ArticlesLatest

ಮಕ್ಕಳು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆಯೇ? ಸೈನಿಕರ ನಾಡು ಮೌನವಾಗಿದ್ದರೆ ಮುಂದೆ ಏನು?

ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-51

ಒಂದು ಊರು ಚೆನ್ನಾಗಿದೆ ಎಂದರೆ ಅಲ್ಲಿ ದೊಡ್ಡ ಕಟ್ಟಡಗಳಿವೆ ಎಂದಲ್ಲ. ಆ ಊರಿನ ಮಕ್ಕಳು ಸುರಕ್ಷಿತವಾಗಿದ್ದಾರೆ, ಅವರ ಕಣ್ಣಿನಲ್ಲಿ ಭಯವಿಲ್ಲ, ಅವರ ನಡೆಯಲ್ಲಿ ಆತ್ಮವಿಶ್ವಾಸ ಇದೆ ಎಂದರ್ಥ. ಇವತ್ತು ನಾವು ಆ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಸಮಯ ಬಂದಿದೆ.

ನಮ್ಮ ಮಕ್ಕಳು ನಿಜವಾಗಿಯೂ ಸುರಕ್ಷಿತವಾಗಿದ್ದಾರೆಯೇ?

ಡ್ರಗ್ಸ್ ಎಂಬುದು ಈಗ ಕೇವಲ ಪೊಲೀಸ್ ಠಾಣೆಯ ಫೈಲ್ ಅಲ್ಲ. ಅದು ಹಳ್ಳಿಯ ಬೀದಿ, ಪೇಟೆಯ ಮೂಲೆಯಲ್ಲಿ, ಬಸ್ ನಿಲ್ದಾಣದ ಹಿಂದೆ, ಮೊಬೈಲ್ ನ ಸ್ಕ್ರೀನ್ ಒಳಗೆ ನುಸುಳಿಕೊಂಡಿದೆ. ಅದನ್ನು ಕೇವಲ ಕಾನೂನಿನಿಂದ ಮಾತ್ರ ತಡೆಯಲು ಸಾಧ್ಯವಿಲ್ಲ.   ಕಾನೂನು ಅಪರಾಧ ನಡೆದ ನಂತರ ಬರುತ್ತದೆ. ಸಮಾಜ ಅಪರಾಧ ನಡೆಯುವುದಕ್ಕಿಂತ ಮೊದಲು ಎಚ್ಚರಗೊಳ್ಳಬೇಕು.

ನಮಗೆ ಬೇಕಾಗಿರುವುದು ಭಯವಲ್ಲ, ಜಾಗೃತಿ. ಭಯ ಮಗುವನ್ನು ಮುಚ್ಚಿ ಹಾಕುತ್ತದೆ, ಜಾಗೃತಿ ಮಗುವನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಮಗು ತಪ್ಪು ಮಾಡಿದರೆ ಮನೆ, ಶಾಲೆ, ಊರು ಮೂರೂ ಕಡೆ ಅವನನ್ನು ದೂರ ಮಾಡುವ ಬದಲು, ಯಾಕೆ ಆ ದಾರಿಗೆ ಹೋದ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಸಮಾಜದಲ್ಲಿ ಬೆಳೆಯಬೇಕು.

ತಪ್ಪನ್ನು ತಿದ್ದುವ ಸಮಾಜ ಮಾತ್ರ ಮಗುವನ್ನು ಉಳಿಸಬಲ್ಲದು.

