ArticlesLatest

ಕನ್ನಡ ಭಾಷೆಯ ಉಗಮ – ವಿಕಾಸ ಹೇಗಾಯಿತು ಗೊತ್ತಾ? ಒಮ್ಮೆ ಓದಿ ಬಿಡಿ…

ಕನ್ನಡ ಭಾಷೆಯ ಉಗಮ ಮತ್ತು ಅದರ ವಿಕಾಸ ಹೇಗಾಯಿತು ಎಂಬುದರ ಬಗ್ಗೆ ಒಂದು ಸುಧೀರ್ಘ ಪ್ರಬಂಧ ಬರೆಯಲಾಗಿದ್ದು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇದರ ಸಂಕ್ಷಿಪ್ತ ಪರಿಚಯವನ್ನು ನಮ್ಮ ಮುಂದಿಟ್ಟಿದ್ದಾರೆ  ಆ ಕೋಲ್‍ಮಿಂಚು ಇದಾಗಿದೆ…..

ಕ್ರಿ.ಪೂ.204ರಷ್ಟು ಪ್ರಾಚೀನ ಕಾಲದಲ್ಲಿ ಅಲೆಕ್ಸಾಂಡ್ರಿಯ ಮತ್ತು ಕರ್ನಾಟಕ ನಡುವೆ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಪ್ರತಿವರ್ಷ ನೂರಾರು ಹಡಗು ವ್ಯಾಪಾರ ವಹಿವಾಟು ನಡೆಸಲು ಕರ್ನಾಟಕದ ಕರಾವಳಿಗೆ ಬರುತ್ತಿದ್ದವು. ಪಶ್ಚಿಮಘಟ್ಟದ ದೊರೆಯು ಮಂಗಳೂರಿಂದ ಈಜಿಪ್ಟ್ ಮತ್ತಿತರ ದೇಶಕ್ಕೆ ಸಾಂಬಾರ ಪದಾರ್ಥ, ಆಯುರ್ವೇದ ಗಿಡಮೂಲಿಕೆ ಪದಾರ್ಥ ರಫ್ತು ಮಾಡುತ್ತಿದ್ದ ಬಗ್ಗೆ ಮತ್ತು ರೋಮನ್ ಚಕ್ರವರ್ತಿ ಆಗಸ್ಟಸ್ ಜತೆ ಗ್ರೀಕ್ ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಗ್ರೀಕ್ ಚರಿತ್ರೆಕಾರ ಸ್ಟ್ರೇಬೋ ಸ್ಪಷ್ಟಪಡಿಸಿದ್ದಾನೆ.

ಗ್ರೀಸ್ ದೇಶದಲ್ಲಿ ಕನ್ನಡಿಗರು ವಾಸಿಸುತ್ತಿದರು, ಕನ್ನಡ ಭಾಷೆ ರೂಢಿಯಲ್ಲಿತ್ತು, ಗ್ರೀಕ್ ನಾಟಕಗಳಲ್ಲಿ ಕನ್ನಡ[ತುಳು] ಪದ ಉಪಯೋಗದಲ್ಲಿತ್ತು, ಎಂಬುದು ರುಜುವಾತಾಗಿದೆ. ಉದಾಹರಣೆಗೆ.. ಮಲ್ಪಿ[ಮಲ್ಪೆ], ಮೀನಾಯಿ[ಮೀಯು], ಪಕ್ತೆಆಡಿ[ಪಗಡೆ ಆಡು], ಪೆನ್‍ಎಣಿಸ್[ಚಿನ್ನದ ನಾಣ್ಯ ಎಣಿಸು], ಪಾನೆ[ಪಾನ], ಹಬ್ಬೆ[ಹಬ್ಬ], ಹುಯ್ಯಿ[ಹಾಕು], ಗರಬಿತ್ತು [ಗರ ಬಡೀತು], ಒಸೆತೋರು[ಪ್ರೀತಿ ತೋರಿಸು], ಅಬ್ಬಾ! ಆಹಾ! ಅಯ್ಯಪ್ಪಾ! ಅಯ್ಯಮ್ಮ! ಹುಯ್ಯೋ! ನಲ್ಲೇ! ಲಲ್ಲೇ! ಎತ್ತು! ಒರಗಿಸು! ಯಾಕೆ? ಮತ್ತು ಹೆಣ್ಣನ್ನು ‘ಲೇ..’ ಎಂದೂ ಗಂಡನ್ನು ‘ಲೋ…’ ಎಂದೂ ಬಿಂಬಿಸುತ್ತಾರೆ, ಇವೆಲ್ಲವೂ ತುಳು- ಕನ್ನಡ ಭಾಷೆಯ ಮೂಲ.

