ಕುಶಾಲನಗರದಲ್ಲಿ ಅದ್ದೂರಿಯಾಗಿ ನಡೆದ ವಿ.ಪಿ.ಶಶಿಧರ್ ಗೆ ನಾಗರಿಕ ಸನ್ಮಾನ ಕಾರ್ಯಕ್ರಮ
ಸತ್ಯದ ನಿಲುವು ತೋರಿಸುವುದೇ ರಾಜಕಾರಣ : ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಕುಶಾಲನಗರ(ಆರ್ ಹೆಚ್): ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗ ಕೊಡಗು ಜಿಲ್ಲೆ ವತಿಯಿಂದ ಇಲ್ಲಿನ ಬೈಚನಹಳ್ಳಿ ಎಸ್.ಎಲ್.ಎನ್ ಸಭಾಂಗಣದಲ್ಲಿ 35 ವರ್ಷದ ರಾಜಕೀಯ ಜೀವನ ಪೂರೈಸಿದ ಜನಪರ ಹೋರಾಟಗಾರ ವಿ.ಪಿ.ಶಶಿಧರ್ ಗೆ ಏರ್ಪಡಿಸಿದ್ದ ನಾಗರಿಕ ಸನ್ಮಾನ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಇತ್ತೀಚೆಗೆ ನಡೆಯಿತು.
ಪಟ್ಟಣದ ಗಣಪತಿ ದೇವಾಲಯ ಬಳಿಯಿಂದ ಅಲಂಕೃತ ವಾಹನದಲ್ಲಿ ವಿ.ಪಿ.ಶಶಿಧರ್ ಅವರನ್ನು ಕರೆತರಲಾಯಿತು. ಸಭಾಂಗಣದ ಬಳಿ ಬಂದ ವೇಳೆ ಅಭಿಮಾನಿಗಳು ಶಶಿಧರ್ ಮೇಲೆ ಹೂವಿನ ಮಳೆ ಸುರಿಸಿದರು.

ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಹಾಗೂ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಗಣ್ಯರು ಹಾಗೂ ಅಪಾರ ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ವಿ.ಪಿ.ಶಶಿಧರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಳೆದ 35 ವರ್ಷಗಳ ರಾಜಕೀಯ ಜೀವನ ಹಾಗೂ ಸಾರ್ವಜನಿಕರ ಸೇವೆಯನ್ನು ಗುರುತಿಸಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿರುವ ನಾಗರಿಕ ಸನ್ಮಾನ ಅರ್ಥಪೂರ್ಣವಾಗಿದೆ ಎಂದರು. ಶಶಿಧರ್ ತಮ್ಮ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಶುದ್ಧರಾಜಕೀಯ ನಡೆಸಿಕೊಂಡು ಬಂದಿದ್ದಾರೆ.

ಜನಪರ ಕಾಳಜಿ ಹಾಗೂ ನಿರ್ಮಲಾ ಮನಸ್ಥಿತಿಯೊಂದಿಗೆ ಯಾವುದೇ ಅಧಿಕಾರಕ್ಕೆ ಆಸೆ ಪಡದೆ ತಮ್ಮ ರಾಜಕೀಯ ಛಾವು ಮೂಡಿಸಿದ್ದಾರೆ. ಜನ ಸೇವೆಯೆ ಜನಾರ್ದನ ಸೇವೆ ಎಂಬ ಧ್ಯೇಯವನ್ನು ಹೊಂದಿದ್ದ ಶಶಿಧರ್ ಅವರು ಅಭಿಮಾನಿಗಳು ನೀಡುತ್ತಿರುವ ಗೌರವಕ್ಕೆ ಅರ್ಹರು ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮಾತನಾಡಿ, ಜನಸೇವೆಯಲ್ಲಿ ಗುರುತಿಸಿಕೊಂಡಿರುವ ವಿ.ಪಿ.ಶಶಿಧರ್ ನಿಷ್ಠುರವಾದಿಯಾದರೂ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ.ಇಂದಿನ ರಾಜಕೀಯ ಜೀವನದಲ್ಲಿ ನೇರವಾಗಿ ಮಾತನಾಡಿ ಜನರ ಮನಸ್ಸು ಗೆಲ್ಲುವುದು ತುಂಬ ಕಷ್ಟವಾಗಿದೆ. ಶಶಿಧರ್ ಪಕ್ಷದೊಳಗೆ ಹಾಗೂ ಹೊರಗೆ ಇದ್ದುಕೊಂಡು ಅಪಾರವಾದ ಜನಪರವಾದ ಹೋರಾಟ ನಡೆಸಿದ್ದಾರೆ ಎಂದರು.