ಪ್ರತಿಯೊಂದು ಊರಿನಲ್ಲಿ ಜನರೇ ಸೇರಿ ಒಂದು ರಕ್ಷಣಾ ವಲಯ ಸೃಷ್ಟಿಯಾಗಬೇಕು. ಯುವಕರು, ಮಹಿಳೆಯರು, ಹಿರಿಯರು, ನಿವೃತ್ತ ಶಿಕ್ಷಕರು, ವೈದ್ಯರು, ಅಂಗಡಿ ಮಾಲೀಕರು ಎಲ್ಲರೂ ಒಂದಾಗಿ ಕುಳಿತು ಮಾತನಾಡಬೇಕು. ನಮ್ಮ ಊರಿನಲ್ಲಿ ಏನು ನಡೆಯುತ್ತಿದೆ? ಹೊಸದಾಗಿ ಯಾರು ಬಂದು ಹೋಗುತ್ತಿದ್ದಾರೆ? ಮಕ್ಕಳು ಸಂಜೆ ಎಲ್ಲಿ ಸಮಯ ಕಳೆಯುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಯಾರೋ ಒಬ್ಬರ ಕೆಲಸವಲ್ಲ, ಇಡೀ ಗ್ರಾಮದ ಕೆಲಸ.

ಮಗುವಿಗೆ ಕೇವಲ ಅಂಕ ಬೇಕು ಎಂದು ಕಲಿಸುವ ಸಮಾಜ, ಮಗುವಿಗೆ ಮೌಲ್ಯ ಬೇಕು ಎಂದು ಮರೆತಿದೆ. ಕೆಲಸ, ಹಣ, ವಿದೇಶ, ಸ್ಟೇಟಸ್ ಎಂಬ ಓಟದಲ್ಲಿ ಮಗುವಿನ ಮನಸ್ಸನ್ನು ಕೇಳುವುದನ್ನು ನಿಲ್ಲಿಸಿದ್ದೇವೆ. ಮಗು ಒಂಟಿತನ ಅನುಭವಿಸಿದಾಗ, ಅದರ ನೋವನ್ನು ಅರ್ಥ ಮಾಡಿಕೊಳ್ಳಲು ಯಾರೂ ಇಲ್ಲದಿದ್ದಾಗ, ತಪ್ಪು ದಾರಿ ತೋರಿಸುವವರು ಸ್ನೇಹಿತರ ರೂಪದಲ್ಲಿ ಬರುತ್ತಾರೆ. ಆದ್ದರಿಂದ ಮೊದಲು ಮನೆಯಲ್ಲಿ, ಊರಿನಲ್ಲಿ ಕೇಳುವ ಸಂಸ್ಕೃತಿ ಬೆಳೆಯಬೇಕು. ಮಾತನಾಡುವ ಮಗು ಎಂದಿಗೂ ದಾರಿ ತಪ್ಪುವುದಿಲ್ಲ.

ಸಮಾಜಮುಖಿ ಚಿಂತನೆ ಎಂದರೆ ಕೇವಲ ಉಪದೇಶ ಕೊಡುವುದಲ್ಲ. ಮಕ್ಕಳಿಗೆ ಪರ್ಯಾಯ ದಾರಿ ತೋರಿಸುವುದು. ಕ್ರೀಡೆ, ಕಲೆ, ಸಂಗೀತ, ಕೃಷಿ, ಸೇವಾ ಕಾರ್ಯ, ಪರಿಸರ ಸಂರಕ್ಷಣೆ. ಮಗುವಿನ ಶಕ್ತಿ ಸರಿಯಾದ ದಿಕ್ಕಿಗೆ ಹರಿದಾಗ, ತಪ್ಪು ದಾರಿಯ ಕಡೆ ಹೋಗಲು ಸಮಯವೇ ಇರುವುದಿಲ್ಲ. ಪ್ರತಿಯೊಂದು ಊರಿನಲ್ಲಿ ಒಂದು ಕ್ರೀಡಾ ಮೈದಾನ, ಒಂದು ಗ್ರಂಥಾಲಯ, ಒಂದು ಸಾಂಸ್ಕೃತಿಕ ವೇದಿಕೆ ಜೀವಂತವಾಗಿದ್ದರೆ ಅದೇ ಅತ್ಯುತ್ತಮ ಡ್ರಗ್ಸ್ ವಿರೋಧಿ ಅಭಿಯಾನ.

