ArticlesLatest

ಅಂದು, ಇಂದು, ಎಂದೆಂದೂ ಕನ್ನಡಕ್ಕೊಬ್ಬನೇ ಕೈಲಾಸಂ… ಅವರೊಬ್ಬ ದೈತ್ಯ ಪ್ರತಿಭೆ

ಜುಲೈ 29ರಂದು ಟಿ.ಪಿ. ಕೈಲಾಸಂರವರ ಜನ್ಮದಿನ

ಪ್ರಹಸನ ಪಿತಾಮಹನೆನ್ನಿ, ನಡೆದಾಡುವ ರಂಗಭೂಮಿ ಎನ್ನಿ, ಹವ್ಯಾಸಿ ರಂಗಭೂಮಿಯ ಅನರ್ಘ್ಯ ರತ್ನವೆನ್ನಿ, ಅನುಕರಣಾ ಸಾರ್ವಭೌಮನೆನ್ನಿ, ಚಂಡ ಪ್ರಚಂಡನಟನೆನ್ನಿ, ಅದ್ಭುತ ಆಶುಕವಿಯೆನ್ನಿ, ನವ್ಯಶೈಲಿಯ ನಾಟಕದ ನಾಂದಿ ಪುರುಷನೆನ್ನಿ ಖಂಡಿತ ನಿಮ್ಮ ಊಹೆ ಸರಿ.  ಅದು ಟಿ.ಪಿ. ಕೈಲಾಸಂ! ಅವರಿಗೆ ಮಾತ್ರ ಒಪ್ಪುವ ವಿಶೇಷಣಗಳಿವು.  ‘ಕನ್ನಡಕ್ಕೊಬ್ಬನೇ ಕೈಲಾಸಂ’ ಎನಿಸಿ ಕನ್ನಡ ನಾಡಿನಲ್ಲಿ ಮೆರೆದ ಟಿ.ಪಿ. ಕೈಲಾಸಂ ಅವರು ಕೈಲಾಸವಾಸಿಯಾಗಿ (ನಿಧನ 24.11.1946) ಮುಕ್ಕಾಲು ಶತಮಾನವೇ ಮುಗಿದು ಹೋಗಿದೆ.  

ಆದರೂ ಇನ್ನೊಬ್ಬ ಕೈಲಾಸಂರನ್ನು ಕನ್ನಡ ನಾಡು ಇನ್ನೂ ಕಂಡಿಲ್ಲ, ಕಾಣಲು ಸಾಧ್ಯವೂ ಇಲ್ಲವೆನ್ನಿ.  ಅಂದು, ಇಂದು, ಎಂದೆಂದೂ ಕನ್ನಡಕ್ಕೊಬ್ಬನೇ ಕೈಲಾಸಂ! ‘ಕೈಲಾಸಂ’ ಎಂಬುದು ಕೇವಲ ಒಂದು ಹೆಸರಲ್ಲ.  ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ತಮ್ಮ ದೈತ್ಯ ಪ್ರತಿಭೆಯ ಪ್ರಭೆಯಿಂದ ಕನ್ನಡ ನಾಡನ್ನು ಬೆಳಗಿದ ಪ್ರಜ್ವಲ ಬೆಳಕವರು.  ತಮ್ಮ ಅಪ್ರತಿಮ ಪ್ರತಿಭೆಯಷ್ಟೇ ತಮ್ಮ ವಿಲಕ್ಷಣ ನಡವಳಿಕೆಯಿಂದಲೂ ಪ್ರಸಿದ್ಧರಿವರು.

