CinemaLatest

‘ಕಠಾರಿ ವೀರ’ದೊಂದಿಗೆ ಚಂದನವನದಲ್ಲಿ ಮಿಂಚಿದ ಹಿರಿಯ ನಟಿ ಉದಯಚಂದ್ರಿಕಾ…

1966ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ  “ಕಠಾರಿವೀರ”ಸಿನಿಮಾ ನೋಡಿದವರಿಗೆ ಆ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಉದಯಚಂದ್ರಿಕಾ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಈ ನಟಿ ತಮಿಳು ಸಿನಿಮಾದ ಮೂಲಕ ಚಿತ್ರರಂಗ ಎಂಟ್ರಿಕೊಟ್ಟರೂ ಕನ್ನಡದಲ್ಲಿ ನಟಿಸಿದ ಸಿನಿಮಾಗಳು ಇವತ್ತಿಗೂ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ ಅವರು ಇಲ್ಲಿ ಬರೆದಿದ್ದಾರೆ.

ಉದಯಚಂದ್ರಿಕಾ… 1944ನೇ ಇಸವಿಯ ಆಸುಪಾಸಲ್ಲಿ ಅಂದಿನ ಕಾಲದ ಮೈಸೂರು-ಆಂಧ್ರಪ್ರದೇಶ ಗಡಿನಾಡು ಗ್ರಾಮ ಆದವಾನಿಯಲ್ಲಿ ವಾಸವಿದ್ದ ಮಧ್ಯಮವರ್ಗ ಕುಟುಂಬದಲ್ಲಿ ಜನಿಸಿದರು. ಸ್ವಾತಂತ್ರ್ಯಪೂರ್ವ ಬ್ರಿಟಿಷ್ ಕಾಲದ ಕಾಸರಗೋಡು ಮೂಲದ ಇವರ ತಂದೆ ಆಂಧ್ರ ಮೂಲದ ಇವರ ತಾಯಿಯನ್ನು ವಿವಾಹವಾಗಿ ನಾಲ್ಕು ಮಕ್ಕಳನ್ನು ಪಡೆದರು. ದೇವಾಲಯ ಸೇವೆಯ ಜತೆಗೆ ಶಾಲಾ ಉಪಾಧ್ಯಾಯರಾಗಿ ಜೀವನ ಸಾಗಿಸುತ್ತಿದ ಕಾಲದಲ್ಲಿ ನಿಸರ್ಗ ವಿಕೋಪಕ್ಕೆ ಬಲಿಯಾಗಿ ಗುಳೆಎದ್ದ ಹಲವು ಕುಟುಂಬಗಳಲ್ಲಿ ಇವರದ್ದೂ ಒಂದಾಗಿ ವಿಧಿಲೀಲೆ ಎಂಬಂತೆ ಒದಗಿಬಂದ ಅನಿವಾರ್ಯ ಕಾರಣದಿಂದಾಗಿ ಮದ್ರಾಸಿಗೆ ತೆರಳಿದರು.

ಉದಯಚಂದ್ರಿಕಾ ಹಿರಿಯ ಮಗಳಾದ್ದರಿಂದ ಚಿಕ್ಕಂದಿನಲ್ಲೆ ತಂದೆಯೊಡನೆ ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಜಾಣೆಯಾಗಿ ಕಲಿಕೆ-ಗಳಿಕೆ ಎರಡನ್ನೂ ಅಭ್ಯಾಸ ಮಾಡಿಕೊಂಡರು. ಸಾಹಸಬುದ್ಧಿ ಉಳ್ಳವಳಾಗಿ ಹದಿವಯಸ್ಸಲ್ಲೆ ಸ್ವಂತ ದುಡಿಮೆಯಿಂದ ಇಂಟರ್ ಮೀಡಿಯೆಟ್ ತೇರ್ಗಡೆಯಾದರು. ಹೆಚ್ಚಿನ ಶಿಕ್ಷಣಕ್ಕೆ ತಿಲಾಂಜಲಿಇತ್ತು ಪ್ರಾಥಮಿಕ ಶಾಲಾ ಶಿಕ್ಷಕಿ ಆಗಿದ್ದಾಗ ಇವರ ನಿರ್ದೇಶನದಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಅಂತರಶಾಲಾ ಸಾಂಸ್ಕೃತಿಕ ಸ್ಫರ್ಧಾ ಕಾರ್ಯಕ್ರಮದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಕಾರಣ ಇವರ ಹೆಸರು ಮುನ್ನಲೆಗೆ ಬಂತು.

