ಹುಣಸೂರು(ಮನುಕುಮಾರ್): ಕನ್ನಡ ಶಾಲೆಗಳ ಅಭಿವೃದ್ಧಿ ಮತ್ತು ಉಳಿವಿಗಾಗಿ ದಾನಿಗಳು ಹಾಗೂ ಪೋಷಕರು ಕೈ ಜೋಡಿಸಬೇಕೆಂದು ಮೈಸೂರು ರವಿಸಂತು ಗೆಳೆಯರ ಬಳಗದ ಅಧ್ಯಕ್ಷ, ಆರ್ಯಭಟ ಪ್ರಶಸ್ತಿ ವಿಜೇತ ಹಾಗೂ ಸಂಘದ ಅಧ್ಯಕ್ಷ ರವಿಸಂತೋಷ್ ಮನವಿ ಮಾಡಿದರು.

ತಾಲೂಕಿನ ವಿನೋಭಾ ಕಾಲೋನಿ ಹಾಗೂ ಹನುಮಂತಪುರ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಮೈಸೂರಿನ ರವಿಸಂತು ಗೆಳೆಯರ ಬಳಗದ ವತಿಯಿಂದ ವಾಟರ್‌ಬಾಟಲ್, ನೋಟ್ ಬುಕ್, ಸ್ಟೇಷನರಿ, ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಕನ್ನಡ ಶಾಲೆಗಳಲ್ಲಿ ಸೌಲಭ್ಯದ ಕೊರತೆ, ಇಂಗ್ಲಿಷ್ ವ್ಯಾಮೋಹದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸರಕಾರದ ಜತೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವವರು, ಪೋಷಕರು, ಉದ್ಯಮಿಗಳು ಇಂತಹ ಶಾಲೆಗಳ ಅಭಿವೃದ್ಧಿಗೆ ನೆರವಾಗುವ ಮೂಲಕ ಹಳ್ಳಿ ಶಾಲೆಗಳಲ್ಲಿ ದಾಖಲು ಹೆಚ್ಚಿಸಬಹುದಾಗಿದೆ ಎಂದರು.

ಮುಖ್ಯ ಶಿಕ್ಷಕ ಚಂದ್ರಶೇಖರ್ ಮೂರ್ತಿ ಮಾತನಾಡಿ, “ಕನ್ನಡ ಶಾಲೆಗಳಿಂದ ಮಾತ್ರ ನಾಡಿನ ಸಂಸ್ಕೃತಿ, ಕನ್ನಡ ಭಾಷೆ ಪರಂಪರೆ ಉಳಿಯಲು ಸಾಧ್ಯ, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಈಗ ಎಲ್ಲ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗಾಗಿ, ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ಈ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಭಾಷೆ ಉಳಿವಿಗೆ ಕೈಜೋಡಿಸಬೇಕು ಎಂದರು.
ಕಾರ್ಯದರ್ಶಿ ಕೆಎಸ್ ಆರ್ ಟಿಸಿ ಜನಾರ್ದನ್ ನಮ್ಮ ಸಂಘದಿಂದ ಈಗಾಗಲೇ 66 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ವಿದ್ಯಾರ್ಥಿಗಳು ಹಾಗೂ ಶಾಲೆದು ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ನೂರು ಶಾಲೆಗಳಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

ರವಿಸಂತು ಬಳಗದ ವತಿಯಿಂದ ಶಾಲೆಯ ಶಿಕ್ಷಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಗ್ರಾ.ಪಂ. ಮಾ. ಅಧ್ಯಕ್ಷ ಕೆ.ರಮೇಶ್, ಮಾಜಿ ಸದಸ್ಯ ನಂಜಾಪುರ ಮನುಕುಮಾರ್, ಸಿ.ಆರ್.ಪಿ. ರುದ್ರಪ್ಪ, ಬಿ.ಆರ್.ಸಿ ಆನಂದ್, ಸಂಘದ ಸದಸ್ಯರಾದ ರವಿ, ಶ್ರೀಕಂಠ, ಮಿಮಿಕ್ರಿ ಸುಧಾಕರ್, ಕವಿರಾಜ್, ಶ್ರೀನಿವಾಸ್, ಅನುಭವ್ಯ, ಸುಧಾಕರ್, ಎಸ್ ಡಿಎಂಸಿ ಅಧ್ಯಕ್ಷೆ ಮಾಲ, ಶಿಕ್ಷಕರಾದ ಸುಮಲತಾ, ಸೈಯದಾಸೊಮಯ್ಯ, ಸೇರಿದಂತೆ ಮಕ್ಕಳು ಹಾಜರಿದ್ದರು.