ಶಾಲೆ ಮತ್ತು ಕಾಲೇಜುಗಳು ಕೇವಲ ಪಾಠ ಮಾಡುವ ಜಾಗವಾಗಬಾರದು. ಅವು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಕೇಂದ್ರಗಳಾಗಬೇಕು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ನಡುವೆ ನಿರಂತರ ಸಂವಾದ ನಡೆಯಬೇಕು. ಮಗುವಿನ ವರ್ತನೆಯಲ್ಲಿ ಸಣ್ಣ ಬದಲಾವಣೆಯಾದರೂ ಅದನ್ನು ಗಮನಿಸಿ, ಪ್ರೀತಿಯಿಂದ ಮಾತನಾಡುವ ವ್ಯವಸ್ಥೆ ಶಾಲೆಗಳಲ್ಲಿ ರೂಪುಗೊಳ್ಳಬೇಕು. ಒಂದು ಸಣ್ಣ ಮಾತುಕತೆ ಒಂದು ದೊಡ್ಡ ದುರಂತವನ್ನು ತಡೆಯಬಹುದು.

ಪೋಷಕರ ಪಾತ್ರವನ್ನು ನಾವು ಕಡಿಮೆ ಅಂದಾಜು ಮಾಡಬಾರದು. ಮಗುವಿಗೆ ಅತಿ ಹೆಚ್ಚು ಹಣ, ಅತಿ ಹೆಚ್ಚು ಸ್ವಾತಂತ್ರ್ಯ ಕೊಡುವುದು ಪ್ರೀತಿ ಅಲ್ಲ. ಮಗುವಿನ ಜೊತೆ ಸಮಯ ಕಳೆಯುವುದು, ಅವನ ಕನಸನ್ನು ಕೇಳುವುದು, ಅವನ ಭಯವನ್ನು ಅರ್ಥ ಮಾಡಿಕೊಳ್ಳುವುದು ನಿಜವಾದ ಪ್ರೀತಿ. ಮನೆಯಲ್ಲಿ ಪ್ರತಿದಿನ 15 ನಿಮಿಷವಾದರೂ ಮೊಬೈಲ್ ಇಲ್ಲದೇ ಕುಳಿತು ಮಾತನಾಡುವ ಅಭ್ಯಾಸ ಆರಂಭವಾದರೆ, ಮಕ್ಕಳು ಹೊರಗೆ ಸಾಂತ್ವನ ಹುಡುಕುವ ಅಗತ್ಯವೇ ಬರುವುದಿಲ್ಲ.

ಕೊಡಗು ಎಂದರೆ ಸೈನಿಕರ ನಾಡು ಎಂದು ಹೆಸರು. ಒಂದು ಕಾಲದಲ್ಲಿ ಪ್ರತಿ ಊರಿನಿಂದ, ಪ್ರತಿ ಮನೆಯಿಂದ ಒಬ್ಬರಾದರೂ ಸೇನೆಗೆ ಹೋಗುತ್ತಿದ್ದರು. ನಮ್ಮ ಯುವಕ ಎಂದರೆ ಸದೃಢ ದೇಹ, ಖಡಕ್ ಶಿಸ್ತು, ದೇಶಭಕ್ತಿ ಎಂದು ಇಡೀ ದೇಶ ಗೌರವದಿಂದ ನೋಡುತ್ತಿತ್ತು. ಆದರೆ ಇತ್ತೀಚೆಗೆ ನಮ್ಮ ಜಿಲ್ಲೆಯಿಂದ ಸೇನೆಗೆ ಆಯ್ಕೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಒಂದು ಪ್ರಮುಖ ಕಾರಣ ಇದೇ ಇರಬಹುದು.  ಯುವ ಜನಾಂಗ 15 ದಾಟಿದ ಕೂಡಲೇ ಡ್ರಗ್ಸ್ ಚಟಕ್ಕೆ ಬಿದ್ದು ತಮ್ಮತನವನ್ನು, ತಮ್ಮ ದೇಹದ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾರೆ.

