ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿನ ಕೋಟೆ, ಅರಮನೆ, ಪಾರಂಪರಿಕ ಕಟ್ಟಡಗಳು, ದೇಗುಲಗಳು ರಾಜಪರಂಪರೆಯನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಇವುಗಳಾಚೆಗೆ ಇಡೀ ರಾಜಪರಂಪರೆಯೇ ಸದ್ದಿಲ್ಲದೆ ಸುಖನಿದ್ದೆಯಲ್ಲಿರುವ ತಾಣವೊಂದಿದೆ. ಅದುವೇ ಮಧುವನ… ಮೈಸೂರು ಅರಮನೆಗೆ ದಕ್ಷಿಣ ದಿಕ್ಕಿನಲ್ಲಿ ಮೈಸೂರು ಹಾಗೂ ನಂಜನಗೂಡು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಧುವನ ಮೈಸೂರು ಮಹಾರಾಜರ ಚಿರನಿದ್ದೆಯ ತಾಣವಾಗಿದೆ…

ಆದರೆ ಇದು ಮೈಸೂರು ರಾಜವಂಶಸ್ಥರ ಸ್ಮಶಾನವಾದರೂ ಬರೀ ಸ್ಮಶಾನವಾಗಿ ಉಳಿಯದೆ ಮೈಸೂರನ್ನಾಳಿದ ರಾಜರ ವೈಭವದ ಕಥೆ ಹೇಳುತ್ತದೆ. ಇಲ್ಲೊಮ್ಮೆ ನಿಂತು ಕಣ್ಣು ಹಾಯಿಸಿದರೆ.. ಮೈಸೂರನ್ನು ಆಳಿದ ಮಹಾರಾಜರು ಮತ್ತು ಅವರ ಪತ್ನಿಯರು, ಮಕ್ಕಳು, ಬಂಧುಗಳು ಹೀಗೆ ಎಲ್ಲರೂ ಸಮಾಧಿಗಳಾಚೆಗೆ ನೆನಪುಗಳಾಗಿ ಎದ್ದು ಬರುತ್ತಾರೆ.

ಇಲ್ಲಿ ಮೈಸೂರನ್ನು ಕಟ್ಟಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್, ಶ್ರೀ ಚಾಮರಾಜ ಒಡೆಯರ್, ಸಾಮಾಜಿಕ ಹರಿಕಾರರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಕೀರ್ತಿವಂತ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸೇರಿದಂತೆ ಹತ್ತು ಹಲವು ರಾಜರು ಯಶೋಗಾಥೆಯಾಗಿ ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ.

ಮಧುವನದಲ್ಲಿ ಬೃಂದಾವನಗಳು, ಮುಖ್ಯಗೋಪುರ, ಈಶ್ವರ ದೇವಸ್ಥಾನಗಳು, ಕಲ್ಯಾಣಿಗಳು, ಮಹಿಷಾಸುರನ ವಿಗ್ರಹಗಳು ಮಾತ್ರವಲ್ಲದೆ, ಒಳ ಆವರಣಗಳಲ್ಲಿ ಬೃಹದಾಕಾರದ ಗೋಡೆಗಳು, ಇವುಗಳಿಗೆಲ್ಲ ಮೆರಗು ನೀಡುವಂತೆ ಭವ್ಯ ಕಲಾಕೃತಿಯ ಅಲಂಕಾರಗಳು ಮೈಸೂರು ರಾಜರ ಕಲಾವೈಭವತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಹೆಚ್ಚಿನವರಿಗೆ ಮಧುವನದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಅತ್ತ ಹೆಜ್ಜೆ ಹಾಕದೆ ತಮ್ಮ ಪಾಡಿಗೆ ತಾವು ಹೋಗಿ ಬಿಡುತ್ತಾರೆ. ಆದರೆ ಒಮ್ಮೆ ಮಧುವನಕ್ಕೆ ಭೇಟಿ ನೀಡಿ ಅಲ್ಲೊಮ್ಮೆ ಕಣ್ಣು ಹಾಯಿಸಿ ಬಿಟ್ಟರೆ ಮೈಸೂರು ರಾಜಪರಂಪರೆ ಇತಿಹಾಸ ನಮ್ಮ ಮುಂದೆ ಬಂದು ನಿಲ್ಲುತ್ತದೆ..

