ArticlesLatest

ಅಮ್ಮ…. ಮಾತೃತ್ವದ ಅಮರಗಾಥೆ..  ಸಂಸ್ಕೃತಿಯ ಜೀವಶಕ್ತಿ… ಪ್ರೀತಿಯ ಅಕ್ಷಯ ಪಾತ್ರೆ

ಇದು ಮದರ್ಸ್ ಡೇ ವಿಶೇಷ ಲೇಖನ…

ಮೇ.10.. ಅಮ್ಮಂದಿರ ದಿನ…  ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ ಜೀವನದುದ್ದಕ್ಕೂ  ಪ್ರತಿ ಕ್ಷಣವೂ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಬಯಸುವ ಅಮ್ಮನ ಋಣವನ್ನು ತೀರಿಸುವುದು ಜನ್ಮದಲ್ಲಿಯೇ ಅಸಾಧ್ಯ.. ಅಮ್ಮನ ಮಹತ್ವದ ಬಗ್ಗೆ ಲೇಖಕಿ ಡಾ. ಪೂರ್ಣಿಮಾ ಉಮೇಶ್ ಇಲ್ಲಿ ತೆರೆದಿಟ್ಟಿದ್ದಾರೆ.

ಭಾರತೀಯ ಪರಂಪರೆಯಲ್ಲಿ ತಾಯಿಯ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. “ಮಾತೃದೇವೋ ಭವ”ಎನ್ನುವುದು ಬರೀ ಮಾತಲ್ಲ ಅದು ಈ ಸಂಸ್ಕೃತಿಯ ಜೀವಶಕ್ತಿಯಾಗಿದೆ. ತಾಯಿ ಎಂದರೆ ಕೇವಲ ಸಂಬಂಧವಲ್ಲ; ಇದು ಒಂದು ಭಾವನೆ, ಒಂದು ಶಕ್ತಿ…  ಈ ಭೂಮಿಯ ಮೇಲೆ ನಮ್ಮ ಜೀವನವನ್ನು ತೋರಿಸುವ ಮೊದಲ ಗುರುವೇ ತಾಯಿ.. ಅವಳ ಪ್ರೀತಿಯಲ್ಲಿ ನಿಸ್ವಾರ್ಥತೆ ಇದೆ, ತ್ಯಾಗದಲ್ಲಿ ಮಾಧುರ್ಯವಿದೆ. ತಾಯಿಯ ದಿನಾಚರಣೆ ಕೇವಲ ಸಂಭ್ರಮವಲ್ಲ; ಅದು ಅವಳ ಪ್ರತಿದಿನದ ಶ್ರಮವನ್ನು ಗುರುತಿಸುವ ಮತ್ತು ಗೌರವಿಸುವ ಸಂದರ್ಭ… ಕನ್ನಡದ ಪ್ರತಿಯೊಬ್ಬ ವ್ಯಕ್ತಿಯೂ ತಾಯಿ ಮತ್ತು ತಾಯ್ನಾಡು ಒಂದೇ ಮೆಟ್ಟಿಲಲ್ಲಿದ್ದಾರೆ.

ಕನ್ನಡದ ಜನಪದ ಸಾಹಿತ್ಯವು ತಾಯಿಯ ಮಮತೆಯನ್ನು ವಿಶೇಷವಾಗಿ ತೆರೆದಿಟ್ಟಿದೆ “ಹೆತ್ತ ತಾಯಿಯ ಬೈಯಬೇಡೋ ಹುಚ್ಚಪ್ಪಾ, ಹತ್ತು ದೇವರಿಗೆ ಸಮನಾದಾಳು” ಎಂಬ ತ್ರಿಪದಿಯು ತಾಯಿಯ ದೈವತ್ವವನ್ನು ಹೇಳುತ್ತದೆ. ಜಾನಪದದ ಕವನಗಳಲ್ಲಿ ತಾಯಿಯನ್ನು ‘ಭೂ’ತಾಯಿಗೆ ಹೋಲಿಸಲಾಗಿದೆ. ತಾಯಿ ಪಡುವ ಹೆರಿಗೆಯ ನೋವು, ಮಗುವನ್ನು ಸಲಹುವುದರಲ್ಲಿ ಅನುಭವಿಸುವ ಕಷ್ಟಗಳನ್ನು ಪ್ರತಿಭಟನೆಯನ್ನು “ಹಡೆದವಳ ಕರುಳು” ಎಂಬ ಭಾವನೆಯಲ್ಲಿ ಚಿತ್ರಿಸಲಾಗಿದೆ. ಮಗು ಏನೇನು ಮಾಡಲಿ, “ತಾಯಿ ಹಾಲಿನ ಋಣವ ತೀರಿಸಲಾಗದು” ಎಂಬ ಸತ್ಯವನ್ನು ಅವರು ಗಮನದಲ್ಲಿಟ್ಟಿದ್ದಾರೆ.

