ಬೆಂಗಳೂರು: ಪ್ರತಿಭಾ ಪುರಸ್ಕಾರ ಬಹುಮಾನವಲ್ಲ. ಭವಿಷ್ಯದ ಹೂಡಿಕೆ ಎಂದು ಅಮೇರಿಕಾದ ಇನ್ನೋವೇಟಿವ್ ಟೆಕ್ನಿಕ್ ಡೆವಲಪ್ಮೆಂಟ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಇಂದುಮತಿ ಎಸ್. ಬಿಂಗಂ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಎಸ್.ಕೆ. ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರಿನ ಶಾರದಾ ಸಿದ್ಧರಾಣ್ಣನವರ್ ದತ್ತಿ ಅಂಗವಾಗಿ ಆಯೋಜಿಸಲಾಗಿದ್ದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಹಾಗೂ 128ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವ ವಿಜ್ಞಾನಿಗಳು, ವೈದ್ಯರು, ಅಭಿಯಂತರರು ಹಾಗೂ ಮಹಾನ್ ವ್ಯಕ್ತಿಗಳಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಪ್ರತಿಭಾ ಪ್ರಶಸ್ತಿಯು ಅಂತಿಮ ಗುರಿಯಲ್ಲ. ಅದು ಭವಿಷ್ಯದ ಸಾಧನೆಗಳಿಗೆ ಪ್ರೇರಣೆ ನೀಡುವ ಹೂಡಿಕೆಯಾಗಿದ್ದು, ಇನ್ನಷ್ಟು ಎತ್ತರದ ಗುರಿಗಳನ್ನು ಸಾಧಿಸಲು ಮೆಟ್ಟಿಲಾಗಿಸಿಕೊಳ್ಳಬೇಕು. ಇಂದು ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಉತ್ತಮ ಶಿಕ್ಷಣ, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಸಮಾಜಕ್ಕೆ ಬೆಳಕಾಗುವಂತೆ ಸಲಹೆ ನೀಡಿದರು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಜೀವನಪರ್ಯಂತ ಕಲಿಯುವ ಮನೋಭಾವವೇ ಯಶಸ್ಸಿನ ನಿಜವಾದ ದಾರಿ ಎಂದರು.

ದತ್ತಿ ದಾಸೋಹಿಗಳಾದ ಎನ್.ಜಿ.ಇ.ಎಫ್ ನಿವೃತ್ತ ವ್ಯವಸ್ಥಾಪಕ ಎನ್.ಟಿ. ಸಿದ್ಧರಾಮಣ್ಣನವರ್ ಮಾತನಾಡಿ, ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಬೇಕಾದರೆ ಮೊದಲು ಶರಣರು ಬೋಧಿಸಿದ ಛಲವನ್ನು ರೂಢಿಸಿಕೊಳ್ಳಬೇಕು. ಯಾವುದೇ ಉನ್ನತ ಹುದ್ದೆ ಅಥವಾ ಪದವಿಯನ್ನು ಅಲಂಕರಿಸಿದರೂ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನು ಎಂದಿಗೂ ಮರೆಯಬಾರದು.

ಜೀವನದಲ್ಲಿ ಇತರರಿಗೆ ಸಹಾಯ ಮಾಡುವ ಅವಕಾಶ ದೊರೆತಾಗ ಅದನ್ನು ಕೈಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು. ಮನುಷ್ಯ ಈ ಲೋಕವನ್ನು ತೊರೆಯುವಾಗ ಸಂಪತ್ತು ಅಥವಾ ಹುದ್ದೆಗಳು ಜೊತೆ ಬರುವುದಿಲ್ಲ. ಸಮಾಜಕ್ಕಾಗಿ ಮಾಡಿದ ಪುಣ್ಯದ ಕೆಲಸಗಳೇ ಶಾಶ್ವತವಾಗಿ ಉಳಿಯುತ್ತವೆ ಎಂದರು.
ದತ್ತಿ ದಾಸೋಹಿಗಳಾದ ಶಾರದ ಸಿದ್ದರಾಮಣ್ಣನವರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಸ್ಪರ್ಧಾತ್ಮಕ ಮನೋಭಾವ ಹಾಗೂ ಸಾಧನೆಯ ಹಂಬಲವನ್ನು ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ವರ್ಷ ಐವತ್ತು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವ ಸಂಕಲ್ಪ ಬೆಳೆಸಿಕೊಳ್ಳಬೇಕು.

ಪ್ರಶಸ್ತಿ ಪಡೆಯದ ವಿದ್ಯಾರ್ಥಿಗಳು ನಿರಾಶರಾಗದೆ ಇದನ್ನೇ ಪ್ರೇರಣೆಯಾಗಿ ಸ್ವೀಕರಿಸಿ, ಮುಂದಿನ ವರ್ಷ ಮೊದಲ ಐದು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಶ್ರಮಿಸಬೇಕು. ಶಿಕ್ಷಕರು ಬೋಧಿಸುವ ಪಾಠಗಳನ್ನು ಆಸಕ್ತಿಯಿಂದ ಆಲಿಸಿ, ನಿರಂತರ ಅಧ್ಯಯನದ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳುವ ವಿದ್ಯಾರ್ಥಿಗಳೇ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸಿ, ಶಿಕ್ಷಣದ ಕಡೆ ಮತ್ತಷ್ಟು ಒಲವು ಮೂಡಿಸಲು ಈ ಪ್ರತಿಭಾ ಪುರಸ್ಕಾರವನ್ನು ಪ್ರತಿವರ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್ನ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ಕಟ್ಟಡಕ್ಕೆ ಗಟ್ಟಿಯಾದ ಅಡಿಪಾಯ ಹೇಗೆ ಅಗತ್ಯವೋ, ಅದೇ ರೀತಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಆದರ್ಶಗಳನ್ನು ಬೆಳೆಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

