LatestNews

ಕೊಡ್ಲಿಪೇಟೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ.. ಹಾಕಿ ಅಕಾಡೆಮಿ ಸ್ಥಾಪನೆಗೆ ಚಿಂತನೆ

ಕೊಡ್ಲಿಪೇಟೆ (ಆರ್ ಹೆಚ್ ): ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧೀನದಲ್ಲಿರುವ ಸುಮಾರು ಎಂಟು ಎಕರೆ ಮೈದಾನದಲ್ಲಿ ಸುಸಜ್ಜಿತವಾದ ಹಾಕಿ ಮೈದಾನವನ್ನು ನಿರ್ಮಿಸುವುದರೊಂದಿಗೆ ಹಾಕಿ ಅಕಾಡೆಮಿ ಸ್ಥಾಪನೆ ಮಾಡುವ ಚಿಂತನೆ ಇದೆ ಎಂದು ಹೈಕೋರ್ಟ್ ಹಿರಿಯ ವಕೀಲರೂ ಆದ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಹೇಳಿದರು.

ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮಶೇಖರ್ ಹಾಗೂ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 14 ಮತ್ತು 17 ವಯೋಮಾನದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಇದೆ.ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಬೇಕು.ಹಾಕಿ ಕ್ರೀಡಾಪಟು ಎಂಬ ಪ್ರಮಾಣ ಪತ್ರ ಇದ್ದ ಕಾರಣದಿಂದ ನನಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜು ಸೀಟು ಸಿಕ್ಕಿತು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಬೇಕಿದೆ  ಪ್ರತಿಯೊಬ್ಬರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಪ್ರತಿದಿನ ದೇಹ ದಂಡನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು. ಉತ್ತಮ ಕ್ರೀಡಾ ಚಟುವಟಿಕೆಗಳಿಗೆ  ಎಲ್ಲರ ಸಹಕಾರ ಅಗತ್ಯ. ಕ್ರೀಡೆಗಳು ವಿದ್ಯಾರ್ಥಿಗಳ ಮುಂದಿನ ಜೀವನದ ಗುರಿ ಸಾಧನೆಗೆ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಶಾಸಕ ಡಾ.ಮಂತರ್ ಗೌಡ ಅವರು ಶಟಲ್ ಕಾಕ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸರ್ಕಾರ ಕ್ರೀಡಾಕ್ಷೇತ್ರ ಅಭಿವೃದ್ಧಿಗೆ  ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದರು.  ಪ್ರತಿಯೊಂದು ಕ್ರೀಡೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶಾಲಾ,ಕಾಲೇಜು ಹಂತದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂದರು. ಈಗಾಗಲೆ ಸೋಮವಾರಪೇಟೆ ತಾಲ್ಲೂಕಿಗೆ ಕ್ರೀಡಾಂಗಣ ಅಭಿವೃದ್ಧಿಗೆ ರೂ. 2 ಕೋಟಿ ಅನುದಾನ ನೀಡಿದೆ ಎಂದರು.

ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚೆಕ್ಕೆ ಮಾತನಾಡಿ, ಕ್ರೀಡೆ ಒಂದು ದಿನಕ್ಕೆ ಸೀಮಿತವಾಗಬಾರದು.ಪ್ರತಿ ದಿನ ,ಪ್ರತಿ ಸಮಯ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು.ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ನೈತಿಕತೆ ಗುಣ ಬೆಳಸಿಕೊಳ್ಳಲು ಸಾಧ್ಯವಾಗುತ್ತದೆ. ನಿತ್ಯ ವ್ಯಾಯಾಮ,ಆಟದ ಜೊತೆಗ ವಿದ್ಯಾಭ್ಯಾಸ ಮಾಡುವ  ಮನಸ್ಥಿತಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಕ್ರೀಡೆ ಹಾಗೂ ಶಿಕ್ಷಣ ಒಂದೇ ನಾಣ್ಯದ ಮುಖಗಳು ಇದ್ದಂತೆ.ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಲುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ಭದ್ರಬುನಾದಿಯಾಗಿದೆ ಎಂದ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತಾಲ್ಲೂಕು ಮಟ್ಟದ ಕ್ರೀಡಾಪಟುಗಳು ತುಂಬ ಉಪಯುಕ್ತವಾಗುತ್ತದೆ ಎಂದರು.

ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ  ಕ್ರೀಡಾ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ‌. ಒಲಂಪಿಕ್ಸ್ ನಂತಹ ಕ್ರೀಡಾಕೂಟಗಳು ನಡೆಯುವಾಗ ಮಾತ್ರ ಕ್ರೀಡೆ ನೆನಪಾಗುತ್ತದೆ. ಭಾರತ ಎಷ್ಟು ಮೆಡಲ್ ಗಳಿಸಿತು ಅಂತ ಲೆಕ್ಕ ಹಾಕುತ್ತಾರೆ‌.ಇದರ ಬದಲು ನಿತ್ಯ ಕ್ರೀಡೆ ಉತ್ತಮ ತರಬೇತಿ ಬೇಕು.ಗ್ರಾಮೀಣ ಮಟ್ಟದಲ್ಲೇ ಕ್ರೀಡಾ ಪ್ರತಿಭೆ ಹಾಗೂ ಕೌಶಲ್ಯ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಕ್ರೀಡೆ ಶೈಕ್ಷಣಿಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದೆ. ಕ್ರೀಡೆ ಬೌದ್ದಿಕ ಹಾಗೂ ದೈಹಿಕ,ಮಾನಸಿಕ ಬೆಳವಣಿಗೆ ತುಂಬ ಅಗತ್ಯವಾಗಿದೆ ಎಂದರು.ವಿದ್ಯಾರ್ಥಿಗಳು ಕ್ರೀಡಾ ಮನೋ ಮೈಗೂಡಿಸಿಕೊಂಡು ಸದೃಢ ದೇಹ ಸದೃಢವಾದ ಮನಸ್ಸು ಹೊಂದಬೇಕು.ಕ್ರೀಡಾ ಸ್ಪೋರ್ತಿಯನ್ನಯ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೋಮವಾರಪೇಟೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಂ.ಕಾಂತರಾಜ್ ಕೊಡ್ಲಿಪೇಟೆ ವಿದ್ಯಾಸಂಸ್ಥೆ ನಿರ್ದೇಶಕರಾದ ಯತೀಶ್,ಶಿವಪ್ರಕಾಶ್,ಕೆಡಿಪಿ ಸದಸ್ಯ ವೇದಕುಮಾರ್ ಸಿಆರ್ಪಿ ಎಸ್.ಎನ್.ಮುರುಳೀಧರ್ ರವೀಶ್, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆದಂ,ತಾಲ್ಲೂಕು ನೌಕರರ ಸಂಘ್ ನಿರ್ದೇಶಕ ಜೆ.ಡಿ.ಸುರೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್,ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೆ.ಆರ್.ರತ್ನಕುಮಾರ್ ಮುಖ್ಯ ಶಿಕ್ಷಕ ದೇವರಾಜು,ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷೆಸುಜಾತಾ, ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜೌರಂಗಜೇಬು,

ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಪರಿಷತ್ತು ಸದಸ್ಯ ಜಯಕುಮಾರ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಶಾಲಾ ಆಡಳಿತಾಧಿಕಾರಿ ಅಬ್ದುಲ್ ರಬ್. ಹಲಸಿನಮರದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಿರಂಜನ್ ಪಿಯು ಕಾಲೇಜು ಪ್ರಾಂಶುಪಾಲ ಸೋಮಶೇಖರಪ್ಪ,ಮುಖ್ಯ ಶಿಕ್ಷಕ ಚಂದ್ರಶೇಖರ್ ಅಡ್ಮನಿ, ಮುಖಂಡರಾದ ಪ್ರವೀಣ್, ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಶಿಕ್ಷಕರಾದ ಕಿರಣ್ ಕುಮಾರ್ ಸ್ವಾಗತಿಸಿದರು.ಉಪನ್ಯಾಸಕ ಸತೀಶ್ ನಿರೂಪಿಸಿದರು. ಪಿಯು ಕಾಲೇಜು ಪ್ರಾಂಶುಪಾಲ ಸೋಮಶೇಖರಪ್ಪ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎ.ಪಿ.ಸುನೀಲ್ ನೇತೃತ್ವದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.

admin
the authoradmin

Leave a Reply