ಆಲೂಗೆಡ್ಡೆಯಿಂದ ತಯಾರಿಸಬಹುದಾದ ತಿನಿಸುಗಳು… ಆಲೂಪರೋಟ, ಆಲೂ ಬಟಾಣಿ ಗಸಿ, ಆಲೂ ಸಮೋಸ, ಆಲೂ ಕುರ್ಮಾ ಮಾಡೋದು ಹೇಗೆ?

ಆಲೂಗೆಡ್ಡೆಯನ್ನು ಬಳಸಿ ಹಲವು ಪದಾರ್ಥಗಳನ್ನು ನಾವು ಮನೆಯಲ್ಲಿಯೇ ರುಚಿ, ರುಚಿಯಾಗಿ ತಯಾರಿಸಬಹುದಾಗಿದೆ. ನಾವು ದಿನನಿತ್ಯ ಮಾಡುವ ತಿನಿಸುಗಳಲ್ಲಿ ಆಲೂಗೆಡ್ಡೆಯ ಪಾತ್ರವಂತು ಇದ್ದೇ ಇರುತ್ತದೆ. ಹೀಗಿರುವಾಗ ಆಲೂಗೆಡ್ಡೆಯಿಂದ ತಯಾರಿಸಬಹುದಾದ ಒಂದಷ್ಟು ತಿನಿಸುಗಳ ಕುರಿತ ಮಾಹಿತಿ ಇಲ್ಲಿದೆ
1-ಬಾಯಿ ಚಪ್ಪರಿಸುವ ಆಲೂಪರೋಟ ಮಾಡಿ ನೋಡಿ!
ಆಲೂಗೆಡ್ಡೆಯನ್ನು ಬಳಸಿ ಮಾಡಬಹುದಾದ ಪರೋಟಕ್ಕೆ ಬೇಕಾಗುವ ಪದಾರ್ಥಗಳು ಯಾವುದೆಂದರೆ ಗೋಧಿ ಹಿಟ್ಟು- ಎರಡು ಕಪ್, ಆಲೂಗೆಡ್ಡೆ- ಅರ್ಧ ಕೆಜಿ, ಕೊತ್ತಂಬರಿಸೊಪ್ಪು- ಒಂದು ಕಂತೆ, ಹಸಿ ಮೆಣಸಿನಕಾಯಿ- ಎಂಟು, ಕೊತ್ತಂಬರಿಬೀಜ- ಮೂರು ಚಮಚ, ಜೀರಿಗೆ- ಒಂದು ಚಮಚ, ಇಂಗು, ಉಪ್ಪು(ರುಚಿಗೆ ತಕ್ಕಷ್ಟು)
ತಯಾರು ಮಾಡುವ ವಿಧಾನ ಹೀಗಿದೆ: ಆಲೂಪರೋಟ ಮಾಡಲು ಹೊರಡುವ ಮುನ್ನ ಅರ್ಧ ಗಂಟೆಗೂ ಮೊದಲು ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲೆಸಿಟ್ಟುಕೊಳ್ಳಬೇಕು. ಬಳಿಕ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇನ್ನೊಂದೆಡೆ ಮಸಾಲೆ ಪದಾರ್ಥಗಳನ್ನೆಲ್ಲ ಅಂದರೆ ಇಂಗು, ಜೀರಿಗೆ, ಕೊತ್ತಂಬರಿ ಬೀಜ, ಮೆಣಸಿಕಾಯಿ, ಕೊತ್ತಂಬರಿಸೊಪ್ಪು ಮೊದಲಾದವುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಿ ಅದನ್ನು ಬೇಯಿಸಿದ ಆಲೂಗೆಡ್ಡೆಯೊಂದಿಗೆ ಬೆರೆಸಬೇಕು ಈ ವೇಳೆ ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ ಬಳಿಕ ಚೆನ್ನಾಗಿ ಕಲೆಸಿಟ್ಟುಕೊಳ್ಳಬೇಕು.
