ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಒಂಥರಾ ಜೂಜಾಟದಂತಿರುವ ತಂಬಾಕು ಕೃಷಿ ಒಂದಷ್ಟು ರೈತರ ಬದಕನ್ನು ಹಸನು ಮಾಡಿದ್ದರೆ, ಮತ್ತೆ ಕೆಲವರ ಪ್ರಾಣಕ್ಕೂ ಸಂಚಕಾರ ತಂದಿದೆ. ಬಂಡವಾಳ ಸುರಿದು ಆದಾಯ ಪಡೆಯುವ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕು ಇತ್ತೀಚೆಗೆ ದರ ಕುಸಿತದಿಂದ ಬಹುತೇಕ ರೈತರನ್ನು ಸಾಲದ ಸುಳಿಗೆ ತಳ್ಳಿದೆ. ಈ ಪೈಕಿ ಕೆಲವರು ಸಾಲ ಕಟ್ಟಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.
ಇದೀಗ ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೆ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ಯುವ ರೈತ ತನ್ನ ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತ ಪ್ರವೀಣ (40) ಎಂಬಾತನೇ ಮೃತ ದುರ್ದೈವಿ. ಈತ ಬೆಟ್ಟಹಳ್ಳಿ ಗ್ರಾಮದಲ್ಲಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದರು. ಕೃಷಿಗಾಗಿ ಸೋಮನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಇತರೆ ಕೈಸಾಲ ಸೇರಿ ಅಂದಾಜು 13 ಲಕ್ಷ ರೂ. ಸಾಲ ಮಾಡಿದ್ದು, ತಂಬಾಕು ಬೆಳೆಗೆ ಉತ್ತಮ ಬೆಲೆ ಸಿಗದೇ ಹಿನ್ನಲೆ ಸಾಲಗಾರ ಒತ್ತಡ ಹೆಚ್ಛಾದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಪ್ರವೀಣ್ ಅಣ್ಣ ಪ್ರದೀಪ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಷಯ ತಿಳಿದು ಕೆ.ಆರ್.ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಡಿ.ರವಿಶಂಕರ್ ಭೇಟಿ ನೀಡಿ ಪ್ರವೀಣ್ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಶಾಸಕ.ಡಿ.ರವಿಶಂಕರ್ ಪ್ರವೀಣ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಪುರಸಭೆ ಮಾಜಿ ಸದಸ್ಯ ಕೆ.ಎಲ್.ಜಗದೀಶ್, ಪಟ್ಟಣದ ಆರಕ್ಷಕ ನಿರೀಕ್ಷಕ ಎಸ್.ಶಿವಪ್ರಕಾಶ್, ಉಪನಿರೀಕ್ಷಕ ಆರ್.ಸ್ವಾಮಿಗೌಡ, ಬೆಟ್ಟಹಳ್ಳಿ ಗ್ರಾಮಸ್ಥರು ಇದ್ದರು.








