Latest

ಅವಲೋಕನ…ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ.. ಭಾಗ-20

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕುದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕುಕಂಡಿವೆ. ಅದನ್ನುಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಅನ್ವೇಷಣೆ : ಡಾ. ಎಂ.ಶ್ಯಾಮಪ್ರಸಾದ್

ನನಗೂ ಮತ್ತು ಮಾನ್ಯ ಶ್ರೀಯುತ ನಟರಾಜ್ ಸರ್ ರವರಿಗೂ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅವಿನಾಭಾವ ಸಂಬಂಧ. ಇವರ ಕಾವ್ಯನಾಮ “ಕುಮಾರಕವಿ”. ನಮ್ಮಿಬ್ಬರ ನಡುವೆ ಸಹೋದ್ಯೋಗಿಗಳಿಗೂ ಮಿಗಿಲಾದ ಬಾಂಧವ್ಯ ಮತ್ತು ಮಿತ್ರತ್ವ. ಯಾರಾದರೂ ಒಮ್ಮೆ ಇವರೊಡನೆ ಸ್ನೇಹ ಸಂಪಾದಿಸಿದರೆ ಸಾಕು, ಅದನ್ನು ನಿರ್ವಹಣೆ ಮಾಡುವುದು ಕೆಲವರಿಗೆ ತುಸು ಕಷ್ಟ ಎನಿಸಬಹುದು. ಆದರೆ ನನ್ನಂಥವರಿಗೆ ಅದೆಂದಿಗೂ ಕಷ್ಟಸಾಧ್ಯವಲ್ಲ.

ಏಕೆಂದರೆ ಎಲ್ಲ ಸಹೋದ್ಯೋಗಿಗಳಂಥಲ್ಲದ ಕುಮಾರಕವಿ ನಟರಾಜ ನನಗೆ ಅತ್ಯಂತ ಆತ್ಮೀಯರು ಮಾತ್ರವಲ್ಲ ಸಮಾನಮನಸ್ಕರೂ ಸಮಾನ ವಯಸ್ಕರೂ ಸಮಕಾಲೀನರೂ ಹೌದು. ಹೀಗಾಗಿ ಅವರ ಬಗ್ಗೆ ಮಾತನಾಡಲು ನಿಂತರೆ ಎಷ್ಟೇ ಕಾಲಾವಕಾಶ ಸಿಕ್ಕರೂ ಸಾಲದು. ಇವರದು ಸದಾಕಾಲ ಒಂದಿಲ್ಲೊಂದು ರೀತಿಯ ದುಡಿಮೆಯ ಬದುಕು. ಆದ್ದರಿಂದ ಇವರು ಅಕ್ಷರಶಃ ಕಾಲಾತೀತರು, ಪ್ರಶ್ನಾತೀತರು ಹಾಗೂ ಜಾತ್ಯಾತೀತರು.

ದಿನನಿತ್ಯದ ವ್ಯವಸ್ಥೆ-ಅವ್ಯವಸ್ಥೆಗಳ ನಡುವೆ ಅತ್ಯುತ್ತಮವಾಗಿ ಮನಮುಟ್ಟುವಂತೆ ಬರೆಯಲು ಯಾವಾಗ ಯೋಚಿಸುತ್ತಾರೋ ಎಲ್ಲಿ ಸಮಯ ಹೊಂದಿಸಿಕೊಳ್ಳುತ್ತಾರೋ ಎಂಬುದು ಇಂದಿಗೂ ನನಗೆ ಬಗೆಹರಿಯದ ವಿಸ್ಮಯವಾಗಿದೆ. ನಿರಂತರವಾಗಿ ಬಹುಶಃ ನಿದ್ದೆಯಲ್ಲೂ ಅವರ ತನು ಮನ ಹೃದಯದಲ್ಲಿ ಭಾವನೆಗಳು ತುಂಬಿ ತುಳುಕಾಡುತ್ತಿರುತ್ತವೆ ಎನಿಸುತ್ತಿದೆ.

ಇವರು ಸ್ವಲ್ಪ ಸಂಕೋಚ ಸ್ವಭಾವದ ಸ್ವಾಭಿಮಾನಿ ಆದರೆ ಸರಳ ಸಜ್ಜನಿಕೆಯ ಸಾಕಾರಮೂರ್ತಿ. ಹಾಡುವ ಹಕ್ಕಿಗೇಕೆ ಬಿರುದು ಸನ್ಮಾನ ಎಂಬಂತೆ ಇವರೆಂದೂ ಹಣ ಕೀರ್ತಿ ಪ್ರತಿಷ್ಠೆ ಗೌರವ ಸನ್ಮಾನಗಳನ್ನು ಕನಸು ಮನಸಲ್ಲು ಬಯಸಿದವರಲ್ಲ ಅವುಗಳ ಹಿಂದೆ ಹೋದವರೂಅಲ್ಲ. ‘ಕವಿಗಳಿಗೇಕೆ ಕವಿಸಮಯ ನೋಡುವಾ ಕಣ್ಣುಗಳಿದ್ದರೆ ಸಾಕು ಎಲ್ಲವು ಕವಿಸಮಯವಯ್ಯ’.

“ಪಾದ ಜಾರಿದರೆ ಪರವಾಗಿಲ್ಲ, ಪದ ಜಾರಿದರೆ ಹೋಯ್ತು ಎಲ್ಲ…” ಎಂದು ಕುಮಾರಕವಿಯವರು ಪದೇಪದೇ ವೇದಿಕೆಗಳಲ್ಲಿ ಸೂಚನೆ ನೀಡುವ ಇವರ ಸೂಕ್ಷ್ಮಕಣ್ಣಿಗೆ ಗೋಚರವಾಗುವ ಅನೇಕ ಹೊಸ ವಿಷಯಗಳನ್ನು ಬಹಳ ರಸವತ್ತಾಗಿ ತಮ್ಮ ಮಾತಿನಲ್ಲೂ ಕೃತಿಯಲ್ಲೂ ವರ್ಣಿಸುತ್ತಾರೆ.

ವಿಶ್ವವಿದ್ಯಾನಿಲಯ ಸೇವೆಯಲ್ಲಿದ್ದಾಗ ಇವರ ಸ್ನೇಹಪೂರ್ಣ “ನಡೆ-ನುಡಿ-ಬರಹ”ಗಳಿಂದ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಆದಿಯಾಗಿ ಬಹುತೇಕ ಎಲ್ಲರು ಇವರಿಗಿತ್ತ ನಿಕ್-ನೇಮ್ “ನಡೆದಾಡುವ ವಿಶ್ವಕೋಶ”. ಯಾವುದೇ ಸಮಯದಲ್ಲಿ ಯಾವುದೇ ವಿಷಯದಲ್ಲಿ ಇಂಗ್ಲಿಷ್-ಕನ್ನಡ ಎರಡರಲ್ಲೊಂದು ಭಾಷೆಯಲ್ಲಿ ಗಂಟೆಗಟ್ಟಲೆ ಆಧಾರಸಹಿತ ತರ್ಕ-ಚರ್ಚೆ-ವಾದ-ಬರಹ; ಇವುಗಳಲ್ಲಿ ಯಾವುದಾದರೂ ಸರಿ ಎಲ್ಲಿ ಬೇಕಾದರೂ ಅಚ್ಚುಕಟ್ಟಾಗಿ ಪರಿಪೂರ್ಣವಾಗಿ ಮಂಡಿಸಿ ಎಂಥವರನ್ನು ಬೇಕಾದರೂ ಮನವರಿಕೆ ಮಾಡುವ ತಾಕತ್ ಇವರಲ್ಲಿದೆ ಆದ್ದರಿಂದಲೇ ಇಂತಹ ಅರ್ಹ ಬಿರುದನ್ನು ನೀಡಿರಬಹುದೇನೋ..?!

ಹದಿವಯಸ್ಸಿನಲ್ಲಿರುವಾಗ ಕೆಲವು ಸಂಘ ಸಂಸ್ಥೆಗಳನ್ನು ಹುಟ್ಟಿಹಾಕಿದ್ದು, ಸಂಸ್ಥಾಪಕ ಪದಾಧಿಕಾರಿಯಾಗಿದ್ದು, ಕನ್ನಡ ನಾಡು, ನುಡಿ, ಜನ, ನೆಲ, ಜಲ, ಇತ್ಯಾದಿ ಬಗ್ಗೆ ಹೋರಾಟ ಹಾಗೂ ಬರವಣಿಗೆಯ ಮೂಲಕ ನಾಡಿನ ಸೇವೆ ಮಾಡಿದ್ದಾರೆ. ಮಾತ್ರವಲ್ಲದೆ 21ನೆ ವಯಸ್ಸಿಗೆ ವಿ.ವಿ.ಉದ್ಯೋಗಿಯಾಗಿ ಸೇರಿದ ಮೇಲೂ ಸಹ ಎರಡು ಸಂಘಗಳ ಬಿರುಕನ್ನು ಸೇರಿಸಿ ಒಂದುಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿ ತಮ್ಮಲ್ಲಿದ್ದ ಸಂಘಟನಾ ಚತುರತೆಯಿಂದ ಎಲ್ಲರಿಗೂ ಆತ್ಮೀಯರಾಗಿ ಚಿರಪರಿಚಿತರಾದರು.

ವಿವಿಯ ಎಲ್ಲ ಅಧಿಕಾರಿಗಳಿಗೆ ಮತ್ತು ತತ್ಸಂಬಂಧದ ಪ್ರತಿಯೊಂದು ಉತ್ತಮ ಕೆಲಸ ಕಾರ್ಯಗಳಿಗೆ ತಮ್ಮದೇ ಆದ ಶಿಸ್ತು, ಸಂಯಮ, ಅಚ್ಚುಕಟ್ಟುತನ, ಮುಂತಾದವುಗಳಿಂದ ಯಶಸ್ಸನ್ನು ದೊರಕಿಸಿಕೊಡುತ್ತಿದ್ದರು. ಸ್ನಾತಕೋತ್ತರ ಮಟ್ಟದ ಪಠ್ಯಪುಸ್ತಕವನ್ನು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ಅನೇಕ ವಿದ್ಯಾರ್ಥಿಗಳಿಗೆ ನೇರಾನೇರವಾಗಿ ಸಹಾಯ ಮಾಡಿದರು.

ಕೆಲವು ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ಹಣ ಸಹಾಯವನ್ನು ಮಾಡಿದ್ದಾರಲ್ಲದೇ, ವಿದ್ಯಾರ್ಥಿವೇತನ ಪಡೆಯಲು ಬೇಕಾದ ಮಾರ್ಗದರ್ಶನವನ್ನು ಸಾವಿರಾರು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಎಫ್.ಐ.ಪಿ.ಅಧ್ಯಾಪಕರಿಗೆ ಸಂದರ್ಭೋಚಿತವಾಗಿ ಮಾಡಿದ್ದಾರೆ. ‘ಸಿ’ ಮತ್ತು ‘ಡಿ’ ವರ್ಗದ ನೌಕರರಿಗೂ ಸಹ ಹಲವಾರು ರೀತಿಯ ಸಹಾಯ ಮಾಡಿ ಅವರೆಲ್ಲರ ಅಭಿಮಾನ ಪ್ರೀತಿ ವಿಶ್ವಾಸ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಹಲವೊಮ್ಮೆ ಕೆಲವರ ದೃಷ್ಟಿಯಲ್ಲಿ “ಖಂಡಿತವಾದಿ-ಲೋಕವಿರೋಧಿ” ಎನಿಸಿಕೊಂಡರೂ ಮೆಜಾರಿಟಿ ಮಂದಿಗೆ ಇವರು ಎಂದೂ ಯಾರೂ ಬೆಲೆ ಕಟ್ಟಲಾರದ ವ್ಯಕ್ತಿ-ಶಕ್ತಿ,  ಅಜಾತಶತ್ರು.

