LatestPolitical

ಸಚಿವರು- ಶಾಸಕರ ಜಟಾಪಟಿ… ನಿಗಮ ಮಂಡಳಿ ಅಧ್ಯಕ್ಷ ಗಿರಿಗೆ ಕಾಯುತ್ತಿರುವ ನಾಯಕರು.. ಹೈಕಮಾಂಡ್ ಸರ್ಕಸ್!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಹೇಳಿಕೆಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ತರಾವರಿ ರೀತಿಯಲ್ಲಿ ಹೊರ ಬರುತ್ತಲೇ ಇದೆ. ಜತೆಗೆ ಇತ್ತೀಚೆಗೆ ತಾರಕಕ್ಕೂ ಹೋಗಿದೆ. ಆದರೆ ದೆಹಲಿಯಲ್ಲಿ ಮಾಧ್ಯಮದವರ ಮುಂದೆ ನಿಂತು ಸಿದ್ದರಾಮಯ್ಯ ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.  ಇಲ್ಲಿಗೆ ಎಲ್ಲವೂ ಮುಗಿದೇ ಹೋಯಿತಾ? ಖಂಡಿತಾ ಇಲ್ಲ..

ಈ ಹೇಳಿಕೆ ಸಿಎಂ ಅಧಿಕಾರ ಹಂಚಿಕೆ ವಿಚಾರಕ್ಕೆ ತಾತ್ಕಾಲಿಕ ಶಮನ ಎಂಬಂತೆ ಕಂಡು ಬಂದರೂ.. ಅದೇ ಅಂತಿಮವಲ್ಲ. ಸಿದ್ದರಾಮಯ್ಯ ಬೆಂಬಲಿಗರು ಮಾತ್ರ ಸಿಎಂ ಹೇಳಿದ ಮೇಲೆ ಮುಗೀತು ಮುಂದೆ ಆ ವಿಚಾರದ ಬಗ್ಗೆ ಮಾತೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಬಿಹಾರದ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಕರ್ನಾಟಕದ ಕಾಂಗ್ರೆಸ್ ನಲ್ಲಿ ಉದ್ಭವಿಸಿರುವ ಅಸಮಾಧಾನಗಳು ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬಿಹಾರ ಚುನಾವಣೆ ಕಾಂಗ್ರೆಸ್ ಗೆ ಬಹುಮುಖ್ಯವಾಗಿದೆ. ಈಗಾಗಲೇ ಉತ್ತರ ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ದೇಶದ ಜನತೆಗೆ ತೋರಿಸಬೇಕಾದರೆ ಬಿಹಾರದ ಚುನಾವಣೆಯನ್ನು ಗಂಭೀರವಾಗಿ ಎದುರಿಸಬೇಕಾಗಿದೆ. ಮತ್ತು ಅದಕ್ಕೆ ಕರ್ನಾಟಕದಿಂದ ಸರ್ವ ರೀತಿಯಲ್ಲಿ ಸಹಕಾರ ಬೇಕಾಗಿದೆ. ಹೀಗಾಗಿ ಕರ್ನಾಟಕದತ್ತ ಹೆಚ್ಚಿನ ನಿಗಾವಹಿಸುತ್ತಿರುವ ಹೈಕಮಾಂಡ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್  ಸುರ್ಜೆವಾಲ ಅವರ ಮೂಲಕ ಸರ್ಕಾರದೊಳಗಿರುವ ಸಚಿವರು, ಶಾಸಕರ ನಡುವಿನ ಅಸಮಾಧಾನಕ್ಕೆ ಮುಲಾಮು ಹಚ್ಚುವ ಕೆಲಸ ಮಾಡಿಸುತ್ತಿದೆ.

ಇದನ್ನೂ ಓದಿ:ಸಿಎಂ ಆಗುವ ಡಿ.ಕೆ.ಶಿವಕುಮಾರ್ ಕನಸು ಇವತ್ತಿನದಲ್ಲ… ನವೆಂಬರ್ ವೇಳೆಗೆ ಸಿಗುತ್ತಾ ಕುರ್ಚಿ?

ಏನೇ ಆದರೂ ಸಿಎಂ ಅಧಿಕಾರ ಹಸ್ತಾಂತರ ವಿಚಾರ ಕಾಂಗ್ರೆಸ್ ನೊಳಗಿನ ಬೂದಿ ಮುಚ್ಚಿದ ಕೆಂಡವಾಗಿದ್ದು ಅದು ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ. ನವೆಂಬರ್ ತನಕವೂ ಇದರ ಬಗ್ಗೆ ಹೀಗೆಯೇ ಆಗುತ್ತದೆ ಎಂದು ಹೇಳುವುದು ಕಷ್ಟವೇ….

ಇದರ ನಡುವೆ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಗಳು ನಡೆಯ ಬೇಕಿದೆ. ಈಗಾಗಲೇ ಶಾಸಕರು ಸಚಿವರ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೀಗಾಗಿ ಶಾಸಕರನ್ನು ಸಮಾಧಾನಗೊಳಿಸಿ, ಶಾಸಕರ ಮೌಲ್ಯ ಮಾಪನ ಮಾಡಬೇಕಾದ ಅನಿವಾರ್ಯತೆ ಹೈಕಮಾಂಡ್ ಮುಂದೆ ಬಂದಿದೆ.

