ಕೊಳ್ಳೇಗಾಲ: ಶರಣರ ತತ್ವಗಳು ಜೀವನಕ್ಕೆ ದಾರಿದೀಪವಾಗಿದ್ದು, ಶರಣರ ಕಾಯಕ ಮತ್ತು ದಾಸೋಹ ತತ್ವಗಳು ಪ್ರತಿಯೊಬ್ಬರ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜೀವನಮೌಲ್ಯಗಳಾಗಿವೆ ಎಂದು ಮುದ್ದುವೀರಪ್ಪ ಸ್ಮಾರಕ ಆಸ್ಪತ್ರೆಯ ವೈದ್ಯರಾದ ಡಾ. ಸೋಮಪ್ರಭಾ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮಂಗಳಮ್ಮ ಮತ್ತು ಡಾ. ಶಿವರುದ್ರಸ್ವಾಮಿ ಅವರ ದತ್ತಿಯ ಅಂಗವಾಗಿ ಕೊಳ್ಳೇಗಾಲ ತಾಲ್ಲೂಕು ಮುಡಿಗುಂಡದ ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿ ನಿಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಈ ತತ್ವಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ, ಶಿಸ್ತು, ಸೇವಾಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಯುತ್ತದೆ.

ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜ್ಞಾನಾರ್ಜನೆ, ಸಂಶೋಧನೆ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು.

ಮೊಬೈಲ್, ಸಾಮಾಜಿಕ ಜಾಲತಾಣಗಳು ಹಾಗೂ ಇತರ ತಂತ್ರಜ್ಞಾನ ಸಾಧನಗಳನ್ನು ದುರುಪಯೋಗಪಡಿಸಿಕೊಂಡರೆ ಅದು ಜೀವನಕ್ಕೆ ಮಾರಕವಾಗಬಹುದು. ಆದ್ದರಿಂದ ತಂತ್ರಜ್ಞಾನ ನಮ್ಮ ಬದುಕಿಗೆ ಪೂರಕವಾಗಿರಬೇಕು, ಹೊರತು ಜೀವನವನ್ನು ಹಾಳು ಮಾಡುವ ಸಾಧನವಾಗಬಾರದು ಎಂದು ಕಿವಿಮಾತು ಹೇಳಿದರು.

ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಜಿ ವೀರಭದ್ರಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಶರಣರ ವಚನಗಳಲ್ಲಿ ಅಡಗಿರುವ ಜೀವನದರ್ಶನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಅವರು ಹನ್ನೆರಡನೆಯ ಶತಮಾನದಲ್ಲಿಯೇ ವೈದ್ಯ ಸಂಗಣ್ಣ ಎಂಬ ವಚನಕಾರರು ವೈದ್ಯಸೇವೆಯ ಜೊತೆಗೆ ಆಧ್ಯಾತ್ಮಿಕ ಬದುಕಿನ ಮಹತ್ವವನ್ನು ಸಾರಿದ್ದರು. ಚಿಕಿತ್ಸೆ ಪಡೆಯುವುದು ಅಗತ್ಯವಾದರೂ, ಅದರೊಂದಿಗೆ ದೇವರ ಭಕ್ತಿ, ಸತ್ಚಿಂತನೆ ಮತ್ತು ಆತ್ಮವಿಶ್ವಾಸವೂ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಸಂದೇಶವನ್ನು ವೈದ್ಯ ಸಂಗಣ್ಣ ತಮ್ಮ ವಚನಗಳ ಮೂಲಕ ನೀಡಿದ್ದಾರೆ.

ಇಂದಿನ ಸಮಾಜದಲ್ಲಿ ವೈದ್ಯಕೀಯ ಚಿಕಿತ್ಸೆಯೊಂದಿಗೆ ಉತ್ತಮ ಚಿಂತನೆ, ಭಕ್ತಿ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಂಡಾಗ ಜೀವನ ಮತ್ತಷ್ಟು ಸಾರ್ಥಕವಾಗುತ್ತದೆ ಎಂದರು.

ನಂತರ ವಚನ ವಾಚನ ಮಾಡಿದ 40 ವಿದ್ಯಾರ್ಥಿಗಳಿಗೆ ವಚನ ಪುಸ್ತಕ ಮತ್ತು ವಚನ ದೀವಿಗೆ ಪ್ರಮಾಣಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ಲೋಕೇಶ್ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೊಳ್ಳೇಗಾಲ ತಾಲ್ಲೂಕು ಘಟಕ ಅಧ್ಯಕ್ಷೆ ಜಗದಾಂಬ, ಎನ್ರಿಚ್ ಮಹದೇವಸ್ವಾಮಿ, ಅಕ್ಕನ ಬಳಗದ ಅಧ್ಯಕ್ಷೆ ಸವಿತ ಲೋಕೇಶ್, ಕಾರ್ಯದರ್ಶಿ ಶ್ವೇತಾ ಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಸುಮಾ ವೀರಭದ್ರಸ್ವಾಮಿ, ಸಾಂಬಶಿವಯ್ಯ, ವೇದಮೂರ್ತಿ ಹಾಗೂ ಎಂ. ಮಹದೇವಸ್ವಾಮಿ ಉಪಸ್ಥಿತರಿದ್ದರು.
ಶರಣು ವಿಶ್ವವಚನ ಫೌಂಡೇಷನ್ ನಡೆಸಿದ ವಿವಿಧ ಕಾರ್ಯಕ್ರಮಗಳ ವರದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ








