ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯ ಫಲಹಾರ ಪ್ರಭುದೇವಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಪರಮೇಶ್ವರಮೂರ್ತಿ ಜಿ ಅವರ ಭೋಧನೆ ಸೇರಿದಂತೆ ಹಲವು ರೀತಿಯ ಕಾರ್ಯಸಾಧನೆಯನ್ನು ಗುರುತಿಸಿ ಸದಾಶಿವ ಗುರುಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ನೆಲಮಂಗಲ ಪವಾಡ ಬಸವಣ್ಣ ದೇವರ ಮಠದಲ್ಲಿ ಆಯೋಜಿಸಲಾಗಿದ್ದ ಸದಾಶಿವಸ್ವಾಮಿಗಳ 24ನೇ ಸಂಸ್ಮರಣೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಶಿಕ್ಷಕ ಪರಮೇಶ್ವರಮೂರ್ತಿ ಜಿ ಅವರಿಗೆ ಸದಾಶಿವ ಗುರುಶ್ರೀ ಪ್ರಶಸ್ತಿಯನ್ನು ಸಿದ್ದಗಂಗಾಶ್ರೀಗಳಾದ ಪರಮಪೂಜ್ಯ ಶ್ರೀ ಸಿದ್ದಲಿಂಗಸ್ವಾಮಿಗಳು ಪ್ರದಾನ ಮಾಡಿ ಗೌರವಿಸಿದರು.

ಪ್ರಶಸ್ತಿಗೆ ಬಾಜನರಾಗಿರುವ ಪರಮೇಶ್ವರಮೂರ್ತಿ ಅವರು ಸಂಸ್ಕೃತ ಶಿಕ್ಷಕರಾಗಿದ್ದು, ಸಂಸ್ಕೃತವನ್ನು ಜನರಿಗೆ ತಲುಪಿಸುವಲ್ಲಿ ಶ್ರಮವಹಿಸುತ್ತಿದ್ದಾರೆ. ಸಂಸ್ಕೃತವನ್ನು ಆಡುಭಾಷೆಯಾಗಿ ಮಾಡುವತ್ತ ಒತ್ತು ನೀಡುತ್ತಿದ್ದು, ಕೊಳ್ಳೇಗಾಲ ತಾಲೂಕಿನಲ್ಲಿ ಅನೇಕ ಸಂಭಾಷಣ ಶಿಬಿರಗಳನ್ನು ನಡೆಸಿದ್ದಲ್ಲದೆ, ಭಗವಗದ್ಗೀತಾ ಅಭಿಯಾನ, ಶ್ರೀಕೃಷ್ಣಾಜನ್ಮಾಷ್ಠಮಿ, ರಕ್ಷಾಬಂಧನ ಕಾರ್ಯಕ್ರಮಗಳನ್ನು ಮಾಡಿ ಸಂಸ್ಕೃತದ ಬಗ್ಗೆ ಅರಿವು ಮತ್ತು ಒಲವು ಮೂಡಿಸುವ ಕೆಲಸ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಿ ಸಂಸ್ಕೃತ ಶಿಕ್ಷಕರನ್ನಾಗಿ ತಯಾರು ಮಾಡಿರುವುದು ವಿಶೇಷವಾಗಿದೆ.

ಶಾಲಾ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಹತ್ತು ಹಲವು ಸಮ್ಮೇಳನಗಳನ್ನು ನಡೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಸಂಸ್ಕೃತದ ವಿಶೇಷತೆಗಳನ್ನು ಬಿಚ್ಚಿಟ್ಟಿದ್ದಾರಲ್ಲದೆ, ಸಂಸ್ಕೃತ ಪ್ರಚಾರವನ್ನು ಮಾಡಿದ್ದಾರೆ.

ಕುರುಬೂರಿನಲ್ಲಿ 31 ವರ್ಷಗಳ ಕಾಲ ಸಂಸ್ಕೃತ ಶಿಕ್ಷಕರಾಗಿ ಇದೀಗ ದೊಡ್ಡಿಂದುವಾಡಿಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.








