LatestMysoreNews

ಸ್ವಾತಂತ್ರ್ಯ ಪೂರ್ವದಲ್ಲಿ ಸುತ್ತೂರು ರಾಜೇಂದ್ರ ಶ್ರೀಗಳು ಸ್ಥಾಪಿಸಿದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ

ವಚನ ಸಾಹಿತ್ಯ ಪ್ರತಿಯೊಬ್ಬರ ಬದುಕಿಗೆ ರಕ್ಷಾಕವಚ: ಹಿನ್ಕಲ್ ಬಸವರಾಜು

ಮೈಸೂರು : ಆಸ್ತಿ ಸಂಪಾದಿಸಿದರೆ ರಕ್ಷಕರನ್ನು ನೇಮಿಸಬೇಕು; ಶಿಕ್ಷಣ ಮತ್ತು ವಚನ ಸಾಹಿತ್ಯ ನಮ್ಮನ್ನು ತಾವೇ ರಕ್ಷಿಸುತ್ತವೆ ಎಂದು ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು ಹೇಳಿದರು.

ನಗರದ ಅಗ್ರಹಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುತ್ತೂರು ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಕ್ಯಾತನಹಳ್ಳಿ ಸಾಹುಕಾರ ಸಿದ್ದಲಿಂಗಯ್ಯ ವಿದ್ಯಾರ್ಥಿ ನಿಲಯದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಶ್ರೀ ಸೋಮಶೇಖರ ಸ್ವಾಮೀಜಿ ಧಾರ್ಮಿಕ ದತ್ತಿ ಹಾಗೂ ಶ್ರೀಮತಿ ಧನ್ಯಾ ಸತ್ಯೇಂದ್ರಮೂರ್ತಿ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 27ನೇ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ವಚನ ಸಾಹಿತ್ಯವು ಪ್ರತಿಯೊಬ್ಬರ ಜೀವನಕ್ಕೆ ಮಾರ್ಗದರ್ಶಕವಾಗಿದ್ದು, ಬದುಕನ್ನು ಕಟ್ಟಿಕೊಳ್ಳುವ ಮೌಲ್ಯಯುತ ಜೀವನಪಾಠಗಳನ್ನು ಕಲಿಸುತ್ತದೆ. ಆಸ್ತಿ ಸಂಪಾದಿಸಿ ಹಣ ಗಳಿಸುತ್ತಾ ಹೋದರೆ ಅದರ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆದರೆ ಶಿಕ್ಷಣ ಮತ್ತು ವಚನ ಸಾಹಿತ್ಯವನ್ನು ಅಧ್ಯಯನ ಮಾಡುತ್ತಾ ಹೋದರೆ ಅವುಗಳೇ ನಮ್ಮ ಬದುಕಿಗೆ ರಕ್ಷಾಕವಚವಾಗುತ್ತವೆ.

ನಮ್ಮ ವ್ಯಕ್ತಿತ್ವವನ್ನು ರೂಪಿಸಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ನೀಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿಯಬೇಕು ಎಂದು ಕರೆ ನೀಡಿದರು.

ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಧನ್ಯಾ ಸತ್ಯೇಂದ್ರಮೂರ್ತಿ ಮಾತನಾಡಿ, ವಚನವು ಓದಿದರೆ ಗದ್ಯವಾಗುವ, ಹಾಡಿದರೆ ಪದ್ಯವಾಗುವ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ವಚನಗಳ ಅಧ್ಯಯನವು ಬದುಕನ್ನು ಕಟ್ಟಿಕೊಳ್ಳಲು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಲು ಹಾಗೂ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ದತ್ತಿ ದಾಸೋಹಿಗಳಾದ ನಿವೃತ್ತ ಪ್ರಾಂಶುಪಾಲೆ ಡಾ. ಸುನಂದಾ ಭೂಪಾಲಿ ಮಾತನಾಡಿ, ಮನದ ಮೈಲಿಗೆಯನ್ನು ತೊಳೆದು ಮನಸ್ಸನ್ನು ಪರಿಶುದ್ಧಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳು ಜೀವನದಲ್ಲಿ ಆತ್ಮವಿಶ್ವಾಸವನ್ನು ತುಂಬುವುದರ ಜೊತೆಗೆ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತವೆ. ಜೀವನದ ಯಾವುದೇ ಸಂದರ್ಭದಲ್ಲಿಯೂ ವಚನಗಳ ಮೌಲ್ಯಗಳು ದಾರಿದೀಪವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದವರು ಸುತ್ತೂರು ಮಠದ ಪೂಜ್ಯ ರಾಜೇಂದ್ರ ಶ್ರೀಗಳು. ವಿದ್ಯಾರ್ಥಿಗಳ ಶಿಕ್ಷಣ ಮತ್ತು ವಸತಿಗಾಗಿ ಪ್ರಥಮ ವಿದ್ಯಾರ್ಥಿನಿಲಯವನ್ನು ಸ್ಥಾಪಿಸುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಮಹನೀಯರು ಅವರು. ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆಹಾರದ ಕೊರತೆ ಎದುರಾದ ಸಂದರ್ಭದಲ್ಲಿ ತಮ್ಮ ಚಿನ್ನದ ಕರಡಿಗೆಯನ್ನೇ ಅಡವಿಟ್ಟು ವಿದ್ಯಾರ್ಥಿಗಳ ಹಸಿವನ್ನು ನೀಗಿಸಿದ ಅವರ ಮಾತೃ ಹೃದಯ ಮತ್ತು ತ್ಯಾಗ ಮನೋಭಾವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ.

ವಿದ್ಯಾರ್ಥಿಗಳ ಹಸಿವು ನೀಗಿಸುವುದನ್ನೇ ತಮ್ಮ ಕರ್ತವ್ಯವೆಂದು ಭಾವಿಸಿದ ಇಂತಹ ಮಹಾತ್ಮರ ಜೀವನಾದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.  ನಂತರ ವಚನ ವಾಚನ ಮಾಡಿದ 40 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್  ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಓಂ ಬ್ರಿಕ್ಸ್ ಇಂಡಸ್ಟ್ರಿಯ ಸತ್ಯೇಂದ್ರಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಉಪಾಧ್ಯಕ್ಷ ಶಿವಪುರ ಉಮಾಪತಿ, ಸಂಚಾಲಕಿ ಉಷಾ ನಾಗೇಶ್, ವಿದ್ಯಾರ್ಥಿನಿಲಯದ ನಿಲಯಪಾಲಕ ಪಿ. ಮಹೇಶ್, ಮುದ್ದಪ್ಪ, ನಂಜುಂಡಸ್ವಾಮಿ, ಮೋಹನ್, ದೈಹಿಕ ಶಿಕ್ಷಕ ಗುರುಪಾದಸ್ವಾಮಿ, ಲಯನ್ಸ್ ಸಂಸ್ಥೆಯ ಗೆಜ್ಜಗಳ್ಳಿ ಮಹೇಶ್ , ಸುಧಾಕರ್, ಪರಮೇಶ್, ಮಾಧು, ಪರಶಿವಮೂರ್ತಿ, ಪವಿತ್ರ, ನಂದೀಶ್, ಬಸವರಾಜಸ್ವಾಮಿ, ಸದಾಶಿವು ಉಪಸ್ಥಿತರಿದ್ದರು.

admin
the authoradmin

Leave a Reply