ಹಳೆಬೇರು ಹೊಸಚಿಗುರು ಎಂಬಂತೆ ಇವರು ಮಾಡಿರುವ ಪಾಠ ಪ್ರವಚನ ಪಠ್ಯ ನೋಟ್ಸ್ ಡ್ರಾಫ್ಟ್ಸ್ ಭಾಷಾಅಂತರ ಎಲ್ಲವು ಅಮೋಘ ಅಪೂರ್ವ, ಇಂದಿಗೂ ಉಪಯುಕ್ತ ಆಗುತ್ತಲಿವೆ. ಇವರು ಬದುಕನ್ನು ಬರಹಕ್ಕಿಳಿಸಿ ಬದುಕಿನ ಹಾದಿಯಲ್ಲಿನ ಏಳುಬೀಳು ನೋವುನಲಿವು ಅಳು ನಗು ಇವೆಲ್ಲದರ ತೆರೆ(ಮರೆ)ಯಲ್ಲಿ ಬಂದಂಥ ತಮ್ಮ ನೋವುಗಳನ್ನ ನುಂಗಿ ಎಲ್ಲರನ್ನು ನಗಿಸಿ, ನಗುತ್ತ ನಡೆದಿದ್ದಾರೆ. ನಾನು ಮತ್ತು ಇವರು ತುಸು ಶ್ಯಾಮ ವರ್ಣದವರು, ಕಪ್ಪು ಕಸ್ತೂರಿ, ಕಪ್ಪು ಕಣ್ಣಿಗೆತಂಪು, ಕಪ್ಪಗಿರುವವರು ಆಭರಣ ಧರಿಸಿದರೆ ಥಳಥಳ ಹೊಳೆದು ಒಡವೆಯೇ ತನ್ನ ಮೆರುಗನ್ನು ಹೆಚ್ಚಿಸಿಕೊಳ್ಳುತ್ತದೆ!

ಇವರಿಗಂತೂ ಕೃಷ್ಣವರ್ಣ ಕಾಯದ ಬಗ್ಗೆ ಕಾಳಜಿಯಿಲ್ಲ, ಇವರು ಹೇಳುವುದಿಷ್ಟೆ ‘ಮನಸ್ಸು ಕಪ್ಪಗಿರಬಾರದು ಶ್ವೇತವರ್ಣದ ಶುಭ್ರದ್ದಾಗಿರಬೇಕು’ ಎಂದು. ವೃತ್ತಿಯೇ ಧರ್ಮ, ಸೇವೆಯೇ ಜಾತಿ, ಪ್ರೀತಿ-ಗೌರವವೇ ಪೂಜೆ ಎನ್ನುತ್ತಾರೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಶ್ರೇಷ್ಟೋಕ್ತಿಯನ್ನು ಚಾಚೂತಪ್ಪದೆ ಪಾಲಿಸಿದವರು. ಸತತ ಕೆಲಸ ಇವರ ಪರಮಮಿತ್ರ, ಸೋಮಾರಿತನ ಇವರ ಪ್ರಥಮ ಶತ್ರು. ಕೆಲಸ ಮಾಡದೆ ವೇತನ ಪಡೆಯುವುದು ಅಪರಾಧ.

ಲಂಚ ಪಡೆಯುವವರನ್ನೂ ಭ್ರಷ್ಟಾಚಾರ ಮಾಡುವವರನ್ನೂ ನೇಣು ಹಾಕಬೇಕೆಂದು ಘಂಟಾಘೋಷವಾಗಿ ಸಾರ್ವಜನಿಕ ಸ್ಥಳಗಳಲ್ಲು ಹೇಳುತ್ತಿರುತ್ತಾರೆ. ಇವೆಲ್ಲವೂ ದೇಶದ್ರೋಹ ಸಮಾಜದ್ರೋಹ ಎಲ್ಲಕ್ಕಿಂತ ಮಿಗಿಲಾಗಿ ಆತ್ಮದ್ರೋಹ ಎಂಬುದನ್ನು ಯಾವಾಗಲೂ ಪ್ರತಿಪಾದಿಸಿದವರು. ಹೀಗಾಗಿ ಇವರಿಗೆ ಹೇಳಲೇಬೇಕಾಗುತ್ತೆ ನಮೋ ನಮೋ ನಟರಾಜ ಕುಮಾರಕವಿ.

-ಡಾ.ಎಂ.ಶ್ಯಾಮಪ್ರಸಾದ್

ಭೂವಿಜ್ಞಾನಿ, ಜಯನಗರ, ಮೈಸೂರು. 15.10.2017

ಕುಮಾರಕವಿಗಳಿಗೊಂದು ಬಿಗ್ ಸೆಲ್ಯೂಟ್

ಬಿ.ಎಂ.ಲವಕುಮಾರ್

ಪತ್ರಕರ್ತ, ಬರಹಗಾರ

ಬರವಣಿಗೆ ಜತೆ ಬದುಕೋದು ಎಲ್ಲರಿಗೂ ಸಾಧ್ಯವಿಲ್ಲ… ಅದು ಸಾಧ್ಯವಾಗಬೇಕಾದರೆ ಉಸಿರಷ್ಟೇ ಪ್ರೀತಿಸಬೇಕು.. ಅದಕ್ಕಿಂತ ಹೆಚ್ಚಾಗಿ ಏನಾದರೂ ಬರೆಯುತ್ತಲೇ ಇರಬೇಕು. ನೀವು ಓದಲೇ ಬೇಕೆಂಬ ಹಠವೂ ಇಲ್ಲ.. ಓದಿದ ಮೇಲೆ ನಿಮಗೆ ಇಷ್ಟವಾದರೆ ಬರೆದಿದ್ದು ಸಾರ್ಥಕ…

ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರ ಲೇಖನ ಓದುವಾಗ ಮತ್ತು ಅವರಲ್ಲಿರುವ ಉತ್ಸಾಹ ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿ ಆಗಿದ್ದು 2015ರಲ್ಲಿ ನಿವೃತ್ತರಾದರು. ಆ ನಂತರ ವಿಶ್ರಾಂತಿ ಜೀವನವನ್ನು ಆರಾಮಾಗಿ ಕಳೆಯ ಬಹುದಿತ್ತು. ಆದರೆ ಅವರನ್ನು ನೋಡಿದರೆ ಅವರು ಆರಾಮಾಗಿ ಇರುವಂತೆ ಕಾಣುತ್ತಿಲ್ಲ.

ಚಟುವಟಿಕೆಯ ವ್ಯಕ್ತಿ ಎನ್ನುವುದು ಅವರು ಬರೆಯುವ ಲೇಖನಗಳಿಂದಲೇ ಗೊತ್ತಾಗಿ ಬಿಡುತ್ತದೆ. ಏಕೆಂದರೆ ಎಲ್ಲ ಕ್ಷೇತ್ರಗಳನ್ನು ತಮ್ಮ ಬರಹಗಳ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಸಿನಿಮಾ. ವೈದ್ಯಕೀಯ, ಕ್ರೀಡೆ ಎಲ್ಲ ಕ್ಷೇತ್ರಗಳಲ್ಲೂ ಕೈಚಳಕ ತೋರಿರುವುದು ಇವರ ಬರವಣಿಗೆಯ ಬದುಕಿಗೆ ಹಿಡಿದ ಕೈಕನ್ನಡಿಯಾಗಿದೆ.

ಇವತ್ತು ಬರಹಗಾರರಿಗೆ ತಮ್ಮ ಮನದ ತುಡಿತವನ್ನು ಬರಹವನ್ನಾಗಿ ಇಳಿಸಿ ಅದನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು, ವೆಬ್ ಸೈಟ್ ಅದರಾಚೆಗೆ ಪತ್ರಿಕೆಗಳಿವೆ. ಆದರೆ ಒಂದೆರಡು ದಶಕಗಳ ಹಿಂದೆ ನಮ್ಮ ಯಾವುದೇ ಬರಹವನ್ನು ಪತ್ರಿಕೆಗಳೇ ಪ್ರಕಟಿಸಬೇಕಿತ್ತು. ಪತ್ರಿಕೆಗಳಲ್ಲಿ ಬರಹಗಳಲ್ಲಿ ಪ್ರಕಟವಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಂಪಾದಕೀಯ ಮಂಡಳಿ ಎಲ್ಲವನ್ನೂ ತೂಗಿ ಅಳೆದು ಬಳಿಕ ಪ್ರಕಟಣೆಗೆ ಕಳುಹಿಸುತ್ತಿತ್ತು.

ಹೀಗಾಗಿ ಬಹುತೇಕ ಬರಹಗಾರರ ಬರಹಗಳು ಕಸದ ಬುಟ್ಟಿ ಸೇರುತ್ತಿದ್ದದ್ದೇ ಹೆಚ್ಚು. ಆದರೆ ಕುಮಾರಕವಿ ನಟರಾಜ್ ಅವರ ಲೇಖನಗಳು ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದರೆ ಅವರ ಬಗ್ಗೆ ಹೆಚ್ಚು ಹೇಳುವುದೇ ಬೇಡ…ಎಲ್ಲವೂ ನಮಗೆ ಅರಿವಾಗಿ ಬಿಡುತ್ತದೆ.

ಹೊಸತನ ಮತ್ತು ತಂತ್ರಜ್ಞಾನ ಎರಡನ್ನೂ ಜತೆ ಜತೆಗೆ ಅಭ್ಯಸಿಸುತ್ತಾ ಮುನ್ನಡೆಯುತ್ತಾ ಬರುತ್ತಿರುವ ಅವರ ಬಗ್ಗೆ ಹೇಳುತ್ತಾ ಹೋದರೆ ದೊಡ್ಡದಾದ ಪಟ್ಟಿಯೇ ಇದೆ. ಅವರ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡಿದ್ದಾರೆ.  ಆ ಪೈಕಿ ಅಖಿಲ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಅಸೋಷಿಯೇಷನ್ ನೀಡಿದ ಭಿನ್ನವತ್ತಳೆಯನ್ನೊಮ್ಮೆ ಓದಿದರೆ ಗೊತ್ತಾಗಿಬಿಡುತ್ತದೆ. ಅದು ಹೀಗಿದೆ…..

ಆಯುಶ್’ ಸಾಹಿತ್ಯ ಪ್ರಪಂಚದಲ್ಲಿ ’ಕುಮಾರಕವಿ ನಟರಾಜ್’ ಹೆಸರನ್ನು ಕೇಳಿರದ ವೈದ್ಯರೇ ಇಲ್ಲವೆನ್ನಬಹುದು.  ಮೈಸೂರಿನ ಆಯುರ್ವೇದ ಕಾಲೇಜು ಮತ್ತು ಮಹಾರಾಜ ಸಂಸ್ಕೃತ ಮಹಾಪಾಠಶಾಲೆ ಮುಂತಾದ ಕಡೆಗಳಲ್ಲಿ 1980ರ ದಶಕದಲ್ಲಿ ’ಮನೆಮದ್ದು’ ’ಹಿತ್ತಲಗಿಡಮದ್ದಲ್ಲ್ಲ’ ’ಹೆಲ್ತ್‌ಟಿಪ್ಸ್’ ’ಸರಳವೈದ್ಯ’ ’ಅಜ್ಜಿಲೇಹ್ಯ’ ಮುಂತಾದ ವಿಶೇಷೋಪನ್ಯಾಸ ನೀಡಿ ಜನಪ್ರಿಯರಾಗಿದ್ದಾರೆ. ವ್ಯದ್ಯರಿಗಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ರೋಗಿಗಳಿಗೆ ಹಾಗೂ ಶ್ರೀಸಾಮಾನ್ಯನಿಗೂ ಪ್ರಯೋಜನಕಾರಿ ಆಗುವಂತೆ ಇರುತ್ತದೆ. ಬಿ.ಎನ್. ನಟರಾಜ್‌ರವರ ಉಪನ್ಯಾಸ, ಬೋಧನೆ, ತಿಳುವಳಿಕೆ, ಮನವರಿಕೆ.

