ಮೈಸೂರು: ಬಸವಣ್ಣರ ತತ್ವಗಳು ಇಂದಿನ ಆರ್ಥಿಕತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳಿಗೆ ದಾರಿದೀಪವಾಗಿವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ ಹೇಳಿದರು.

ಬಿ.ಇ.ಎಂ.ಎಲ್ ಬಸವ ಸಮಿತಿ ವತಿಯಿಂದ ದಟ್ಟಗಳ್ಳಿಯ ಸುಪ್ರಿಮ್ ಪಬ್ಲಿಕ್ ಶಾಲೆಯಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ವಚನ ಕಂಠಪಾಠ, ವಚನ ಸಾಹಿತ್ಯ ರಸಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಜಗತ್ತು ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂಪತ್ತಿನ ಸಮಾನ ಹಂಚಿಕೆಯ ಕುರಿತು ಚರ್ಚಿಸುತ್ತಿದೆ. ಆದರೆ ಬಸವಣ್ಣರು ಸುಮಾರು ಒಂಬತ್ತು ಶತಮಾನಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಈ ಮೌಲ್ಯಗಳನ್ನು ಜನರಿಗೆ ಬೋಧಿಸಿದ್ದರು. ಹೀಗಾಗಿ ಆರ್ಥಿಕ ನ್ಯಾಯ ಮತ್ತು ಹಂಚಿಕೆಯ ಮೌಲ್ಯವನ್ನು ಪ್ರತಿಪಾದಿಸಿದ ಮಹಾನ್ ಚಿಂತಕರಾಗಿ ಬಸವಣ್ಣರನ್ನು ಪರಿಗಣಿಸಬೇಕು ಎಂದು ಹೇಳಿದರು.

ಇಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯವು ನೆದರ್ಲ್ಯಾಂಡ್ಸ್ನ ಹೇಗ್ ನಗರದಲ್ಲಿದೆ. ಆದರೆ ಅದಕ್ಕೂ ಶತಮಾನಗಳ ಹಿಂದೆಯೇ ಬಸವಕಲ್ಯಾಣದಲ್ಲಿ ಬಸವಣ್ಣರು ಅನುಭವ ಮಂಟಪ ಮತ್ತು ಪರುಷಕಟ್ಟೆಯಂತಹ ಸಂವಾದ ವೇದಿಕೆಗಳ ಮೂಲಕ ಸಮಾಜದಲ್ಲಿ ಉಂಟಾಗುತ್ತಿದ್ದ ಭಿನ್ನಾಭಿಪ್ರಾಯಗಳು ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂವಾದ ಮತ್ತು ನ್ಯಾಯದ ಮೂಲಕ ಪರಿಹಾರ ಕಂಡುಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿದರು.

ಪರುಷಕಟ್ಟೆಯು ಕೇವಲ ಸಭಾಸ್ಥಳವಾಗಿರದೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸಿದ ವೇದಿಕೆಯಾಗಿತ್ತು. ಈ ಕಾರಣದಿಂದ ಬಸವಣ್ಣರ ನ್ಯಾಯ ಪರಿಕಲ್ಪನೆ ಇಂದಿಗೂ ವಿಶ್ವಕ್ಕೆ ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಇ.ಎಂ.ಎಲ್ನ ಹಿರಿಯ ಸದಸ್ಯ ಸಿ.ಕೆ. ಮಂಜುನಾಥ್, ಬಸವಣ್ಣರು ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದರು.

ಜಾತಿ, ವರ್ಣ, ಮೇಲು-ಕೀಳು ಎಂಬ ಯಾವುದೇ ಭೇದಭಾವವಿಲ್ಲದೆ ಪ್ರತಿಯೊಬ್ಬ ಮನುಷ್ಯನನ್ನೂ ಸಮಾನವಾಗಿ ಕಾಣುವ ವಿಶಾಲ ಹೃದಯವನ್ನು ಬಸವಣ್ಣರು ಹೊಂದಿದ್ದರು. ಇಪ್ಪತ್ತೊಂದನೇ ಶತಮಾನದಲ್ಲಿಯೂ ಮನುಷ್ಯನನ್ನು ಮನುಷ್ಯನಾಗಿ ಕಾಣದಿರುವ ಅನೇಕ ಘಟನೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಬಿ.ಇ.ಎಂ.ಎಲ್ ಬಸವ ಸಮಿತಿಯ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಚನ ಸಾಹಿತ್ಯದ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಸಮಿತಿಯು ಪ್ರತಿವರ್ಷ ವಚನ ಕಂಠಪಾಠ, ರಸಪ್ರಶ್ನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.

ವಚನ ಸಾಹಿತ್ಯವು ಸತ್ಯವನ್ನು ನುಡಿಯಲು, ಧರ್ಮವನ್ನು ಆಚರಿಸಲು, ಮಾನವೀಯ ಮೌಲ್ಯಗಳನ್ನು ಬೆಳೆಸಲು ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ಅಮೂಲ್ಯ ಜೀವನದರ್ಶನವಾಗಿದೆ. ಬಸವಾದಿ ಶರಣರ ಸಂದೇಶಗಳು ಇಂದಿನ ಪೀಳಿಗೆಯಲ್ಲಿ ನೈತಿಕತೆ, ಸಮಾನತೆ ಹಾಗೂ ಸೇವಾಭಾವವನ್ನು ಬೆಳೆಸುವ ದಾರಿದೀಪವಾಗಿವೆ ಎಂದು ಹೇಳಿದರು.
ವಚನ ಕಂಠಪಾಠ ಮತ್ತು ವಚನ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆಗಳಿಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳಿಗೆ ಸಿರಿ ನವೀನ್ ಮತ್ತು ವರ್ಷ ತೀರ್ಪುಗಾರರಾಗಿದ್ದರು. ಈ ಸಂದರ್ಭದಲ್ಲಿ ಬಿ.ಇ.ಎಂ.ಎಲ್ ಬಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.