ಬದುಕಿದ್ದಾಗಲೇ ದಂತ ಕಥೆಯಾಗಿದ್ದ ಕರ್ನಾಟಕ ರತ್ನ ವರನಟ ಡಾ. ರಾಜ್‌ ಕುಮಾರ್‌ರವರು ತಮ್ಮ ‘ಆಕಸ್ಮಿಕ’ ಚಿತ್ರದಲ್ಲಿ ‘ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’ ಎಂದು ಕನ್ನಡ ನಾಡಿನ ಹಿರಿಮೆಯನ್ನು ಸಾರುತ್ತಾ ‘ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?’ ಎಂದು ಹಾಡುತ್ತಾರೆ.  ಇದೊಂದು ಸಾಲು ಸಾಕು ಕೈಲಾಸಂ ಏನೆಂಬುದಕ್ಕೆ.  ಹಂಸಲೇಖಾರಂಥ ಚಲನಚಿತ್ರ ಸಾಹಿತಿಯ ಲೇಖನಿಯ ಕಣ್ಣಲ್ಲಿ ಕೈಲಾಸಂ ಅವರು ಕೈಲಾಸಕ್ಕಿಂತಲೂ ಮಿಗಿಲಾಗಿ ಕಂಡಿದ್ದಾರೆಂದರೆ, ಡಾ. ರಾಜ್‌ಕುಮಾರ್‌ರಂಥ ಮಹಾನ್ ಕಲಾವಿದರ ನಾಲಿಗೆಯಲ್ಲಿ ಕೈಲಾಸಂ ಅವರು ಕೈಲಾಸವಾಗಿ ನಲಿದಿದ್ದಾರೆಂದರೆ ನಿಜಕ್ಕೂ ಅವರು ಕನ್ನಡದ ಕೈಲಾಸವೇ ಸರಿ.

ಏಕೆಂದರೆ ಕನ್ನಡವನ್ನು, ಕರ್ನಾಟಕವನ್ನು ಕಟ್ಟುವಲ್ಲಿ ಕೈಲಾಸಂರವರ ಕೊಡುಗೆ ಅಮೋಘವಾದದ್ದು.  ಕೈಲಾಸದಷ್ಟೇ ಎತ್ತರವಾದದ್ದು.  ಮಹತ್ತರವಾದದ್ದು.  ಅಂದ ಹಾಗೆ ಕೈಲಾಸಂ ಕೂಡ ಬದುಕಿದ್ದಾಗಲೇ ದಂತಕಥೆಯಾಗಿ ಜನಮಾನಸದಲ್ಲಿ ಮೆರೆದವರು.

ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗೆ ಕಳೆದ 20ನೇ ಶತಮಾನದ ಕೊಡುಗೆ ಅಪಾರ.  ಅದರಲ್ಲೂ ವಿಶೇಷವಾಗಿ ಹವ್ಯಾಸಿ ರಂಗಭೂಮಿಗೆ ವೇಗ ಸಿಕ್ಕಿದ್ದು ಇಲ್ಲಿಯೇ.  ಅನೇಕ ಮಂದಿ ಶ್ರೇಷ್ಠ ನಾಟಕಕಾರರನ್ನು ಹಾಗೂ ನಟರನ್ನು ಕಂಡ ಶತಮಾನವದು.  ಅಂಥ ಶ್ರೇಷ್ಠರಲ್ಲಿ ಕೈಲಾಸಂ ಮೊದಲಿಗರು.  ಮತ್ತೊಬ್ಬರು ಸಂಸ, ಇನ್ನೊಬ್ಬರು ಶ್ರೀರಂಗ ಕಾವ್ಯನಾಮದ ಆದ್ಯ ರಂಗಾಚಾರ್ಯರು.  ಆದರೆ ಈ ಮೂವರ ಪೈಕಿ ಕಥಾವಸ್ತುವಿನಿಂದ ಹಿಡಿದು ಕನ್ನಡ-ಇಂಗ್ಲೀಷ್ ಮಿಶ್ರಿತ ತಮ್ಮ ವಿಶಿಷ್ಟ ಸಂಭಾಷಣೆಯ ತನಕ, ಸಂಗೀತ, ದೃಶ್ಯ, ಪ್ರಸಾದನ…