ತಮ್ಮ ಶ್ರೇಷ್ಟವಾದ ವೃತ್ತಿ-ಪ್ರವೃತ್ತಿಗಳಿಂದ ಇವರು ಇಡೀ ರಾಜ್ಯಕ್ಕೆ ಚಿರಪರಿಚಿತರು ಎಂಬುದರಲ್ಲಿ ಸಂಶಯವಿಲ್ಲ. ವೃತ್ತಿಯಲ್ಲಿ ಪ್ರಖ್ಯಾತ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅಧ್ಯಾಪಕೇತರ ಸಿಬ್ಬಂದಿಯಾದರೂ ಯಾವ ಪ್ರಖಂಡ ಪ್ರಾಧ್ಯಾಪಕರಿಗೂ ಕಡಿಮೆ ಏನಿಲ್ಲ?! ಬದ್ಧತೆ, ಬುದ್ಧತೆ ಪ್ರಭುದ್ಧತೆ ಹಾಗೂ ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಇದ್ದು ಎಂಥವರನ್ನೂ ಹಿಡಿದಿಡುವ ಆಕರ್ಷಣೆ ಇವರಲ್ಲಿದೆ. ಸಾಹಿತ್ಯ ಪ್ರವೃತ್ತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕನ್ನಡ ಸಾಹಿತ್ಯದಲ್ಲಿ ಇವರು ಕೈ ಆಡಿಸದ ಪ್ರಾಕಾರ ಅಥವಾ ವಿಭಾಗ ಇಲ್ಲ ಎಂದು ಧಾರಾಳವಾಗಿ ಹೇಳಬಹುದು!

ಆಯುರ್ವೇದ ವೈದ್ಯಕೀಯ ವಿಜ್ಞಾನದ ಬಗ್ಗೆಯೂ ಇವರು ಅನೇಕ ಲೇಖನ ಬರೆದಿದ್ದಾರೆ, ಹಲವಾರು ಕವಿಗೋಷ್ಠಿ, ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ರಾಜ್ಯದಾದ್ಯಂತ ಪ್ರಕಾಶನಗೊಳ್ಳುತ್ತಿರುವ ’ವೈದ್ಯವಾರ್ತೆ, ವೈದ್ಯತರಂಗಿಣಿ, ವೈದ್ಯರತ್ನ, ವೈದ್ಯಲೋಕ’ ಮುಂತಾದ ಹಲವಾರು ಸಾಪ್ತಾಹಿಕ/ಮಾಸ ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಂಡಿದೆ. ಇವರ ಬರವಣಿಗೆ ಶ್ರೀಸಾಮಾನ್ಯನಿಗೂ ಮನಮುಟ್ಟುವಂತಿದೆ ಮತ್ತು ಇವರ ಉಪನ್ಯಾಸಗಳು ಅವಿದ್ಯಾವಂತನಿಗೂ ಅರ್ಥವಾಗುವಂತಿದೆ. ಆಧುನಿಕ ಯುಗಾರಂಭದಲ್ಲಿ ಆಯುರ್ವೇದವು ತನ್ನ ಜನಪ್ರಿಯತೆ ಕಳೆದುಕೊಂಡು ಪರ್ಯವಸಾನದ ಅಂಚಿಗೆ ತಲುಪುತ್ತಿದೆ.  ಕಾಲಕ್ರಮೇಣ ನಶಿಸಿಹೋಗುವತ್ತ ಹೆಜ್ಜೆ ಇಡುತ್ತಿದೆಯೇನೋ ಅನಿಸುತ್ತಿದೆ.

ತತ್ಪರಿಣಾಮವಾಗಿ ಹಳ್ಳಿಯಿಂದ ದಿಳ್ಳಿಯವರೆಗೂ ಬಡವನಿಂದ ಬಲ್ಲಿದನವರೆಗೂ ಪ್ರತಿಯೊಬ್ಬರು ಹೈ-ಟೆಕ್ ವೈದ್ಯಕೀಯ ವಿಜ್ಞಾನ-ತಂತ್ರಜ್ಞಾನವನ್ನು ಹೆಚ್ಚಾಗಿ ನಂಬಿ ಅವುಗಳ ಟ್ರೀಟ್‌ಮೆಂಟ್‌ಗೆ ಶರಣಾಗಿ ಮತ್ತು ಪ್ಯಾಶನ್‌ಗೆ ಮಾರುಹೋಗಿ ಆಯುರ್ವೇದವನ್ನು ತುಸುಮಟ್ಟಿಗೆ ಕಡೆಗಣಿಸಲಾಗಿದೆ ಎನ್ನಬಹುದು.  ಇದರಿಂದಾಗಿ ಆಯುರ್ವೇದ ಚಿಕಿತ್ಸೆ ಮತ್ತು ಆಯುರ್ವೇದ ವೈದ್ಯರು ಇತ್ತೀಚೆಗೆ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಆಯುರ್ವೇದ ವೈದ್ಯಕೀಯ ವಿಜ್ಞಾನದ ಪುನರುತ್ಥಾನಕ್ಕೆ ತಮ್ಮ ಸಾಹಿತ್ಯ ಸೇವೆಯನ್ನು ಮುಡಿಪಾಗಿಟ್ಟವರಲ್ಲಿ ಕುಮಾರಕವಿ ನಟರಾಜ್ ಕೂಡ ಒಬ್ಬರು! ಈ ಸಂದರ್ಭದಲ್ಲಿ ಇವರನ್ನು ಸ್ಮರಿಸಬೇಕಾದ್ದು ಕರ್ತ್ಯವ್ಯವೂ ಅರ್ಥಪೂರ್ಣವೂ ಆಗಿದೆ.   ’ಹೂವಿಂದ ನಾರೂ ಸ್ವರ್ಗ ಸೇರುವಂತೆ’ ಇವರಂಥ ಹೂವಿನಿಂದಾಗಿ ಅನೇಕ ನಾರುಗಳು ಸಾರ್ಥಕತೆ ಪಡೆಯುವಂತಾಗಲೆಂದು ಹೃದಯಪೂರ್ವಕವಾಗಿ ಹಾರೈಸುತ್ತ ಈ ಮಹತ್ತರ ಬಿನ್ನವತ್ತಳೆಯನ್ನು ಗೌರವಾದರಗಳಿಂದ ಅರ್ಪಿಸುತ್ತಿದ್ದೇವೆ.

ಅಭಿಮಾನಿಗಳ ಪ್ರಕಾರ ’ಕುಮಾರಕವಿ ನಟರಾಜ’ ಅವರನ್ನು ಹೀಗೆ ಅರ್ಥೈಸಬಹುದು:-

ಕು =  ಕುವೆಂಪು ಬಾಯಿಂದ ಬಂದ ’ಕುಮಾರಕವಿ’ ಪದವನ್ನು

ಮಾ = ಮಾತೃವಾಕ್ಯ ಎಂದೆಣಿಸಿ, ’ಕಾವ್ಯನಾಮ’ ವಾಗಿಸಿಕೊಂಡು

ರ =   ರಚನಾತ್ಮಕ ಸಾಹಿತ್ಯ ಸೇವೆ ಮಾಡುತ್ತಿರುವ

ಕ =   ಕನ್ನಡದ ಕುವರ ನೀವು ಎಂದೆಂದೂ

ವಿ =   ವಿರಾಜಮಾನರಾಗಿ ಎಲ್ಲರೊಳಗೊಂದಾಗಿ

ನ =   ನವ-ನವ್ಯ-ನವೋದಯ ಸಾಹಿತ್ಯ ರಚಿಸುತ್ತ ವಿಕ-

ಟ =   ಟ ಕವಿಯಾಗಿ ಜನರ ತನು-ಮನ ಗೆದ್ದು

ರಾ =  ರಾರಾಜಿಸುತ್ತ ನಾಡು-ನುಡಿಗೆ, ನಿಮ್ಮವರೆಲ್ಲರಿಗೆ

ಜ  =  ಜಗಜ್ಯೋತಿಯಾಗಿ ಆರೋಗ್ಯದಿಂದ ಶತಾಯುಷಿಯಾಗಿ ಬಾಳಿರಿ!

ಇದನ್ನು ಓದಿದ ಬಳಿಕ ಹೆಚ್ಚಿಗೆ ಹೇಳುವಂತಹದ್ದೇನು ಉಳಿಯುವುದೇ ಇಲ್ಲ. ಹೀಗಾಗಿ ಕುಮಾರಕವಿ ಬಿ.ಎನ್.ನಟರಾಜ್ ಸರ್ ನಿಮಗೊಂದು ಬಿಗ್ ಸೆಲ್ಯೂಟ್..

-ಬಿ.ಎಂ.ಲವಕುಮಾರ್

ಮೈಸೂರು 14.8.2021

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಕುಮಾರಕವಿ  ಬಿ.ಎನ್.ನಟರಾಜ್

ಲೇಖಕ -ಕಾಳಿಹುಂಡಿ ಶಿವಕುಮಾರ್

ಇವರ ಹೆಸರು ಬಿ.ಎನ್.ನಟರಾಜ. ರಾಷ್ಟ್ರಕವಿ ಕುವೆಂಪು ರವರಿಂದ 1969 ರಲ್ಲಿ “ಕುಮಾರಕವಿ” ಎಂದು ಕರೆಸಿ ಕೊಂಡವರು. ಅಲ್ಲಿಂದ ಈ ದಿನದವರೆಗೆ ಇವರ ಸಾಧನೆ ಅಪಾರವಾದದ್ದು. ಮೂಲತಃ ಇವರು ಮೈಸೂರಿನ ರಾಮಕೃಷ್ಣನಗರದ ನಿವಾಸಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರು ಇತ್ತೀಚಿಗೆ ಮೈಸೂರಿಗೆ ಬಂದಿದ್ದಾಗ ನಾನು ಇವರನ್ನು ಭೇಟಿ ಮಾಡಿದಾಗ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದರು ಮೈಸೂರಿನ ಪಾರಂಪರಿಕ ಕಟ್ಟಡ ರಾಜ ಮಹಾರಾಜರು ಸ್ಥಳಗಳ ಬಗ್ಗೆ ಅಪಾರ ಜ್ಞಾನವನ್ನು ಪಡೆದಿದ್ದಾರೆ. ಇಳಿ ವಯಸ್ಸಿನಲ್ಲೂ ಕೂಡ ಅವರ ಸಾಹಿತ್ಯದ ಜೊತೆಗೆ, ಅನೇಕ ಗಣ್ಯ ವ್ಯಕ್ತಿಗಳ ಒಡನಾಟ ಮೆಚ್ಚುವಂತದ್ದು.

72 ವರ್ಷ ವಯಸ್ಸಿನ ನಟರಾಜರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ (1977-2014) ನಿವೃತ್ತರಾಗಿದ್ದಾರೆ. ಇವರ ಹವ್ಯಾಸಗಳು ಒಂದೇ? ಎರಡೇ? ಬಾಲ್ಯದಿಂದಲೇ ಕನ್ನಡಾಭಿಮಾನಿ, ಸಾಹಿತ್ಯಾಭಿಮಾನಿ. ಕನ್ನಡ ನಾಡು-ನುಡಿ ಸಂಸ್ಕೃತಿಗೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಜೊತೆಗೆ ಸಾವಿರಾರು ಪುಸ್ತಕಗಳನ್ನ ಓದಿದ್ದರ ಫಲವಾಗಿ ಇವರು ಒಬ್ಬ ಕವಿಯಾಗಿ, ಲೇಖಕರಾಗಿ ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ.