ಮತ್ತೊಂದೆಡೆ ಕಲೆಸಿಟ್ಟ ಗೋಧಿ ಹಿಟ್ಟನ್ನು ತೆಗೆದುಕೊಂಡು ಮೊದಲಿಗೆ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಪೂರಿ ಗಾತ್ರದಲ್ಲಿ ಲಟ್ಟಿಸಿಕೊಂಡು ಮಧ್ಯದಲ್ಲಿ ಬೇಯಿಸಿದ ಆಲೂಗೆಡ್ಡೆಯನ್ನೊಳಗೊಂಡ ಮಿಶ್ರಣವನ್ನು ಇಟ್ಟು ಅದರ ಸುತ್ತ ಬರುವಂತೆ ತಟ್ಟಿ ಅದರ ಮೇಲೆ ಮತ್ತೊಂದು ಪದರ ಬರುವಂತೆ ಹಾಕಿ ಸುತ್ತಲೂ ಮಡಚಿ ಬಳಿಕ ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿಕೊಂಡು ಅಗಲವಾಗಿ ಲಟ್ಟಿಸಬೇಕು. ಅದಾದ ಬಳಿಕ ತಾವಾದಲ್ಲಿ ಎಣ್ಣೆ ಹಾಕಿಕೊಂಡು ಚೆನ್ನಾಗಿ ಬೇಯಿಸಿದರೆ ಸವಿಯಲು ರುಚಿಯಾದ ಆಲೂಪರೋಟ ತಯಾರಾಗುತ್ತದೆ.
2-ಚಪಾತಿ, ರೊಟ್ಟಿಗೆ ಆಲೂ ಬಟಾಣಿ ಗಸಿ ಜತೆಗಿರಲಿ
ಆಲೂ ಬಟಾಣಿ ಗಸಿ ಚಪಾತಿ, ರೊಟ್ಟಿ, ದೋಸೆಗೆ ಒಳ್ಳೆಯ ಕಾಂಬಿನೇಷನ್. ಹೀಗಾಗಿ ಇದನ್ನು ಮಾಡದೆ ಇರುವವರು ಮಾಡಿ ರುಚಿ ನೋಡಬಹುದು. ತಯಾರಿಸಲು ಅಷ್ಟೇನು ಕಷ್ಟವಲ್ಲ. ಹೀಗಾಗಿ ಯಾರು ಬೇಕಾದರೂ ಮಾಡಿ ಸವಿಯಲು ಅಡ್ಡಿಯಿಲ್ಲ. ಹಾಗಾದರೆ ಆಲೂ ಬಟಾಣಿ ಗಸಿ ತಯಾರಿ ಮಾಡುವುದು ಹೇಗೆ?
ಆಲೂ ಬಟಾಣಿ ಗಸಿ ತಯಾರಿಸಲು ಬೇಕಾಗುವ ಪದಾರ್ಥಗಳು: ಹಸಿ ಬಟಾಣಿ- ಅರ್ಧ ಕೆಜಿ, ಆಲೂಗೆಡ್ಡೆ- ಎರಡು, ಈರುಳ್ಳಿ-ಎರಡು, ಟೋಮ್ಯಾಟೋ-ಎರಡು, ಗರಂಮಸಾಲೆ- ಒಂದು ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಕೆಂಪು ಮೆಣಸು ಪುಡಿ –ಎರಡು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಎರಡು ಚಮಚ
ತಯಾರಿಸುವ ವಿಧಾನ ಹೀಗಿದೆ: ಆಲೂ ಬಟಾಣಿ ಗಸಿ ಮಾಡುವ ಮುನ್ನ ಪ್ರತ್ಯೇಕವಾಗಿ ಬಟಾಣಿ ಮತ್ತು ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಬೆಂದ ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆದು ಪುಡಿ ಮಾಡಿಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಂಡು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ನಿಧಾನ ಉರಿಯಲ್ಲಿ ಕೆಂಪಗೆ ಬಾಡುವಂತೆ ಹುರಿಯಬೇಕು.
ಆ ನಂತರ ಅದಕ್ಕೆ ಹಚ್ಚಿದ ಟೋಮ್ಯಾಟೋ ಹಾಕಿ ಬಾಡಿಸಬೇಕು. ಇದಾದ ಬಳಿಕ ತೆಗೆದಿಟ್ಟುಕೊಂಡಿದ್ದ ಮಸಾಲೆ ಪದಾರ್ಥಗಳಾದ ಮೆಣಸಿನ ಪುಡಿ, ಗರಂಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನು ಸುರಿದು ಚೆನ್ನಾಗಿ ಮಿಕ್ಸ್ ಮಾಡಿ ಹುರಿಯಬೇಕು. ಇದಾದ ಬಳಿಕ ಬೇಯಿಸಿಟ್ಟು ಕೊಂಡಿದ್ದ ಆಲೂಗೆಡ್ಡೆಯ ಚೂರು ಮತ್ತು ಬಟಾಣಿಯನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಸ್ವಲ್ಪ ನೀರು ಹಾಕಿ ಬೇಯಿಸಿ ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. ಆ ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿದರೆ ಆಲೂ ಬಟಾಣಿ ಗಸಿ ರೆಡಿ.
