LatestPolitical

ಅಧಿಕಾರದ ಗದ್ದುಗೆ ಬಿಟ್ಟು ಹೊರ ಬಂದ ಸಿದ್ದರಾಮಯ್ಯ…. ಮುಗಿಯಿತು ಪಟ್ಟದ ಆಟ…  ಹೇಗಿತ್ತು ರಾಜಕೀಯ ಬದುಕು?

ಮುಖ್ಯಮಂತ್ರಿಯಾಗಿ ಅತಿಹೆಚ್ಚು ವರ್ಷಗಳ ಆಡಳಿತ ನಡೆಸಿದ, ಅತಿಹೆಚ್ಚು ಬಜೆಟ್ ಮಂಡಿಸಿದ ದಾಖಲೆ, ಹಸಿದವರಿಗೆ ಅನ್ನ ಸೇರಿದಂತೆ ಹಲವು ಭಾಗ್ಯಗಳನ್ನು ಕರುಣಿಸಿದ, ಅಹಿಂದ ನಾಯಕನಾಗಿ ಮೆರೆದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ  ಅಧಿಕಾರದ ಗದ್ದುಗೆಗೆ ವಿದಾಯ ಹೇಳಿದ್ದಾರೆ. ಇನ್ಮುಂದೆ ಶಾಸಕರಾಗಿ ಉಳಿಯಲಿರುವ ಅವರು ಮುಂದಿನ ಚುನಾವಣೆ ರಾಜಕೀಯದಿಂದಲೂ ಬದಿಗೆ ಸರಿಯಲಿದ್ದಾರೆ.. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಲಿದ್ದಾರೆ…

2013 ರಿಂದ 2018ರವರೆಗೆ ಐದು ವರ್ಷಗಳ ಕಾಲ ಸುಸೂತ್ರವಾಗಿ ಆಡಳಿತ ನಡೆಸಿದ ಅವರಿಗೆ 2023ರಲ್ಲಿ ವಹಿಸಿಕೊಂಡ ಮುಖ್ಯಮಂತ್ರಿ ಹುದ್ದೆಯ ಹಾದಿ ಸುಲಭದ್ದಾಗಿರಲಿಲ್ಲ. ಭಾರೀ ಸವಾಲ್ ನದ್ದಾಗಿತ್ತು. ಆರಂಭದಿಂದಲೂ ಕೇಳಿ ಬರುತ್ತಿದ್ದ ಅಧಿಕಾರ ಹಸ್ತಾಂತರದ ವಿಚಾರಗಳು ಅವರನ್ನು ವಿಚಲಿತಗೊಳಿಸಿತ್ತು. ಆದರೆ ಎಲ್ಲದಕ್ಕೂ ಹೈಕಮಾಂಡ್ ಕಡೆಗೆ ಬೊಟ್ಟು ತೋರಿಸುತ್ತಲೇ ಬಂದಿದ್ದರು. ಆದರೆ ಇದೀಗ ಮೇ.28 ಅವರ ಅಧಿಕಾರ ಗದ್ದುಗೆಯ ಕೊನೆಯ ದಿನವಾಗಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ವಕೀಲರಾಗಿ ವೃತ್ತಿ ಆರಂಭಿಸಿ ಬಳಿಕ ರಾಜಕೀಯದತ್ತ  ಒಲವು ಹೊಂದಿದ ಅವರು ತಳಮಟ್ಟದಿಂದ ಬೆಳೆದು ಬಂದು ಪ್ರಾಧಿಕಾರದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ವಿಪಕ್ಷನಾಯಕನಾಗಿ ಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವುದು ಅವರ ರಾಜಕೀಯ ಪಯಣದ ಮೈಲುಗಲ್ಲಾಗಿ ಉಳಿಯಲಿದೆ.

ಬಾಲ್ಯ, ಶಿಕ್ಷಣ, ಹೀಗಿ ಅವರ ಜೀವನವನ್ನು ನೋಡಿದ್ದೇ ಆದರೆ ಮೈಸೂರು ಬಳಿಯ ಸಿದ್ದರಾಮನಹುಂಡಿಯ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗಳು ಪುತ್ರರಾಗಿ ಜನಿಸಿದ ಸಿದ್ದರಾಮಯ್ಯನವರು ಶಾಲೆಗೆ ಸೇರಬೇಕಾದ ವಯಸ್ಸಿನಲ್ಲಿ ಆಟವಾಡುತ್ತಾ ಕುರಿಮೇಯಿಸುತ್ತಾ ಕಳೆದಿದ್ದರು. ಶಾಲೆಯ ಮುಖ ನೋಡದ ಬಾಲಕ ಸಿದ್ದರಾಮಯ್ಯನವರು ಓದುವ ಛಲ ಹೊಂದಿದ್ದರು. ಹಾಗಾಗಿ ಶಾಲೆಗೆ ಹೋಗದಿದ್ದರೂ ಮರಳಿನ ಮೇಲೆ ಅ ಆ ಇ ಈ ಬರೆಯುವುದನ್ನು ಕಲಿತರು.