ಹೀಗೆ ನಾಟಕದ ಪ್ರತಿಯೊಂದು ವಿಭಾಗದಲ್ಲೂ ಹೊಸದೊಂದು ಮಾರ್ಗವನ್ನೇ ಹುಟ್ಟುಹಾಕಿ ಕನ್ನಡ ನಾಟಕ ರಚನೆಯನ್ನೂ, ಕನ್ನಡ ನಾಟಕ ಪ್ರದರ್ಶನವನ್ನು ಹೊಸತನಕ್ಕೆ ತಿರುಗಿಸಿದ ಕೀರ್ತಿ ಕೈಲಾಸಂಗೇ ಸಲ್ಲುತ್ತದೆ.  ಇಂಗ್ಲೀಷಿನ ಜೊತೆಗೆ ತಮಿಳು, ತೆಲಗು, ಉರ್ದು, ಮಲೆಯಾಳಂ ಮತ್ತು ಸಂಸ್ಕೃತ ಭಾಷೆಗಳನ್ನೂ ನಾಟಕಗಳಲ್ಲಿ ಹೆಣೆದು ಆಡು ಭಾಷೆಯಿಂದ ಕೈಲಾಸಂ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದ್ದ ಪರಿಯನ್ನು ಬಲ್ಲವರೇ ಬಲ್ಲರು.

ಇಂಥ ಮಹದದ್ಭುತ ಪ್ರತಿಭೆಯ, ವಿಶಿಷ್ಟಗುಣದ ಕೈಲಾಸಂರವರನ್ನು ಬಹಳವಾಗಿ ಮೆಚ್ಚಿಕೊಂಡಿದ್ದ, ಹಚ್ಚಿಕೊಂಡಿದ್ದ ಗಣ್ಯಾತಿಗಣ್ಯರು ಮತ್ತು ಜನಸಾಮಾನ್ಯರು ಅಪಾರ.  ಅಂತಹವರಲ್ಲಿ ವೈಯನ್ಕೆಯವರೂ ಒಬ್ಬರಾಗಿದ್ದರು.  ವೈಯನ್ಕೆಯವರ ಮಾತುಗಳಲ್ಲೇ ಹೇಳುವುದಾದರೆ ‘ವೃತ್ತಿರಂಗಭೂಮಿಯ ನಾಟಕಗಳ ಕಾರುಬಾರಿನ ನಡುವೆ, ಸ್ಕ್ರೀನು, ಸೀನು, ಅದ್ಧೂರಿಯ ಸೆಟ್ಟು, ಸಂಸ್ಕೃತ ಭೂಯಿಷ್ಟ ಭಾಷೆ, ಪೌರಾಣಿಕ, ಐತಿಹಾಸಿಕ ಕಥಾವಸ್ತು ರಾರಾಜಿಸುತ್ತಿದ್ದ ದಿನಗಳಲ್ಲಿ ಕೈಲಾಸಂರ ನಾಟಕದ ಪಾತ್ರಗಳು ಸರಳ ಕನ್ನಡದಲ್ಲಿ ಮಾತನಾಡಲು ಆರಂಭಿಸಿದ್ದೇ ಒಂದು ಕ್ರಾಂತಿ’

ಹಾಗೆಯೇ ಪತ್ರಕರ್ತ, ಅಂಕಣಕಾರ ಜೋಗಿ ಅವರು ಒಂದು ಕಡೆ ಕೈಲಾಸಂ ಬಗ್ಗೆ ಬರೆಯುತ್ತಾ ‘ಕನ್ನಡದಲ್ಲಿ ಪನ್ ವಿನೋದ ಆರಂಭವಾದದ್ದು ಕೈಲಾಸಂ ಅವರಿಂದಲೇ.  ಅದಕ್ಕೂ ಮುಂಚೆ ಪದಗಳನ್ನು ಅಷ್ಟೊಂದು ಬೆಂಡೆತ್ತಬಹುದು ಎಂದು ಯಾರಿಗೂ ಗೊತ್ತಿದ್ದಂತಿರಲಿಲ್ಲ. ಕೈಲಾಸಂ ಇಂಗ್ಲೀಷ್, ಕನ್ನಡವನ್ನು ಬೆರೆಸಿ ಹೊಸ ಹೊಸ ಪದಗಳನ್ನು ಸೃಷ್ಟಿಸಿ, ತಮಗಿರುವ ಎರಡೂ ಭಾಷೆಯ ಪಾಂಡಿತ್ಯವನ್ನು ಸಮರ್ಥವಾಗಿ ಬಳಸಿದರು’ ಎನ್ನುತ್ತಾರೆ.  ಹೌದು ಇದು ಅಕ್ಷರಶಃ ನಿಜ.  ಕೈಲಾಸಂ ಅವರಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರ ಪಾಂಡಿತ್ಯವು ಅದ್ಭುತವಾಗಿ ಸಿದ್ಧಿಸಿತ್ತು. ಹಾಗಾಗಿ ಕೈಲಾಸಂ ನಾಟಕ ಸಾಹಿತ್ಯದಲ್ಲಿ ಇದು ಯತೇಚ್ಛವಾಗಿ ಅನಾವರಣಗೊಂಡಿತ್ತಲ್ಲದೆ ನಾಟಕ ರಂಗದಲ್ಲಿ ನವೋದಯ ಕನ್ನಡಕ್ಕೆ ನಾಂದಿ ಹಾಡಿತ್ತು.

ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗ.  ಸರ್ ಕೆ. ಶೇಷಾದ್ರಿ ಅಯ್ಯರ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲವದು.  ಆಗ ಶೇಷಾದ್ರಿ ಅಯ್ಯರ್ ಅವರು ಬಹಳಷ್ಟು ಮಂದಿ ಪ್ರತಿಭಾವಂತರನ್ನು ತಮಿಳು ನಾಡಿನಿಂದ ಕರೆತಂದು ಇಲ್ಲಿ ಉನ್ನತ ಹುದ್ದೆ ನೀಡಿದ್ದರು.  ಅಂಥವರಲ್ಲಿ ಜಸ್ಟೀಸ್ ತ್ಯಾಗರಾಜ ಪರಮ ಶಿವ ಅಯ್ಯರ್ ಸಹ ಒಬ್ಬರು.  ಎಡೆಯತಮಂಗಲಂ ನಾರಾಯಣಶಾಸ್ತ್ರಿಗಳ ಮಗಳು ಕಮಲಮ್ಮ ಇವರ ಧರ್ಮಪತ್ನಿ.

ಈ ಸುಸಂಸ್ಕೃತ ದಂಪತಿಗಳ ಜೇಷ್ಠ ಪುತ್ರನಾಗಿ 1885ರ ಜುಲೈ 29ರಂದು ಟಿ.ಪಿ. ಕೈಲಾಸಂ ಅವರು ತಾತ ನಾರಾಯಣಶಾಸ್ತ್ರಿಯವರ ಮನೆಯಲ್ಲಿ ಮೈಸೂರಿನಲ್ಲಿ ಜನಿಸಿದರು.  (ಇವರ ಜನ್ಮ ದಿನಾಂಕದ ಬಗ್ಗೆ ಹಲವು ಗೊಂದಲಗಳಿದ್ದು ಒಂದೊಂದು ಕಡೆ ಒಂದೊಂದು ರೀತಿ ಇದೆಯಾದರೂ ಕನ್ನಡ ಸಾಹಿತ್ಯ ಪರಿಷತ್ತಿನ ದಾಖಲೆಯ ಪ್ರಕಾರ ಇದೇ ಸರಿಯಾದದ್ದೆಂದು ನಂಬಬಹುದಾಗಿದೆ)

ಬೆಂಗಳೂರು ಮತ್ತು ಹಾಸನದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲಿತ ಕೈಲಾಸಂ ಪ್ರೌಢಶಾಲಾ ವ್ಯಾಸಂಗವನ್ನು ಮೈಸೂರಿನಲ್ಲಿ ಮಾಡಿದರು.  ಆ ಸಂದರ್ಭದಲ್ಲಿ ಇವರಿದ್ದ ವಿದ್ಯಾರ್ಥಿನಿಲಯದಲ್ಲೇ ಇವರ ಸಹಪಾಠಿಗಳಾಗಿ ಕನ್ನಡ ಕಣ್ವ ಬಿ.ಎಂ.ಶ್ರೀ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಎನ್.ಎಸ್. ಸುಬ್ಬರಾಯರೂ ಇದ್ದರಂತೆ.  ಆಗ ಕೈಲಾಸಂರ ತುಂಟತನ, ಚೇಷ್ಟೆಗಳನ್ನು ತಡೆಯಲಾಗದೆ ಅವರಿಬ್ಬರೂ ಬೇರೊಂದು ರೂಮನ್ನು ಹುಡುಕಿಕೊಂಡಿದ್ದರಂತೆ.