ಜೊತೆಗೆ ತಮ್ಮ ಚಿಂತನೆಯ ಮಾತುಗಳು ಅನೇಕ ವೇದಿಕೆಗಳಲ್ಲಿ, ಶಾಲಾ-ಕಾಲೇಜು ತರಗತಿಗಳಲ್ಲಿ, ಭಾಷಣದ ರೂಪದಲ್ಲಿ ಹೊರಬಂದಿವೆ. ಜೊತೆಗೆ ಅನೇಕ ಕಾರ್ಯಗಾರಗಳಲ್ಲೂ ಕೂಡ ಇವರು ಭಾಗಿಯಾಗಿದ್ದಾರೆ. ಇವರ ಸಾಧನೆಯನ್ನ ನಾವು ಅಂಕಿ-ಅಂಶಗಳ ಮೂಲಕ ನೋಡಬಹುದು. ಎಲ್ಲವನ್ನು ದಾಖಲಿಕರಿಸಿದ್ದಾರೆ. ಜೊತೆಗೆ ಅನೇಕ ಬ್ಲಾಗಗಳಲ್ಲಿ, ಯೂಟ್ಯೂಬ್ ಗಳಲ್ಲಿ ಇವರ ಲೇಖನಗಳು, ಮಾತುಗಳು ಎಲ್ಲವೂ ಸಾವಿರಾರು ಜನರ ಮನೆ-ಮನ ತಲುಪಿವೆ.

ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳ ಇವರು ಈಗಲೂ ಕೂಡ ನಿಯತಕಾಲಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ಅವುಗಳಲ್ಲಿ ಸಿನಿಮಾ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಮುಂತಾದ ವಿಷಯಗಳಿಗೂ ಸೇರಿವೆ. ಇವರು ಅನೇಕ ಕವಿಗಳ, ಲೇಖಕರ ಒಡನಾಡಿಯಾಗಿದ್ದಾರೆ. ಜೊತೆಗೆ ಅವರೊಟ್ಟಿಗೆ ಬೆರೆಯುವ ಎಲ್ಲವನ್ನ ಹಂಚಿಕೊಳ್ಳುವ ವ್ಯಕ್ತಿತ್ವವನ್ನು ಕೂಡ ಹೊಂದಿದ್ದಾರೆ.

ಇವರು ಮೈಸೂರು ಮತ್ತು ಬೆಂಗಳೂರಿನಲ್ಲಿ ಅನೇಕ ಸ್ಥಳಗಳ ವ್ಯಕ್ತಿಗಳ ಮಾಹಿತಿಗಳನ್ನ ಕೇಳಿದರೆ ಸಾಕು ಪಟಪಟನೆ ಹೇಳುತ್ತಾರೆ. ಎಲ್ಲವನ್ನು ತಿಳಿದು ಕೊಂಡಿರುವುದರ ಜೊತೆಗೆ ಅದು ಮತ್ತಷ್ಟು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ನಮ್ಮ ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಇವರ ಕೊಡುಗೆ ಅಪಾರ. ಇವರ ಸಾಹಿತ್ಯಕೃಷಿ, ಅನೇಕರೊಡನೆ ಒಡನಾಟ ಗಳಿಸಿದ ಬಹುಮಾನ ಬಿರುದು ಪ್ರಶಸ್ತಿ-ಸನ್ಮಾನ ಹೀಗೆ ಎಲ್ಲವುಗಳ ಬಗ್ಗೆ ಚಿಕ್ಕದಾಗಿ ಮೆಲುಕು ಹಾಕೋಣ.

ಇವರು ಬರೆದಿರುವ ಪುಸ್ತಕ/ಪ್ರಕಟಿತ ಕೃತಿಗಳು:- (1977-2025ವರೆಗೆ) ಕವನಸುಧೆ, ಕಪ್ಪುಸಮುದ್ರ, ಕಸ್ತೂರಿ, ಕನ್ನಡಡಿಂಡಿಮ, ಕಲ್ಲುಸಕ್ಕರೆ, ಮಕ್ಕಳಮಿಠಾಯಿ, ಅಸೂಯೆಫಲ, ಸಂಗಾತಿ, ದುಂಬಿಯೆರಡುಹೂವೊಂದು, ಅನುಭವಾಮೃತಅನರ್ಘ್ಯರತ್ನ, ಕೊಡಲಿ, ಆಧುನಿಕಪಾಂಚಾಲಿ, ಹೂಗೊಂಚಲು, ಮರೆಯಲಾರದ ಮಹಾನುಭಾವರು, ದೊಡ್ಡವರ ಸಣ್ಣತನಗಳು, ಕನ್ನಡವೆನ್ನುವ ಕನ್ನಡೇತರಪದಕೋಶ, ಅ-ಸಾಮಾನ್ಯಜ್ಞಾನ, ಅವಲೋಕನ, ಅರಳಿದಮೊಗ್ಗುಗಳು, ಆಶಾಕಿರಣ(ಸಂ) ಕನ್ನಡಫಿಲಂಡೈರೆಕ್ಟರಿ-1 (ಸಮಗ್ರ ಕನ್ನಡ ಚಿತ್ರಾವಲೋಕನ), ಚಂದನವನ ಚರಿತ್ರೆ (5 ಸಂಪುಟಗಳು). ಇವರು ಬರೆದಿರುವ ಪ್ರತಿಯೊಂದು ಸಾಹಿತ್ಯವೂ ಕೂಡ  ಸಂಗ್ರಹ ಯೋಗ್ಯ ಮಾಹಿತಿಯನ್ನು ನೀಡುತ್ತವೆ. ಪ್ರತಿಯೊಬ್ಬರ ಗ್ರಂಥಾಲಯಗಳಲ್ಲು ಇಂತಹ ಪುಸ್ತಕಗಳು ಇರಬೇಕು.

ಇತರರೊಡನೆ ಸೇರಿ ಬರೆದ ಕೃತಿಗಳು ಕೂಡ ಅನೇಕ ಇವೆ. ಅನನ್ಯ, ಅನ್ವೇಷಣೆ, ಹೆಜ್ಜೆಮೂಡದಹಾದಿ, ಶತಮಾನ, ಕಾವ್ಯಕುಸುಮ, ಮಾವುಬೇವು, ಮನಸುಗಳಮಂಥನ, ವಸಂತ, ರಾಜಕುಮಾರ್ ಗೀತಮಾಲೆ, ಡಾ.ರಾಜ್‌ ಅಭಿಮಾನಿಗಳ ಚುಟುಕು, ಕಲಾತಪಸ್ವಿ, ಅಭಿನವ ಸಾಮ್ರಾಟ್ ಡಾ.ಪುನೀತ್ (ಅಪ್ಪು), ಕನ್ನಡಕಿರಣ, ಕನ್ನಡಶಿಲ್ಪಿಗಳು, ಕನ್ನಡಪ್ರಭುತ್ವ, ಗುಲಾಬಿಗುಚ್ಛ, ಹೊಂಗಿರಣ, ಗೆಜ್ಜೆನಾದ, ಪೈರುಪಚ್ಚೆತೆನೆ, ಹೊಂಬಾಳೆ, ಕಾವ್ಯಮಾಧುರ್ಯ, ಅಮೃತಬಿಂದು, ಕಾವ್ಯಲಹರಿ, ಸಾಹಿತ್ಯಮಂದಾರ, ಮಾಧುರಿ, ಮಧುರವಾಣಿ, ಭಗೀರಥ, ನಿಜಶರಣ, ಮಣ್ಣಿನಹಣತೆ, ಮುಂತಾದವುಗಳು.

ಇವರ ಮತ್ತೊಂದು ದಾಖಲೆಯ ವಿಷಯ ಎಂದರೆ ಒಬ್ಬ ವ್ಯಕ್ತಿ ಒಂದು ಸ್ಥಳೀಯ ಭಾಷೆ ಅಂದರೆ ಉದಾಹರಣೆಗೆ ಕನ್ನಡ ಈ ಭಾಷೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಲೇಖನಗಳನ್ನು ಬರೆಯುವುದರ ಮೂಲಕ ದಾಖಲೆಯನ್ನು ಸ್ಥಾಪಿಸಿದ್ದಾರೆ. ಒಬ್ಬ ವ್ಯಕ್ತಿ ಸಾಮಾನ್ಯವಾಗಿ 800 ಲೇಖನಗಳನ್ನ ಬರೆದಿರಬಹುದು.

ಆದರೆ ಇವರು ನಿರಂತರವಾಗಿ ಸಾಹಿತ್ಯ ಕೃಷಿಯನ್ನು ಮಾಡಿದ್ದರ ಫಲವಾಗಿ ಈ ರೀತಿಯ ದಾಖಲೆಯ ಸಾಹಿತ್ಯ ಸೃಷ್ಟಿಯಾಗಿದೆ. ಇದು ತಮಾಷೆಯಲ್ಲ. ಜೊತೆಗೆ ತಮ್ಮ ಚಿಂತನೆಯ ಶೈಲಿಯ ಅಕ್ಷರಗಳ ಚಮತ್ಕಾರ ಇವರ ಲೇಖನಗಳಲ್ಲಿ ಅಡಗಿರುತ್ತದೆ. ಮಾಹಿತಿಗಳ ಜೊತೆಗೆ ಚಿಂತನೆಯ ಬರಹಗಳನ್ನು ಇವರು ಪ್ರಕಟಿಸಿದ್ದಾರೆ. ಇವರ ಲೇಖನಗಳು ಪ್ರಕಟವಾಗಿರುವ ಪ್ರಮುಖ ಪತ್ರಿಕೆಗಳೆಂದರೆ…. ಪ್ರಬುದ್ಧ ಕರ್ನಾಟಕ, ಮಾನವಿಕ ಕರ್ನಾಟಕ, ಗ್ರಂಥಲೋಕ, ಪುಸ್ತಕಪುರವಣಿ, ಸುಧಾ, ತರಂಗ, ಪ್ರಜಾಮತ, ರಾಗಸಂಗಮ.

ಕರ್ಮವೀರ, ಮಯೂರ, ಮಲ್ಲಿಗೆ, ಮಂಗಳ, ವೈದ್ಯತರಂಗಿಣಿ, ಲಹರಿ, ಚೆನ್ನುಡಿ, ವಾರಪತ್ರಿಕೆ, ಲಂಕೇಶ್ ಪತ್ರಿಕೆ, ಶ್ರೀನಾಥ್ ಪತ್ರಿಕೆ, ಪ್ರಿಯಾಂಕ, ಉದಯವಾಣಿ, ಕನ್ನಡಪ್ರಭ, ಪ್ರಜಾವಾಣಿ, ಉದಯಕಾಲ, ಸಂಯುಕ್ತಕರ್ನಾಟಕ, ವಿಜಯಕರ್ನಾಟಕ, ಸಾಧ್ವಿ, ವರ್ತಮಾನ್, ಪ್ರತಿನಿಧಿ, ರಾಜ್ಯಧರ್ಮ, ಮೈಸೂರುಮಿತ್ರ, ಆಂದೋಲನ, ಸಂಕ್ರಾಂತಿ, ಮಹಾನಂದಿ, ಈವ್ನಿಂಗ್ ಮೇಲ್, ನವಧ್ವನಿ, ಕನ್ನಡಕಂಠೀರವ, ಕನ್ನಡಪುತ್ರ, ಮೈಸೂರುಪತ್ರಿಕೆ, ಪೌರಧ್ವನಿ, ಪ್ರಜಾನುಡಿ, ಜನಮನಕನ್ನಡ, ಮೈಸೂರುಮಿರರ್, ಪ್ರತಿಲಿಪಿ, ಮುಂತಾದ ಬಹುತೇಕ ಎಲ್ಲ ಪತ್ರಿಕೆ, ನಿಯತಕಾಲಿಕೆ ಹಾಗೂ ವಾರ್ಷಿಕ ಸಂಚಿಕೆಯಲ್ಲಿ 2258 ಲೇಖನಗಳು ಪ್ರಕಟ ಗೊಂಡಿರುವುದು ದೇಶದಲ್ಲೇ ನೂತನ ದಾಖಲೆ.!

