ಡಿ.ಕೆ.ಶಿವಕುಮಾರ್ ಅವರ ನಸೀಬು ಉಲ್ಟಾ ಹೊಡೆದಿದೆ.. ಎಲ್ಲವೂ ಸರಿಯಿದೆ ಆದರೂ ಇನ್ನೇನೋ ಸರಿಯಿಲ್ಲ ಎನ್ನುವಂತಾಗಿದೆ. ಕಷ್ಟಪಟ್ಟು ಸಿಎಂ ಸ್ಥಾನ ಪಡೆದು ಅಧಿಕಾರ ಸ್ವೀಕರಿಸಿ ಎರಡು ತಿಂಗಳಾದರೂ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಕಾಲ ಕೂಡಿ ಬರುತ್ತಿಲ್ಲ.. ಹೀಗಾಗಿ ರಾಜ್ಯದಲ್ಲಿ ಹೊಸ ಸಿಎಂ ಆದ ಬಳಿಕ ಆಡಳಿತದಲ್ಲಿ ಬದಲಾವಣೆಗಳಾಗುತ್ತವೆ.. ಆಡಳಿತಕ್ಕೆ ವೇಗ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.. ಇಷ್ಟಕ್ಕೂ ಡಿ.ಕೆ.ಶಿವಕುಮಾರ್ ಗೆ ಒದಗಿ ಬಂದಿರುವ ‘ಸಂಪುಟ ವಿಸ್ತರಣೆ’ ಎಂಬ ಗಂಡಾಂತರ ಇನ್ನೆಷ್ಟು ದಿನ ಕಾಡಲಿದೆಯೋ?

ಸಿದ್ದರಾಮಯ್ಯ ಅವರಿಗೆ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳುವ ಜಾಣ್ಮೆಯಿತ್ತು. ಅವರ ಮಾತಿಗೆ ಎಲ್ಲ ನಾಯಕರು ಗಪ್ ಚಿಪ್ ಆಗಿ ಬಿಡುತ್ತಿದ್ದರು. ಮೂರು ವರ್ಷಗಳ ಕಾಲ ಹಲವು ಗೊಂದಲಗಳು ಸೃಷ್ಟಿಯಾದರೂ ಅಂತಿಮವಾಗಿ ಎಲ್ಲವನ್ನು ನಿಭಾಯಿಸಿ ಕೊಂಡು ಹೋಗುವ ಕ್ಯಾಪಸಿಟಿ ಇತ್ತು. ಹೀಗಾಗಿ ಅವರು ಮೂರು ವರ್ಷಗಳ ಕಾಲ ಆಡಳಿತ ನಡೆಸಿಕೊಂಡು ಬಂದಿದ್ದರು.
ಸರ್ಕಾರದ ಮತ್ತು ಅವರ ವಿರುದ್ಧವೇ ಆರೋಪಗಳು ಬಂದಾಗ ಅದೆಲ್ಲದರ ನಡುವೆಯೂ ಆಡಳಿತದ ಹಿಡಿತ ತಪ್ಪದಂತೆ ನೋಡಿಕೊಂಡಿದ್ದರು. ಇವತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಬದಿಗೆ ಸರಿದಿದ್ದಾರೆ ಆದರೆ ಅವರ ಬೆಂಬಲಿಗ ನಾಯಕರ ಸ್ವಾಮಿನಿಷ್ಠೆ ಕಡಿಮೆಯಾಗಿಲ್ಲ. ಹೀಗಾಗಿಯೇ ಸಿಎಂ ಡಿ.ಕೆ.ಶಿವಕುಮಾರ್ ಗೆ ಎಲ್ಲವನ್ನು ಸರಾಗವಾಗಿ ಮಾಡಿ ಮುಗಿಸಲು ಕಷ್ಟವಾಗುತ್ತಿದೆ.

