ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಗಾವಡಗೆರೆ ರೈತ ಸೇವಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 68.21 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎನ್ ಆನಂದ್ ತಿಳಿಸಿದರು.
ಹುಣಸೂರು ತಾಲೂಕಿನ ಗಾವಡಗೆರೆ ಬಾಲಾಜಿ ಕಲ್ಯಾಣ ಮಂಟಪದಲ್ಲಿ 2025- 26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ ಸಭೆಯಲ್ಲಿ ಮಾತನಾಡಿ, ಸಂಘವು 4456 ಸದಸ್ಯರನ್ನು ಹೊಂದಿದ್ದು ಸದಸ್ಯರಿಂದ 20.53 ಕೋಟಿ ಠೇವಣಿ ಸಂಗ್ರಹಿಸಿದ್ದು ರೈತರಿಗೆ 37.28 ಕೋಟಿ ಕೆಸಿಸಿ ಸಾಲ ವಿತರಿಸಲಾಗಿದೆ. ಇದರಲ್ಲಿ ಕೆ ಆರ್ ನಗರ ಎಸ್ ಬಿ ಐ ಶಾಖೆಯು 13 ಕೋಟಿ ಕೆ ಸಿ ಸಿ ಸಾಲಕ್ಕೆ ಆರ್ಥಿಕ ನೆರವು ನೀಡಿದೆ. ಒಟ್ಟು ಸಂಘವು 371.26 ಕೋಟಿ ವಹಿವಾಟು ನಡೆಸಿದೆ ಎಂದರು.

ಸಂಘದ ಅಧ್ಯಕ್ಷ ಸಣ್ಣೇಗೌಡ ಮಾತನಾಡಿ ಈ ಬಾರಿ ಸಂಘ 68.1 ಲಕ್ಷ ಲಾಭ ಗಳಿಸುವುದರ ಜೊತೆಗೆ ಸಂಘವು ಸುವರ್ಣ ವರ್ಷ ಆಚರಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ನಿಧಿ ಮರಣ ನಿಧಿ ಹಾಗೂ ಇನ್ನಿತರ ರೈತರ ನಿಧಿಗಳಿಗೆ ಶೇ.12ರಷ್ಟು ಡಿವಿಡೆಡ್ ಫಂಡ್ ಅನ್ನು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಂಘದ ಏಳಿಗೆಗೆ ದುಡಿದ ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಜೊತೆಗೆ ಸಂಘದ ನಿವೃತ್ತ ನೌಕರರ ಸೇವೆಯನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ತಾರಕೇಶ್ವರಿ, ಹೊನ್ನಪ್ಪ ರಾವ್ ಕಾಳಿಗೆ, ಶ್ರೀಕಂಠ, ರುಕ್ಮಾಂಗದ, ಜಾಬಗೆರೆ ತಿಮ್ಮನಾಯಕ, ಬಿಳಿಗೆರೆ ಮಹಾದೇವ್, ತೊಂಡಾಳು ಮಹದೇವೇಗೌಡ, ಬಿಳಿಗೆರೆ ಮಂಜುನಾಥ್, ಮಾರಗೌಡನಹಳ್ಳಿ ಶೋಭಾ, ಜಾಬಗೆರೆ ಶ್ವೇತ, ಕೆ ಆರ್ ನಗರ ಎಸ್ ಬಿ ಐ ಶಾಖೆಯ ವ್ಯವಸ್ಥಾಪಕ ತೇಜಸ್ವಿ, ಸೇರಿದಂತೆ ಸಂಘದ ಸಿಬ್ಬಂದಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.