ಇವತ್ತು ಮಧುವನ ಜನರಿಂದ ದೂರವಾಗಿ ಪಾಳು ಬಿದ್ದಂತಿದೆ. ಆದರೆ ಹಿಂದೆ ಹೀಗಿರಲಿಲ್ಲ. ಅವತ್ತಿನ ಮಧುವನದ ಬಗ್ಗೆ ನೆನಪಿಸಿಕೊಳ್ಳುವುದಾದರೆ ಅದು ರಾಜರ ಸ್ಮಶಾನ ಮಾತ್ರವಾಗಿರಲಿಲ್ಲ. ಅವತ್ತು ಮೈಸೂರು ಅರಮನೆಯ ಖಾಸಾ ತೋಟವಾಗಿತ್ತು. ಇಲ್ಲಿ ಹತ್ತಾರು ಎಕರೆ ಜಾಗದಲ್ಲಿ ಮಧು ತುಂಬಿದ ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು. ಅರಮನೆ, ಒಳಗಿನ ದೇವಸ್ಥಾನಗಳಿಗೆ ಬೇಕಾದ ಹೂ, ಹಣ್ಣುಗಳು ಈ ತೋಟಗಳಿಂದಲೇ ಸರಬರಾಜಾಗುತ್ತಿತ್ತು.

ಎಲೆ ತೋಟಗಳಿಗೆ ಹೊಂದಿಕೊಂಡಂತೆ ಇದ್ದ ಈ ತೋಟ ಅರಮನೆಯ ರಾಜರು, ಕುಟುಂಬದವರು, ಮಕ್ಕಳಿಗೆ ಮನೋರಂಜನೆಯ ತಾಣವೂ ಆಗಿತ್ತು. ಹೀಗಾಗಿ ಈ ಮಧುವನ ರಾಜಭಟರ ಸರ್ಪಗಾವಲಿನಲ್ಲಿತ್ತು. ಹಿರಿಯರು “ಸುಮ್ಮಾನ” ನಿದ್ರೆಯಲ್ಲಿರುವ ಅರಮನೆಯ ಈ ಜಾಗದಲ್ಲಿ ಸ್ವಯಂರಾಜರು, ಕುಟುಂಬದವರು ಬಂದು ಹೋಗುತ್ತಿದ್ದರು. ರಾಜಾಧಿರಾಜರಾದಿಯಾಗಿ ಎಲ್ಲರೂ ಮಂಡಿಯೂರಿ ಕಂಬನಿ ಮಿಡಿದು ಹೃದಯ ವೇದನೆ ನಿವೇದಿಸಿಕೊಳ್ಳುತ್ತಿದ್ದರು.

ದಿನಕ್ಕೆರಡು ಬಾರಿ ಇಲ್ಲಿ ಪೂಜಾ ಕೈಂಕರ್ಯಗಳು ರಾಜ ವೈಭೋಗದಲ್ಲಿ ನಡೆಯುತ್ತಿದ್ದವು. ಇಲ್ಲಿ ಪ್ರವೇಶವೂ ಅಷ್ಟು ಸುಲಭವಾಗಿರಲಿಲ್ಲ. ಕಾವಲುಗಾರರು ಅಷ್ಟು ಭಯ ಭಕ್ತಿಯಿಂದ ಇಲ್ಲಿ ಕಾವಲು ಕಾಯುತ್ತಿದ್ದರು. ಇಲ್ಲಿನ ಬೃಂದಾವನಗಳಲ್ಲಿ ಸದಾ ದೀಪಗಳು ಉರಿಯುತ್ತಿದ್ದವು. ಘಂಟೆನಾದ ಸದಾ ಮೊಳಗುತ್ತಿತ್ತು. ಯಾರೇ ಆಗಲಿ ಮಧುವನ ಪ್ರವೇಶಿಸಿದರೆ ಒಂದು ಕ್ಷಣ ಮೈಮರೆಯುತ್ತಿದ್ದರು. ಇಲ್ಲಿನ ಕಾಮಧೇನು ಹೆಬ್ಬಾಗಿಲು ಅಚ್ಚರಿ ಮೂಡಿಸುತ್ತಿತ್ತು.