3-ಆಲೂ ಸಮೋಸದ ರುಚಿಯನ್ನು ಸವಿದು ಬಿಡಿ
ಸಮೋಸ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರಿಗೂ ಗೊತ್ತಿದೆ. ಈ ಸಮೋಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದಾಗಿದ್ದು, ಅದರಲ್ಲಿಯೂ ಆಲೂ ಸಮೋಸ ತಯಾರಿಸಲು ಸುಲಭ ರುಚಿಯೂ ಹೌದು. ಹಾಗಾದರೆ ಆಲೂ ಸಮೋಸ ಮಾಡುವುದು ಹೇಗೆ ಎಂದು ತಿಳಿಯುವ ಆಸಕ್ತಿ ಇದೆಯಾ ಇಲ್ಲಿದೆ ಅದನ್ನು ಮಾಡುವ ವಿಧಾನ.
ಬೇಕಾಗುವ ಪದಾರ್ಥಗಳ ವಿವರ: ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆ: ಒಂದು ಕಪ್, ಮೈದಾಹಿಟ್ಟು: ಅರ್ಧ ಕಪ್
ಚಿರೋಟಿ ರವೆ: ಅರ್ಧ ಕಪ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ: ಒಂದು ಕಪ್, ಖಾರದ ಪುಡಿ: ಒಂದು ಚಮಚ, ಗರಂಪುಡಿ: ಒಂದು ಚಮಚ, ಎಣ್ಣೆ: ಕರಿಯಲು ಅಗತ್ಯವಿರುವಷ್ಟು,
ಮಾಡುವ ವಿಧಾನ ಹೇಗೆ?: ಮೊದಲಿಗೆ ಮೈದಾಹಿಟ್ಟು, ರವೆ, ರುಚಿಗೆ ತಕ್ಕಷ್ಟು ಉಪ್ಪು, ಬಿಸಿ ಮಾಡಿದ ಎರಡು ಚಮಚ ಎಣ್ಣೆ ಎಲ್ಲ ಸೇರಿಸಿ ಅದಕ್ಕೆ ಸ್ವಲ್ಪ ನೀರು ಹಾಕಿ ಹದವಾಗಿ (ಚಪಾತಿ ಹಿಟ್ಟಿನಂತೆ) ಕಲಸಿ ಒಂದೆಡೆ ಮುಚ್ಚಿಡಬೇಕು.
ಇನ್ನೊಂದೆಡೆ ಒಲೆಯಲ್ಲಿ ಪಾತ್ರೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಖಾರದಪುಡಿ ಬೆಂದ ಆಲೂಗೆಡ್ಡೆಯನ್ನು ಹಾಕಿ ಸೇರಿಸಿ ಪಲ್ಯ ತಯಾರಿಸಿಕೊಳ್ಳಬೇಕು. ಆ ನಂತರ ಕಲಸಿದ ಹಿಟ್ಟನ್ನು ಸಣ್ಣದಾಗಿ ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ ಕೋನ್ನಂತೆ ಮಡಚಿ ಅರದೊಳಗೆ ಎರಡು ಚಮಚ ಪಲ್ಯವನ್ನು ಹಾಕಬೇಕು ಬಳಿಕ ಅಂಚುಗಳನ್ನು ಒತ್ತಿ ಬಿಗಿಮಾಡಿ ಎಣ್ಣೆಯಲ್ಲಿ ಕರಿದು ತೆಗೆದರೆ ಆಲೂಸಮೋಸ ರೆಡಿ.