ನಾಯಕತ್ವ ಗುಣ, ಪ್ರಾಮಾಣಿಕತೆ ಹಾಗೂ ಹೃದಯವಂತಿಕೆ ಇದೆ. ಅವರೊಂದಿಗೆ ಅನೇಕ ಬಾರಿ ಚರ್ಚೆ ಮಾಡಿದ್ದೇನೆ. ಅವರ ನಿಲುವುಗಳಿಗೆ ಗೌರವ ಕೊಡುವ ಕೆಲಸ ಮಾಡಿದ್ದೇನೆ ಎಂದರು. 35 ವರ್ಷ ಸಾರ್ವಜನಿಕ ಜೀವನ ಅಷ್ಟು ಸುಲಭದ ಮಾತಲ್ಲ ಅವರ ಆರೋಗ್ಯ, ಕೌಟುಂಬಿಕ ಜೀವನದಲ್ಲಿ ಎಷ್ಟು ಸಮಸ್ಯೆಗಳು ಉಂಟಾಗಿರಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರಲ್ಲದೆ, ಶಶಿಧರ್ ಅವರ ರಾಜಕೀಯ ಬದುಕು ಉತ್ತುಂಗಕ್ಕೆ ಏರಲಿ,ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ,ಪ್ರತಿಯೊಬ್ಬ ಯಶಸ್ವಿ ರಾಜಕಾರಣಿ ಹಿಂದೆ ಅವರ ಮನೆಯವರ ಕೊಡುಗೆ ಕೂಡ ಅಪಾರವಾಗಿದೆ.ಅದೇ ರೀತಿ ಶಶಿಧರ್ ಯಶಸ್ವಿ ಹಿಂದೆ ಸಿಂಚನಾ ಮೇಡಂ ಅವರು ಪಾತ್ರ ಪ್ರಮುಖವಾಗಿದೆ. 35 ವರ್ಷ ರಾಜಕೀಯ ಜೀವನದೊಂದಿಗೆ ಸಾರ್ವಜನಿಕರ ಸೇವೆಯಲ್ಲಿರುವ ಶಶಿಧರ್ ಅವರಿಗೆ ಏರ್ಪಡಿಸಿರುವ ಸನ್ಮಾನ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಜನರು ಸೇರಿರುವುದು ಶ್ಲಾಘನೀಯ ಎಂದರು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ಮಾತನಾಡಿ, 35 ವರ್ಷಗಳ ರಾಜಕೀಯ ಜೀವನದಲ್ಲಿ ಶಶಿಧರ್ ತಮ್ಮನ್ನು ಸಮಾಜದ ಸೇವೆಗೆ ಅರ್ಪಿಸಿಕೊಂಡು ಕೊಡಗಿನ ಅಭಿವೃದ್ಧಿಗೆ ಶ್ರಮಿಸಿದ ಅವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.
ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ಹಿರಿಯ ಮುತ್ಸದ್ಧಿ ಮಾಜಿ ಸಚಿವ ದಿ.ಎ.ಎಂ.ಬೆಳ್ಳಿಯಪ್ಪ ಅವರ ಶಿಷ್ಯರಾಗಿ ರಾಜಕೀಯ ರಂಗ ಪ್ರವೇಶಿಸಿದ ವಿ.ಪಿ.ಶಶಿಧರ್ ಸುಮಾರು 35 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಯುವಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಅಪಾರ ಜನಮನ್ನಣೆಗಳಿಸಿದ್ದಾರೆ.ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ನಾಗರಿಕ ಸನ್ಮಾನ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭ ಮಡಿಕೇರಿ ಶಕ್ತಿ ಪತ್ರಿಕೆ ಸಂಪಾದಕ ಚಿದ್ಚಿಲಾಸ್, ಮೈಸೂರು ಕಾಂಗ್ರೆಸ್ ಹಿರಿಯ ಮುಖಂಡ ಎಂ. ಲಕ್ಷ್ಮಣ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ , ಸಿಂಚನಾ ಶಶಿಧರ್ ಮುಖಂಡರಾದ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ವೀರಶೈವ ಸಮಾಜದ ಎಚ್.ವಿ.ಶಿವಪ್ಪ, ವಿ.ಎಸ್.ಆನಂದ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಕೆ.ಎಸ್.ಕೃಷ್ಣೇಗೌಡ ಸ್ವಾಗತಿಸಿದರು. ಉ.ರಾ.ನಾಗೇಶ್ ನಿರೂಪಿಸಿದರು.ನಂಜುಂಡಸ್ವಾಮಿ ರೈತ ಗೀತೆ ಹಾಡಿದರು.







