ಮೈಸೂರು: ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್ ಗೌಡ ಅವರಿಗೆ ಸಾಮಾಜಿಕ ಜಾಲತಾಣ(ಇನ್ಸ್ಟಾ ಗ್ರಾಂ)ದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಿದ್ದು ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದ್ದಾರೆ.
ಕಾಮೆಂಟ್ ಮಾಡಿದ ವ್ಯಕ್ತಿ ಬೆಂಗಳೂರಿನ ವಿಶ್ವೇಶ್ವರಯ್ಯ ಬಿನ್ ಮುದ್ದಯ್ಯ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಮೇಲ್ ಮತ್ತು ಮೊಬೈಲ್ ನಂಬರ್ ನ್ನು ಟ್ರೇಸ್ ಮಾಡಿದ ಪೊಲೀಸರು ವಿಶ್ವೇಶ್ವರಯ್ಯ ಅವರ ಮನೆಗೆ ತೆರಳಿ ನೋಟೀಸ್ ನೀಡಿದ್ದಾರೆ. ಆದರೆ ವಿಶ್ವೇಶ್ವರಯ್ಯ ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವರ್ಷಾ ಹರೀಶ್ ಗೌಡ ಅವರಿಗೆ ಅಶ್ಲೀಲ ಕಾಮೆಂಟ್ ಮಾಡಿದ ವಿಚಾರ ಭಾರೀ ಸುದ್ದಿಯಾಗಿತ್ತು. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಖುದ್ದು ಹರೀಶ್ ಗೌಡರೇ ಪೊಲೀಸ್ ಕಮೀಷ್ನರ್ ನ್ನು ಭೇಟಿ ಮಾಡಿ ಮನವಿ ನೀಡಿ ಆರೋಪಿಯನ್ನು ಹುಡುಕಲು ಒತ್ತಡ ತಂದಿದ್ದರು.
ವರ್ಷಾ ಹರೀಶ್ ಗೌಡ ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಶ್ಲೀಲ ಕಾಮೆಂಟ್ ಹಿಂದೆ ರಾಜಕೀಯ ದುರುದ್ದೇಶ ಇರಬಹುದು ಎಂಬ ಸಂಶಯವೂ ಮೂಡಿತ್ತು. ಹೀಗಾಗಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಶ್ಲೀಲ ಕಾಮೆಂಟ್ ಮಾಡಿದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದರು.
ಆದರೆ ಪೊಲೀಸರು ಪತ್ತೆ ಹಚ್ಚಿದ ವ್ಯಕ್ತಿ ವಿಶ್ವೇಶ್ವರಯ್ಯನ ಬಗ್ಗೆ ತಿಳಿದಾಗ ವರ್ಷಾ ಹರೀಶ್ ಗೌಡ ಮತ್ತು ಹರೀಶ್ ಗೌಡ ಶಾಕ್ ಆಗಿದ್ದರು. ಏಕೆಂದರೆ ಆ ವ್ಯಕ್ತಿ ಬೇರೆ ಯಾರೂ ಆಗಿರಲಿಲ್ಲ… ಜಿ.ಟಿ.ದೇವೇ ಗೌಡರ ಅಳಿಯ, ಜಿ.ಡಿ.ಹರೀಶ್ ಗೌಡ ಅವರ ಬಾವನಾಗಿದ್ದನು. ಈತ ವರಸೆಯಲ್ಲಿ ವರ್ಷಾ ಹರೀಶ್ ಗೌಡರಿಗೆ ಅಣ್ಣನೇ ಆಗುತ್ತಾನೆ.. ಹೀಗಿದ್ದೂ ಆತ ಏಕೆ ಹೀಗೆ ಮಾಡಿದ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಹರೀಶ್ ಗೌಡ ಮತ್ತು ವರ್ಷಾಗೌಡ ಅವರು ಜಿ.ಟಿ.ದೇವೇಗೌಡರ ಜತೆಗಿಲ್ಲ. ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕೌಟುಂಬಿಕ ಕೋಪದಲ್ಲಿ ವರ್ಷಾಗೌಡ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡುವ ಮಟ್ಟಕ್ಕೆ ವಿಶ್ವೇಶ್ವರಯ್ಯ ಹೋಗಿದ್ದು, ಈಗ ಮಾನ ಹರಾಜಾಗಿದೆ.
ವಿಶ್ವೇಶ್ವರಯ್ಯ ಮೈಸೂರಿನಲ್ಲಿ ಜೂನಿಯರ್ ಟೋಸ್ ಪ್ರೀ ಸ್ಕೂಲ್ ನಡೆಸುತ್ತಿದ್ದಾರೆ. ಸದ್ಯ ಆರೋಪಿ ವಿಶ್ವೇಶ್ವರಯ್ಯ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಹರೀಶ್ ಗೌಡ ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲೇ ಬೇಕು. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಹಾಕುವ ಹಕ್ಕು ಎಲ್ಲರಿಗೂ ಇದೆ ಆದರೆ ಅದು ಆರೋಗ್ಯಕರವಾಗಿರಬೇಕು. ತೇಜೋವಧೆ, ನಿಂಧನೆ, ಅಶ್ಲೀಲ ರೀತಿಯಲ್ಲಿ ಕಾಮೆಂಟ್ ಹಾಕುವುದು ಸರಿಯಲ್ಲ. ಅಂತಹವರ ವಿರುದ್ಧ ಕ್ರಮವಾಗಬೇಕು ಎಂದು ಹೇಳಿದ್ದಾರೆ.