ಸೇವೆಗೆ ಸೇರಲು ಇವಾಗ ಕೇವಲ ದೇಹ ಮಾತ್ರ ಸಾಲದು, ಸದೃಢ ದೇಹದ ಜೊತೆಗೆ ವಿದ್ಯಾಭ್ಯಾಸವೂ ತುಂಬಾ ಮುಖ್ಯ. ಆದರೆ ಕೆಲವು ಮಕ್ಕಳು 15 ವಯಸ್ಸಿಗೆ ದುಶ್ಚಟಗಳಿಗೆ ಬಲಿಯಾಗಿ, ಓದಿನಿಂದ ದೂರವಾಗಿ, ದೇಹವನ್ನು ಹಾಳು ಮಾಡಿಕೊಂಡು, ಸೈನಿಕನಾಗುವ ಕನಸನ್ನೇ ಕಳೆದುಕೊಳ್ಳುತ್ತಿದ್ದಾರೆ.

ಎಲ್ಲರೂ ಹೀಗೆ ಅಲ್ಲ, ಕೆಲವರು ಮಾತ್ರ. ಆದರೆ ಆ ಕೆಲವರೇ ಇಡೀ ಸಮಾಜದ ಹೆಸರಿಗೆ ಕಳಂಕ ತರುತ್ತಿದ್ದಾರೆ. ನಮ್ಮ ಪೂರ್ವಜರು ಬಂದೂಕು ಹಿಡಿದು ದೇಶ ಕಾದವರು. ನಮ್ಮ ಮುಂದಿನ ಪೀಳಿಗೆ ಡ್ರಗ್ಸ್ ಹಿಡಿದು ತಮ್ಮನ್ನೇ ಹಾಳು ಮಾಡಿಕೊಳ್ಳುತ್ತಿದ್ದರೆ, ಅದಕ್ಕಿಂತ ದೊಡ್ಡ ನಾಚಿಕೆಗೇಡು ಇನ್ನೊಂದಿಲ್ಲ. ನಮ್ಮ ಮಗು ಎಂದರೆ ಸೇನೆಗೆ ಹೋಗಬೇಕು, ದೇಶಕ್ಕೆ ಸೇವೆ ಮಾಡಬೇಕು ಎಂಬ ಕನಸು ಕಾಣಬೇಕು. ಡ್ರಗ್ಸ್ ಗೆ ಬಲಿಯಾಗಿ ಆಸ್ಪತ್ರೆ ಸೇರಬೇಕು ಎಂಬ ಸ್ಥಿತಿ ಬರಬಾರದು. ಆದ್ದರಿಂದ ಡ್ರಗ್ಸ್ ವಿರೋಧಿ ಹೋರಾಟ ಎಂದರೆ ಕೇವಲ ಆರೋಗ್ಯದ ಹೋರಾಟ ಅಲ್ಲ, ಅದು ನಮ್ಮ ಸ್ವಾಭಿಮಾನದ ಹೋರಾಟ, ಸೈನಿಕ ಪರಂಪರೆಯನ್ನು ಉಳಿಸುವ ಹೋರಾಟ.

ಅದೇ ರೀತಿ ಡ್ರಗ್ಸ್ ಮಾರಾಟ ಮಾಡುವ ಜಾಲದ ಬಗ್ಗೆ ಸಮಾಜ ಕಣ್ಣು ಮುಚ್ಚಿ ಕೂರಬಾರದು. ನಮ್ಮ ಊರಿನಲ್ಲಿ ನಡೆಯುವ ತಪ್ಪನ್ನು ನಾವು ಹೇಳದಿದ್ದರೆ ನಾಳೆ ಅದೇ ತಪ್ಪು ನಮ್ಮ ಮನೆಗೆ ಬರುತ್ತದೆ.