ಕುಮಾರಕವಿ ನಟರಾಜು ರವರ ಬಗ್ಗೆ ಮತ್ತಷ್ಟು ಮಾಹಿತಿ..

1980-ಬೆಳಗಾವಿ 52ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕೃತಿ “ಕಪ್ಪುಸಮುದ್ರ”, ಡಾ.ಹಂಪನಾ ಅವರಿಂದ ಬಿಡುಗಡೆ ಹಾಗೂ 1985ರಲ್ಲಿ ಜರುಗಿದ ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ ದಿನದಂದು “ಕನ್ನಡಡಿಂಡಿಮ” ಕೃತಿ ಲೋಕಾರ್ಪಣೆ ಗೊಂಡಿರುವುದು ವಿಶೇಷ. ಕುಮಾರಕವಿ ಬಿ.ಎನ್.ನಟರಾಜ್ ಕುರಿತು ಅನ್ಯರ ಬರಹಗಳು ದಾಖಲಾಗಿವೆ. ದೇಜಗೌ ರವರ ವಜ್ರದೀಪ್ತಿ (60ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ)

ಮಂಜೂಷ (51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ) ಸಿಪಿಕೆಯವರ ಮುನ್ನುಡಿಮಾಲೆ, ಅನನ್ಯ ಮಾಸಪತ್ರಿಕೆ ಸಂಪಾದಕರ”ಎಲೆಮರೆಕಾಯಿ” ಮೈಸೂರು ಆರ್ಟ್ ಗ್ಯಾಲರಿ “ಸಾಧಕರ ಸವಿಹೆಜ್ಜೆ” ಆರ್.ಎಲ್. ಅನಂತರಾಮಯ್ಯ ನವರ ವಾರ್ಷಿಕ ಗ್ರಂಥಾವಳಿ, ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ- ಪ್ರಸಾರಾಂಗ ಪ್ರಕಟಣೆಗಳಾದ ಗ್ರಂಥಸೂಚಿ, ವಿಶ್ವಕೋಶ,ಆಧುನಿಕ ಕನ್ನಡ ಬರಹಗಾರರು, ಪ್ರಬುದ್ಧಕರ್ನಾಟಕ, ಮಾನವಿಕಕರ್ನಾಟಕ, ಮುಂತಾದವುಗಳು.

ಇವರು ಲೇಖನಗಳನ್ನು ಬರೆಯುವುದರ ಜೊತೆಗೆ ಕವಿಯು ಕೂಡ ಆಗಿದ್ದಾರೆ. ಅನೇಕ ಕವಿಗೋಷ್ಠಿ ಗಳಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆ ಜೊತೆಗೆ ಆಕಾಶವಾಣಿ ಅಂತಹ ಪ್ರಬಲ ಮಾಧ್ಯಮದಲ್ಲೂ ಕೂಡ ಇವರ ಧ್ವನಿ ಮಾಹಿತಿಗಳೊಂದಿಗೆ ಅನೇಕ ಕೇಳುಗರನ್ನು ತಲುಪಿದೆ. ಅನೇಕ ಟಿವಿ ವಾಹಿನಿಗಳಲ್ಲೂ ಕೂಡ ಇವರು ಭಾಗಿಯಾಗಿದ್ದಾರೆ. ವಿದ್ಯುನ್ಮಾನಗಳ ಇವತ್ತಿನ ಭರಾಟೆಯಲ್ಲಿ ಇವರು ಸಮಯವನ್ನ ಸದುಪಯೋಗ ಪಡಿಸಿಕೊಂಡು ಇವತ್ತಿನ ಯುವಕರಿಗೆ ಮಾದರಿಯಾಗಿದ್ದಾರೆ. ಇವರು ನಾಡಿನಾದ್ಯಂತ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ಮುಂತಾದ ವಿಷಯಗಳನ್ನೊಳಗೊಂಡಂತೆ ಭಾಗಿಯಾದ ಹಲವು ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಹೇಳುವುದಾದರೆ……..

1979-ಅ.ಭಾ.51ನೇಕ.ಸಾ.ಸ.ಧರ್ಮಸ್ಥಳ ಕವಿಗೋಷ್ಠಿ. 1980-ಅ.ಭಾ.52ನೇ ಕ.ಸಾ.ಸ. ಬೆಳಗಾವಿ ಚರ್ಚಾಗೋಷ್ಠಿ. ಸುತ್ತೂರು ಮಠದ “ಅ.ಭಾ.ಶರಣರ ಆಧ್ಯಾತ್ಮಕಿರಣ” ಕಮ್ಮಟದಲ್ಲಿ ಪ್ರಬಂಧ ಮಂಡನೆ.2 ಬಾರಿ ಮೈಸೂರು ದಸರಾ ಕವಿಗೋಷ್ಠಿ. 5 ಬಾರಿ ಮೈ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ, 8 ಬಾರಿ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ ಕವಿಗೋಷ್ಠಿ, ಕರ್ನಾಟಕ ರಾಜ್ಯದಾದ್ಯಂತ ಅನೇಕ ಸಂಘ ಸಂಸ್ಥೆಗಳ 100ಕ್ಕೂ ಹೆಚ್ಚಿನ ಸಾಹಿತ್ಯ ಸಮ್ಮೇಳನ/ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಮೊದಲೇ ಹೇಳಿದಂತೆ ಆಕಾಶವಾಣಿ ಚಿಂತನ ಕಾರ್ಯಕ್ರಮ, ಎಫ್.ಎಂ.ರೇಡಿಯೋದಲ್ಲಿ ಇವರ ಸಂದರ್ಶನ ಮಾಡಲಾಗಿದೆ.

ಉದಯ ಟಿವಿ, ರಾಜ್ ಟಿವಿ. ಚಂದನ ಟಿವಿ. ಅಮೋಘ ಟಿವಿ, ಸಮರ ಟಿವಿ. ಶ್ರೀಗರಿ ಟಿ.ವಿ. ಮುಂತಾದ ದೂರದರ್ಶನದ  ಮೂಲಕ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಇವರ ಸಾಧನೆ ನಾಡಿನದ್ದಕ್ಕೂ ಹರಡಿದೆ ಕೇವಲ ಪ್ರಿಂಟ್ ಮೀಡಿಯಾ ಅಲ್ಲದೆ ದೃಶ್ಯ ಮಾಧ್ಯಮಗಳಲ್ಲೂ ಕೂಡ ಇವರ ಪ್ರತಿಭೆಯ ಮೇರು ದಾಖಲಾಗಿದೆ. “ಕರ್ತವ್ಯ ಮಾಡು ಫಲ ನಿರೀಕ್ಷಿಸದಿರು”- ಎನ್ನುವ ಗೀತಸಾರದಂತೆ ಇವರು ತಮ್ಮ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ದಾಖಲೆ ರೀತಿಯಲ್ಲಿ ಮಾಡುತ್ತ ಮುಂದೆ ಸಾಗುತ್ತಿದ್ದಾರೆ.

ಎಲೆಮರೆ ಕಾಯಿಯಂತಿರುವ ಇಂತಹ ಮೇರು ಪ್ರತಿಭೆಯನ್ನು ಹಲವು ಪ್ರಶಸ್ತಿಗಳು ಕೈಬೀಸಿ ಕರೆದಿವೆ. ಅವರು ಸಾಹಿತ್ಯ ಕೃಷಿ ಶುರು ಮಾಡಿದ ಅಂತದಿಂದ ಇವತ್ತಿನವರೆಗೂ ಕೂಡ ಇವರ ಮುಕುಟಕ್ಕೆ ಅನೇಕ ಪ್ರಶಸ್ತಿ, ಸನ್ಮಾನ ಸಂದಿವೆ. ಇವುಗಳಲ್ಲಿ ಪ್ರಮುಖವಾದವು: ಆಶುಕವಿ, ಯುವಕವಿ, ಯುವರತ್ನ, ಸಾಹಿತ್ಯರತ್ನ, ಕಸ್ತೂರಿಸಿರಿರತ್ನ, ಪ್ರಬುದ್ಧಶ್ರೀ, ಕವಿರತ್ನ, ಆಯುಶ್‍ಕವಿ, ಕವಿಪುಂಗವ, ಚುಟುಕುಶ್ರೀ, ವರ್ತಮಾನಶ್ರೀ, ವರ್ಷದವ್ಯಕ್ತಿ, ವರ್ಷದಕವಿ, ವರ್ಷದಸಾಧಕ, ಪರಿಸರಪ್ರೇಮಿ, ನಿಸರ್ಗಚಿಂತಕ, ರೈತಮಿತ್ರ, ಯುವಜ್ಞಾನಿ, ವಾಗ್ಮಯವಾಚಸ್ಪತಿ, ಕವಿತಾಶ್ರೀ, ಸಾಹಿತ್ಯಸಾಧಕ, ಇತ್ಯಾದಿ….

ಇವರ ದಾಖಲೆಯ ಕೆಲಸದ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಅವರು ಯಾವುದೇ ಪತ್ರಿಕೆಗಳಲ್ಲಿ ಅಥವಾ ಇನ್ನಿತರ ವಾಹಿನಿಗಳಲ್ಲಿ ತಮ್ಮ ಲೇಖನ, ಭಾಷಣ ಬಂದರೆ ದಿನಾಂಕ ಸಮೇತ ನಮೂದು ಮಾಡಿ ಇಟ್ಟಿದ್ದಾರೆ. 15.6.2026ವರೆಗೆ ಇವರ ಲೇಖನಿಯಿಂದ ಪ್ರಕಟಿತವಾದ್ದು:- 321 ಚುಟುಕುಗಳು 542 ಕವಿತೆಗಳು, ಚಂದನವನದ(ಕನ್ನಡ ಚಿತ್ರರಂಗ) ಚರಿತ್ರೆಯ 589 ಲೇಖನ ಸೇರಿದಂತೆ ಒಟ್ಟಾರೆ 2122 ಲೇಖನಗಳು ದಿನಪತ್ರಿಕೆ/ನಿಯತಕಾಲಿಕೆ ಗಳಲ್ಲಿ ಪ್ರಕಟವಾಗಿದೆ. 2000ಕ್ಕೂ ಹೆಚ್ಚಿನ ಲೇಖನ ಪ್ರಕಟಗೊಂಡ ಮೊಟ್ಟಮೊದಲ ಪ್ರಾದೇಶಿಕ ಭಾಷೆ(ಕನ್ನಡ) ಲೇಖಕನಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ.

ಮೈವಿವಿ ಪ್ರಸಾರಾಂಗ ಪ್ರಕಟಣೆ: ಆಧುನಿಕ ಕನ್ನಡ ಬರಹಗಾರರು WHO-IS-WHO Kannada writers ಗ್ರಂಥಸೂಚಿಯಲ್ಲಿ ಕುಮಾರಕವಿ ನಟರಾಜರ ಉಲ್ಲೇಖ ಇದೆ.     ಡಾ.ವೈದೇಹಿ ಮತ್ತು ಡಾ.ಚಂದ್ರಮತಿ ಸೋಂದಾ ಇವರಿಬ್ಬರ ಪಿ.ಹೆಚ್ಡಿ., ಪ್ರೌಢಪ್ರಬಂಧದಲ್ಲಿ ಕುಮಾರಕವಿಯವರ ಬುದ್ಧ, ಕಲಿಯುಗ ಹಾಗೂ ಇನ್ನಿತರ ಕವನಗಳ ಉಲ್ಲೇಖವಿದೆ.