4- ಚಪಾತಿ, ದೋಸೆ ಏನೇ ಇರಲಿ… ಜತೆಗೆ ಆಲೂ ಕುರ್ಮಾ ಇರಲಿ
ಚಪಾತಿ, ಪರೋಟ, ದೋಸೆ ಯಾವುದೇ ಆಗಿರಲಿ ಇವುಗಳಿಗೆ ಆಲೂಗೆಡ್ಡೆ ಬಟಾಣಿ ಕುರ್ಮಾ ಹೇಳಿ ಮಾಡಿಸಿದ ಕಾಂಬಿನೇಷನ್. ಹೀಗಾಗಿ ಚಪಾತಿ, ಪರೋಟ ಹೀಗೆ ಎಲ್ಲದಕ್ಕೂ ಇದು ಸಾಥ್ ನೀಡುವುದರಿಂದ ಬಾಯಿ ಚಪ್ಪರಿಸಿಕೊಂಡು ಸೇವಿಸಲು ಅನುಕೂಲವಾಗುತ್ತದೆ. ಆಲೂಗೆಡ್ಡೆ ಬಟಾಣಿ ಕುರ್ಮಾ ಮಾಡುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳು ಎಲ್ಲದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ಬೇಕಾಗುವ ಪದಾರ್ಥಗಳ ವಿವರಗಳು: ಆಲೂಗೆಡ್ಡೆ- ಕಾಲು ಕೆಜಿ, ಹಸಿಬಟಾಣಿ- ಒಂದು ಪಾವು, ಈರುಳ್ಳಿ- ಒಂದು ಗೆಡ್ಡೆ, ಟೊಮ್ಯಾಟೋ-ಎರಡು, ಗರಂ ಮಸಾಲೆ- ಒಂದೂವರೆ ಚಮಚ, ಸಾಂಬಾರ್ ಪುಡಿ- ಒಂದು ಚಮಚ, ಸಾಸಿವೆ- ಸ್ವಲ್ಪ, ಕಡ್ಲೆಬೇಳೆ- ಸ್ವಲ್ಪ, ಚಕ್ಕೆ- ಸ್ವಲ್ಪ, ಲವಂಗ- ಸ್ವಲ್ಪ, ಕಾಯಿ ತುರಿ- ಕಾಲು ಬಟ್ಟಲು, ಜೀರಿಗೆ- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಸ್ವಲ್ಪ ಒಗ್ಗರಣೆಗೆ
ಮಾಡುವ ವಿಧಾನ ಹೀಗಿದೆ: ಮೊದಲಿಗೆ ಆಲೂಗೆಡ್ಡೆ ಮತ್ತು ಬಟಾಣಿಯನ್ನು ಬೇಯಿಸಿಟ್ಟುಕೊಳ್ಳಬೇಕು. (ಬೇಯಿಸಿದ ಆಲೂಗೆಡ್ಡೆಯನ್ನು ಪುಡಿ ಮಾಡಬಹುದು ಅಥವಾ ವೃತ್ತಾಕಾರದಲ್ಲಿ ಕಟ್ ಮಾಡಬಹುದು). ಮತ್ತೊಂದು ಕಡೆಯಲ್ಲಿ ಈರುಳ್ಳಿ, ಟೊಮ್ಯಾಟೋ, ಕಾಯಿ, ಜೀರಿಗೆ, ಚಕ್ಕೆ ಲವಂಗ, ಗರಂ ಮಸಾಲೆ ಮತ್ತು ಸಾಂಬಾರ್ ಪುಡಿಯನ್ನು ಚೆನ್ನಾಗಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು.
ಇದಾದ ಬಳಿಕ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಒಗ್ಗರಣೆಗೆ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಹಚ್ಚಿದ ಸ್ವಲ್ಪ ಈರುಳ್ಳಿ, ಟೊಮ್ಯಾಟೋ ಹಾಕಿ ಹುರಿಯಬೇಕು. ನಂತರ ರುಬ್ಬಿದ ಮಸಾಲೆ ಪದಾರ್ಥ ಮತ್ತು ಬೇಯಿಸಿದ ಆಲೂಗೆಡ್ಡೆ, ಬಟಾಣಿಯನ್ನು ಹಾಕಿ ಸ್ವಲ್ಪ ನೀರು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿದರೆ ಆಲೂಗೆಡ್ಡೆ ಬಟಾಣಿ ಕುರ್ಮಾ ಸೇವಿಸಲು ಸಿದ್ಧವಾಗಲಿದೆ.