ಮಾಹಿತಿ ನೀಡುವುದು ದೂರು ಅಲ್ಲ, ಅದು ರಕ್ಷಣೆ

ಒಬ್ಬರ ಧೈರ್ಯ ಹತ್ತು ಮಕ್ಕಳನ್ನು ಉಳಿಸಬಹುದು. ಪಂಚಾಯತ್, ಶಾಲಾ ಸಮಿತಿ, ಯುವ ಸಂಘಗಳು ಸೇರಿ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೆ ಮಾತ್ರ ಈ ಜಾಲವನ್ನು ಕತ್ತರಿಸಲು ಸಾಧ್ಯ.

ಮಹಿಳಾ ಶಕ್ತಿಯ ಪಾತ್ರ ಇಲ್ಲಿ ಅತ್ಯಂತ ದೊಡ್ಡದು. ಒಂದು ತಾಯಿ, ಒಬ್ಬ ಅಕ್ಕ, ಒಬ್ಬ ಶಿಕ್ಷಕಿ ಇಡೀ ಬೀದಿಯನ್ನು ಬದಲಾಯಿಸಬಲ್ಲರು. ಮಹಿಳಾ ಸಂಘಗಳು ಊರಿನಲ್ಲಿ ಜಾಗೃತಿ ಸಭೆಗಳನ್ನು ಮಾಡಿದರೆ, ಮಕ್ಕಳಿಗೆ ಸರಿಯಾದ ಮಾಹಿತಿ ನೀಡಿದರೆ, ಡ್ರಗ್ಸ್ ವಿರೋಧಿ ಹೋರಾಟಕ್ಕೆ ಒಂದು ಮಾನವೀಯ ಮುಖ ಸಿಗುತ್ತದೆ. ಇದು ಕೇವಲ ಪೊಲೀಸರ ಹೋರಾಟ ಅಲ್ಲ, ತಾಯಂದಿರ ಹೋರಾಟ ಎಂಬ ಸಂದೇಶ ಹೋದಾಗ ಮಾತ್ರ ಸಮಾಜ ಪೂರ್ತಿ ಎಚ್ಚರಗೊಳ್ಳುತ್ತದೆ.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯೂ ಇಲ್ಲಿ ಇದೆ. ಡ್ರಗ್ಸ್ ಅನ್ನು ಸ್ಟೈಲ್, ಫ್ಯಾಷನ್, ಆಧುನಿಕತೆ ಎಂದು ತೋರಿಸುವ ವಿಡಿಯೋಗಳು, ರೀಲ್ಸ್ ಗಳು ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ಅದರ ಬದಲು ನಿಜವಾದ ಸಾಹಸ, ನಿಜವಾದ ಸಾಧನೆ, ನಿಜವಾದ ನಮ್ಮ ನಾಡಿನ ಹೆಮ್ಮೆಯ ಕಥೆಗಳನ್ನು ಮಕ್ಕಳ ಮುಂದೆ ಇಡಬೇಕು. ನಮ್ಮ ಮಣ್ಣಿನಲ್ಲಿ ಹುಟ್ಟಿದ ವೀರರು, ಸಾಧಕರು, ರೈತರು, ಯೋಧರ ಕಥೆಗಳೇ ಮಕ್ಕಳಿಗೆ ದೊಡ್ಡ ಸ್ಫೂರ್ತಿ.