ಡಾ.ಮಂಜಪ್ಪಶೆಟ್ಟಿ ಮಸಗಲಿ ರವರ ‘ಮುಕ್ತಕಗಳು’ ಪಿ.ಹೆಚ್ಡಿ., ಪ್ರೌಢಪ್ರಬಂಧದಲ್ಲಿ ಕುಮಾರಕವಿಯವರ ಬುದ್ಧ ಮತ್ತು ಇತರೆ ಕವನಗಳನ್ನು ಆಧಾರ/ಉಲ್ಲೇಖಗಳನ್ನಾಗಿ ತೆಗೆದುಕೊಳ್ಳಲಾಗಿದೆ. ಅಖಿಲ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್(ರಿ)ಮೈಸೂರು ಇವರಿಂದ ರಾಜ್ಯ ಪ್ರಶಸ್ತಿ ಸನ್ಮಾನ; ಕರ್ನಾಟಕ ಸರ್ಕಾರದ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾಡಳಿತ ವತಿಯಿಂದ ಪ್ರಶಸ್ತಿ-ಸನ್ಮಾನ,  ಕರ್ನಾಟಕ ಸರ್ಕಾರ ಮೈಸೂರು ಜಿಲ್ಲಾಡಳಿತ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಮುಖ್ಯಭಾಷಣಕಾರನಾಗಿ ಸತತ 3 ಬಾರಿ (ಹ್ಯಾಟ್ರಿಕ್) ಆಯ್ಕೆ,

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಎನ್. ಪುಟ್ಟಬುದ್ಧಿ ಅವರಿಂದ “ಉಪನ್ಯಾಸರತ್ನ” ಬಿರುದು ಸನ್ಮಾನ ಪುರಸ್ಕೃತ, ಕೊಳ್ಳೇಗಾಲ. The Institution of Engineers(India) ವರ್ಷದ ಸಾಹಿತಿ ವಿಶೇಷ ಬಹುಮಾನ-2010. Universal Academy’s ‘man of the year’ award in the year 2009.

B.N.NATARAJ(KUMARA KAVI) published books titles are included as reference(Page No.693) in the GAZETTEER OF INDIA, Karnataka State, published by Government of India1987.Chief EditorSURYANATH U. KAMATH,1988, ©Government of Karnataka Publication. INDIAN EXPRESS newspaper dt. 18.10.2017 article on B.N.Nataraj”CITYMAN’S MULTIPLE HOBBIES OPENS WINDOW TO ERA GONE BY” written by -K.RATHNA.

 

ಹೀಗೆ ಎಲ್ಲವನ್ನೂ ಕೂಡ ದಾಖಲೆ ರೀತಿಯಲ್ಲಿ ಸಂಗ್ರಹ ಮಾಡುವುದು ಕೂಡ ಇವರ ಮತ್ತೊಂದು ಹವ್ಯಾಸ. ಇಂತಹ ನಾಡು ಕಂಡ ಅಪರೂಪದ ಸಾಧಕನಿಗೆ 2026ನೇ ಇಸವಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬರಬೇಕು ಎನ್ನುವುದು ನನ್ನಂತಹ

ಲಕ್ಷಾಂತರ ಕನ್ನಡಿಗರೆಲ್ಲರ ಆಶಯ. ಈ ಗೌರವಕ್ಕೆ ಎಲ್ಲರೀತಿ ಅರ್ಹರಾದ ಕುಮಾರಕವಿ ನಟರಾಜ ರವರಿಗೆ ಇದು ತಡವಾಗಿ ಯಾದರೂ ಈ ವರ್ಷವೇ ಬರಲಿ. ಇವತ್ತಿನ ದಿನಗಳಲ್ಲಿ ಓದುವುದು ಬರೆಯುವುದು ಕಡಿಮೆಯಾಗುತ್ತಿದೆ ಮೊಬೈಲ್ ಮಾಲ್ ಸಂಸ್ಕೃತಿಯತ್ತ ಎಲ್ಲರ ಚಿತ್ತದ ಜೊತೆಗೆ ಸಮಸ್ಯೆಗಳ ಸುಳಿಯಲ್ಲಿ ಸದಾ ಒತ್ತಡದ ಜೀವನವನ್ನು ನಡೆಸುತ್ತ ಬರುತ್ತಿದ್ದೇವೆ.

ಇಂತಹ ಸಂದರ್ಭದಲ್ಲಿ ಪುಸ್ತಕಗಳು ಪತ್ರಿಕೆಗಳು ಆಕಾಶವಾಣಿ ಅಂತಹ ಪ್ರಬಲ ಮಾಧ್ಯಮಗಳು ಕೂಡ ಒತ್ತಡ ನಿವಾರಣೆ ಮಾಡುತ್ತವೆ ಆದರೆ ಇಂತಹ ಹವ್ಯಾಸವನ್ನು ಯಾರು ಕೂಡ ರೂಡಿಸಿಕೊಳ್ಳುತ್ತಿಲ್ಲ ಇನ್ನೊಂದು ಮುಖ್ಯವಾದ ಅಂಶವೆಂದರೆ ನಮ್ಮ ಮಕ್ಕಳಿಗೆ ಪಠ್ಯ ವಿಷಯ ಸಂಬಂಧಿಸಿದ ವಿಷಯವನ್ನು ಬಿಟ್ಟು ಬೇರೆ ಓದಲು ಹೇಳುವುದೇ ಇಲ್ಲ ಅದರಿಂದಾಗಿ ನಾವು ನಮ್ಮ ಕನ್ನಡ ನಾಡಿನಲ್ಲಿ ಅನೇಕ ಸಾಧಕರು ನಮ್ಮ ಎದುರು ಇದ್ದಾರೆ ಅವರ ಸಾಹಿತ್ಯವನ್ನ ಅವರ ಜೀವನ ಚರಿತ್ರೆಗಳನ್ನು ಓದಬೇಕು ಆಗ ಮಾತ್ರ ನಾವು ಏನಾದರೂ ಒಂದು ಸಾಧನೆ ಮಾಡಬಹುದು.

ಕುಮಾರಕವಿ ನಟರಾಜ ರವರಂತಹ ಧೀಮಂತ ಪ್ರತಿಭೆ ಕನ್ನಡ ನಾಡಿನಲ್ಲಿ ಇರುವುದೇ ನಮ್ಮ ಸೌಭಾಗ್ಯ ಎಲ್ಲಾ ವಿಷಯಗಳನ್ನು ಕೂಡ ಇವರು ತಿಳಿದುಕೊಂಡಿದ್ದಾರೆ ತಿಳಿಸುತ್ತಾ ಇದ್ದಾರೆ ಇವರಿಗೆ ಈ ಬಾರಿಯಾದರೂ ಘನತೆವೆತ್ತ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ ಎನ್ನುವುದು ನಮ್ಮೆಲ್ಲರ ಒಕ್ಕೊರಲಿನ ಆಶಯ.

– ಕಾಳಿಹುಂಡಿ ಶಿವಕುಮಾರ್

ಸಾಹಿತಿ, ಸಂಶೋಧಕ, ಸಂಸ್ಕೃತಿಚಿಂತಕ

ಮೈಸೂರು. 9844883581

ಕೃತಿ: ಕರ್ನಾಟಕ ದಿಗ್ಗಜ ಕೆಂಗಲ್ ಹನುಮಂತಯ್ಯ

ಕರ್ತೃ: ಸಿ.ಸಿದ್ದರಾಮಯ್ಯ

ಪ್ರಕಾಶಕ:ಸಿದ್ಧೇಶ್ವರ ಪ್ರಕಾಶನ ಮೈಸೂರು-9

ಮೊದಲ ಮುದ್ರಣ: 1988

ಪುಟಗಳು: 102, ಬೆಲೆ: ರೂ.12

ನವ ಮೈಸೂರು (ಕರ್ನಾಟಕ) ರಾಜ್ಯದ ಮಹಾಶಿಲ್ಪಿ ಕೆಂಗಲ್ ಹನುಮಂತಯ್ಯನವರ ಜೀವನ ಮತ್ತು ಸಾಧನೆ ಕುರಿತು ಖ್ಯಾತ ಇತಿಹಾಸ ತಜ್ಞ ಸಿ.ಸಿದ್ದರಾಮಯ್ಯನವರು ರಚಿಸಿದ ಪ್ರಸ್ತುತ ಪುಟಾಣಿ ಗ್ರಂಥವು ಕೆಂಗಲ್ ಹನುಮಂತಯ್ಯನವರ ಬಗ್ಗೆ ಅವಶ್ಯಕ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಕರ್ನಾಟಕ ರಾಜ್ಯದ ನಕ್ಷೆಯೊಳಗೆ ಹನುಮಂತಯ್ಯನವರ ಭಾವಚಿತ್ರ ಬರುವಂತೆ ಸುಂದರವಾಗಿ ಅರ್ಥಗರ್ಭಿತವಾಗಿ ಅಳವಡಿಸಿರುವ ಪುಸ್ತಕದ ಮುಖಪುಟವು ಸಾಕಷ್ಟು ಆಕರ್ಷಣೀಯವಾಗಿದೆ. ಕಟ್ಟಕಡೆಯ ಪುಟದಲ್ಲಿ ಲೇಖಕರು ‘ಗ್ರಂಥಋಣ’ ಪ್ರಕಟಿಸಿ ತಮ್ಮ ದೊಡ್ಡಗುಣದ ಜತೆಗೇ  ಪ್ರಾಮಾಣಿಕ ಕೃತಜ್ಞತೆಯನ್ನೂ ಮೆರೆದಿದ್ದಾರೆ.

ಪುಸ್ತಕದ ಪುಟ ತೆರೆಯುತ್ತಿದ್ದಂತೆ ಕಾಣಿಸುತ್ತದೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ವಿಭಾಗ, ಮಾನಸ ಗಂಗೋತ್ರಿ, ಇಲ್ಲಿನ ಹಿರಿಯ ಪ್ರಾಧ್ಯಾಪಕರೂ ಮತ್ತು ದೇಶದ ಖ್ಯಾತ ಇತಿಹಾಸ ವಿದ್ವಾಂಸರೂ ಆಗಿರುವ ಡಾ.ಬಿ.ಮುದ್ದಾಚಾರಿಯವರು ಈ ಕೃತಿಗೆ ಬರೆದಿರುವ “ಮುನ್ನುಡಿ”. ಇದು ಇತಿಹಾಸ ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ಸಾಮಾನ್ಯ ಓದುಗ ಬಂಧುಗಳ ರಾಜಕೀಯ ಜ್ಞಾನವನ್ನು ತಣಿಸುವಂತಿದೆ.

ನಂತರದ ಪುಟದಲ್ಲಿರುವ ಲೇಖಕರ ‘ಪ್ರಸ್ತಾವನೆ’ ಇಡೀ ಪುಸ್ತಕ ಸಾರಾಂಶದ ಕನ್ನಡಿಯಂತಿದ್ದು ಇದರಲ್ಲಿ ಪ್ರಸಿದ್ಧ ಇತಿಹಾಸಕಾರ ಮಿಟ್ಲ್ಯಾನ್ಡ್ ಹೇಳಿದಂಥ: “ಮಾನವ ಏನುಮಾಡಿದ ಏನುಹೇಳಿದ ಅದಕ್ಕೂಹೆಚ್ಚಾಗಿ ಏನನ್ನು ಯೋಚಿಸಿದ” ಎಂಬುವುದೇ ಇತಿಹಾಸ. ಎಂಬುದನ್ನು ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸುತ್ತಾರೆ. ಮೌಲ್ಯಾಧಾರಿತ ರಾಜಕಾರಣ ಮಾಡುವ ಎಲ್ಲರ ತನುಮನ ಗೆಲ್ಲುವಂಥ ಈ ಮೂರು ಅಂಶಗಳ ಮಿಲನವೇ ಕೃತಿಯ ಗರ್ಭದಲ್ಲಿ ಅಡಗಿರುವ ಸತ್ಯತತ್ವ ಎಂಬುದನ್ನೂ ಮಾನ್ಯ ಲೇಖಕರು ತೀಕ್ಷ್ಣವಾಗಿ ಉಲ್ಲೇಖಿಸಿದ್ದಾರೆ.

