ಚಿಂತೂರು(ಆಂಧ್ರಪ್ರದೇಶ): ಖಾಸಗಿ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯ ರಾಜುಗರಿಮೆಟ್ಟದಲ್ಲಿ ನಡೆದಿದೆ. ಈ ಭೀಕರ ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಬಸ್ ಅನ್ನಾವರಂನಿಂದ ಭದ್ರಾಚಲಂಗೆ ಹೋಗುತ್ತಿತ್ತು ಎಂದು ಹೇಳಲಾಗಿದ್ದು, ಬಸ್ ನಲ್ಲಿ ಚಾಲಕ, ನಿರ್ವಾಹಕ ಮತ್ತು ಸುಮಾರು 35ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯ ರಾಜುಗರಿಮೆಟ್ಟದಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಣಿವೆ ಉರುಳಿದೆ. ಪರಿಣಾಮ ಬಸ್ ಸಂಪೂರ್ಣ ಜಖಂಗೊಂಡಿದ್ದು ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ ಐವರು ಮಹಿಳೆಯರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ತೀವ್ರ ಗಾಯಗೊಂಡಿದ್ದಾರೆ. ಮೃತರು ಚಿತ್ತೂರು ಜಿಲ್ಲೆಯವರು ಎಂದು ಹೇಳಲಾಗಿದೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಪೊಲೀಸರು ಮತ್ತು ರಕ್ಷಣಾ ಪಡೆಗಳು ಮತ್ತು ಸಾರ್ವಜನಿಕರು ಬಸ್ ನಲ್ಲಿ ಸಿಲುಕಿದ್ದವರನ್ನು ಹೊರ ತೆಗೆದಿದ್ದು, ಮೂರು ಆಂಬ್ಯುಲೆನ್ಸ್ ಮತ್ತು ಐದು ಪೊಲೀಸ್ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಿದ್ದಾರೆ. ಕೆಲವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಶವವನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ

ಇದೆಲ್ಲದರ ನಡುವೆ ಗಂಭೀರ ಗಾಯಗೊಂಡ ಐವರನ್ನು ಭದ್ರಾಚಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಅಲ್ಲದೆ ಗಾಯಾಳುಗಳು ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂತಾಪ ವ್ಯಕ್ತಪಡಿಸಿದ್ದು, ಈ ಘಟನೆ ದುಃಖಕರ ಎಂದು ಹೇಳಿದ್ದಲ್ಲದೆ, ತಕ್ಷಣ ಸ್ಥಳಕ್ಕೆ ಹೋಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಅವರು ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಇನ್ನು ದುರಂತದ ಬಗ್ಗೆ ಸಚಿವ ನಾರಾ ಲೋಕೇಶ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ಬಸ್ ಕಂದಕಕ್ಕೆ ಬಿದ್ದು ಯಾತ್ರಿಕರು ಸಾವನ್ನಪ್ಪಿರುವುದು ದುಃಖಕರವಾಗಿದೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಬೆಂಬಲ ನೀಡಲಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದಿದ್ದಾರೆ. ಗೃಹ ಸಚಿವೆ ಅನಿತಾ ಅವರು ರಸ್ತೆ ಅಪಘಾತದ ಬಗ್ಗೆ ವಿವರಗಳನ್ನು ಪೊಲೀಸರಿಂದ ಕೇಳಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಮೃತರ ಬಂಧುಗಳು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಸ್ಪತ್ರೆಯಲ್ಲಿಯೂ ಜನ ಸೇರಿದ್ದು, ಗೋಳಾಟ, ರೋದನ ಮುಗಿಲು ಮುಟ್ಟಿದೆ. ತಮ್ಮವರನ್ನು ಕಳೆದುಕೊಂಡವರು ಅತ್ತು ಕರೆಯುತ್ತಿರುವ ದೃಶ್ಯವೂ ಕಂಡು ಬರುತ್ತಿದೆ. ಇನ್ನು ಘಟನೆಗೆ ಕಾರಣವೇನು ಎಂಬುದರ ತನಿಖೆಯೂ ನಡೆಯುತ್ತಿದೆ. ವರ್ಷದ ಕೊನೆಯ ವೇಳೆಗೆ ಅಲ್ಲಲ್ಲಿ ದುರ್ಘಟನೆಗಳು ನಡೆಯುತ್ತಿರುವುದು ಆತಂಕವನ್ನು ಸೃಷ್ಟಿ ಮಾಡಿದೆ.








