LatestMysore

ಸಾಮಾಜಿಕ ಬದಲಾವಣೆಗೆ ವಿದ್ಯಾರ್ಥಿಗಳ ಸಂಕಲ್ಪ… ಮೂರು ದಿನಗಳ  ಸ್ಕಾಫ್ ಸಮಾವೇಶ ಯಶಸ್ವಿ

ಹುಣಸೂರು(ನಂಜಾಪುರ ಮನುಕುಮಾರ್): ಮಾದಕ ವ್ಯಸನ ತಡೆ, ಬಾಲ್ಯವಿವಾಹ ನಿಷೇಧ, ಕಸ ನಿರ್ವಹಣೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಮೂರು ದಿನಗಳ ಸಾಮಾಜಿಕ ಬದಲಾವಣೆಯ ಪ್ರತಿನಿಧಿಗಳ ವೇದಿಕೆ (ಸ್ಕಾಫ್) ಸಮಾವೇಶ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ನಗರದ ಸಂತ ಜೋಸೆಫ್ ರ ಕಾಲೇಜು   ಆವರಣದಲ್ಲಿ  ಸಂತ ಜೋಸೆಫ್  ಶಿಕ್ಷಣ ಸಂಸ್ಥೆ ಹಾಗೂ   ಮಂಗಳೂರಿನ ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆ   ವತಿಯಿಂದ ಅಕ್ಟೋಬರ್ 9ರಿಂದ 11ರವರೆಗೆ  ಆಯೋಜಿಸಿದ್ದ ಸಮಾವೇಶದಲ್ಲಿ ದಕ್ಷಿಣ ಭಾರತದ ಮೂರು ರಾಜ್ಯಗಳ 29 ಶಾಲೆಗಳ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾವೇಶದ ಅಂಗವಾಗಿ ಹುಣಸೂರು ಪಟ್ಟಣದಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು. ಬದಲಾವಣೆಗೆ ಚಾಲನೆ ನೀಡಿ, ಭವಿಷ್ಯವನ್ನು ನಿರ್ಮಿಸಿ” ಎಂಬುದು ಸಮಾವೇಶದ ಧ್ಯೇಯವಾಕ್ಯವಾಗಿತ್ತು. ಮಾದಕ ವ್ಯಸನ ತಡೆ, ಬಾಲ್ಯವಿವಾಹ ನಿಷೇಧ ಹಾಗೂ ಕಸ ನಿರ್ವಹಣೆ ಕುರಿತು ಮೂಕಾಭಿನಯ ಮತ್ತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಅಕ್ಟೋಬರ್ 9ರಂದು ಸಮಾವೇಶವನ್ನು ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಫ್ರಾನ್ಸಿಸ್ ಸೆರಾವ್ ಉದ್ಘಾಟಿಸಿದರು. ಸಮಾನತೆ, ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಉತ್ತಮ ಸಮಾಜ ನಿರ್ಮಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹುಣಸೂರು ನಗರಸಭೆ ಆಯುಕ್ತೆ ಮಾನಸಾ, ತಹಸೀಲ್ದಾರ್ ಮಂಜುನಾಥ್ ಹಾಗೂ  ಅಧ್ಯಕ್ಷೆ ವಂದನೀಯ ಭಗಿನಿ ಮಿಲ್ಲಿ ಫೆರ್ನಾಂಡಿಸ್ ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ, ಜವಾಬ್ದಾರಿಯುತ ನಾಯಕರಾಗಿ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಪ್ರೇರೇಪಿಸಿದರು.

ಅಕ್ಟೋಬರ್ 10ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಸಮಾವೇಶದ ಧ್ಯೇಯವಾಕ್ಯದ ಲಾಂಛನ ಅನಾವರಣಗೊಳಿಸಿದರು. ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಭಗಿನಿ ಮಿಲ್ಲಿ ಫೆರ್ನಾಂಡಿಸ್ ಅವರು ಸಾಮಾಜಿಕ ಬದಲಾವಣೆ ಮತ್ತು ವೃತ್ತಿ ಮಾರ್ಗದರ್ಶನ ಕುರಿತ ಪುಸ್ತಕ ಬಿಡುಗಡೆ ಮಾಡಿದರು.

ಅಜೀಂ ಪ್ರೇಮ್ಜಿ ಫೌಂಡೇಶನ್‌ನ ಜಯಮ್ಮ, ಮಕ್ಕಳ ರಕ್ಷಣೆ ಯೋಜನೆಯ ವ್ಯವಸ್ಥಾಪಕ ಹರೀಶ್ ಜೋಗಿ,  ಯು.ಎಸ್.ಎ  ಪೈರ್ ಟ್ರೇಡ್  ಸಂಸ್ಥೆಯ ಏಷ್ಯಾ ಮತ್ತು ಆಫ್ರಿಕಾ ಸಲಹೆಗಾರ್ತಿ ಎಲ್. ಸೋನಿಯಾ ಡೊಮಿನಿಕಾ ಹಾಗೂ ಸಾಹಸ ಟ್ರಸ್ಟ್‌ನ ಸಂಸ್ಥಾಪಕಿ ಆಸ್ವತಿ ಅಗರ್‌ವಾಲ್ ತಮ್ಮ ಅನುಭವಗಳನ್ನು ಹಂಚಿಕೊಂಡು, ಶಿಕ್ಷಣ, ದೃಢಸಂಕಲ್ಪ, ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ತಿಳಿಸಿದರು.

ಸಮಾವೇಶದಲ್ಲಿ ಜಲಸಂರಕ್ಷಣೆ, ಮಾದಕವಸ್ತು ವ್ಯಸನ ತಡೆ, ಸಾಮಾಜಿಕ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಾತೃ ನಿಂಫಾ ಅವರ ಜೀವನ ಮತ್ತು ನಾಯಕತ್ವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಕ್ಟೋಬರ್ 11ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಮಾವೇಶದಲ್ಲಿ ಕಲಿತ ಪಾಠಗಳನ್ನು ತಮ್ಮ ಶಾಲೆ ಹಾಗೂ ಸಮುದಾಯಗಳಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಕರೆ ನೀಡಲಾಯಿತು.

ಹದಿಹರೆಯದವರ ಸಬಲೀಕರಣಕ್ಕಾಗಿ ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆ  ಕೈಗೊಂಡ ಈ ಸಮಾವೇಶವು ಯುವಜನರಲ್ಲಿ ನಾಯಕತ್ವ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರೊಂದಿಗೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರೇರಣೆ ನೀಡಿತು.

admin
the authoradmin

Leave a Reply