ಬಾಲಕನ ಈ ಆಸಕ್ತಿಯನ್ನು ನೋಡಿದ ನಂಜೇಗೌಡ ಎಂಬುವರು ವಯಸ್ಸಿಗೆ ಅನುಗುಣವಾಗಿ 1957 ರಲ್ಲಿ ಐದನೇ ಕ್ಲಾಸಿಗೆ ಸೇರಿಸಿದರು ಈ ವೇಳೆ ರಾಜಪ್ಪ ಮೇಷ್ಟ್ರು  ಅವರ ಅಪ್ಪನನ್ನು ಹುಟ್ಟಿದ ದಿನಾಂಕ ಕೇಳಿದ್ದರು. ಈ ವೇಳೆ ಅವರು ನನಗೆ ಗೊತ್ತಿಲ್ಲ ಎಂದಿದ್ದರು ಹೀಗಾಗಿ ಮೇಷ್ಟ್ರು  12-08-1947 ಎಂದು ಬರೆದುಕೊಂಡಿದ್ದರಂತೆ.

ಇನ್ನು ವಿದ್ಯಾಭ್ಯಾಸದ ಬಗ್ಗೆ ಹೇಳಬೇಕೆಂದರೆ, 5ನೇ ತರಗತಿ ಮೂಲಕ ಶಾಲೆಗೆ ಸೇರಿದ  ಅವರು ಓದಿನಲ್ಲಿ ಮುಂದಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲ್‌ಗೆ ಮೈಸೂರಿಗೆ ಬಂದ ಅವರು ವಿದ್ಯಾವರ್ಧಕಕ್ಕೆ ಸೇರಿದರು. 1964ರಲ್ಲಿ ಎಸ್‌ ಎಸ್‌ ಎಲ್‌ ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು ಪಿಯುಸಿ ಮತ್ತು ಬಿಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಮುಗಿಸಿ ಕಾನೂನು ಪದವಿಯನ್ನು ವಿದ್ಯಾವರ್ಧಕ ಕಾಲೇಜಿನಲ್ಲಿ ಪಡೆದರು. ಅಲ್ಲದೆ ಇದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು.

ಇದೇ ಸಂದರ್ಭ ಅವರಿಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಸಂಪರ್ಕ ದೊರೆಯಿತು. ಅಲ್ಲದೆ ಜೆ.ಪಿ.ನಾರಾಯಣ್, ಲೋಹಿಯಾ, ರಾಮಸ್ವಾಮಿ ಪೆರಿಯಾರ್ ಅವರ ಪ್ರಭಾವಕ್ಕೊಳಗಾದ ಸಿದ್ದರಾಮಯ್ಯ ವಿದ್ಯಾರ್ಥಿ ಚಳುವಳಿ, ಜನಪರ ಹೋರಾಟಗಳಲ್ಲಿ ಭಾಗವಹಿಸತೊಡಗಿದರು. 1974ರಲ್ಲಿ ಜೆಪಿ ಚಳವಳಿ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದರು. ಮುಂದೆ ರಾಜಕೀಯದತ್ತ ವಾಲಿದ ಇವರು ಮೊದಲಿಗೆ 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು.

1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಎಂ.ರಾಜಶೇಖರಮೂರ್ತಿ ಹಾಗೂ ಗುರುಪಾದಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು. 1983ರ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ತಮ್ಮ ಹಣವನ್ನು ಖರ್ಚು ಮಾಡಿ ಓಟು ಹಾಕಿಸಿ ಗೆಲ್ಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದು ವಿಶೇಷ.

ಇವರ ಹೋರಾಟದ ಮನೋಭಾವ, ನೇರ ನಡೆ ನುಡಿಯನ್ನು ಮೆಚ್ಚಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು. ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಈ ಸಂದರ್ಭ ಹಲವಾರು ಉಪಯುಕ್ತ ಕೆಲಸ ನಡೆದಿದ್ದು ಇತಿಹಾಸ. ಹೆಗಡೆಯವರ ಸಚಿವ ಸಂಪುಟದಲ್ಲಿ ರೇಷ್ಮೆಖಾತೆ ಸಚಿವರಾಗಿಯೂ ಸಿದ್ದರಾಮಯ್ಯ ಕಾರ್ಯನಿರ್ವಹಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು.

ಆದರೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ರಾಜಶೇಖರಮೂರ್ತಿಯವರು ಸೋಲಿಸಿದರು. ಆದರೆ ಧೃತಿಗೆಡದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನವನ್ನು ಎಂದಿನಂತೆ ಮುಂದುವರೆಸಿದರು. ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಪಡೆದ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡಿದರಲ್ಲದೆ, 1994ರಲ್ಲಿ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. ಆ ನಂತರ 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾದಾಗ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿತ್ತಾದರೂ ಉಪಮುಖ್ಯ ಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾದರು.

1999ರಲ್ಲಿ ಕಾಂಗ್ರೆಸ್ ಅಲೆ ಬೀಸಿದಾಗ ಮತ್ತೆ ಚುನಾವಣೆಯಲ್ಲಿ ಎ.ಎಸ್.ಗುರುಸ್ವಾಮಿ ಮುಂದೆ ಸೋಲು ಕಂಡರು. 2004ರಲ್ಲಿ ಮತ್ತೆ ಗೆಲುವು ಸಾಧಿಸಿದ ಅವರು ಜೆಡಿಎಸ್ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯ ಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಆದರೆ ಜೆಡಿಎಸ್‌ನ ರಾಜಕೀಯ ರಗಳೆಗಳಿಂದ ಬೇಸತ್ತ ಅವರು ಆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದು 2005ರಲ್ಲಿ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅಲ್ಲದೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಕಾಂಗ್ರೆಸ್ ಸೇರಿದರು.

2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಅವತ್ತು ಅಸ್ತಿತ್ವದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಒಗ್ಗಟ್ಟಾಗಿ ಸಿದ್ದರಾಮಯ್ಯನವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದು ಶಿವಬಸಪ್ಪ ಎಂಬುವರನ್ನು ಅವರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಲು ಇನ್ನಿಲ್ಲದಂತೆ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿದ್ದರಾಮಯ್ಯ ಅಲ್ಪ ಮತದಿಂದ ಗೆಲುವು ಸಾಧಿಸಿದ್ದರು. 2008ರ ಚುನಾವಣೆ ವೇಳೆಗೆ ಕ್ಷೇತ್ರ ಪುನರ್ವಿಂಗಡಣೆ ಆಗಿದ್ದರಿಂದ ವರುಣಾ ಕ್ಷೇತ್ರ ಉದಯವಾಗಿತ್ತು. ಇಲ್ಲಿಂದ ಸ್ಪರ್ಧೆ ಮಾಡಿದ ಅವರು ಗೆಲುವು ಸಾಧಿಸಿ ವಿಪಕ್ಷನಾಯಕರೂ ಆದರು.

ಮೇ 5, 2013ರ ಚುನಾವಣೆಯಲ್ಲಿ ಮತ್ತೆ ವರುಣಾದಿಂದ ಆಯ್ಕೆಯಾಗಿ ಮುಖ್ಯ ಮಂತ್ರಿ ಗದ್ದುಗೆಯನ್ನು ಅಲಂಕರಿಸಿ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದರು. ಹಲವು ಭಾಗ್ಯಗಳನ್ನು ನೀಡಿದ್ದರೂ 2018ರ ವಿಧಾನ ಸಭಾ ಚುನಾವಣೆ ಅವರ ಪಾಲಿಗೊಂದು ಅಗ್ನಿಪರೀಕ್ಷೆಯಾಯಿತು. ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಹಾಗೆಯೇ ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ಅವರ ವಿರುದ್ಧ ಹೀಗೆ ಎರಡು ಕಡೆಯಿಂದ ಸ್ಪರ್ಧಿಸಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಕೈಹಿಡಿಯಲಿಲ್ಲ. ಬಾದಾಮಿ ಕ್ಷೇತ್ರದ ಜನ ಕೈಹಿಡಿದರಾದರೂ ಕಾಂಗ್ರೆಸ್ ಬಹುಮತ ಪಡೆಯದ ಕಾರಣ ಮತ್ತೆ ಮುಖ್ಯ ಮಂತ್ರಿಯಾಗುವ ಕನಸು ನನಸಾಗಲಿಲ್ಲ.

