಂತ್ರ ತಗಲುವುದಿಲ್ಲ, ಕಣ್ಣೆಸರು ಕಾಲಧೂಳು ಆಗುವುದಿಲ್ಲ. ಆದ್ದರಿಂದ ಶ್ರೀಸಾಮಾನ್ಯರು ಜೋಗಪ್ಪನನ್ನು ಸಾಕ್ಷಾತ್ ಪರಶಿವನ ಅಪರಾವತಾರದ ಕಾಲಭೈರವನ ಪ್ರತಿನಿಧಿ ಎಂಬುದಾಗಿ ಭಾವಿಸಿ ತಮ್ಮ ತನು ಮನ ಧನ ಅರ್ಪಿಸು ವುದಲ್ಲದೆ ಮನಃಪೂರ್ವಕವಾಗಿ ಗೌರವಿಸುತ್ತಾರೆ.

161ನೇ ಪುಟದ ‘ಜೋಗಪ್ಪ ದಾಸಪ್ಪಗಳ ಸಂಬಂಧ’: ಲೇಖನದಲ್ಲಿ ಇವರಿಬ್ಬರ ನಡುವೆ ಇರುವ ಪರಸ್ಪರ ಪ್ರೀತಿ ಭಕ್ತಿ ಗೌರವ ಇತ್ಯಾದಿ ಸಾರುವಂಥ ಸಾಕಷ್ಟು ಮಾಹಿತಿಯನ್ನು ಆಸಕ್ತಿಯಿಂದ ಕಲೆಹಾಕಿ ಎಲ್ಲರ ಮನಸ್ಸಿಗೆ ಹಿತವಾಗುವಂತೆ ತಿಳಿಸಿಕೊಟ್ಟಿದ್ದಾರೆ. ಹಳೇ ಮೈಸೂರು ಪ್ರಾಂತ್ಯ(ರಾಜ್ಯ)ದ ದಾಸಪ್ಪ-ಜೋಗಪ್ಪನ ಬಗ್ಗೆ ಮಾತ್ರವಲ್ಲದೆ ಕರಾವಳಿ ಮಲೆನಾಡು ಮುಂತಾದ ನವಕರ್ನಾಟಕ ರಾಜ್ಯಾದ್ಯಂತ ಅವಲಂಬಿತ ವಿವಿಧ ರೀತಿಯ ದಾಸಪ್ಪ ಜೋಗಪ್ಪನ ಬಗ್ಗೆಯು ಸಹ ಸೊಗಸಾಗಿ ವರ್ಣಿಸಿದ್ದಾರೆ! ಜೋಗಪ್ಪ-ದಾಸಪ್ಪ ಆದವರು ದಿನನಿತ್ಯದ ವಿಶೇಷದಿನದ ಹಾಗು ಜಾತ್ರೆ- ರಥೋತ್ಸವಗಳಂದು ಪಾಲಿಸಬೇಕಾದ ಸ್ನಾನಮಡಿ ಪೂಜೆಪುನಸ್ಕಾರ ದಾನದತ್ತಿ ಧರ್ಮಕರ್ಮ ಇತ್ಯಾದಿ ಕಟ್ಟುನಿಟ್ಟಾದ ನಿಯಮಗಳನ್ನು ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ ಚಾಲ್ತಿಯಲ್ಲಿರುವ ಸಾವಿರಾರು ದಾಸಪ್ಪ ಜೋಗಪ್ಪರ ಪದಗಳ ಪೈಕಿ ಮುಖ್ಯವಾದ ನೂರಾರು ಪದಗಳನ್ನು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಸೇರಿಸಿ ಸಂಪಾದಕನ ಕರ್ತವ್ಯವನ್ನು ಬೋರಲಿಂಗಯ್ಯ ಪ್ರಾಮಾಣಿಕವಾಗಿ ಪೂರ್ಣಗೊಳಿಸಿದ್ದಾರೆ. ಇಂತಹದ್ದೊಂದು ಆಧ್ಯಾತ್ಮಿಕ ಪುಸ್ತಕವು ವಿಶೇಷ ರೀತಿಯಲ್ಲಿ ರಚಿತವಾಗಿದ್ದು ಪ್ರತಿಯೊಬ್ಬ ಓದುಗರಿಗೂ ಆಪ್ಯಾಯಮಾನವಾಗಿದೆ ಆಕರ್ಷಕವಾಗಿದೆ. ಕಟ್ಟಕಡೆಯ ಪುಟದಲ್ಲಿರುವ ಅರ್ಥಕೋಶವು ತನ್ನ ಅನಿವಾರ್ಯತೆಯನ್ನು ಪುಷ್ಟೀಕರಿಸುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

– ಕುಮಾರಕವಿ ನಟರಾಜ್, ಅಂಚೆ ತೆರಪಿನ ಶಿಕ್ಷಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-6 ಗ್ರಂಥಲೋಕ ಮಾಸಪತ್ರಿಕೆ ಜನವರಿ 1982

 

admin
the authoradmin

Leave a Reply