ಮಳವಳ್ಳಿ: ಹಲಗೂರು ವ್ಯಾಪ್ತಿಯ ತೋಟಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಬಾಳೆಗೊನೆಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಹಲಗೂರು ಪೊಲೀಸರು ಭೇದಿಸಿದ್ದು, ಒಬ್ಬ ಯುವಕನನ್ನು ಬಂಧಿಸಿ, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಸಾಮಂದಿಪುರ ಗ್ರಾಮದ ಜೀವನ್ (19) ಬಂಧಿತನಾಗಿದ್ದು, ಇನ್ನಿಬ್ಬರು ಮಳವಳ್ಳಿ ತಾಲ್ಲೂಕಿನ ಹುಚ್ಚೇಗೌಡನದೊಡ್ಡಿ ಹಾಗೂ ಅಗಸನಪುರ ಗ್ರಾಮದ ಅಪ್ರಾಪ್ತ ಬಾಲಕರ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ದಡಮಹಳ್ಳಿ ಗ್ರಾಮದ ಡಿ.ಸಿ. ದೊಡ್ಡಲಿಂಗೇಗೌಡ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು 600 ಬಾಳೆಗಿಡಗಳನ್ನು ಬೆಳೆಸಿದ್ದು, ಕಟಾವಿಗೆ ಸಿದ್ಧವಾಗಿದ್ದ 15 ಬಾಳೆಗೊನೆಗಳನ್ನು ಜೂನ್ 26ರ ರಾತ್ರಿ ಕಳ್ಳರು ಕಳವು ಮಾಡಿದ್ದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಿಎಸ್ಐ ಲೋಕೇಶ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿ ರಾತ್ರಿ ಗಸ್ತನ್ನು ತೀವ್ರಗೊಳಿಸಿತು. ಈ ನಡುವೆ ಬುಧವಾರ ರಾತ್ರಿ ಗಸ್ತಿನ ವೇಳೆ ಮೋಟಾರ್‌ಸೈಕಲ್ ನಲ್ಲಿ ಎರಡು ಬಾಳೆಗೊನೆಗಳನ್ನು ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಮೂವರನ್ನು ತಡೆದು ವಿಚಾರಣೆ ನಡೆಸಿದಾಗ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗುವ್ವಾಪುರ ಗ್ರಾಮದ ತೋಟದಿಂದ ಬಾಳೆಗೊನೆಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮುಂದಿನ ವಿಚಾರಣೆಯಲ್ಲಿ ದಡಮಹಳ್ಳಿ ಗ್ರಾಮದ ತೋಟದಲ್ಲಿಯೂ ಬಾಳೆಗೊನೆಗಳನ್ನು ಕಳವು ಮಾಡಿ ಹಾಡ್ಲಿ–ಮೇಗಳಾಪುರ ವೃತ್ತದ ಬಾಳೆ ಮಂಡಿಗೆ ಮಾರಾಟ ಮಾಡಿರುವ ಸಂಗತಿಯನ್ನೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಜೀವನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಮಂಡ್ಯದ ಬಾಲಮಂದಿರಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪಿಎಸ್ಐ ಲೋಕೇಶ್ ತಿಳಿಸಿದ್ದಾರೆ.