ನಮ್ಮ ಕನ್ನಡದ ಗಾದೆಗಳು ಜ್ಞಾನಕ್ಕೆ ಸಮಾನ ಗುಣಮಟ್ಟವಾಗಿವೆ. “ತಾಯಿಗಿಂತ ದೇವರಿಲ್ಲ, ತಾಯಿಗಿಂತ ಬಂಧುವಿಲ್ಲ” ಎಂಬ ಮಾತು ಸದಾ ನಿಜ. “ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಹಿತವಿಲ್ಲ” ಎಂಬ ಗಾದೆಯು ಜೀವನದ ಅನಿವಾರ್ಯತೆಯನ್ನು ತಾಯಿಯ ಪ್ರೀತಿಗೆ ಹೋಲಿಸುತ್ತದೆ. ಮನೆಯ ಆಧಾರಸ್ಥಂಭವಾದ ತಾಯಿಯನ್ನು ಕಳೆದುಕೊಂಡಾಗ “ತಾಯಿ ಸತ್ತರೆ ತವರು ಮನೆ ಹೋದಂತೆ” ಎಂಬ ಗಾದೆ ಮಹತ್ವ ನೀಡುತ್ತದೆ. ಈ ನಾಣ್ಣುಡಿಗಳು ತಾಯಿಯ ಸ್ಥಾನವನ್ನು ಭಾವನಾತ್ಮಕ, ಸಾಮಾಜಿಕ ಮತ್ತು ಕುಟುಂಬದ ದೃಷ್ಟಿಯಿಂದ ಬಿಂಬಿಸುತ್ತವೆ.

ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆ, ಜಿ.ಎಸ್. ಎಸ್ ಅವರಂತಹ ಕವಿಗಳು ತಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಬರಹದಲ್ಲಿ ತಾಯಿ ಪರಬ್ರಹ್ಮಸ್ವರೂಪಿಣಿಯಾಗಿ, ದ.ರಾ. ಬೇಂದ್ರೆ ಅವರಿಂದ ತಾಯಿಯ ವಾತ್ಸಲ್ಯ ಆಧ್ಯಾತ್ಮಕ್ಕೆ ಕೊಂಡೊಯ್ಯಲಾಗಿದೆ. “ನೀ ಹೀಗೆ ನೋಡಬೇಡ ನನ್ನ…” ಎನ್ನುವಾಗ ತಾಯಿಯ ಕರುಣೆಯ ಕಣ್ಣುಗಳು ಗೋಚರಿಸುತ್ತವೆ. “ಸಾಯೋ ಆಟ ಸಾಕು ಮಾಡು ಅಮ್ಮಾ” ಎಂಬ ಸಾಲುಗಳಲ್ಲಿ ಮಗುವಿನ ನಿರ್ದಘ್ಘಳಿಕೆಯನ್ನೂ ತಾಯಿಯ ಸಂರಕ್ಷಕ ಸ್ವರೂಪವನ್ನು ತೋರುತ್ತದೆ. ಪ್ರತಿಯೊಬ್ಬ ಕವಿ ತನ್ನ ಕಾವ್ಯದ ಮೂಲಕ ತಾಯಿಯ ಋಣವನ್ನು ತೀರಿಸುವ ಪ್ರಯತ್ನ ಮಾಡಿದ್ದಾನೆ.

ತಾಯಿ ಮನೆಯೊಳಗೆ ಮಾತ್ರವಲ್ಲ; ಅವಳು ಇಡೀ ಸಮಾಜಕ್ಕೆ ಸಮೀಕ ಶಕ್ತಿ. ಮಗುವಿನ ನೈತಿಕತೆಯನ್ನು ನಿರ್ಮಾಣದಲ್ಲಿ ತಾಯಿಯ ಪಾತ್ರವೂ ಮಹತ್ವವಾಗಿದೆ. ಶಿವಾಜಿ ಮಹಾರಾಜರಿಗೆ ಧೈರ್ಯ ನೀಡಿದ ಜೀಜಾಬಾಯಿ ಅಥವಾ ಸ್ವಾಮಿ ವಿವೇಕಾನಂದರಿಗೆ ಆಧ್ಯಾತ್ಮದ ಅರಿವು ಮೂಡಿಸಿದ ಭುವನೇಶ್ವರಿ ದೇವಿ ಇದಕ್ಕೆ ಸಾಕ್ಷಿಯಾಗಿದ್ದಾರೆ.  “ಮನೆಯೇ ಮೊದಲ ಪಾಠಶಾಲೆ,  ಜನನಿಯೇ ಮೊದಲ ಗುರು” ಎಂಬಂತೆ, ತಾಯಿ ನೀಡುವ ಶಿಕ್ಷಣವೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಅವಳು ಸಮಾಜಕ್ಕೆ ಬೇಕಾದ ಉತ್ತಮ ವ್ಯಕ್ತಿಗಳನ್ನು ನೀಡುವ ಶ್ರೇಷ್ಟ ಶಿಕ್ಷಕಿಯಾಗಿದ್ದಾಳೆ.