ಮುಂದೆ ಕೈಲಾಸಂ ಕಾಲೇಜು ವಿದ್ಯಾಭ್ಯಾಸವನ್ನು ಮದರಾಸಿನ ಪ್ರತಿಷ್ಟಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಂದುವರಿಸಿ 1907ರಲ್ಲಿ ಇಡೀ ಮದರಾಸು ಪ್ರಾಂತ್ಯಕ್ಕೇ ಮೊದಲ ಸ್ಥಾನಗಳಿಸಿ ‘ಕ್ರೊಮಾಟ’ ಪದಕದೊಡನೆ ಬಿ.ಎ. ಪದವಿ ಪಡೆದರು.  ನಂತರ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕೈಲಾಸಂ ಮೈಸೂರು ಸರ್ಕಾರದ ವಿದ್ಯಾರ್ಥಿ ವೇತನ ಪಡೆದು 1908ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದರು.

ಅಲ್ಲಿನ ರಾಯಲ್ ಸ್ಕೂಲ್ ಆಫ್ ಸೈನ್ಸ್ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರವನ್ನು ಅಧ್ಯಯನ ಮಾಡಿ 1915ರಲ್ಲಿ ಏಳು ಪಾರಿತೋಷಕಗಳೊಡನೆ ಉನ್ನತ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಆಗ ಲಂಡನ್ನಿನ ‘ರಾಯಲ್ ಜಿಯಾಲಾಜಿಕಲ್ ಸೊಸೈಟಿ’ ಕೈಲಾಸಂ ಅವರಿಗೆ ಪ್ರತಿಷ್ಠಿತ ‘ಫೆಲೊ’ ಸದಸ್ಯತ್ವ ನೀಡಿ ಗೌರವಿಸಿದ್ದು ಅವರ ಘನ ಪ್ರತಿಭೆಗೊಂದು ಮೆರಗು ನೀಡಿತ್ತು.    ಏಳು ವರ್ಷಗಳ ನಂತರ 1915ರಲ್ಲಿ ಕೈಲಾಸಂ, ತವರಿಗೆ ಮರಳುತ್ತಿದ್ದಂತೆಯೇ ಅವರನ್ನು ಸ್ವತಃ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರೇ ಪ್ರೊಬೆಷನರಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ಆಗಿ ನೇಮಿಸಿದರು.  ಆದರೆ ಅವರಿದ್ದದ್ದು ಕೇವಲ ನಾಲ್ಕೈದು ವರ್ಷಗಳಷ್ಟೆ.