ವಚನಗಳು ಕೇವಲ ಪದಗಳಲ್ಲ. ಅವು ಶರಣರ ಅನುಭವದಿಂದ ಮೂಡಿದ ಜೀವನದ ಸತ್ಯಗಳು. ಅವುಗಳನ್ನು ಅರ್ಥೈಸಿಕೊಂಡು ಆಚರಣೆಯಲ್ಲಿ ಅಳವಡಿಸಿಕೊಂಡವರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡು, ಶಿಸ್ತು, ಪರಿಶ್ರಮ ಮತ್ತು ದೃಢಸಂಕಲ್ಪದೊAದಿಗೆ ಅವುಗಳನ್ನು ನನಸಾಗಿಸಬೇಕು.

ವಚನ ಸಾಹಿತ್ಯವು ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ, ಚಿಂತನಾ ಶಕ್ತಿ ಹಾಗೂ ಜ್ಞಾನಭಂಡಾರವನ್ನು ಸಮೃದ್ಧಗೊಳಿಸುವ ಅಪೂರ್ವ ಸಂಪತ್ತಾಗಿದೆ ಎಂದು ತಿಳಿಸಿದ ಅವರು, ಭಾರತದ ಮೊದಲ ವಿಜ್ಞಾನ ಕ್ಷೇತ್ರದ ನೋಬೆಲ್ ಪುರಸ್ಕೃತ ಡಾ. ಸಿ. ವಿ. ರಾಮನ್ ಅವರ ಕುತೂಹಲ, ವೈಜ್ಞಾನಿಕ ಮನೋಭಾವ ಮತ್ತು ನಿರಂತರ ಕಲಿಕೆಯ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು.
ನಿಮ್ಮಲ್ಲಿಯೂ ಮುಂದಿನ ಸಿ. ವಿ. ರಾಮನ್ ಆಗುವ ಸಾಮರ್ಥ್ಯವಿದೆ. ಪರಿಶ್ರಮ, ಕುತೂಹಲ ಮತ್ತು ಸಂಕಲ್ಪದೊAದಿಗೆ ಸಾಧನೆ ಮಾಡಿ, ಭಾರತಕ್ಕೆ ಇನ್ನಷ್ಟು ನೋಬೆಲ್ ಪ್ರಶಸ್ತಿಗಳನ್ನು ತಂದುಕೊಡುವ ವಿಜ್ಞಾನಿಗಳಾಗಿ ಬೆಳೆಯಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಎಸ್ ಕೆ ಪಬ್ಲಿಕ್ ಶಾಲೆಯ ಸಂಸ್ಥಾಪಕ ಡಾ. ಸಿ. ಬಿ. ಶಶಿಧರ್ ಮಾತನಾಡಿ ತಂದೆ-ತಾಯಿ ಮತ್ತು ಗುರುಗಳು ಹೇಳುವ ಸತ್ಪಥದ ಮಾತುಗಳನ್ನು ಗೌರವದಿಂದ ಆಲಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು. ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಶಿಸ್ತು ಜೀವನದ ಯಶಸ್ಸಿಗೆ ಭದ್ರ ಬುನಾದಿಯಾಗಿವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಸುಳ್ಳನ್ನು ಹೇಳಬಾರದು ಎಂಬ ಜೀವನ ಮೌಲ್ಯಗಳನ್ನು ಬಸವಣ್ಣನವರಿಂದ ಮಹಾತ್ಮ ಗಾಂಧೀಜಿಯವರವರೆಗೆ ಎಲ್ಲ ಮಹನೀಯರೂ ಬೋಧಿಸಿದ್ದಾರೆ. ಶರಣರು ಮತ್ತು ದಾರ್ಶನಿಕರು ತೋರಿದ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

ವಚನ ಸಾಹಿತ್ಯವು ಕೇವಲ ಧಾರ್ಮಿಕ ಸಾಹಿತ್ಯವಲ್ಲ, ಅದು ದೇಶಸೇವೆ ಮತ್ತು ವ್ಯಕ್ತಿತ್ವ ವಿಕಾಸದ ಶಕ್ತಿಯುತ ಸಾಧನವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ಮಾನವೀಯತೆ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಕರ್ನಾಟಕದ ಕಿರೀಟವಾದ ಬೀದರ್ ನಿಂದ ಗಡಿಭಾಗದ ಚಾಮರಾಜನಗರದವರೆಗೆ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಈ ಅಭಿಯಾನದ ಮೂಲಕ ವಚನ ಸಾಹಿತ್ಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿ, ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಫೌಂಡೇಷನ್ ಕೈಗೊಂಡಿದೆ ಎಂದು ಹೇಳಿದರು.

ಇದೇ ವೇಳೆ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣಪತ್ರ ಹಾಗೂ ವಚನ ವಾಚನ ಮಾಡಿದ ೪೦ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಕೇಂದ್ರಿಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಅಪರ್ಣ ಬಸವರಾಜು, ಮುಖ್ಯ ಶಿಕ್ಷಕಿ ಉಷಾ ಸೇರಿದಂತೆ ಗಣ್ಯರು, ಶಿಕ್ಷಕರು ಉಪಸ್ಥಿತರಿದ್ದರು