ಡಿಕೆಶಿ ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲು ಇಷ್ಟೊಂದು ಸಮಯ ಬೇಕಾ? ಪಕ್ಷದಲ್ಲಿ ಎಲ್ಲವೂ ಸರಿಯಾಗಿದ್ದಿದ್ದರೆ ಒಂದೆರಡು ದಿನ ಅಥವಾ ವಾರದಲ್ಲಿಯೇ ಮುಗಿದು ಹೋಗಿ ಬಿಡುತ್ತಿತ್ತು. ಆದರೆ ಕೇವಲ 13 ಜನ ಸಚಿವರ ಸಂಪುಟ ಇಲ್ಲಿ ತನಕ ಆಡಳಿತ ನಡೆಸಿಕೊಂಡು ಬರುತ್ತಿದೆ. ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಬೇಕಾದರೆ ಇನ್ನು ಇಪ್ಪತ್ತು ಸಚಿವರು ಬೇಕೇ ಬೇಕು. ಈ ಇಪ್ಪತ್ತು ಸಚಿವರನ್ನು ಸಂಪುಟಕ್ಕೆ ಆಯ್ಕೆ ಮಾಡುವುದೇ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಾಗೆನೋಡಿದರೆ ಚುನಾವಣೆಗೆ ಕೇವಲ ಇಪ್ಪತ್ತೊಂದು ತಿಂಗಳಷ್ಟೇ ಬಾಕಿಯಿದೆ. ಈ ಇಪ್ಪತ್ತೊಂದು ತಿಂಗಳು ರಾಜಕೀಯ ನಾಯಕರಿಗೆ ಏನೇನೂ ಅಲ್ಲ. ಹೀಗಾಗಿ ಚುನಾವಣೆಯನ್ನು ಗೆಲ್ಲಬೇಕಾದರೆ ಈಗಿನಿಂದಲೇ ರಾಜಕೀಯ ಆರಂಭಿಸಬೇಕಾಗಿದೆ. ವಿರೋಧ ಪಕ್ಷದಲ್ಲಿದ್ದವರು ಅದನ್ನು ಆರಂಭಿಸಿ ಬಿಡುತ್ತಾರೆ. ಆದರೆ ಆಡಳಿತ ಪಕ್ಷಕ್ಕೆ ಅಷ್ಟು ಸುಲಭವಲ್ಲ.. ಆಡಳಿತದ ಜೊತೆಗೆ ರಾಜಕೀಯ ಮಾಡಬೇಕಾಗುತ್ತದೆ. ಹೀಗೆ ಮಾಡುವಾಗ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅದರ ಪರಿಣಾಮಗಳು ಚುನಾವಣೆಗಳ ಮೇಲೆ ಬೀರುತ್ತವೆ. ಮತ್ತು ಅದರ ಹೊಣೆಯನ್ನು ಆಡಳಿತ ಪಕ್ಷದ ನಾಯಕ ಅರ್ಥಾತ್ ಸಿಎಂ ಹೊರಬೇಕಾಗುತ್ತದೆ.

ಕರ್ನಾಟಕದ ರಾಜಕೀಯವನ್ನು ನೋಡಿದ್ದೇ ಆದರೆ ಇಲ್ಲಿನ ರಾಜಕೀಯ ವಿಭಿನ್ನವಾಗಿ ಕಾಣಿಸುತ್ತಿದೆ. ಅಧಿಕಾರದಲ್ಲಿದ್ದ ಪಕ್ಷ ಎರಡನೇ ಬಾರಿಗೆ ಅಧಿಕಾರ ಹಿಡಿದ ಉದಾಹರಣೆ ಕಡಿಮೆಯೇ.. ಅದರಲ್ಲೂ ಇಲ್ಲಿವರೆಗಿನ ಲೆಕ್ಕ ಒಂದಾಗಿದ್ದರೆ ಈಗಿನ ಲೆಕ್ಕಾಚಾರವೇ ಬೇರೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್ ಗೆ ಆರ್ಥಿಕತೆಯನ್ನು ನಿಭಾಯಿಸಿಕೊಂಡು ಅಭಿವೃದ್ಧಿ ಕಾರ್ಯ ಮಾಡುವುದು ಕಷ್ಟವಾಗುತ್ತಿದೆ. ಖಜಾನೆ ಖಾಲಿಯಾಗಿದೆ.. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.