ಆಧುನಿಕ ಜೀವನದಲ್ಲಿ ತಾಯಿಯ ಪಾತ್ರ ಇನ್ನಷ್ಟೂ ಹೆಚ್ಚಾಗಿದೆ…  ಮನೆಯಿಂದಾಚೆಗೆ ಹೋಗಿ ದುಡಿಯುತ್ತಾ ದುಡಿಮೆಯ ಭಾರದ ಜತೆಗೆ ಮಕ್ಕಳ ಲಾಲನೆ ಪಾಲನೆ ಮಾಡುವುದು ಸುಲಭವಲ್ಲ. ಹೃದಯವಂತ ಮಹಿಳೆಯರು ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಸಮತೋಲನಗೊಳಿಸುತ್ತಿದ್ದಾರೆ. ಇಂದಿನ ಬಿಜ್ಝಿ ಜೀವನದಲ್ಲಿ, ನಾವು ವರ್ಷಕ್ಕೊಮ್ಮೆ “ಮದರ್ಸ್ ಡೇ” ಆಚರಿಸುತ್ತೇವೆ.  ಆದರೆ ತಾಯಿಗೆ ಉಡುಗೊರೆಗಿಂತ ಪ್ರೀತಿಯ ಮಾತುಗಳು ಅಗತ್ಯ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದಾಗ, “ಹೆತ್ತವರಿಗೆ ಹಾರದ ಹಂಗು” ಎಂಬ ಹಳೆಯ ಮಾತು ನಮ್ಮನ್ನು  ಎಚ್ಚರಿಸುತ್ತದೆ.

ತಾಯಿಯ ತ್ಯಾಗವನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ತಾಯಿ ತನ್ನ ಹಸಿವನ್ನು ಮೀರಿ ಮಗುವಿನ ಹೊಟ್ಟೆ ತುಂಬಿಸುತ್ತಾಳೆ. ತನ್ನ ಕನಸುಗಳನ್ನು ಬಿಟ್ಟು ಮಕ್ಕಳ ಹಿತಕ್ಕಾಗಿ ಶ್ರಮಿಸುತ್ತಾಳೆ. ತಾಯಿ ಕೇವಲ ತ್ಯಾಗದ ಪ್ರತೀಕವಲ್ಲ; ತಾಳ್ಮೆಯ ಸಂಕೇತವೂ. ಮಗು ಸೋತಾಗ  ಸಾಂತ್ವಾನ ನೀಡಿದ ತಾಯಿ, ಗೆದ್ದಾಗ ಸಂತೋಷ ಆಚರಣೆ  ಮಾಡುತ್ತಾಳೆ. ಸೋಲು ಮುಂದೆ ಬೆನ್ನೆಲುಬಾಗಿ ನಿಂತು ಜಯದತ್ತ ದಾರಿ ತೆರೆದುಕೊಳ್ಳುವಂತೆ ಮಾಡುವವಳು ತಾಯಿಯೇ…

ಕೊನೆಗೆ….  ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ನಾವು ಎಷ್ಟೇ ದೊಡ್ಡವರಾದರೂ, ತಾಯಿಯ ಮುಂದೆ ನಾವು ಎಂದಿಗೂ ಮಗುವೇ. “ಎಲ್ಲಾದ್ರೂ ಇರು ಎಂತಾದ್ರೂ ಇರು, ಎಂದೆಂದಿಗೂ ನೀ ತಾಯಿಗೆ ಮಗನಾಗಿರು” ಎಂಬ ಕವಿವಾಣಿಯನ್ನು ಮರೆಯಬಾರದು. ತಾಯಿಯ ಸಂತೋಷದಲ್ಲಿ ನಮ್ಮ ಸುಖವೂ ಸೇರಿದೆ ಎಂಬ ಅರಿವಿರಲಿ. ಈ ತಾಯಂದಿರ ದಿನದ ಸಂದರ್ಭದಲ್ಲಿ ಅವಳನ್ನು ಗೌರವಿಸುವುದು ಮತ್ತು ಸಂಧ್ಯಾ ಕಾಲದಲ್ಲಿ ಆಸರೆಯಾಗುವುದು ನಮ್ಮ ಕರ್ತವ್ಯವಾಗಲಿ…

 

ವೃತ್ತಿ, ಸಾಹಿತ್ಯ, ಸಾಮಾಜಿಕ ಸೇವೆಯಿಂದ ‘ಗೌರವದ ಸನ್ಮಾನ’ ಪಡೆದ ಡಾ.ಪೂರ್ಣಿಮಾ

admin
the authoradmin

Leave a Reply

Translate to any language you want