LatestNews

ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಎ ಸಿ ನಿತಿನ್ ಚೆಕ್ಕಿ

*ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ *ನಿವೃತ್ತ ಮುಖ್ಯ ಶಿಕ್ಷಕ ಎಂ.ಎಸ್.ಅಬ್ದುಲ್ ರಬ್ ಅವರಿಗೆ ಸನ್ಮಾನ.

ಕೊಡ್ಲಿಪೇಟೆ (ರಘುಹೆಬ್ಬಾಲೆ) : ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2025–26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ  32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮುಖ್ಯಶಿಕ್ಷಕರಾಗಿ ವಯೋನಿವೃತ್ತಿ ಹೊಂದಿದ ಎಂ.ಎಸ್. ಅಬ್ದುಲ್ ರಬ್‌ ಅವರಿಗೆ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ಗಣ್ಯರು ರಬ್ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅವರನ್ನು ಗೌರವಿಸಿ ನಿವೃತ್ತಿ ಜೀವನವು ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆದ  ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್. ಎನ್. ಚಂದ್ರಮೌಳಿ  ಮಾತನಾಡಿ, ಅಬ್ದುಲ್ ರಬ್ ಅವರು ತಮ್ಮ ಸೇವಾ ಅವಧಿಯಲ್ಲಿ  ಸಾವಿರಾರು  ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿಯೂ ಅವರ ಕೊಡುಗೆ ಅಪಾರವಾಗಿದೆ. ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ವಿದ್ಯಾಸಂಸ್ಥೆಗೆ ಹೆಮ್ಮೆ ಹಾಗೂ ಅಭಿಮಾನದ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚೆಕ್ಕಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಓದುವುದು ಮತ್ತು ಅಂಕಗಳನ್ನು ಗಳಿಸುವುದು ಮಾತ್ರವಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಉತ್ತಮ ನಾಗರಿಕ ಗುಣಗಳು, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಆಸ್ತಿ, ಹಣ ಹಾಗೂ ವೈಯಕ್ತಿಕ ಸಾಧನೆಗಳತ್ತ ಗಮನ ಹರಿಸುತ್ತಿದ್ದಾರೆ. ಆದರೆ ರಾಜ್ಯ, ದೇಶ, ಸಮಾಜ ಹಾಗೂ ಧರ್ಮಗಳ ನಡುವೆ ಒಗ್ಗಟ್ಟು, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಿ ಬೆಳೆಯಬೇಕು. ಶಿಕ್ಷಣದ ಜೊತೆಗೆ ಕ್ರೀಡೆ, ಆರೋಗ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು. ಉತ್ತಮ ಆರೋಗ್ಯ ಮತ್ತು ಕ್ರೀಡಾ ಮನೋಭಾವವು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶಿಕ್ಷಣವು ವ್ಯಕ್ತಿಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮೂಲ ಆಧಾರವಾಗಿದೆ ಎಂದು ಹೇಳಿದರು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ರಾಷ್ಟ್ರಗಳೇ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಮಠಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಘ-ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮನೆಹಳ್ಳಿ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಶಿಕ್ಷಣದ ಜೊತೆಗೆ ಶಿಸ್ತು, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಗ್‌ಬಾಸ್ ಖ್ಯಾತಿಯ ಕಲಾವಿದ ಧ್ರುವಂತ್ ಬಾಲಾಜಿ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಗುರಿಯತ್ತ ಮುನ್ನಡೆಯಬೇಕು ಎಂದು ಪ್ರೇರಣಾದಾಯಕ ನುಡಿಯಾಡಿದರು.

ಸೋಮವಾರಪೇಟೆ ತಾಲ್ಲೂಕು ದಂಡಾಧಿಕಾರಿ ಕೃಷ್ಣಮೂರ್ತಿ  ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು.ಗುರು ಹಿರಿಯರಿಗೆ,ಪೋಷಕರಿಗೆ ಗೌರವ‌ಕೊಡಬೇಕು,ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು

ವಕೀಲ ಜಗದೀಶ್  ಮಾತನಾಡಿ,ಕೊಡ್ಲಿಪೇಟೆ ವಿದ್ಯಾಸಂಸ್ಥೆ ಪಿಯು ಕಾಲೇಜಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಭರಿಸುವುದಾಗಿ ಭರವಸೆ ನೀಡಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅರ್ಥಶಾಸ್ತ್ರ ಉಪನ್ಯಾಸಕಿ ರಮ್ಯಾ ವಾರ್ಷಿಕ ವರದಿ ವಾಚಿಸಿದರು.

ಈ ಸಂದರ್ಭ ಕೊಡ್ಲಿಪೇಟೆ ವಿದ್ಯಾಸಂಘದ ಉಪಾಧ್ಯಕ್ಷ ಜಿ. ಪಿ. ಶಂಭುಲಿಂಗಪ್ಪ, ಕಾರ್ಯದರ್ಶಿ ಕೆ. ಎನ್. ಪರಮೇಶ್, ಖಜಾಂಚಿ ಡಾ. ಉದಯಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ಜಿ. ಪಿ. ಶಿವಕುಮಾರ್,ಬಿ. ಕೆ. ಯತೀಶ್,ಅರುಣಾಚಂದ್ರಮೌಳಿ,ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿರಂಜನ್,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಹಾಗೂ ಉಪನ್ಯಾಸಕರು,ಶಿಕ್ಷಕರು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಉಪನ್ಯಾಸಕರಾದ ಕೆ. ಹೆಚ್. ಯೋಗೇಂದ್ರ ನಿರೂಪಿಸಿದರು. ಕೆ. ಕೆ. ಅಭಿಲಾಷ್ ಸ್ವಾಗತಿಸಿದರು.ರೇಣುಕಾ ತನಿಪ್ ವಂದಿಸಿದರು. ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ‌ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನ ರಂಜಿಸಿತು

admin
the authoradmin

Leave a Reply

Translate to any language you want