ಪುಸ್ತಕದ ಪರಿವಿಡಿ :

  1. 1. ಬಾಲ್ಯಜೀವನ
  2. 2. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಕೆಂಗಲ್ ಹನುಮಂತಯ್ಯನವರ ಸ್ಥಾನಮಾನ
  3. 3. ಮುಖ್ಯಮಂತ್ರಿಯಾಗಿ……
  4. 4. ರಾಷ್ಟ್ರ ರಾಜಕಾರಣದಲ್ಲಿ
  5. 5. ಇತರೆ ಕಾರ್ಯಗಳು

‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ನಾಣ್ಣುಡಿಯ ಪಿತಾಮಹ ಕೆಂಗಲ್ ಹನುಮಂತಯ್ಯನವರು ಇದನ್ನು ವಿಧಾನಸೌಧ ಹೆಬ್ಬಾಗಿಲಮೇಲೆ ಸಾರ್ವಜನಿಕರ ಬರಿಗಣ್ಣಿಗೇ ಕಾಣಿಸುವಂತೆ ಸುವರ್ಣಾಕ್ಷರಗಳಲ್ಲಿ ಕೆತ್ತಿಸಿದ್ದರು. ಇಂಥ ಮುತ್ಸದ್ದಿ ಮೌಲ್ಯಾಧಾರಿತ ಸ್ವಚ್ಛ ಉಚ್ಛ ಸಾರ್ವಕಾಲಿಕ ರಾಜಕಾರಣಿ. ದೇಶವು, ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯ ಕಂಡಂಥ ಧೀಮಂತ ಸರ್ವಶ್ರೇಷ್ಠ ರಾಜಕಾರಣಿ ಇವರು.

ಕೆಂಗಲ್ ಹನುಮಂತಯ್ಯನವರು ಕ್ರಮೇಣ ರಾಷ್ಟ್ರ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಮೊದಲ ದಿನದಿಂದ ಆರಂಭಿಸಿ ಅವರ ಕೊನೆಯ ಅವಧಿ ತನಕ “ಶಿಸ್ತಿನ ಸಿಪಾಯಿ, ಅತ್ಯುತ್ತಮ ಕರ್ಮಚಾರಿ” ಮುಂತಾದ ಸ್ತುತ್ಯಾರ್ಹ ಹೊಗಳಿಕೆ ಗಳಿಸಿದರು. ಅಂದಿನ ರಾಷ್ಟ್ರಪತಿ ಸೇರಿದಂತೆ, ಪ್ರಧಾನಮಂತ್ರಿಗಳಿಂದಲೂ ಗೌರವ ಪ್ರಶಂಸೆ ಪಡೆದುಕೊಂಡರು.

ಪ್ರತಿಯೊಬ್ಬ ಸಹೋದ್ಯೋಗಿಯಿಂದಲೂ ಸೈ ಎನಿಸಿ ಕೊಂಡರು, ಹಿತಶತ್ರುವಿನಿಂದಲು ಶಹಬ್ಬಾಸ್ಗಿರಿ ಪಡೆದ ವಿವಿಧ ಖಾತೆಗಳ ಏಕೈಕ ಕೇಂದ್ರ ಸಚಿವ. ತಮ್ಮ ಸರಳತೆ ಮತ್ತು ಸಜ್ಜನಿಕೆಯಿಂದ, ಸಹಜ ಬುದ್ಧಿಮತ್ತೆಯಿಂದ, ಭಾರತ ಸರ್ಕಾರದ ವಿವಿಧ ಪೋರ್ಟ್ ಫೋಲಿಯೋಗಳನ್ನು ಯಶಸ್ವಿಯಾಗಿ ನಿಭಾಯಿಸಿ ತಮ್ಮ ಜೀವನದುದ್ದಕ್ಕೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೆಂಗಲ್ ಹನುಮಂತಯ್ಯನವರಂಥ ಗಣ್ಯರ ಬಗ್ಗೆ ಬರೆದ ಈ ಪುಸ್ತಕವು ಸ್ವಾಗತಾರ್ಹ, ಇದರ ಲೇಖಕ ಶ್ಲಾಘನೀಯರು.

ಸ್ವಾತಂತ್ರ್ಯಾನಂತರ ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯದ ಮೊಟ್ಟಮೊದಲ ಚುನಾಯಿತ ಮುಖ್ಯ ಮಂತ್ರಿ. ಜೈಲು ಖೈದಿಗಳಿಂದ ನಿರ್ಮಾಣ ಮಾಡಿಸಿದ ವಿಶ್ವ ಖ್ಯಾತ ಅತಿಸುಂದರದ “ವಿಧಾನಸೌಧ” ಮಹಲಿನ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಉತ್ತುಂಗ ವ್ಯಕ್ತಿತ್ವದ ಅತ್ಯಂತ ಸಹನಾಶೀಲ ಮಹಾನ್ ಯುಕ್ತಿ ಶಕ್ತಿ ವ್ಯಕ್ತಿ. ಇವತ್ತಿನ ರಾಜಕಾರಣಿಗಳಿಗೆ ಮಾತ್ರವಲ್ಲದೇ ಎಲ್ಲ ಕಾಲದ ರಾಜಕಾರಣಿಗಳಿಗೆ ಸಂವಿಧಾನಾತ್ಮಕವಾಗಿ ಆಡಳಿತಾತ್ಮಕವಾಗಿ ಮಾದರಿಯಾಗಬಲ್ಲ ಜೇಷ್ಠಶ್ರೇಷ್ಠ ರಾಜತಂತ್ರ ಧುರೀಣ.

ನಿಸ್ವಾರ್ಥ ರಾಜಕಾರಣಿ ಕೆಂಗಲ್ …

ಹನುಮಂತಯ್ಯನವರ ಬಗ್ಗೆ ಈ ಕಿರುಪುಸ್ತಕ ದಲ್ಲಿರುವ ಪ್ರತಿಯೊಂದು ಅಧ್ಯಾಯವು ಸಹ ಒಂದಕ್ಕಿಂತ ಇನ್ನೊಂದು ಉಪಯುಕ್ತ  ಆಗಿರುವುದಲ್ಲದೆ ಆಪ್ಯಾಯಮಾನವೂ ಆಗಿದೆ. ಕರ್ನಾಟಕ ರಾಜಕೀಯದ ಇತಿಹಾಸ ಬರೆಯ ಬಯಸುವ ಅಥವ ಅರಿಯಲು ಬಯಸುವ ಪ್ರತಿಯೊಬ್ಬರೂ ಈ ಕೃತಿಯನ್ನು ಕೊಂಡು ಓದಿದರೆ ಸಾರ್ಥಕ್ಯ ಎಂಬುದರಲ್ಲಿ ಅನುಮಾನವಿಲ್ಲ.!

-ಕುಮಾರಕವಿ ನಟರಾಜ್

ಅಂಚೆ ತೆರಪಿನ ಶಿಕ್ಷಣ ಸಂಸ್ಥೆ

ಮಾನಸಗಂಗೋತ್ರಿ, ಮೈಸೂರು-6

‘ಗ್ರಂಥಲೋಕ’ ಮಾಸಿಕ ಡಿಸಂಬರ್ 1988

ಕೃತಿ : ಸ್ವಂತ (ಆತ್ಮಕಥನಾ ಪ್ರಬಂಧಗಳು)

ಕರ್ತೃ : ಡಾ.ಹಾ.ಮಾ.ನಾಯಕ

ಪ್ರಕಾಶಕ: ಸುವಿದ್ಯಾ ಪ್ರಕಾಶನ, ಬೆಂಗಳೂರು

ಮುದ್ರಕರು: ಶ್ರೀಶಕ್ತಿ ಎಲೆಕ್ಟ್ರಿಕ್ ಪ್ರೆಸ್, ಮೈಸೂರು

ಪುಟಗಳು: 156,  ಬೆಲೆ: ರೂ.30/-

ಮೊದಲ ಮುದ್ರಣ: 1992

“ನಮಗೆ ನಾವೇ ಅಪ್ರಾಮಾಣಿಕರಾಗಿ ಇರುವುದಕ್ಕಿಂತ ಲೋಕದ ಎದುರು ಅಪ್ರಾಮಾಣಿಕರಾಗಿ ತೋರಿಸಿಕೊಳ್ಳುವುದು ಲಕ್ಷಾಂತರ ಪಾಲು ಮೇಲು”-ಮಹಾತ್ಮಗಾಂಧಿ

ಈ ಮೇಲಿನ ಸಾಲುಗಳನ್ನು ತಮ್ಮ ಮೊದಲ ಪುಟದಲ್ಲೆ ಅಚ್ಚು ಹಾಕಿಸಿಕೊಂಡ ಲೇಖಕ ಹಾರೋಗದ್ದೆ ಮಾನಪ್ಪ ನಾಯಕ ರವರು. ಈ ಮೂಲಕ ತಮ್ಮ ಗಾಂಧೀಪ್ರಿಯ ಗುಣವನ್ನು ಜಗಜ್ಜಾಹೀರು ಪಡಿಸಿಕೊಂಡ ಡಾ.ಹಾ.ಮಾ.ನಾ. ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು ಹಾಗೂ ನಿರ್ದೇಶಕರು, ಹುದ್ದೆಯನ್ನು ಅಲಂಕರಿಸಿದ್ದವರು.

ಕನ್ನಡ ಸಾಹಿತ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಮೂರು ದಶಕಕ್ಕೂ ಮೀರಿ ಅಮೋಘ ಸೇವೆಗೈದು ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಸಂಶೋಧನಾರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶನ ಮಾಡಿ, ನಾಡಿನ ಜನಪ್ರಿಯ ಬರಹಗಾರರಾಗಿ, ಅಂಕಣಕಾರರಾಗಿ, ಗದ್ಯ ಪದ್ಯ ಎರಡೂ ಪ್ರಾಕಾರಗಳಲ್ಲಿ ಪ್ರಖರ ಪಂಡಿತ ಎನಿಸಿದ್ದಾರೆ. ಡಾ.ಹಾ.ಮಾ.ನಾ. ರವರ ಕೃತಿಗಳ ಸಂಖ್ಯೆ ಇಷ್ಟರಲ್ಲೇ ನೂರರ ಗಡಿ ದಾಟಲು ಸಜ್ಜಾಗುತ್ತಿದೆ.