ಆಫ್ರಿಕಾದ ಎಲ್ಲ ಪ್ರದೇಶದ ಭಾಷೆಗಳಲ್ಲೂ ಮತ್ತು ಈಗಿನ ವೆಸ್ಟ್ ಇಂಡೀಸ್ ಭಾಷೆಯಲ್ಲೂ ಕನ್ನಡದ ಅಥವಾ ತತ್ಸಮಾನದ ನೂರಾರು ಪದಗಳಿವೆ. ಏಷ್ಯಾದ ಮಯನ್ಮಾರ್ ಶ್ರೀಲಂಕಾ ಇಂಡೋನೇಷ್ಯ ಕೊಲಂಬಿಯ ಕಾಂಬೋಡಿಯ ಪ್ರದೇಶಗಳಲ್ಲಿ ಕನ್ನಡ ಅಥವಾ ತತ್ಸಮಾನ ಭಾಷೆ ಚಾಲ್ತಿಯಲ್ಲಿದೆ. ಪ್ರಪಂಚದ ನೂರಾರು ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಕನ್ನಡ ಅಥವಾ ತತ್ಸಮಾನ ಭಾಷೆ ಅಸ್ತಿತ್ವದಲ್ಲಿದೆ.ಐತಿಹ್ಯ ಹೀಗೂ ಇರಬಹುದು.

ಅನಾದಿಕಾಲದಲ್ಲಿ ಕಡಲುದ್ಯೋಗಿ ಕಡಲ್ಗಳ್ಳರು ಪ್ರವಾಸಿನಾವಿಕರು ಅಪಘಾತಕೀಡಾಗಿ ಅಥವ ಅನಿಶ್ಚಿತ ಸಂದರ್ಭದಿಂದಾಗಿ ಈ ಪ್ರ-ದೇಶಗಳಿಗೆ ದೂಡಲ್ಪಟ್ಟು ಅಲ್ಲಿಯೆ ಉಳಿದು ವಾಸಿಸುವ ಅನಿವಾರ್ಯತೆ ಸೃಷ್ಟಿ ಆಗಿರಬಹುದು. ನೂರಾರು ವರ್ಷಗಳ ನಂತರ ಇದೇ ವಂಶಜರು ವಿದೇಶಿಗರಾಗಿ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿರಲೂ ಬಹುದು?!

ಹಳಗನ್ನಡ ನಡುಗನ್ನಡ ನವ್ಯ ಕನ್ನಡ ನವೋದಯ ಕನ್ನಡ ಎಂದೆಲ್ಲ (ವಿತಂಡ)ವಾದ ಮಾಡುವಷ್ಟರ ಮಟ್ಟಿಗೆ ಜನಜನಿತವಾಗಿ ಜನಪ್ರಿಯವಾಗಿ ರಕ್ತಗತವಾದ ಅಥವ ಕಳಸ್ಯಗಂಟಸ್ಯವಾಗಿ ಬೇರೂರಿದ ಸಾವಿರಾರು ಪದಗಳು ಕನ್ನಡ ಭಾಷೆಯಲ್ಲಿದೆ! ಕೆಲವು ಕನ್ನಡ ಪದಗಳು ಮೂಲತಃ ಸಂಸ್ಕೃತ ಉರ್ದು ಅರೇಬಿಕ್ ಇಂಗ್ಲಿಷ್ ಮುಂತಾದ ಭಾಷೆಗಳಿಂದ ಬಂದಿರಬಹುದು ಎಂಬ ನಂಬಿಕೆ ವಿಶ್ವಾಸ ಇದೆ.