ನಿರ್ಮಾಪಕ ನಿರ್ದೇಶಕ ಎ.ಎಲ್. ಶ್ರೀನಿವಾಸನ್ ಕೃಪೆಯಿಂದ ಚಿತ್ರಾ ಪ್ರೊಡಕ್ಷನ್ ನಿರ್ಮಾಪಕರ ಪರಿಚಯವಾಗಿ ಕೆ.ಎಸ್.ಗೋಪಾಲಕೃಷ್ಣನ್ ನಿರ್ದೇಶನದಲ್ಲಿ 1962ರಲ್ಲಿ ತೆರೆಕಂಡ ತಮಿಳು ಫಿಲಂ “ದೈವತ್ತಿನ್‍ದೈವಂ” ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ನಂತರ ಕೆಲವು ತೆಮಿಳು ತೆಲುಗು ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುವ ಮೂಲಕ ಜನಪ್ರಿಯ ನಟಿಯಾದರು.

ಚಲನ ಚಿತ್ರಲೋಕದಲ್ಲಿ ಮೊತ್ತಮೊದಲ ಬಾರಿಗೆ 10ಅಡಿ ಉದ್ದಗಲದ ಬೃಹತ್ ಗಾಳಿಪಟದಡಿ ಮಲಗಿಕೊಂಡು ಗಗನದಲ್ಲಿ ಸಾಗುವ ಹೀರೋ ಡಾ.ರಾಜ್‍ಕುಮಾರ್ ನಟಿಸಿ 1966ರಲ್ಲಿ ತೆರೆಕಂಡ ಅಮೋಘ ಸಿನಿಮ “ಕಠಾರಿವೀರ” ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆಗೈದ ಕೋಲುಮುಖದ ಚೆಲುವೆ ಉದಯಚಂದ್ರಿಕಾ.

ಈ ಚಿತ್ರದಲ್ಲಿ ಉದಯಕುಮಾರ್ ವಾಣಿಶ್ರೀ ಬಾಲಕೃಷ್ಣ ನರಸಿಂಹರಾಜು ಕೂಡ ನಟಿಸಿದ್ದರು. ಈಕೆಯ ಒಟ್ಟು 24 ಕನ್ನಡ ಫಿಲಂಸ್ ಪೈಕಿ 12 ಚಿತ್ರದಲ್ಲಿ ಡಾ.ರಾಜ್ ಜತೆ ಅಭಿನಯಿಸಿದ್ದು ಒಂದು ವಿಶೇಷ. 1979ರಲ್ಲಿ ನಿರ್ಮಾಪಕಿಯಾಗಿ ಚಂದ್ರಿಕಾ ಫಿಲಂಸ್ ಬ್ಯಾನರಡಿಯಲ್ಲಿ ಹೆಚ್.ಆರ್.ಭಾರ್ಗವ ನಿರ್ದೇಶನದ ವಿಷ್ಣುವರ್ಧನ್ ಪದ್ಮಪ್ರಿಯ ಮಾನು ದ್ವಾರಕೀಶ್ ತಾರಾಗಣದ “ಅಸಾಧ್ಯಅಳಿಯ” ಚಿತ್ರವನ್ನು ಬೆಳ್ಳಿತೆರೆಗೆ ಅರ್ಪಿಸಿದ ಕನ್ನಡಾಭಿಮಾನಿ.

ಸಂಗೀತಸಾರ್ವಭೌಮ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಈ ಬ್ಲಾಕ್‍ಬಸ್ಟರ್ ಚಿತ್ರವು 1981ರಲ್ಲಿ ತೆಲುಗಿನ ಸೂಪರ್‍ಸ್ಟಾರ್ ಕೃಷ್ಣ (ಖ್ಯಾತನಟ ಮಹೇಶ್‍ಬಾಬು ತಂದೆ) ನಟಿಸಿದ “ಮಾಯದಾರಿ ಅಲ್ಲುಡು” ರೀಮೇಕ್ ಚಿತ್ರವಾಗಿ ಅತ್ಯಂತ ಯಶಸ್ವಿಯಾಯ್ತು. 1985ರಲ್ಲಿ ಬಿಡುಗಡೆಗೊಂಡ ಕಲ್ಯಾಣಕುಮಾರ್ ಶಂಕರನಾಗ್ ಗಾಯತ್ರಿ ಅಭಿನಯದ ಕಿಲಾಡಿಅಳಿಯ ಈಕೆಯು ನಟಿಸಿ- ನಿರ್ಮಿಸಿದ ಕಟ್ಟಕಡೆಯ ಫಿಲಂ.