ಉಚಿತ ಯೋಜನೆಗಳು ಆರಂಭದಲ್ಲಿಯೇ ಹಾದಿ ತಪ್ಪಿವೆ. ಅಲ್ಲಿ ಕೋಟ್ಯಂತರ ಹಣ ಪೋಲಾಗಿದೆ. ಅವತ್ತು ಮಹದೇವಪ್ಪನಿಗೂ ಫ್ರೀ ಕಾಕಾಪಾಟೀಲನಿಗೂ ಫ್ರೀ ಎಂದು ಬಹಿರಂಗವಾಗಿ ಘೋಷಣೆ ಮಾಡಿ ಚುನಾವಣೆಯಲ್ಲಿ ಗೆದ್ದು ಬಂದು ಆರಂಭದಲ್ಲಿ ಯಾವುದೇ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸದೆ ಯೋಜನೆಗಳನ್ನು ಜಾರಿ ಮಾಡಿ ಈಗ ಆರ್ಥಿಕ ಹೊರೆಯಾಗುತ್ತಿದ್ದಂತೆಯೇ ಕಠಿಣ ನಿಯಮಗಳನ್ನು ಪಾಲಿಸುತ್ತೇನೆ ಎಂದು ಹೊರಟರೆ ಜನ ಸುಮ್ಮನಿರುತ್ತಾರಾ? ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸರಿಯಿತ್ತು. ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ಇಲ್ಲಸಲ್ಲದ ನಿಯಮ ಮಾಡಿ ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ ಎಂದು ಜನ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಹಾಗೆಂದು ಯೋಜನೆಯಲ್ಲಿ ಕಟ್ಟುನಿಟ್ಟಿನ ಶಿಸ್ತು ತರುವುದು, ಅರ್ಹರಿಗಷ್ಟೇ ಯೋಜನೆಗಳನ್ನು ತಲುಪಿಸುವುದು ತಪ್ಪೇ? ಖಂಡಿತ ಇಲ್ಲ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಏನೆಂದರೆ ಇದುವರೆಗೆ ಫಲ ಪಡೆದವರು ಅದನ್ನು ಕಳೆದುಕೊಂಡಾಗ ಸುಮ್ಮನಿರುತ್ತಾರಾ? ಪ್ರತಿಭಟಿಸುತ್ತಾರೆ.. ಅವರ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯೋದಕ್ಕೆ ವಿರೋಧ ಪಕ್ಷದವರು ಬೇಕಾಗಿಲ್ಲ ಸ್ವಪಕ್ಷದವರು ಸಾಕಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ.. ಅದರಲ್ಲೂ ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದವರು ಹಿಂದೂ ವಿರೋಧಿ ಸರ್ಕಾರವೆಂದು ಆರೋಪ ಮಾಡಿಕೊಂಡು ಬಂದಿದ್ದರೋ ಆ ಕಳಂಕವನ್ನು ದೂರ ಮಾಡುವ ಸಲುವಾಗಿ ಒಂದಷ್ಟು ಸರ್ಕಸ್ ಮಾಡಿದ್ದಾರೆ.. ಮಾಡುತ್ತಿದ್ದಾರೆ. ಇದು ಅವರದ್ದೇ ಪಕ್ಷದ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.
ಸಿಎಂ ಡಿ.ಕೆ.ಶಿವಕುಮಾರ್ ಅವರ ಸಾಫ್ಟ್ ಹಿಂದುತ್ವ ಮತ್ತು ದಾವಣಗೆರೆ ಬೈಎಲೆಕ್ಷನ್ ನಲ್ಲಿ ಆದ ಗೊಂದಲಗಳು ಅಲ್ಪ ಸಂಖ್ಯಾತರು ಕಾಂಗ್ರೆಸ್ ನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಅಲ್ಪ ಸಂಖ್ಯಾತರು ಕಾಂಗ್ರೆಸ್ ಗೆ ಪರ್ಯಾಯವಾಗಿರುವ ಪಕ್ಷದತ್ತ ಒಲವು ತೋರಿ ಬಿಟ್ಟರೆ ಎಂಬ ಭಯ ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ. ಹೀಗಾಗಿಯೇ ಕೆಲವು ನಾಯಕರು ಆರ್ ಎಸ್ ಎಸ್ ವಿರುದ್ಧ ಸಮರ ಸಾರಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಗಟ್ಟಿಯಾಗಿರುವ ರಾಜ್ಯವಿದ್ದರೆ ಅದು ಕರ್ನಾಟಕ ಮಾತ್ರ. ಅದರ ಕ್ರೆಡಿಟ್ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಸೇರುತ್ತದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ರಾಜಕೀಯ ಚಾಣಾಕ್ಷ್ಯತೆ ಹೊಂದಿ ಪಕ್ಷವನ್ನು ಯಾರೂ ನಿರೀಕ್ಷೆ ಮಾಡದಷ್ಟು ಬಹುಮತಗಳಿಂದ ಗೆಲ್ಲಿಸಿಕೊಂಡು ಬಂದಿರುವ ಡಿ.ಕೆ.ಶಿವಕುಮಾರ್ ಗೆ ಇದೀಗ ಸಂಪುಟಕ್ಕೆ ಸಚಿವರನ್ನು ಆಯ್ಕೆ ಮಾಡುವುದು ಸವಾಲ್ ಆಗುತ್ತಿದೆ.
ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದು ಹೊರತು ಪಡಿಸಿದರೆ ಉಳಿದಂತೆ ತೆಗೆದುಕೊಂಡ ತೀರ್ಮಾನಗಳು ಆಡಳಿತದ ದೃಷ್ಟಿಯಿಂದ ಶ್ಲಾಘನೀಯವಾದರೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿವೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ, ಬಿಡದಿ ಟೌನ್ ಶಿಪ್, ಫುಟ್ಫಾತ್ ತೆರವು ಮೊದಲಾದವು ಅಸಮಾಧಾನಗಳು ಕೂಗೆಬ್ಬಿಸುತ್ತಿವೆ.