ಈ ಕಾಮಧೇನು ಹೆಬ್ಬಾಗಿಲು ಹೇಗಿತ್ತು ಎಂದರೆ ಹೆಣ್ಣಿನ ಮುಖ, ಹಸುವಿನ ದೇಹ, ಹಂಸದ ಜೋಡಿರೆಕ್ಕೆ, ನವಿಲಿನ ಪುಚ್ಛ ಹೊಂದಿತ್ತು. ಇದಕ್ಕೆ ಹೊಂದಿಕೊಂಡಂತೆ ಪೂರ್ವಾಭಿಮುಖವಾಗಿ ವೀರಭದ್ರೇಶ್ವರ ದೇಗುಲವಿದ್ದು,. ಆಳೆತ್ತರದ ಈ ವಿಗ್ರಹ ಅತ್ಯಂತ ಸುಂದರವಾಗಿದೆ. ಬೇರಲ್ಲೂ ಇಂತಹ ವಿಗ್ರಹ ಕಾಣಬರುವುದಿಲ್ಲ ಎಂಬುದೇ ಈ ದೇಗುಲದ ವಿಶೇಷ.

ಇದರ ಹಿಂಭಾಗದಲ್ಲಿಯೂ ಆಂಜನೇಯನ ಗುಡಿಯಿದೆ. ಆದರೆ ಗರ್ಭಗುಡಿಯಲ್ಲಿ ವಿಗ್ರಹವಿಲ್ಲ. ಅದರ ಮುಂಭಾಗದಲ್ಲಿ ಏಕ ಶಿಲೆಯ ಬೃಹತ್ ಕಂಬವೂ ಇಲ್ಲಿದೆ. ಅದರ ಒತ್ತಾಸೆಯಾಗಿ ಮಂಟಪಗಳಿವೆ. ಮಹಿಷಾಸುರನನ್ನು ಹೋಲುವ ಬೃಹತ್ ವಿಗ್ರಹವನ್ನು ಇಲ್ಲಿ ನಿಲ್ಲಿಸಲಾಗಿದೆ.

ಇನ್ನು ಸಾಂಪ್ರದಾಯಿಕ ಶೈಲಿಯ ಮಧುವನದ ಬೃಂದಾವನಗಳು ಆಕರ್ಷಣೀಯವಾಗಿವೆ. ವಿಶೇಷವೆಂದರೆ ಇಲ್ಲಿನ ಎಲ್ಲಾ ಬೃಂದಾವನಗಳು ಆಮೆಯ ಪದತಳದ ಮೇಲೆ ನಿರ್ಮಾಣವಾಗಿದೆ. ಕರಿಕಲ್ಲುಗಳಿಂದ ಕೆತ್ತನೆಯ ರಂಜನೆ ಪಡೆದಿರುವ ಸಾಲು ಸಾಲು ಚಿತ್ರಗಳು ಕಣ್ಮನ ಸೆಳೆಯುತ್ತವೆ.

ಇಲ್ಲಿ ಕಲೆ ಮೈದಳೆದು ನಿಂತಿದ್ದು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎಂದು ಹೇಳಲಾಗಿದೆ. ಅವರ ಕಾಲದ ದಿವಾನ್ ಪೂರ್ಣಯ್ಯರವರ ಮಾರ್ಗದರ್ಶನದಲ್ಲಿ ಏಲಕ್ಕಪ್ಪಾಚಾರಿ ಎಂಬ ಶಿಲ್ಪಕರ್ಮಿಯು ಕಲಾವೈಭವವನ್ನು ಸೃಷ್ಠಿಸಿದ್ದಾಗಿ ಹೇಳಲಾಗಿದೆ.