ಆದರೆ ಇವು ಯಾವಾಗ ಯಾರಿಂದ ಹೇಗೆ ಏಕೆ ಎಲ್ಲಿಂದ ಹೆಕ್ಕಿತು ಹೊಕ್ಕಿತು, ಎಂಬುದನ್ನು ರುಜುವಾತು ಪಡಿಸುವುದೇ ಸಮಸ್ಯೆ? ಆದರೆ ಆಯಾಯ ಭಾಷೆಗೆ ಪಲಾಯನ ಮಾಡಿದ್ದು ಆದಿಕನ್ನಡ ಭಾಷೆಯಿಂದ ಎಂಬುದು ನಿಗೂಢಸತ್ಯ! ಪ್ರಪಂಚದ ವಿವಿಧ ಭಾಷೆಗಳು ಆದಿ ಕಾಲದಲ್ಲೇ ಬಳಕೆಯಲ್ಲಿವೆ. ಆದರೆ ಮೊಟ್ಟಮೊದಲು ಯಾವಭಾಷೆ ಎಲ್ಲಿ ಯಾರಿಂದ ಹೇಗೆ ಜನಿಸಿತು? ಎಂಬಎಲ್ಲ ಪ್ರಶ್ನೆಗಳಿಗೆ ಸರಿಯುತ್ತರ ಕಂಡುಕೊಳ್ಳಲು ಯಾವುದೇ ಭಾಷಾ (ವಿ)ಜ್ಞಾನಿಗೆ ಈವರೆಗೂ ಸಾಧ್ಯವಾಗಿಲ್ಲ.

ಕನ್ನಡ ಭಾಷೆಯ ಉಗಮದ ಬಗ್ಗೆ ನಡೆದಿರುವಷ್ಟು ಚರ್ಚೆ ಗೋಷ್ಠಿ ವಾದ ಶೋಧನೆ ಸಂಶೋಧನೆ ಬೇರೆ ಯಾವುದೇ ಭಾಷೆಯ ಬಗ್ಗೆ ನಡೆದಿಲ್ಲ. ಈ ಜಟಿಲ ಸಮಸ್ಯೆ ಬಗ್ಗೆ ಇವತ್ತಿಗೂ ಭಾಷಾ ವಿದ್ವಾಂಸರು ವೇದಾಂತಿಗಳು ಸಿದ್ಧಾಂತರು ಶಿಖಾಮಣಿಗಳು ಪರಿಹಾರ ಹುಡುಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಪ್ರಾಚೀನ ಕಾಲದಲ್ಲಿ ತಮ್ಮ ಅನುಭವ- ಅಭಿಪ್ರಾಯ- ಭಾವನೆಗಳನ್ನು ಸಾಂಕೇತಿಕ ವಸ್ತುಗಳ ಮುಖೇನ ಅಥವ ಬಾಯಿಂದ ಶಬ್ಧ ಹೊರಡಿಸುವ ಮೂಲಕ ಅಥವಾ ಮೂಕಾಭಿನಯ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಅಭಿವ್ಯಕ್ತ ಪಡಿಸಲಾಗುತ್ತಿತ್ತು.

ಕಾಲಕ್ರಮೇಣ ಸ್ವರ-ವ್ಯಂಜನಗಳ ಮೂಲಕ ಭಾಷೆಯು ರೂಪ ತಾಳಿತು. ವ್ಯಾಕರಣ ಹುಟ್ಟಿತು, ಲಿಪಿ-ಸಾಹಿತ್ಯ ಅಸ್ತಿತ್ವಕ್ಕೆ ಬಂತು. ಕನ್ನಡ ನಾಡು ಮತ್ತು ಕನ್ನಡ ಭಾಷೆ ರಾಮಾಯಣ ಮಹಾಭಾರತ ಕಾಲದಲ್ಲೇ ಇತ್ತು. ಇದಕ್ಕೆ ಸಾಕಷ್ಟು ಪುರಾವೆ ಇದೆ. ಭಾರತದ ಅತಿಪುರಾತನ ಪ್ರದೇಶಗಳಲ್ಲಿ ಕನ್ನಡನಾಡು ಪ್ರಸಿದ್ಧಿ ಪಡೆದಿತ್ತು. ಸೀತೆ ಅನ್ವೇಷಣೆಯಲ್ಲಿ ರಘುರಾಮ ದಂಡಕಾರಣ್ಯ ಪ್ರವೇಶಮಾಡಿದ ಅಂದಿನ ಮತಂಗ ಮುನಿ ಇದ್ದ ‘ಮಾತಂಗವನ’ ಇಂದಿನ ಹಂಪೆಯ ಮಾತಂಗಬೆಟ್ಟ, ಆಗಿನ ಕಿಷ್ಕಿಂದ ನಗರವೇ ಈಗಿನ ಹಾಳುಹಂಪೆ.