ಮೂಲ ಕಾಂಗ್ರೆಸ್ಸಿಗರನ್ನು ಎಚ್ಚರಿಕೆಯ ಸಂದೇಶವನ್ನು ರವಾನಿಸಿ ಹೈಕಮಾಂಡ್ ತಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದಾದರೂ ವಲಸಿಗ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟವೇ.. ಅವರಿಗೆ ತಮ್ಮದೇ ಆದ ಮತದಾರರಿದ್ದಾರೆ.. ಸಮುದಾಯದ ಬೆಂಬಲವಿದೆ.. ಹೀಗಾಗಿ ಅವರು ಪಕ್ಷಕ್ಕೆ ಅಂಟಿಕೊಂಡಿರುತ್ತಾರೆ ಎಂಬ ನಂಬಿಕೆಯೂ ಇಲ್ಲದಾಗಿದೆ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡರೆ ಪಕ್ಷ ಬಿಟ್ಟು ಹೋಗಲು ತಯಾರಾಗಿರುತ್ತಾರೆ.

ಇದನ್ನೂ ಓದಿ:ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಾದರೆ ರಾಜ್ಯದ ಸಿಎಂ-ಡಿಸಿಎಂಗೆ ಟೆನ್ಷನ್ ಏಕೆ?

ಈಗಾಗಲೇ ಬೇರೆ ಪಕ್ಷದಿಂದ ಕಾಂಗ್ರೆಸ್ ವಲಸೆ ಬಂದಿರುವ ಶಾಸಕರ ಪರಿಸ್ಥಿತಿ ನೆಟ್ಟಗಿಲ್ಲ. ಕ್ಷೇತ್ರಕ್ಕೆ ಅನುದಾನ ಸಮರ್ಪಕವಾಗಿ ದೊರೆಯದೆ ಅವರು ಅಭಿವೃದ್ಧಿ ಕೆಲಸ ಮಾಡಲಾಗದೆ ಪರದಾಡುತ್ತಿದ್ದಾರೆ. ಮುಂದಿನ ಚುನಾವಣೆ ಹೊತ್ತಿಗೆ ಕ್ಷೇತ್ರಕ್ಕೆ ಏನು ಮಾಡಿದ್ದೀರಾ ತೋರಿಸಿ ಎಂದರೆ ಹೇಳಿಕೊಳ್ಳುವಂತಹದ್ದು ಏನೂ ಇಲ್ಲದಾಗಿದೆ. ಇದರ ನಡುವೆ ಮುಂದಿನ ಚುನಾವಣೆಗೂ ಸಜ್ಜಾಗ ಬೇಕಿದೆ. ಸದ್ಯ ಅವರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳದಂತಾಗಿದೆ. ಹೀಗಾಗಿ ಒಬ್ಬರ ಮೇಲೊಬ್ಬರಂತೆ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಸರ್ಕಾರ ಏನೇ ಹೇಳಿದರೂ ಜನಕ್ಕೆ ಗ್ಯಾರಂಟಿ ಯೋಜನೆಯಿಂದ ಹೊರೆಯಾಗುತ್ತಿದೆ ಎಂಬುದನ್ನು ಅರಿಯದಷ್ಟು ದಡ್ಡರು ಮತದಾರರಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸರ್ಕಾರದ ಬಳಿ ಹಣವಿಲ್ಲ ಎಂಬ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ಆರಂಭವಾಗಿವೆ. ಇದೆಲ್ಲವನ್ನು ಗಮನಿಸಿದರೆ ಸದ್ಯ ಸರ್ಕಾರಕ್ಕೆ ತಲೆನೋವಂತು ಇದ್ದೇ ಇದೆ. ಇದೆಲ್ಲದರ ನಡುವೆ ತಮ್ಮದೇ ಸಚಿವರು, ಶಾಸಕರನ್ನು ತೃಪ್ತಿಗೊಳಿಸುವ ಕೆಲಸವೂ ನಡೆಯಬೇಕಿದೆ.

ಒಟ್ಟಾರೆ ರಾಜ್ಯ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಂತು ನಿಜ.. ಒಂದೆಡೆ ಶಾಸಕರು ಸಚಿವ ಸ್ಥಾನಕ್ಕಾಗಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಕಾರ್ಯಕರ್ತರು ತಮಗೆ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತಾ ಎಂದು ಕಾಯುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿರುವ ಹೈಕಮಾಂಡ್ ಎಲ್ಲವನ್ನು ಸರಿಪಡಿಸಲು ಸರ್ಕಸ್ ಮಾಡುತ್ತಿದೆ ಎಂದರೆ ತಪ್ಪಾಗಲಾರದು ಮುಂದೇನು ಕಾದು ನೋಡೋಣ..

 

 

 

B M Lavakumar

admin
the authoradmin

Leave a Reply