ಪೂರ್ವಾಭಿಮುಖವಾಗಿರು ಮಧುವನದ ಬೃಂದಾವನಗಳು ವಿಶೇಷವಾಗಿದ್ದು, ಇಲ್ಲಿರುವ ಕೃಷ್ಣರಾಜ ಒಡೆಯರ ಭವ್ಯ ಬೃಂದಾವನ ದೇಗುಲ ಮಾದರಿಯಲ್ಲಿದ್ದು, ಈ ಶಿಲ್ಪದ ಗರ್ಭಗುಡಿಯಲ್ಲಿ ಬೃಂದಾವನವಿದೆ. ಕರಿಕಲ್ಲುಗಳನ್ನು ಹಾಸಲಾಗಿದೆ. ಮೇಲ್ಛಾವಣಿ ಮೇಲೆ ಸುಂದರ ಗೋಪುರ ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಕಲ್ಲುಗಳಿಂದಲೇ ಸುಂದರ ಗೋಡೆ ನಿರ್ಮಿಸಲಾಗಿದೆ. ಈ ಗೋಡೆಗಳಲ್ಲಿ ಕಿಟಿಕಿಗಳನ್ನು ಸ್ವಯಂ ಕಲ್ಲುಗಳನ್ನು ಕೆತ್ತಿ ಬಿಡಿಸಲಾಗಿದೆ.

ಎಡಭಾಗಕ್ಕೆ ಶ್ರೀ ಚಾಮರಾಜೇಂದ್ರ ಒಡೆಯರ ಬೃಂದಾವನ ಆಕರ್ಷಿಸುತ್ತದೆ. ಮುಂದೆ ಸಾಗಿದರೆ ಶ್ರೀ ರಣಧೀರ ಕಂಠೀರವ, ಶ್ರೀ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ತ್ರಿವಳಿ ಬೃಂದಾವನಗಳು ಕಾಣಸಿಗುತ್ತವೆ.

ಶ್ರೀ ಚಾಮರಾಜ ಒಡೆಯರ್ರವರ ಧರ್ಮಪತ್ನಿ ಮಹಾರಾಣಿ ವಾಣಿವಿಲಾಸರ ಬೃಂದಾವನ, ರಾಜಕುಮಾರಿ ಚೆಲುವಾಜಮ್ಮಣ್ಣಿಯರ ಬೃಂದಾವನಗಳು ಗಮನಸೆಳೆಯುತ್ತವೆ. ಇಲ್ಲಿ ದಶಕದ ಹಿಂದೆ ನಿಧರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಮಾಧಿಯೂ ಇದೆ.

ಇನ್ನು ಇಲ್ಲಿರುವ ಪ್ರತಿ ಬೃಂದಾವನಗಳು ಜಾಲಾಂಧ್ರಗಳ ಕಿಟಿಕಿ ಹೊಂದಿದ್ದು, ಹವಾನಿಯಂತ್ರಿತ ಕೊಠಡಿಗಳಂತೆ ತಣ್ಣಗೆ ತಂಪು ನೀಡುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಬೃಂದಾವನದ ಶಿಲ್ಪವೈಭವ ಹೇಳತೀರದು. ಅದ್ಭುತ ವಾಸ್ತು ಶಿಲ್ಪ, ಅದರೊಟ್ಟಿಗೆ ಅಪರೂಪದ ಜಲದೇವತೆಗಳು ಸಾಕಾರಗೊಂಡಿವೆ.

ಒಟ್ಟಾರೆ ಇತಿಹಾಸದ ಕಥೆ ಹೇಳುತ್ತಿರುವ ಮಧುವನ ರಾಜವಂಶಸ್ಥರ ಸಮಾಧಿಯಾದರೂ ಮೈಸೂರಿನ ಹೆಮ್ಮೆ ಜತೆಗೆ ಹತ್ತು ಹಲವು ವಿಶೇಷತೆಗಳ ನೆನಪಿನ ಪುಸ್ತಕವಾಗಿದೆ.
ಧ್ವನಿ: ಪೃಥ್ವಿ ದೇವರಾಜ್