ಈ ಪೈಕಿ 12 ಆಟೋ-ಬಯಾಗ್ರಫಿಕಲ್ ಎಸ್ಸೇಸ್ ಸಂಗ್ರಹದ ‘ಸ್ವಂತ’ ಎಂಬ ಇದೂ ಒಂದು ಸೇರಿದೆ. ಈ ಪುಸ್ತಕದ ಹಿಂಬದಿಯ ಹೊದಿಕೆಯಲ್ಲಿ ಮುದ್ರಿಸಿದ ಜ್ಞಾನಪೀಠ ಪುರಸ್ಕೃತರ ಸಾಲುಗಳು ಹೀಗಿದೆ:-

“ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಇಲಾಖೆಯನ್ನು ಉಜ್ವಲವಾಗಿ ಬೆಳೆಸಿದವರಲ್ಲಿ ಡಾ.ಹಾ.ಮಾ.ನಾಯಕರೂ ಒಬ್ಬರು. ಅಷ್ಟೇ ಅಲ್ಲದೆ ಕನ್ನಡ ನಾಡು ನುಡಿ ಜನ ಸಾಹಿತ್ಯ ಸಂಸ್ಕೃತಿ ಸಂಬಂಧವಾದ ಚಟುವಟಿಕೆಗಳಲ್ಲಿ ಶ್ರದ್ಧೆ ನಿಷ್ಠೆಗಳಿಂದ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡು ಪ್ರಶಂಸನೀಯವಾದ ಮತ್ತು ಫಲಪ್ರದವಾದ ಕೆಲಸವನ್ನು ಮಾಡಿ ನಾಡಿನ ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ನಾನು ಅಭಿಮಾನ ಪಡುವ ನನ್ನ ವಿದ್ಯಾರ್ಥಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ”

ರಾಷ್ಟ್ರಕವಿ ಕುವೆಂಪು. 

ಇದೇ ಪುಸ್ತಕದ ರಕ್ಷಾಕವಚ ಹೊದಿಕೆಯ ಎರಡು ಒಳಬದಿಗಳಲ್ಲಿ ಇಬ್ಬರು ಅತಿರಥ-ಮಹಾರಥರ ಅನಿಸಿಕೆಗಳು ಅಚ್ಚಾಗಿವೆ. ಮೊದಲನೇ ದಿಗ್ಗಜರದ್ದು ಹೀಗಿದೆ: “ಹಲವಾರು ದೃಷ್ಟಿಯಿಂದ ಇಂದು ಕನ್ನಡಿಗರ ಮನಸ್ಸಿನಲ್ಲಿ ಅಸಿಕೊಟ್ಟಿರುವ ಹೆಸರು: ಡಾ.ಹಾ.ಮಾ.ನಾ. ಇದರಲ್ಲಿ ಸೇವಕ, ನಾಯಕ, ಲೇಖಕ, ಈ ಮೂರರ ಗುಣಗಳೂ ಸಮನ್ವಯಗೊಂಡಿವೆ. ಕನ್ನಡ ನಾಡಿನ ಸಮಸ್ಯೆಗಳನ್ನು ಅವರಂತೆ ಸಮಗ್ರವಾಗಿ ಪರಿಶೀಲಿಸಿ ಪರಿಹಾರಗಳನ್ನು ಸೂಚಿಸುವವರು ಹಾಗೂ ಆಬಗ್ಗೆ ಯೋಚಿಸುವವರು ನಮ್ಮಲ್ಲಿ ವಿರಳ.

ಸ್ವತಂತ್ರ ವಿಚಾರವಾದರೂ ಸಾಮೂಹಿಕ ಹಿತಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವ ಅವರ ಜಾಣ್ಮೆ ಅವರದೇ… ಕನ್ನಡ ಅಧ್ಯಯನ ಸಂಸ್ಥೆ, ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು; ಎಲ್ಲಿದ್ದರೂ ತಮ್ಮ ದುಡಿಮೆ ದಕ್ಷತೆ ಕಾರ್ಯಕುಶಲತೆ ಗಳಿಂದ ಆ ಸಂಸ್ಥೆಗಳ ಮಹತ್ವವನ್ನೂ ಘನತೆಯನ್ನೂ ಹೆಚ್ಚಿಸಿದ ಶ್ರೇಯಸ್ಸು ಅವರದಾಗಿದೆ. ಸ್ನೇಹ ಸೌಜನ್ಯ ಸಜ್ಜನಿಕೆಯನ್ನು ಕಾಪಾಡಿಕೊಂಡು ಇರುವುದರಿಂದಲೇ ಪ್ರಸಂಗಾನುಸಾರ ಅವರಾಡುವ ನಿಷ್ಠುರದ ನುಡಿಗಳಿಗೂ ಎಲ್ಲರು ಕಿವಿಗೊಟ್ಟು ಮೆಚ್ಚುಗೆ ವ್ಯಕ್ತಪಡಿಸುವುದುಂಟು. ಅವರೊಬ್ಬ ಅಪರೂಪದ ಲೇಖಕ ವಾಗ್ಮಿ ಹಾಗು ನಾಡಿನ ಹಿತಚಿಂತಕರು”

ಚೆನ್ನವೀರ ಕಣವಿ    

ಎರಡನೇ ದಿಗ್ಗಜರದ್ದು ಇಂತಿದೆ:”ಕನ್ನಡ ಗದ್ಯ ಸಾಹಿತ್ಯಕ್ಕೆ ತಮ್ಮ ವಿಶಿಷ್ಟ ಶೈಲಿಯ ಮೆರಗು ನೀಡಿ ಶ್ರೀಮಂತಗೊಳಿಸಿ ಕನ್ನಡಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಅಂಕಣಕಾರ ರಾಗಿಯೂ ಮಿಂಚಿದ ಹಾಮಾನಾ ಓರ್ವ ನಿಷ್ಟುರವಾದಿ ಬರಹಗಾರರು. ಮೈ.ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ (ನಿರ್ದೇಶಕರಾಗಿ) ನಿರ್ವಹಣಾ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ನೇರ ನಿಲುವಿನ ಮಂದಸ್ಮಿತ ವ್ಯಕ್ತಿಯನ್ನು ಕುಲಪತಿಯಾಗಿ ಪೂರ್ಣ ಅವಧಿ ಉಳಿಸಿಕೊಳ್ಳಲಾಗದೆ ಹೋದದ್ದು ಶೈಕ್ಷಣಿಕ ಕ್ಷೇತ್ರದ ದುರದೃಷ್ಟ”

ವಿಧಾನ ಸಭಾಧ್ಯಕ್ಷ ಎಸ್.ಎಂ.ಕೃಷ್ಣ.

ವಿನಾಕಾರಣ ಅಥವ ಕ್ಷುಲ್ಲಕಕಾರಣ ಅಥವ ವೈಯಕ್ತಿಕ ಕಾರಣಾಂತರದಿಂದ ತಮಗೆ ಒದಗಿದ್ದ ಅರ್ಹ ಮತ್ತು ಪ್ರತಿಭೆಗೆ ತಕ್ಕ ಪುರಸ್ಕಾರದ ಕುಲಪತಿ ಹುದ್ದೆಯನ್ನು ಯಾವುದೇ ಕಾರಣಕ್ಕೂ ತೊರೆಯಬಾರದಿತ್ತು. ಉನ್ನತ ಹುದ್ದೆ ತ್ಯಜಿಸಿ ಮರಳಿ ಮಾತೃಸಂಸ್ಥೆಗೆ ಹಿಂದಿರುಗಿ ಬಂದ ಇವರಿಗೆ ಕೂರಲು ಸರಿಯಾದ ಒಂದು ಸುಸಜ್ಜಿತ ಕೊಠಡಿಯನ್ನು ಕ.ಅ.ಸಂಸ್ಥೆಯಲ್ಲಿ ನೀಡಲಿಲ್ಲ. ಬಹುಶಃ ಇವರು ನಿರ್ದೇಶಕರಾಗಿದ್ದಾಗ, ದೇಜಗೌ ಕುಲಪತಿಗಳಾಗಿ, ನಂತರ ಮಾತೃಸಂಸ್ಥೆಗೆ ಹಿಂದಿರುಗಿದಾಗ ತಮ್ಮ ಗುರುಗಳಾದ ಮಾನ್ಯ ದೇ.ಜ.ಗೌ.ರಿಗೆ ಇದೇ (ಅ)ಗೌರವ ನೀಡಿದ್ದರ ಪ್ರತಿಫಲ ಇರಬಹುದು..? -ಮಾಡಿದ್ದುಣ್ಣೋ ಮಹರಾಯ…!

ಯಾವುದೇನೇ ಇರಲಿ, ತಮ್ಮ ಹನ್ನೆರಡು ಆತ್ಮಕಥನಾತ್ಮಕ ಪ್ರಬಂಧಗಳನ್ನು ತಮ್ಮದೇ ವಿಭಿನ್ನ ವಿಶಿಷ್ಟ ಭಾಷಾಶೈಲಿಯಲ್ಲಿ ಮತ್ತು ಸಾಧ್ಯವಾದಷ್ಟು ಸಾರ್ಥಕ ರೀತಿಯಲ್ಲಿ ಬರೆದು ಕೃತಾರ್ಥರಾಗಿದ್ದಾರೆ. ತಮ್ಮ ಗೌರ ವರ್ಣದ ಸುಂದರ ವದನದ ಮೇಲೆ ನಗುವನ್ನೆ ತ(ಬ)ರಿಸಿ ಕೊಳ್ಳದ ಬಿಳೀ ಬಣ್ಣದ ನೀಳ ಕೇಶದ ಮಧ್ಯೆ ಬೈತಲೆಯ (ಕುವೆಂಪು ರಂತೆ) ಜುಬ್ಬಾ ಪೈಜಾಮ ಧರಿಸಿದ ಡಾ.ಹಾ.ಮಾ. ನಾಯಕರ ಪ್ರಸ್ತುತ “ಸ್ವಂತ”

ಕೃತಿಯಲ್ಲಿ ಕಾಣುವ ಪರಿವಿಡಿ: 

*ಮೊದಲ ಮಾತು/3

*ಪ್ರಕಾಶಕರ ಮಾತು/9

  1. 1. ಬದುಕು: ನನ್ನ ದೃಷ್ಟಿಯಲ್ಲಿ/13
  2. 2. ನನ್ನ ಜೀವನ ಶಿಲ್ಪ/21
  3. 3. ಅಪ್ಪಯ್ಯ/52
  4. 4. ಅರುವತ್ತರ ಆರಲು/66
  5. ನನ್ನ ಮೊದಲನೆಯ ಪುಸ್ತಕ/72
  6. 6. ನಾನು ಮತ್ತು ಪುಸ್ತಕಗಳು/ 81
  7. 7. ನಾನು ಮತ್ತು ‘ಕನ್ನಡಪ್ರಭ’/92
  8. 8. ‘ಸಂಪ್ರತಿ’ಗೆ ಐದು ತುಂಬಿತು/99
  9. 9. ಜನದ ಪ್ರೀತಿ/108
  10. 10. ಕತ್ತೆಯಾದುದಕ್ಕೆ ವ್ಯಥೆಯಿಲ್ಲ/114
  11. 11. ನಾನೂ ಅಗವ್ಯನಾದೆ/121

12 ಪ್ರೀತಿಗಾಗಿ ಋಣಿ/127

ಕನ್ನಡಾಭಿಮಾನಿ ಓದುಗರು ಮತ್ತು ಹಾ.ಮಾ.ನಾಯಕರ ಅಭಿಮಾನಿಗಳು ಮಾತ್ರವಲ್ಲದೆ ಅವರಿಂದ ವಿದ್ಯಾದಾನ ಪಡೆದ ಪ್ರತಿಯೊಬ್ಬರು ಇ(ಕ)ಷ್ಟಪಟ್ಟು ಓದಬಹುದಾದ ಈ ಕೃತಿಯು ಬಹುಕಾಲ ನಿಲ್ಲುವಂಥದ್ದು, ಜೋಪಾನವಾಗಿ ಉಳಿಸಿಕೊಳ್ಳುವಂಥದ್ದು, ಎಂದು ಧಾರಾಳವಾಗಿ ಬರೆಯಲಿಚ್ಚಿಸುತ್ತೇನೆ.

– ಕುಮಾರಕವಿ ಬಿ.ಎನ್.ನಟರಾಜ

ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ

ಮಾನಸಗಂಗೋತ್ರಿ, ಮೈಸೂರು-6

ಗ್ರಂಥಲೋಕ ಮಾಸಪತ್ರಿಕೆ ಜೂನ್ 1992

admin
the authoradmin

Leave a Reply