ಮಹಾಭಾರತ ಕಾಲದಲ್ಲಿ ಅನೇಕ ಹೊಸ ನಗರಗಳು ನಿರ್ಮಾಣ ಗೊಂಡವು ಅವುಗಳಲ್ಲಿ ಹಲವು ಕರ್ನಾಟಕ ರಾಜ್ಯದಲ್ಲೂ ಇವೆ. ಪಾಂಡವರು ಅಜ್ಞಾತವಾಸ ಮಾಡಿದ ವಿರಾಟ್‍ನಗರ ಇಂದಿನ ಹಾನಗಲ್‍ಪಟ್ಟಣ. “ಕರ್ನಾಟಭಾರತ/ಕರ್ನಾಟಕ” ಹೆಸರನ್ನು ‘ಭೀಷ್ಮ ಪರ್ವ’ದಲ್ಲಿ ಉಲ್ಲೇಖಿಸಲಾಗಿದೆ. ಆರ್ಯರು ಭಾರತಕ್ಕೆ ಬರುವ ಮುನ್ನ ಇಲ್ಲಿ ವಾಸವಿದ್ದ ದ್ರಾವಿಡರಲ್ಲಿ ಅಗ್ರಗಣ್ಯರು ಕನ್ನಡಿಗರು. ಕನ್ನಡ ಭಾಷೆಯು ತಮಿಳು ಭಾಷೆಗಿಂತಲೂ ಪ್ರಾಚೀನ ಭಾಷೆ. ಕ್ರಿ.ಶ.420ರಲ್ಲಿ ದೊರೆತ ಹಲ್ಮಿಡೀ ಶಾಸನಕ್ಕು ಹಳೆಯದಾದ ದಾಖಲೆ ‘ಕನ್ನಡ ಜಾನಪದ’ ಸಾಹಿತ್ಯ. ತತ್ಸಂಬಂಧದ ಪುರಾತನ ಶಾಸನಕ್ಕಾಗಿ ಇವತ್ತಿಗೂ ದಕ್ಷಿಣ ಭಾರತದಲ್ಲಿ ಉತ್ಖನನ ಕಾರ್ಯ ಸಾಗುತ್ತಲೇ ಇದೆ.

ಆದರೆ ‘ಶಿಲಪ್ಪದಿಗಾರಂ’ ತಮಿಳು ಸಾಹಿತ್ಯದ ಪ್ರಕಾರ ಕನ್ನಡ ಮತ್ತು ತಮಿಳ್ ಒಂದೇ ಕಾಲದಲ್ಲಿ ಅಸ್ತಿತ್ವದಲ್ಲಿದ್ದವು. ಪ್ರಸ್ತುತ ದಾಖಲೆ ಪ್ರಕಾರ ಕನ್ನಡ-ತಮಿಳು ಸಮಕಾಲೀನ ಭಾಷೆಗಳು! ಮಹಾಬಲಿ ಪುರಂ ಮತ್ತು ಹಲ್ಮಿಡೀ ಶಾಸನ ದಾಖಲೆಗಳ ಜತೆಗೆ ‘ಶಿಲಪ್ಪದಿಗಾರಂ’ ಗ್ರಂಥದಲ್ಲೂ ಹಲವಾರು ‘ಕರುನಾಟರ್’ ‘ಕಂನಡಂ’ ಪದಗಳು ಕಾಣಸಿಗುತ್ತವೆ. ತಮಿಳಿನ ಹಲವು ಪುರಾತನ ಗ್ರಂಥದಲ್ಲಿ ‘ಮೇಲ್ ನಾಟ್ಟವರ್’ [ಕರುನಾಡು] ಮತ್ತು ‘ಕೀಳ್ ನಾಟ್ಟವರ್’ [ಕೊಂಗನಾಡು]ಉಲ್ಲೇಖವಿದೆ.

ಇದರ ಸಾರಾಂಶ: ಸಮುದ್ರ ಮಟ್ಟದಿಂದ ಎತ್ತರಕ್ಕೆ ಇರುವ ಪ್ರದೇಶಕ್ಕೆ ‘ಮೇಲ್‍ನಾಟ್’ ಎಂದೂ ಸಮುದ್ರ ಮಟ್ಟಕ್ಕೆ ಇರುವ, ಘಟ್ಟದಿಂದ ಕೆಳಗೆರುವ ಪ್ರದೇಶಕ್ಕೆ ‘ಕೀಳ್‍ನಾಟ್’ ಎಂಬುದೂ ಅನ್ವರ್ಥವಾಗಿದೆ. ಭಾಷಾ[0ಧ] ಅಭಿಮಾನಿಗಳು [ತಪ್ಪು]ತಿಳಿದಿರುವಂತೆ ‘ಮೇಲು-ಕೀಳು’ ಎಂಬ ಸಂಕುಚಿತ ಅ[ನ]ರ್ಥದಿಂದ ನೋಡುವ ಪ್ರಮೇಯವಿಲ್ಲ. ಕನ್ನಡ-ತಮಿಳು ಸೋದರ ಭಾಷೆಗಳಲ್ಲಿ ಯಾವುದು ಜೇಷ್ಟ ಎಂಬುದು ಇವತ್ತಿಗೂ ಜಟಿಲ ಪ್ರಶ್ನೆಯಾಗೇ ಉಳಿದಿದೆ?!

