ArticlesLatest

ಕೊಡಗಿನ ನೈಜ ಧ್ವನಿ, ಸಾಮಾಜಿಕ ಕಾರ್ಯಕರ್ತ, ಲೇಖಕ ಕಾಯಪಂಡ ವಿಷ್ಣು ನಾಚಪ್ಪ…ನಿಮಗೆ ಸಲ್ಯೂಟ್!

ಜುಲೈ 14 ಸಾಮಾಜಿಕ ಕಾರ್ಯಕರ್ತ, ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಅವರ ಜನ್ಮದಿನ.. ಅವರಿಗೆ ಜನ್ಮ ದಿನದ ಶುಭಾಶಯಗಳು…. ಜನಮನಕನ್ನಡ ವೆಬ್ ಸೈಟ್ ನ ಅಂಕಣಕಾರರಾಗಿ ಕೊಡಗಿನ ನೈಜ ಸಮಸ್ಯೆಗಳನ್ನು ಬರಹಗಳ ಮೂಲಕ ಬಿಚ್ಚಿಡುತ್ತಾ ಜನರಿಗೆ ತಲುಪಿಸುವ ಮತ್ತು ಅದಕ್ಕೊಂದು ಪರಿಹಾರ ಹುಡುಕುವ ಕಾರ್ಯದಲ್ಲಿ ನಿರತರಾಗಿರುವ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ… ಅವರ ಬಗ್ಗೆ ಲೇಖಕ ಮೈ.ನಾ.ಲೋಕೇಶ್ ಇಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಓದಿ ಬಿಡಿ..

ಕಾಯಪಂಡ ವಿಷ್ಣು ನಾಚಪ್ಪನವರು…. ಬಾಡಗರ ಕೇರಿಯ ಶ್ರೀ ಮೃತ್ಯುಂಜಯ ಸ್ವಾಮಿಯ ಕ್ಷೇತ್ರದಲ್ಲಿ ಹುಟ್ಟಿದ ಇವರು, ಆ ದೇವರ ಆಶೀರ್ವಾದದಿಂದಲೇ ಇವತ್ತು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ. ಯಾವುದೇ  ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಸಾಮಾಜಿಕ ದೃಷ್ಟಿಯಿಂದ, ಇಚ್ಛಾಶಕ್ತಿಯಿಂದ ಕೆಲಸ ಮಾಡುವ ಅಪರೂಪದ ವ್ಯಕ್ತಿ.

ಒಂದು ನೋವಿನಿಂದ ಹುಟ್ಟಿದ ಸೇವೆ…..

ಮಾಜಿ ಸೈನಿಕರಾದ ಇವರ ತಂದೆಯವರು 2022ನೇ ಇಸವಿಯಲ್ಲಿ ಸ್ಟ್ರೋಕ್‌ನಿಂದ ತುರ್ತು ಸಮಯದಲ್ಲಿ ತಕ್ಷಣ ಚಿಕಿತ್ಸೆ ಸಿಗದೇ ಕಷ್ಟಪಡುವಂತಾಯಿತು . ಆ ನೋವು, ಆ ಕೊರತೆಯೇ ಇವರನ್ನು ಎಚ್ಚರಿಸಿತು.  ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು” ಎನ್ನುವ ಕೂಗಿನೊಂದಿಗೆ ಮೊದಲು ಗ್ರೂಪನ್ನು ರಚನೆ ಮಾಡಿದರು.ನಂತರದ ದಿನಗಳಲ್ಲಿ ಕೊಡಗಿನಲ್ಲಿರುವ ಅಗಾಧ ಸಮಸ್ಯೆಗಳನ್ನು ಮನಗೊಂಡು, ಗ್ರೂಪಿನ ಹೆಸರನ್ನು “ಕೊಡಗಿನ ಸಮಸ್ಯೆಗಳು ಹಾಗೂ ಸಲಹೆ ಸೂಚನೆಗಳು” ಎಂದು ಬದಲಾಯಿಸಲಾಯಿತು.

ಇವತ್ತು ಅದು ಕೊಡಗಿನ ನಂಬರ್ ಒನ್ ವಾಟ್ಸಪ್ ಗ್ರೂಪ್.  ಕಳೆದ 5 ವರ್ಷಗಳಿಂದ ಈ ಗ್ರೂಪ್ ಕೊಡಗಿನಲ್ಲಿ ಕ್ರಾಂತಿಯನ್ನೇ ಮಾಡುತ್ತಿದೆ.  ಸಾಮಾನ್ಯ ಜನರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಬಹುದು ಅಂತ ಇವರು ತೋರಿಸಿಕೊಟ್ಟಿದ್ದಾರೆ. ರಸ್ತೆ, ನೀರು, ಕಾಡು, ಕಾವೇರಿ – ಯಾವ ಸಮಸ್ಯೆ ಇದ್ದರೂ ಮೊದಲು ಈ ಗ್ರೂಪ್‌ನಲ್ಲಿ ಚರ್ಚೆ ಆಗುತ್ತೆ, ಆಮೇಲೆ ಪರಿಹಾರ ಹುಡುಕುತ್ತೆ.

ಜೀವ ಉಳಿಸುವ ಕೈಗಳು….

ರಕ್ತದಾನಕ್ಕಾಗಿ ತುರ್ತು ಸ್ಪಂದನೆ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ ಮೆಂಟ್ ಟ್ರಸ್ಟ್ ಗ್ರೂಪ್ ಅಡ್ಮಿನ್” 2022ನೇ ಇಸವಿಯಿಂದ ಈ ಗ್ರೂಪ್ ಮೂಲಕ ಸಾವಿರಾರು ಜನರಿಗೆ ತುರ್ತು ಸಮಯದಲ್ಲಿ ರಕ್ತ ಒದಗಿಸಿಕೊಡಲು ಶ್ರಮ ಪಟ್ಟಿದ್ದಾರೆ, ಇನ್ನೂ ಪಡುತ್ತಿದ್ದಾರೆ. ಜೀವನ ನಿರ್ವಹಣೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಸ್ವತಃ ಅವರೇ ಬಹಳಷ್ಟು ಬಾರಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.  ಒಂದು ಯೂನಿಟ್ ರಕ್ತ ಒಂದು ಜೀವ ಉಳಿಸುತ್ತೆ ಅನ್ನೋದನ್ನ ಇವರು ನೂರಾರು ಬಾರಿ ಸಾಬೀತು ಮಾಡಿದ್ದಾರೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಅವರು ಇನ್ನೊಂದು ದೊಡ್ಡ ಕೆಲಸ ಮಾಡುತ್ತಿದ್ದಾರೆ.

ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅತ್ಯುತ್ತಮ ಲೇಖನಗಳನ್ನು ಬರೆಯುವ ಮೂಲಕ ಸಮಾಜದ ಮನಸ್ಸನ್ನು ಬೆಸೆಯುವ ಕೆಲಸ. ಕಾವೇರಿ ಮಾತೆಯ ನೋವು, ಕೊಡಗಿನ ಮಣ್ಣಿನ ಮಾರಾಟ,  ಬೆಟ್ಟದ ಕುಸಿತ, ಚರಂಡಿಯ ಕೊಳಚೆ – ಯಾವುದೇ ವಿಷಯವಾಗಲಿ.ಸರಳವಾಗಿ, ವಸ್ತುನಿಷ್ಠವಾಗಿ ಬರೆಯುವ ಕಲೆ ಅವರಿಗೆ ಕರಗತವಾಗಿದೆ. ಈಗಾಗಲೇ ಕೊಡಗಿನ ನೈಜ ಧ್ವನಿಯ ಮೂಲಕ  20ಕ್ಕೂ ಹೆಚ್ಚು ಅತ್ಯುತ್ತಮ  ಲೇಖನಗಳನ್ನು ಬರೆದು ಕೊಡಗಿನ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ.

ಅವರ ಬರಹಗಳನ್ನು ಓದಿದಾಗ ಸಾಮಾಜಿಕ ಪ್ರಜ್ಞೆ ಜಾಗೃತ ಗೊಳ್ಳುತ್ತದೆ..  ಕಣ್ಣಂಚು ತೇವ ಗೊಳ್ಳುತ್ತದೆ.. ವ್ಯವಸ್ಥೆಯ ಬಗ್ಗೆ ವಿಷಾದ ವ್ಯಕ್ತವಾಗುತ್ತದೆ. ಹೊಸ ಕರ್ತವ್ಯ,  ಜವಾಬ್ದಾರಿಗೆ ಮನಸ್ಸು ಅಣಿಯಾಗುತ್ತದೆ. ನಾವೂ. ಸಹ ಈ ಸಮಾಜದ ಋಣ ತೀರಿಸಬೇಕು ಎಂಬ ಹಂಬಲ ಉಂಟಾಗುತ್ತದೆ. ವಿಷ್ಣು ನಾಚಪ್ಪನವರು ಬರಹಗಾರ ಮಾತ್ರ ಅಲ್ಲ. ಅವರು ಕೊಡಗಿನ ಆತ್ಮಸಾಕ್ಷಿ. ಸಮಸ್ಯೆ ಕಂಡರೆ ಸುಮ್ಮನಿರದ, ಪ್ರಶ್ನೆ ಮಾಡುವ, ಪರಿಹಾರ ಹುಡುಕುವ ನಿಜವಾದ ಸಾಮಾಜಿಕ ಕಾರ್ಯಕರ್ತ.

ಸಮಾಜಗಳು ಇಂಥವರನ್ನು ಗುರುತಿಸುವ ಕೆಲಸವನ್ನು ಮಾಡಬೇಕಾಗಿದೆ.  ಇಂಥವರಿಂದಲೇ ಸಮಾಜ ಬದುಕುತ್ತೆ, ಸಂಸ್ಕೃತಿ ಉಳಿಯುತ್ತೆ. ಇವತ್ತು ಅವರ ಹುಟ್ಟುಹಬ್ಬ. ಈ ದಿನ ಬಾಡಗರಕೇರಿ  ಶ್ರೀ ಮೃತ್ಯುಂಜಯ ಸ್ವಾಮಿಯು, ಇನ್ನಷ್ಟು ಕಾಲ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಮಾಡುವ ಶಕ್ತಿ, ಐಶ್ವರ್ಯ, ಆರೋಗ್ಯ ಕೊಟ್ಟು  ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

admin
the authoradmin

Leave a Reply