ಇದೆಲ್ಲದರ ನಡುವೆ ಇಷ್ಟರಲ್ಲಿಯೇ ಸಚಿವರನ್ನು ನೇಮಕಮಾಡಿ ಆಯಾಯ ಕ್ಷೇತ್ರಗಳಲ್ಲಿನ ಆಡಳಿತ ಯಂತ್ರಕ್ಕೆ ವೇಗ ಕೊಡಬೇಕಾಗಿತ್ತು. ಅದು ಸಾಧ್ಯವಾಗಿಲ್ಲ. ಈಗಾಗಲೇ ಮುಂಗಾರು ಆರಂಭವಾಗಿದೆ. ಬರದ ಲಕ್ಷಣಗಳು ರಾಜ್ಯದ ಬಹುತೇಕ ಜಿಲ್ಲೆಯಲ್ಲಿದೆ.. ಇನ್ನು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಗಡಿಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿ ರೈತರ ಬೆಳೆ ನಷ್ಟವಾಗಿದೆ. ಮಳೆ ಬೀಳುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಕೃಷಿ ಸಚಿವರನ್ನು ನೇಮಕ ಮಾಡದ ಕಾರಣದಿಂದ ತೊಂದರೆಯಾಗುತ್ತಿದೆ.
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿವೆ. ಆದರೆ ಇನ್ನೂ ಕೂಡ ಶಿಕ್ಷಣ ಸಚಿವರಿಲ್ಲ ಹೀಗಾದರೆ ಶಿಕ್ಷಣದ ಗತಿಯೇನು? ರಾಜಕೀಯದ ಕಿತ್ತಾಟದಲ್ಲಿ ಸಾರ್ವಜನಿಕರು ಸಂಕಟ ಪಡುವಂತಾಗಿದೆ. 20 ಸಚಿವರನ್ನು ಆಯ್ಕೆ ಮಾಡಿ ಅವರಿಗೆ ಖಾತೆ ಹಂಚುವುದಕ್ಕೆ ಇಷ್ಟು ದಿನ ಬೇಕಾ? ರಾಜ್ಯ ಮತ್ತು ನಾಯಕರ ಮೇಲೆ ಹಿಡಿತವಿಲ್ಲದಷ್ಟು ಹೈಕಮಾಂಡ್ ದುರ್ಬಲವಾಯಿತಾ? ಜನ ಪ್ರಶ್ನೆ ಕೇಳುತ್ತಿದ್ದಾರೆ.. ಇದಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಉತ್ತರಕೊಡುತ್ತಾರಾ? ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಅವರು ನಮ್ಮಲ್ಲಿ ಯಾವ ಗೊಂದಲಗಳಿಲ್ಲ ಹೈಕಮಾಂಡ್ ಹೇಳಿದವರು ಸಚಿವರಾಗುತ್ತಾರೆಂದು ಹೈಕಮಾಂಡ್ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ.. ಆದರೆ ಎಲ್ಲವನ್ನು ನಿಭಾಯಿಸಬೇಕಾದ ಹೈಕಮಾಂಡ್ ಸಚಿವರನ್ನು ನೇಮಕ ಮಾಡದೆ ನಿದ್ದೆಗೆ ಜಾರಿರುವುದನ್ನು ಗಮನಿಸಿದರೆ ಕರ್ನಾಟಕದ ಜನ ಅದೆಷ್ಟು ದೌರ್ಬಾಗ್ಯವಂತರು ಎಂಬುದು ಗೊತ್ತಾಗುತ್ತದೆ.

ಸಂಪುಟ ವಿಸ್ತರಣೆ ಎಂಬ ಸಂಕಟದ ಮುಂದೆ ಸಿಎಂ ಡಿಕೆ ಶಿವಕುಮಾರ್ ಗೆ ಜನರ ಸಂಕಷ್ಟ ಅರಿವಿಗೆ ಬರುತ್ತಿಲ್ಲವೇನೋ? ಇನ್ನಾದರೂ ಎಚ್ಚೆತ್ತುಕೊಂಡು ಆದಷ್ಟು ಬೇಗ ಗೊಂದಲ ನಿವಾರಿಸಿಕೊಂಡು ಸಂಪುಟ ವಿಸ್ತರಣೆ ಮಾಡದೆ ಹೋದರೆ ಅದರ ಪರಿಣಾಮಗಳನ್ನು ಸರ್ಕಾರ ಮಾತ್ರವಲ್ಲ ಮುಂದೆ ಪಕ್ಷವೂ ಎದುರಿಸಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ..
-ಬಿ.ಎಂ.ಲವಕುಮಾರ್