ಇದೇ ಸಮಯದಲ್ಲಿ ಒಂದು ಒಳ್ಳೆಯ ವಿಷಯವನ್ನು ನಾವು ಮರೆಯಬಾರದು. ಕೊಡಗಿನ ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ಧವಾಗಿ ದಿನದಿಂದ ದಿನಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಸಭೆ, ಗ್ರಾಮಗಳಲ್ಲಿ ಪಾದಯಾತ್ರೆ, ಯುವಕರೊಂದಿಗೆ ಸಂವಾದ, ಅನುಮಾನಾಸ್ಪದ ಜಾಗಗಳಲ್ಲಿ ತಪಾಸಣೆ. ಪೊಲೀಸರು ತಮ್ಮ ಕರ್ತವ್ಯಕ್ಕಿಂತ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಪೊಲೀಸರು ಮಾತ್ರ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಅವರೊಂದಿಗೆ ಕೈಜೋಡಿಸಿದರೆ ಮಾತ್ರ ಕೊಡಗು ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡಲು ಸಾಧ್ಯ. ಪೊಲೀಸರಿಗೆ ಮಾಹಿತಿ ನೀಡುವುದು, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ನಮ್ಮ ಊರಿನಲ್ಲಿ ನಡೆಯುವ ತಪ್ಪನ್ನು ಅವರ ಗಮನಕ್ಕೆ ತರುವುದು. ಇದೇ ನಿಜವಾದ ಸಹಕಾರ. ಪೊಲೀಸ್ ಮತ್ತು ಜನ ಒಂದಾದಾಗ ಯಾವ ಡ್ರಗ್ಸ್ ದಂಧೆಕೋರನೂ ನಮ್ಮ ನಾಡಿನಲ್ಲಿ ನಿಲ್ಲಲು ಸಾಧ್ಯವಿಲ್ಲ.

ಪೊಲೀಸ್ + ಜನ = ಡ್ರಗ್ಸ್ ಮುಕ್ತ ಕೊಡಗು. ಇದೇ ನಮ್ಮ ಘೋಷಣೆಯಾಗಲಿ.

ಈ ಬರಹ ಕೊಡಗಿನಿಂದ ಆರಂಭವಾದರೂ, ಈ ಸಮಸ್ಯೆ ಕೊಡಗಿಗೆ ಮಾತ್ರ ಸೀಮಿತವಲ್ಲ. ಇದು ಇಡೀ ಕರ್ನಾಟಕದ ಸಮಸ್ಯೆ. ಬೆಂಗಳೂರಿನಿಂದ ಬೀದರ್ ವರೆಗೆ, ಮೈಸೂರಿನಿಂದ ಮಂಗಳೂರಿನವರೆಗೆ, ಉತ್ತರ ಕರ್ನಾಟಕದಿಂದ ಕರಾವಳಿಯವರೆಗೆ ಎಲ್ಲೆಡೆ ಇದೇ ಪರಿಸ್ಥಿತಿ ಇದೆ. ನಗರದಲ್ಲಿ ಬೇರೆ ರೂಪದಲ್ಲಿ, ಹಳ್ಳಿಯಲ್ಲಿ ಬೇರೆ ರೂಪದಲ್ಲಿ ಡ್ರಗ್ಸ್ ನಮ್ಮ ಮಕ್ಕಳನ್ನು ಸುತ್ತುವರಿದಿದೆ. ಆದ್ದರಿಂದ ಇದು ಒಂದು ಜಿಲ್ಲೆಯ ಹೋರಾಟ ಅಲ್ಲ, ಇದು ಇಡೀ ಕರ್ನಾಟಕದ ಹೋರಾಟ. ಕೊಡಗು ಎಚ್ಚರಗೊಂಡರೆ ಕರ್ನಾಟಕ ಎಚ್ಚರಗೊಳ್ಳುತ್ತದೆ. ಕರ್ನಾಟಕ ಎಚ್ಚರಗೊಂಡರೆ ನಮ್ಮ ಮಕ್ಕಳ ಭವಿಷ್ಯ ಉಳಿಯುತ್ತದೆ.

