Crime

ದೆಹಲಿ ಪೊಲೀಸರು ಮೈಸೂರಿನ ಕಾರ್ಖಾನೆ ಮೇಲೆ ದಾಳಿ ಮಾಡಿದ್ದೇಕೆ? ಡ್ರಗ್ಸ್ ತಯಾರಿಕೆ ಶಂಕೆ ಬಂದಿದ್ದೇಕೆ?

ಮೈಸೂರು: ಡ್ರಗ್ಸ್ ತಯಾರಿಕೆ ಘಟಕ ಕರ್ನಾಟಕದಲ್ಲಿ ಪತ್ತೆಯಾದ ಬಳಿಕ ಯಾವುದೇ ಡ್ರಗ್ಸ್ ಪ್ರಕರಣ ಪತ್ತೆಯಾದರೂ ಅದಕ್ಕೂ ಕರ್ನಾಟಕಕ್ಕೂ ಅದರಲ್ಲೂ ಮೈಸೂರಿಗೆ ನಂಟಿದೆಯಾ ಎಂಬ ಸಂಶಯ ಬರುವಂತಾಗಿದೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಡ್ರಗ್ಸ್ ಕಾರ್ಖಾನೆ ಪತ್ತೆಯಾಗಿರುವುದಾಗಿದೆ.

ಇದೀಗ ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ಮಾದಕ ವಸ್ತು ತಯಾರಿಕೆ ಮಾಡುತ್ತಿರುವ ಶಂಕೆಯ ಮೇರೆಗೆ ದೆಹಲಿ ಪೊಲೀಸರು, ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಹೊಸ ದಿಲ್ಲಿಯ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊದ ಎಸ್‌ ಐ ಸೇರಿದಂತೆ ಪೊಲೀಸರ ತಂಡ ಬುಧವಾರ ಕೆಮಿಕಲ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಗಣಪತ್ ಲಾಲ್ ಮಾಲೀಕತ್ವದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ತಯಾರು ಮಾಡುತ್ತಿರುವ ಶಂಕೆಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಕಾರ್ಯಾಚರಣೆ ವೇಳೆ ಯಾವುದೇ ಬಗೆಯ ವಸ್ತು ಅಥವಾ ತಯಾರಿಕೆಯ ವಸ್ತುಗಳು ಪತ್ತೆಯಾಗಿಲ್ಲ.

ಕೆಮಿಕಲ್ ಫ್ಯಾಕ್ಟರಿಯ ಮಾಲೀಕ ಗಣಪತ್ ಲಾಲ್ ಅವರ ಸಂಬಂಧಿಯೊಬ್ಬ, ಗುಜರಾತ್‌ ನಲ್ಲಿನ ಡ್ರಗ್ಸ್ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಇದರ ಆಧಾರದ ಮೇಲೆ ಮೈಸೂರಿನಲ್ಲಿರುವ ಸಂಬಂಧಿ ಕೂಡ ಕೆಮಿಕಲ್ ಫ್ಯಾಕ್ಟರಿ ನಡೆಸುತ್ತಿದ್ದು, ಇಲ್ಲಿಯೂ ಸಹ ಮಾದಕ ವಸ್ತು ತಯಾರಿಸಲಾಗುತ್ತಿದೆಯೇ ಎಂಬ ಅನುಮಾನದ ಮೇರೆಗೆ ಹೊಸ ದಿಲ್ಲಿ ಪೊಲೀಸರು, ಬುಧವಾರ ಬೆಳಗ್ಗೆಯೇ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದು, ಫ್ಯಾಕ್ಟರಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.

ಬಳಿಕ ಇಲ್ಲಿ ಯಾವುದೇ ಮಾದಕ ವಸ್ತು ತಯಾರಿಕೆ ನಡೆಯುತ್ತಿರಲಿಲ್ಲ ಎಂಬುದು ಕಂಡು ಬಂದಿದೆ. ಇದೊಂದು ಫಿನಾಯಿಲ್ ತಯಾರಿಸುವ ಕಾರ್ಖಾನೆಯಾಗಿದ್ದು, ಕಾಸ್ಟಿಕ್ ಸೋಡಾ ಮತ್ತು ಉಪ್ಪಿನಂತಹ ಮಾರ್ಜಕ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್‌ಗೆ ಸಂಬಂಧಿಸಿದ ಯಾವುದೇ ವಸ್ತು ಸಿಕ್ಕಿಲ್ಲ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಕಟ್ಟಡ ಬೋರೇಗೌಡ ಅವರಿಗೆ ಸೇರಿದ್ದು, ಗಣಪತ್ ಲಾಲ್ ಅವರು ಕಳೆದ ಫೆಬ್ರವರಿಯಿಂದ ಕಟ್ಟಡವನ್ನು ತಿಂಗಳಿಗೆ 47 ಸಾವಿರ ಬಾಡಿಗೆಗೆ ಪಡೆದಿದ್ದರು. ಗಣಪತ್ ಲಾಲ್ ಸಂಬಂಧಿಯೊಬ್ಬ ಗುಜರಾತ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ. ಅಲ್ಲಿನ ಮಾಹಿತಿ ಆಧರಿಸಿ ಇಲ್ಲಿ ದಾಳಿ ನಡೆಸಿದ್ದಾರೆ ಎಂದು ಬೋರೇಗೌಡ ಅವರ ವಕೀಲ ಭರತ್ ಮಾಹಿತಿ ನೀಡಿದ್ದಾರೆ. ಮುಂದೇನು ಕಾದು ನೋಡಬೇಕಾಗಿದೆ.

ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ…  ಸಾಂಸ್ಕೃತಿಕ ನಗರಿಗೆ ಕಳಂಕ… 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಹೇಗೆ?

admin
the authoradmin

Leave a Reply

Translate to any language you want