ಉದಯಚಂದ್ರಿಕಾ 1960 ರಿಂದ 1990 ವರೆಗೆ ತಮ್ಮ ಅಪ್ರತಿಮ ಪ್ರತಿಭೆಯಿಂದ ದಿಗ್ಗಜರಾದ ರಾಜ್‍ಕುಮಾರ್ ಉದಯಕುಮಾರ್ ಕಲ್ಯಾಣಕುಮಾರ್ ರಾಜೇಶ್ ಶ್ರೀನಾಥ್ ಗಂಗಾಧರ್ ರಾಮಗೋಪಾಲ್ ವಿಷ್ಣುವರ್ಧನ್ ಶಂಕರನಾಗ್ ಅನಂತನಾಗ್ ರಜನೀಕಾಂತ್ ಎಂ.ಜಿ.ಆರ್. ಶಿವಾಜಿಗಣೇಶನ್, ಮುತ್ತುರಾಮನ್, ಎಸ್ಸೆಸ್.ರಾಜೇಂದ್ರನ್, ಎನ್.ಟಿ.ರಾಮರಾವ್, ಕೃಷ್ಣ, ಎ.ನಾಗೇಶ್ವರರಾವ್, ಪ್ರೇಂನಜೀರ್, ಧರ್ಮೇಂದ್ರ, ಬಿಸ್ವಜಿತ್, ಯಶ್‍ರಾಜ್, ಮುಂತಾದವರೊಡನೆ ನಟಿಸುವ ಮೂಲಕ ತೆಲುಗು ತಮಿಳು ಮಲಯಾಳಂ ಹಿಂದಿ ಚಿತ್ರರಂಗದ ಮೇರುನಟಿಯರಲ್ಲಿ ಒಬ್ಬರೆನಿಸಿ ಇಡೀ ದೇಶದಲ್ಲಿಪ್ರಖ್ಯಾತರಾಗಿ ಒಟ್ಟಾರೆ 200ಕ್ಕು ಹೆಚ್ಚು ಸಿನಿಮಾದಲ್ಲಿ ಪಂಚಭಾಷೆ ತಾರೆಯಾಗಿ ಮಿನುಗಿದರು.

ಇವರ ಅಮೋಘ ಅಭಿನಯದ ಮಹಾನ್ ಸಿನಿಮಾಗಳು… ಮನಸ್ಸಿದ್ದರೆಮಾರ್ಗ, ಭಾಗ್ಯದೇವತೆ, ಧೂಮಕೇತು, ಮಲ್ಲಮ್ಮನಪವಾಡ, ಭೂಪತಿರಂಗ, ಚಿನ್ನಾರಿಪುಟ್ಟಣ್ಣ, ಸುವರ್ಣಭೂಮಿ, ಮಂಕುದಿಣ್ಣೆ, ಭಲೇ ಕಿಲಾಡಿ, ಹೆಣ್ಣುಹೊನ್ನುಮಣ್ಣು, ಬೇತಾಳಗುಡ್ಡ, ಸೀತೆಯಲ್ಲಸಾವಿತ್ರಿ, ನಾನೇ ಭಾಗ್ಯವತಿ, ಉತ್ತರದಕ್ಷಿಣ, ಬೆಟ್ಟದಭೈರವ, ಆಶಾಸೌಧ, ಬದುಕು ಬಂಗಾರವಾಯಿತು.

ಬಾಳುಜೇನು, ಕಾಡ್ಗಿಚ್ಚು, ಮಕ್ಕಳಭಾಗ್ಯ, ನಮ್ಮಊರದೇವರು, ಕರ್ತವ್ಯದಕರೆ, ಉಡುಗೊರೆ, ಮೃತ್ಯುಪಂಜರದಲ್ಲಿಗೂಢಚಾರಿ555, ಒರುತಾಯ್‍ಮಕ್ಕಳ್, ತಿಲ್ಲಾನಮೋಹನಂಬಾಳ್, ಪೆರಿಯವಿದಾಯ್, ಇಶ್ಕ್‍ಪರ್‍ಝೋರ್‍ನಹಿ, ಇತ್ಯಾದಿಗಳ ಪೈಕಿ ಹಲವು ಸಿನಿಮಾಗಳು ಜ್ಯುಬ್ಲಿ ಪ್ರದರ್ಶನ ಆಚರಿಸಿವೆ. ಇವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ದೊರಕಿದೆ.

ತೆಲುಗು ಟಿ.ವಿ.ಸೀರಿಯಲ್ ಬಿ.ಬಿ.ಜೋಡಿ ಎಂಬ ರಿಯಾಲಿಟಿ ಶೋ ಮೂಲಕವೂ ಖ್ಯಾತಿ ಗಳಿಸಿ ಮಿಂಚಿದ್ದರು. 1986ರಲ್ಲಿ ಬೆಳ್ಳಿತೆರೆ-ಕಿರುತೆರೆ ಎರಡೂ ಕ್ಷೇತ್ರದಿಂದ ಸ್ವಯಂ ನಿವೃತ್ತಿ ಪಡೆದು ಸಧ್ಯಕ್ಕೆ ಚೆನ್ನೈ ನಗರದಲ್ಲಿ ತಮ್ಮ ಕುಟುಂಬ ಸದಸ್ಯರೊಡನೆ ಜೀವಿಸುತ್ತಿದ್ದಾರೆ..?! ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಚಂದನವನ ಚಿತ್ರರಂಗವು ಕಂಡಂಥ ಓರ್ವ ಅಪರೂಪದ ನಟಿ, ನಿರ್ಮಾಪಕಿ ಉದಯಚಂದ್ರಿಕ. ಇವರ ನೆನಪು ನಿತ್ಯನಿರಂತರ ಮತ್ತು ಇವರ ಫಿಲಂಸ್ ಅಜರಾಮರ.

admin
the authoradmin

Leave a Reply