LatestMysore

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು  ಕೈಜೋಡಿಸಲು ಬಸವಮಾರ್ಗ ಸಂಸ್ಥಾಪಕ ಎಸ್. ಬಸವರಾಜು ಸಲಹೆ

ಬಸವಮಾರ್ಗದಿಂದ ದಕ್ಷ ಪಿಯು ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಇಂದಿನ ಯುವಜನತೆ ದೇಶದ ಭವಿಷ್ಯದ ಆಸ್ತಿಯಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಗುಣಮಟ್ಟದ ಜೀವನಶೈಲಿ, ಶಿಸ್ತು ಮತ್ತು ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ ಹಾಗೂ ಮಾದಕ ವಸ್ತುಗಳಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಜೋಡಿಸಬೇಕು ಎಂದು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್. ಬಸವರಾಜು ತಿಳಿಸಿದರು.

ನಗರದ ಕೂರ್ಗಳ್ಳಿಯ ದಕ್ಷ ಪಿಯು ಕಾಲೇಜಿನಲ್ಲಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಹಾಗೂ ದಕ್ಷ ಪಿಯು ಕಾಲೇಜಿನ ಸಹಯೋಗದಲ್ಲಿ ವ್ಯಸನದ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ  ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನತೆ ವಿವಿಧ ರೀತಿಯ ದುಶ್ಚಟಗಳಿಗೆ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸ್ನೇಹಿತರ ಒತ್ತಡ, ಕುತೂಹಲ, ಮಾನಸಿಕ ಒತ್ತಡ, ಕುಟುಂಬದ ವಾತಾವರಣ ಹಾಗೂ ಸಾಮಾಜಿಕ ಪ್ರಭಾವಗಳು ಕೆಲವೊಮ್ಮೆ ವಿದ್ಯಾರ್ಥಿಗಳನ್ನು ವ್ಯಸನದ ಕಡೆಗೆ ಕರೆದೊಯ್ಯುತ್ತವೆ. ಆರಂಭದಲ್ಲಿ ಕೇವಲ ಮೋಜು ಅಥವಾ ಪ್ರಯೋಗದ ಉದ್ದೇಶದಿಂದ ಆರಂಭವಾಗುವ ಇಂತಹ ಚಟಗಳು ಕ್ರಮೇಣ ಅಭ್ಯಾಸವಾಗಿ, ನಂತರ ವ್ಯಸನದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಆರಂಭದಲ್ಲಿಯೇ ಇಂತಹ ದುಶ್ಚಟಗಳಿಂದ ದೂರವಿರುವ ಜಾಗೃತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕುಂಠಿತವಾಗುವುದಲ್ಲದೆ, ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಭವಿಷ್ಯದ ಜೀವನವೂ ಹದಗೆಡುವ ಸಾಧ್ಯತೆಯಿದೆ. ವ್ಯಸನಕ್ಕೆ ಒಳಗಾದ ವ್ಯಕ್ತಿ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು ಕೂಡ ಆರ್ಥಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು. ಕ್ರೀಡೆ, ಯೋಗ, ಧ್ಯಾನ, ಓದು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಸ್ನೇಹಿತರು ದುಶ್ಚಟಗಳಿಗೆ ಪ್ರೇರೇಪಿಸಿದರೆ ಅದಕ್ಕೆ ಮಣಿಯದೆ ಧೈರ್ಯವಾಗಿ ನಿರಾಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸ್ನೇಹಿತರ ಆಯ್ಕೆ ಮತ್ತು ಕುಟುಂಬದೊಂದಿಗೆ ಮುಕ್ತವಾಗಿ ಮಾತನಾಡುವ ಅಭ್ಯಾಸವೂ ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರವಿಡಲು ಸಹಕಾರಿಯಾಗುತ್ತದೆ ಎಂದರು.

ವ್ಯಸನ ಎಂಬುದು ಕೇವಲ ಕೆಟ್ಟ ಅಭ್ಯಾಸವಲ್ಲ, ಸೂಕ್ತ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಸಮಾಲೋಚನೆ ಹಾಗೂ ಪುನರ್ವಸತಿಯ ಅಗತ್ಯವಿರುವ ಸಮಸ್ಯೆಯಾಗಿದೆ. ವ್ಯಸನಕ್ಕೆ ಒಳಗಾದವರನ್ನು ಸಮಾಜ ಕೀಳಾಗಿ ಕಾಣಬಾರದು. ಅವರಿಗೆ ತಿರಸ್ಕಾರ ತೋರಿಸುವ ಬದಲು ಪ್ರೀತಿ, ಸಹಾನುಭೂತಿ ಮತ್ತು ಪ್ರೋತ್ಸಾಹದ ಮೂಲಕ ಚಿಕಿತ್ಸೆ ಪಡೆಯಲು ನೆರವಾಗಬೇಕು. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ವ್ಯಸನದಿಂದ ಹೊರಬಂದು ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸುತ್ತಮುತ್ತಲಿನ ಸಮಾಜದಲ್ಲಿ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ರಾಯಭಾರಿಗಳಾಗಬೇಕು. ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ದುಶ್ಚಟಗಳಿಂದ ದೂರ ಉಳಿಯುವುದರ ಜೊತೆಗೆ ಮತ್ತೊಬ್ಬರನ್ನು ವ್ಯಸನದಿಂದ ದೂರವಿರಲು ಪ್ರೇರೇಪಿಸಿದರೆ ಅದೇ ನಿಜವಾದ ಸಾಮಾಜಿಕ ಸೇವೆಯಾಗುತ್ತದೆ. ಯುವಜನತೆಯ ಸಹಭಾಗಿತ್ವದಿಂದ ಮಾತ್ರ ಆರೋಗ್ಯಕರ, ಸುಸಂಸ್ಕೃತ ಮತ್ತು ವ್ಯಸನಮುಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರವು ವ್ಯಸನದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆರಂಭಿಕ ಹಂತದಲ್ಲಿಯೇ ವ್ಯಸನದ ಅಪಾಯಗಳ ಕುರಿತು ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಕ್ಷ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಭಿಷೇಕ್, ಉಪ ಪ್ರಾಂಶುಪಾಲರಾದ ಮೊಹಮ್ಮದ್ ಮುಬ್ಬಾಶಿರ್, ಆಡಳಿತ ಮಂಡಳಿ‌ ಸದಸ್ಯರು,  ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ  ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

admin
the authoradmin

Leave a Reply