ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಜಮೀನು ವಿಚಾರವಾಗಿ ಉದ್ಭವಿಸಿದ ಕಲಹ ಪರಿಹರಿಸಿ ಕೊಳ್ಳಲು ಗ್ರಾಮದ ಯಜಮಾನನ ಬಳಿ ನ್ಯಾಯಕ್ಕಾಗಿ ಮೊರೆ ಹೋದ ಕುಟುಂಬವರು ಬಹಿಷ್ಕಾರ ಶಿಕ್ಷೆಗೆ ಒಳಗಾಗಿ ನ್ಯಾಯಕ್ಕಾಗಿ ಅಂಗಲಾಚಿದ ಘಟನೆ ಬಿಳಿಕೆರೆ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಎದುರಾಯಿತು.
ಬಿಳಿಕೆರೆ ಗ್ರಾಮದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಗ್ರಾಮದ ನಾಯಕ ಸಮುದಾಯಕ್ಕೆ ಸೇರಿದ ಚೆನ್ನಮ್ಮ ಕುಟುಂಬದವರಿಗೆ ಸೇರಿದ 4 ಎಕರೆ ಕೃಷಿ ಭೂಮಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಮುದಾಯದ ಯಜಮಾನರ ಮೊರೆ ಹೋಗಿದ್ದರು ಆದರೆ, ನ್ಯಾಯ ನಿರೀಕ್ಷೆಯಲ್ಲಿದ್ದ ಚೆನ್ನಮ್ಮ ಕುಟುಂಬದವರಿಗೆ ಸಾಮಾಜಿಕ ನ್ಯಾಯ ಸಿಗದೆ ಈ ಕುಟುಂಬದ 15 ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕಿ ಯಾವುದೇ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿ ಕಳೆದ 8 ತಿಂಗಳಿದ ಪೊಲೀಸ್, ಕಂದಾಯ ಇಲಾಖೆ ಸುತ್ತಿದರೂ ನ್ಯಾಯ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ಕಣ್ಣೀರಿಟ್ಟರು.
ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ಬಹಿಷ್ಕಾರ ಕಾನೂನು ಬಾಹಿರ, ಸೋಮವಾರ ಗ್ರಾಮದಲ್ಲಿ ಸಭೆ ನಡೆಸಿ ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕ್ರಮವಹಿಸಿ ಸರಿಪಡಿಸುವುದಾಗಿ ಸಮಾಧಾನಪಡಿಸಿದರು.
ದೂರಿನ ಸುರಿಮಳೆ: ಪ್ರಜಾಸೇವಾ ಕಾರ್ಯಕ್ರಮದಲ್ಲಿ ಒಟ್ಟು 190 ಅರ್ಜಿಗಳು ಬಹುತೇಕ ಕಂದಾಯ ಇಲಾಖೆಗೆ ಸೇರಿದ ಸಮಸ್ಯೆಗಳ ದೂರು ಸಭೆಯಲ್ಲಿ ಎದುರಾಯಿತು. ರಸ್ತೆ ಒತ್ತುವರಿ, ಪಹಣಿ ತಿದ್ದುಪಡಿ, ದುರಸ್ತಿ, ಸಾಗುವಳಿ ದಾಖಲೆ ಇಲ್ಲದ ಬಗ್ಗೆ ಸಾರ್ವಜನಿಕರು ಅರ್ಜಿ ಹಿಡಿದು ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ನೀಡಿದರು.
ಸ್ಮಶಾನದ ದಾರಿ ಒತ್ತುವರಿ: ಬಿಳಿಕೆರೆ ಹೋಬಳಿ ಕೇಂದ್ರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಿಟ್ಟ ಸ್ಮಶಾನಕ್ಕೆ ತೆರಳುವ ದಾರಿ ಇತರರಿಂದ ಒತ್ತುವರಿಯಾಗಿದ್ದು, ಸರ್ವೆ ನಡೆಸಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಯಿಂದ ತಹಶೀಲ್ದಾರ್ ವರೆಗೂ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸ್ವಾಮಿ ದೂರಿದರು.

ಈ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಅನುದಾನ ನೀಡಿದ್ದೇನೆ ಎಂದ ಶಾಸಕರು, ಸಮಸ್ಯೆ ಬಗೆಹರಿಸಿ ಎಂದು ತಹಶೀಲ್ದಾರ್ ಗೆ ಸೂಚಿಸಿದರು. ವಡೆಯರ ಹೊಸಹಳ್ಳಿ ಗ್ರಾಮದ ಶಿವಮ್ಮ ಸಾಗುವಳಿ ಮಾಡುತ್ತಿರುವ ಭೂಮಿ ದಾಖಲೆಯಲ್ಲಿ ಸ್ಮಶಾನಕ್ಕೆ ಸೇರಿದೆ, ಸ್ಮಶಾನಕ್ಕೆ ಮೀಸಲಿಟ್ಟ ನಿವೇಶನ ತಮ್ಮ ಹೆಸರಿನಲ್ಲಿದ್ದು ಈ ಎರಡನ್ನು ಸರಿಪಡಿಸಬೇಕು ಎಂದು 6 ವರ್ಷದಿಂದ ನಾಡಕಚೇರಿಗೆ ತಿರುಗುತ್ತಿದ್ದೇನೆ ಎಂದರು.
ಸಾರ್ವಜನಿಕರಿಂದ ಆಕ್ರೋಶ: ಪ್ರಜಾಸೇವಾ ಕಾರ್ಯಕ್ರಮಕ್ಕೆ ಶಾಸಕರು ಸಕಾಲಕ್ಕೆ ಬಾರದೆ, ಜನಪ್ರತಿನಿಧಿ ಸಮ್ಮುಖದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಅಹವಾಲು ಸ್ವೀಕರಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಳಿಕೆರೆ ಹೋಬಳಿ ಕೇಂದ್ರದಲ್ಲಿ ನಾಡಕಚೇರಿಗೆ ಸ್ವಂತ ಕಟ್ಟಡವಿಲ್ಲ, ಗ್ರಾಮದ ಆಸ್ಪತ್ರೆ ಮೇಲ್ದರ್ಜೆಗೇರಿಸಿ ತುರ್ತುವಾಹನ ವ್ಯವಸ್ಥೆ ಕಲ್ಪಿಸುವಂತೆ ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮನವಿ ಮಾಡಿದರು. ನಿರ್ಮಾಣ ಹಂತದಲ್ಲಿರುವ ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್ ರಸ್ತೆ ನಿರ್ಮಿಸದೆ ಸ್ಥಳಿಯರಿಗೆ ಸಮಸ್ಯೆ ಎದುರಾಗಿದೆ. ಶಾಸಕರು ಸದನದಲ್ಲಿ ಚರ್ಚಿಸಿ ಪರಿಹರಿಸಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಸರ್ಕಲ್ ಇನ್ಸ್ ಪೆಕ್ಟರ್ ಪುನಿತ್, ಬಿಇಒ ಕಾಳನಾಯಕ ಜೆ.ಡಿ.ಎಸ್ ಮುಖಂಡರಾದ ಸುರೇಂದ್ರ, ಸತೀಶ್, ಚಿಕನ್ ಮಧು ಸೇರಿದಂತೆ ಇತರರಿದ್ದರು.