ಕೊಡಗು ಯಾವಾಗಲೂ ಜನರಿಂದ ನಿಂತ ಜಿಲ್ಲೆ. ಕಷ್ಟ ಬಂದಾಗ ಊರೇ ಒಟ್ಟಾಗಿ ನಿಂತ ಇತಿಹಾಸ ನಮ್ಮದು. ಪ್ರವಾಹ ಬಂದಾಗ, ಬೆಂಕಿ ಬಿದ್ದಾಗ ನಾವು ಜಾತಿ, ಪಕ್ಷ ನೋಡಲಿಲ್ಲ. ಈಗ ಮಕ್ಕಳ ಭವಿಷ್ಯದ ಪ್ರಶ್ನೆ ಬಂದಾಗಲೂ ಅದೇ ಒಗ್ಗಟ್ಟು ತೋರಿಸೋಣ. ಇದು ಒಂದು ಪಕ್ಷದ ಕೆಲಸವಲ್ಲ, ಒಂದು ಸಮುದಾಯದ ಕೆಲಸವಲ್ಲ. ಇದು ಜನರಿಂದ ಜನರಿಗಾಗಿ ಜನರಿಗೋಸ್ಕರ ಮಾಡಬೇಕಾದ ಕೆಲಸ.

ನಾಳಿನ ಕೊಡಗು ಹೇಗಿರಬೇಕು ಎಂಬುದನ್ನು ಇಂದಿನ ನಮ್ಮ ನಡವಳಿಕೆ ನಿರ್ಧರಿಸುತ್ತದೆ. ಮಕ್ಕಳನ್ನು ಉಳಿಸಿದರೆ ಊರು ಉಳಿಯುತ್ತದೆ. ಊರು ಉಳಿದರೆ ಕೊಡಗು ಉಳಿಯುತ್ತದೆ. ಆದ್ದರಿಂದ ಸುಮ್ಮನೆ ಕೂರಬೇಡಿ. ನಿಮ್ಮ ಊರಿನಲ್ಲಿ, ನಿಮ್ಮ ಬೀದಿಯಲ್ಲಿ, ನಿಮ್ಮ ಮನೆಯಲ್ಲಿ ಈ ಚರ್ಚೆಯನ್ನು ಆರಂಭಿಸಿ.

ಜಾಗೃತ ಸಮಾಜವೇ ಅತ್ಯಂತ ದೊಡ್ಡ ಪೊಲೀಸ್ ವ್ಯವಸ್ಥೆ.

ಬನ್ನಿ, ಒಟ್ಟಾಗಿ ನಿಲ್ಲೋಣ. ಮಕ್ಕಳಿಗಾಗಿ, ಊರಿಗಾಗಿ, ಕೊಡಗಿಗಾಗಿ. ಇವತ್ತು ನಾವು ತೆಗೆದುಕೊಳ್ಳುವ ಒಂದು ಸಣ್ಣ ಹೆಜ್ಜೆ ನಾಳೆ ನೂರಾರು ಮಕ್ಕಳ ಜೀವನವನ್ನು ಉಳಿಸಬಹುದು. ನಮ್ಮ ಮೌನವೇ ಡ್ರಗ್ಸ್ ಗೆ ದೊಡ್ಡ ಶಕ್ತಿ, ನಮ್ಮ ಮಾತೇ ಡ್ರಗ್ಸ್ ಗೆ ದೊಡ್ಡ ಭಯ. ಆದ್ದರಿಂದ ಮಾತನಾಡೋಣ, ಜಾಗೃತಿ ಮೂಡಿಸೋಣ, ಒಟ್ಟಾಗಿ ಹೋರಾಡೋಣ. ಜನರಿಂದ ಜನರಿಗಾಗಿ ಜನಜಾಗೃತಿಗಾಗಿ

ಕಾಯಪಂಡ ವಿಷ್ಣುನಾಚಪ್ಪ ಅವರು ಜನಮನಕನ್ನಡಕ್ಕಾಗಿ ಬರೆದ ಸಾಮಾಜಿಕ ಕಳಕಳಿಯ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ

 

admin
the authoradmin

Leave a Reply