ಮುಂದಿನ 2023ರ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅವರು ಗೆಲುವು ಸಾಧಿಸಿ ಮುಖ್ಯಮಂತ್ರಿಯಾದರೂ ಅವರ ಸಿಎಂ ಹಾದಿ ಸುಲಭದ್ದಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು. ಆರಂಭದಿಂದಲೇ ಸಿಎಂ ಬದಲಾವಣೆ ವಿಚಾರಗಳು ಮುನ್ನಲೆಗೆ ಬರುತ್ತಲೇ ಇತ್ತು. ಆದರು ಮೂರು ವರ್ಷಗಳ ಆಡಳಿತ ನಡೆಸಿದ ಅವರು ಇದೀಗ ರಾಜೀನಾಮೆ ನೀಡಿದ್ದಾರೆ. ಅವರು ದೆಹಲಿ ರಾಜಕೀಯದತ್ತ ಮುಖ ಮಾಡದೆ ರಾಜ್ಯದಲ್ಲಿಯೇ ಉಳಿಯುವ ಮನಸ್ಸು ಮಾಡಿದ್ದಾರೆ. ಮುಂದೆ 2028ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವ ವಾಗ್ದಾನ ಮಾಡಿದ್ದಾರೆ.

ಸಿದ್ದರಾಮಯ್ಯರವರ ಜನ್ಮ ರಹಸ್ಯದ ಸ್ವಾರಸ್ಯವೇನು?

ಆ.12ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಆಚರಿಸುತ್ತಾ ಬಂದಿದ್ದರು. ಆದರೆ 2021ರಲ್ಲಿ ತಮ್ಮ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಆಗಲೇ ಜನರಿಗೆ ಅವರ ಜನ್ಮದಿನ ಆ.3 ಎಂಬುದು ಗೊತ್ತಾಗಿದ್ದು, ಆ ನಂತರ 2022ರಿಂದ ಆ.3ರಂದು ಅವರ  ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಶುರುಮಾಡಿದ್ದರು

2021ರಲ್ಲಿ  ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆ.12 ರಂದು ಆಚರಣೆ ಮಾಡಲು ಸಿದ್ಧ‍ತೆ ನಡೆಸುತ್ತಿದ್ದರು. ಆಗ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಜನ್ಮರಹಸ್ಯವನ್ನು ಬಿಚ್ಚಿಟ್ಟು ಬೆಂಬಲಿಗರು, ಅಭಿಮಾನಿಗಳು ಅಚ್ಚರಿ ಮೂಡಿಸಿದ್ದರು. ಹಾಗೆನೋಡಿದರೆ ಅವರ ಜನ್ಮದಿನಾಂಕದ ಬಗ್ಗೆ ಗೊಂದಲ ಹಿಂದಿನಿಂದಲೂ ಇತ್ತು. ಈ ಬಗ್ಗೆ ಅವರೇ ಹಲವು ವೇದಿಕೆಗಳಲ್ಲಿ ಹೇಳಿದ್ದರು. ಆದರೂ ಶಾಲೆಯಲ್ಲಿ ನಮೂದಾಗಿರುವ ಆ.12ರಂದೇ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಾ ಬಂದಿದ್ದರು.

ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬಂದ ಬಳಿಕ ಊರುಗಳಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸುತ್ತಾ ಬಂದಿದ್ದರು. 2021ರಲ್ಲಿ ಸ್ವತಃ ಅವರೇ ನನ್ನ ಜನ್ಮ ದಿನಾಂಕ ಆ.12,1947 ಅಲ್ಲ ಆ.3, 1947 ಎಂದು ಹೇಳುವ ಮೂಲಕ ಜನ್ಮ ರಹಸ್ಯ ಬಯಲುಗೊಳಿಸಿದ್ದರು.

ತಾಯಿಗೆ ಮಗ ರಾಜನಾಗುವ ಕನಸು ಬಿದ್ದಿತ್ತಂತೆ

ಸಿದ್ದರಾಮಯ್ಯನವರ ತಾಯಿ ಬೋರಮ್ಮ ಅವರಿಗೆ ಅವರ ೫ನೇ ಮಗ ರಾಜನಾಗುತ್ತಾನೆ ಎಂಬ ಕನಸು ಬಿದ್ದಿತ್ತಂತೆ. ತಮ್ಮ 5ನೇ ಮಗನಾದ ಸಿದ್ದರಾಮಯ್ಯ ರಾಜನಾಗುತ್ತಾನೆ ಎಂಬ ಕನಸು ಬೋರಮ್ಮ ಅವರಿಗೆ ಬಿದ್ದಿತ್ತು. ಅದನ್ನು ಎರಡು ಬಾರಿ ನಿಜವಾಗಿಸಿದ್ದ ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಪೂರ್ಣಾವಧಿ ಮತ್ತು 2023ರಿಂದ ಮೂರು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದಾರೆ.

 

 

admin
the authoradmin

Leave a Reply

Translate to any language you want