ಕನ್ನಡ ಭಾಷೆಯೊಡನೆ ಅನ್ಯಭಾಷೆಗಳ ಸಂಗಮ ಹೇಗಾಯ್ತು! ಯಾರು ಯಾವಾಗ ಬೆಸೆಯುವಿಕೆ ಮಾಡಿದರು? ಈ ಬಗ್ಗೆ ಪಕ್ಕಾ ಕಾಲಮಾನ ಕಷ್ಟಸಾಧ್ಯ, ಸಾಕ್ಷ್ಯಾಧಾರ ಕಂಡುಹಿಡಿವುದು ಅಪ್ರಸ್ತುತ! ಇಡೀ ಜಿಜ್ಞಾಸೆಗೆ ಟಾಟಾ ಹೇಳುವುದು ಜಾಣತನ. ಇದಕ್ಕೂಮೀರಿ ಕೆಲವು ವಿದ್ವಾಂಸರು, ಭಾಷಾಶಾಸ್ತ್ರಜ್ಞರು, ಸಂಶೋಧಕರು, ಪ್ರಯತ್ನಿಸಿದರೆ ಅಭ್ಯಂತರವಿಲ್ಲ ಎಲ್ಲರೀತಿ ಪ್ರೋತ್ಸಾಹ ಸಹಕಾರ ಸಿಗಬಹುದು?.

ಈ ಬಗ್ಗೆ ಇನ್ನಷ್ಟು ದೃಷ್ಟಾಂತ ಉಲ್ಲೇಖ ಸಾಕ್ಷಿ ಆಧಾರ ರುಜುವಾತು ಪುರಾವೆ ದಾಖಲೆ ಸತ್ಯಾಸತ್ಯತೆ ವಿವರ ತಿಳಿಯ ಬೇಕಾದರೆ ‘ಕರ್ನಾಟಭಾರತ ಕಥಾಮಂಜರಿ’ ‘ಕಬ್ಬಿಗರಕಾವ’ ‘ಕನ್ನಡ ಭಾಷಾಚರಿತ್ರೆ’ ಮುಂತಾದ ಗ್ರಂಥಗಳನ್ನು ಅಭ್ಯಾಸ ಮಾಡುವುದು ಸಮಂಜಸ. ಜೈಕನ್ನಡ, ಜೈಕರ್ನಾಟಕ.

admin
the authoradmin

1 Comment

  • ಕನ್ನಡ ಮತ್ತು ತಮಿಳು ಸೋದರ ಭಾಷೆ ಎಂಬ ಸತ್ಯವನ್ನು ಬೆಳಕಿಗೆ ತರುವ
    ವಿಶಾಲ ಮನೋಭಾವದ ಉತ್ತಮ ಲೇಖಕ ಕುಮಾರಕವಿಯವರಿಗೆ ನಮಸ್ಕಾರ ಎಲ್ಲರೂ ಓದಿದರೆ ಸಂತೋಷ. ಅದರಲ್ಲೂ ವಿಶೇಷವಾಗಿ ಮಾನ್ಯ ನಟ ಕಮಲ ಹಾಸನ್ ರವರು ಈ ಲೇಖನ ಓದುವುದು ಸಮಂಜಸ, ಸೂಕ್ತ. ಅದೇನೇ ಇರಲಿ ಲೇಖಕ ನಟರಾಜರವರಿಗೆ ಹಾಗೂ ಪ್ರಕಟಿಸಿದ ಜನಮನಕನ್ನಡ ಸಂಪಾದಕೀಯ ಮಂಡಲಿಗೆ ಹೃತ್ಪೂರ್ವಕ ಧನ್ಯವಾದಗಳು. ರಾ.ರಾಮಕೃಷ್ಣ, ಸಂಸ್ಕೃತ ವಿದ್ವಾಂಸ, ಮೇಲುಕೋಟೆ, ಮಂಡ್ಯ ಜಿಲ್ಲೆ

Leave a Reply