ಏಳು ವರ್ಷಗಳು ಲಂಡನ್ನಿನಲ್ಲಿದ್ದಾಗ ಅಲ್ಲಿನ ಅನೇಕ ನಾಟಕಗಳನ್ನು ನೋಡಿ ಪ್ರಭಾವಿತರಾಗಿದ್ದ ಕೈಲಾಸಂ ಚಿತ್ತ ಅತ್ತಲೇ ಸುತ್ತುತ್ತಿದ್ದರಿಂದ ಮತ್ತು ಒಂದೇ ಕಡೆ ನಿಲ್ಲುವ ಜಾಯಮಾನದವರಲ್ಲದ ಅವರು 1920ರಲ್ಲಿ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದು ಕೈನಲ್ಲಿ ಲೇಖನಿ ಹಿಡಿದರು.  ನಾಟಕ ರಚನೆ ಮತ್ತು ನಟನೆಯನ್ನೇ ಗಟ್ಟಿ ಮಾಡಿಕೊಂಡರು.  ಅದಾಗಲೇ ಜಿಯಾಲಜಿಸ್ಟ್ ನೌಕರಿಯ ನಡುವೆಯೇ 1918ರಲ್ಲಿ ಮೊಟ್ಟಮೊದಲಿಗೆ ಅವರು ರಚಿಸಿದ್ದ ‘ಟೊಳ್ಳುಗಟ್ಟಿ’ ನಾಟಕಕ್ಕೆ ಬಿ.ಎಂ.ಶ್ರೀ  ಮತ್ತು ಬೆನಗಲ್ ರಾಮರಾವ್‌ರಂಥವರು ತೀರ್ಪುಗಾರರಾಗಿದ್ದ ಬೆಂಗಳೂರಿನ ಅಮೆಚೂರ್‍ಸ್ ನಾಟಕ ಸಂಘದಿಂದ ಪ್ರಥಮ ಬಹುಮಾನ ಬಂದಾಗಿತ್ತು.

ಇದರ ಸ್ಪೂರ್ತಿ ಕೈಲಾಸಂ ಲೇಖನಿಯ ವೇಗವನ್ನು, ರಂಗಭೂಮಿಯ ಬಗ್ಗೆ ಅವರಿಗಿದ್ದ ಸೆಳೆತದ ಓಘವನ್ನು ಹೆಚ್ಚಿಸಿತ್ತು.  ಆಗ ಇವರೊಳಗಿನ ಪ್ರತಿಭೆ ಹುಚ್ಚು ಹೊಳೆಯಂತೆ ಉಕ್ಕಿ ಹರಿದಿತ್ತು. ಒಂದರ ಹಿಂದೊಂದರಂತೆ ನಾಟಕ ಕೃತಿಗಳು ಇವರಿಂದ ರೂಪುಗೊಂಡು ಹವ್ಯಾಸಿ ನಾಟಕ ರಂಗದಲ್ಲೊಂದು ಹೊಸ ಕ್ರಾಂತಿಯೇ ನಡೆದದ್ದು ಈಗ ಇತಿಹಾಸ.

ಕೆಲಸಕ್ಕೆ ರಾಜೀನಾಮೆ ನೀಡಿ, ಬಯಸಿ, ಬಯಸಿ ಕೈಲಾಸಂ ಅವರು ನಾಟಕ ರಂಗಕ್ಕೆ ಬಂದಾಗ ಕೇವಲ ಕೆಲಸವನ್ನಷ್ಟೇ ಅವರು ಬಿಟ್ಟು ಬಂದಿರಲಿಲ್ಲ.  ತಾವು ವಾಸಿಸುತ್ತಿದ್ದ ಭವ್ಯವಾದ ‘ವೈಟ್ ಹೌಸ್’ ಅನ್ನೂ ಬಿಟ್ಟಿದ್ದರು.  ಜೊತೆಗಿದ್ದ ತಮ್ಮಿಡೀ ಕುಟುಂಬ ವರ್ಗವನ್ನೂ ಬಿಟ್ಟಿದ್ದರು.  ಒಟ್ಟಾರೆ ತಮ್ಮ ಆಗರ್ಭ ಶ್ರೀಮಂತಿಕೆಯೆಲ್ಲವನ್ನೂ ಬಿಟ್ಟು ಹೊರಬಂದಿದ್ದರು.

ಒಂದು ರೀತಿ ಬುದ್ಧನಾಗುವ ಮುನ್ನ ಸಿದ್ದಾರ್ಥ ಎಲ್ಲವನ್ನೂ ಬಿಟ್ಟು ಎದ್ದು ಬಂದಂತೆ.  ಹೀಗೆ ಎಲ್ಲವನ್ನೂ ಬಿಟ್ಟು ಬಂದ ಕೈಲಾಸಂ ಕೋಳಿಗೂಡಿನಂತಹ ಒಂದು ಕೊಠಡಿಯನ್ನು ತಮ್ಮ ಕರ್ಮಭೂಮಿ ಮಾಡಿಕೊಂಡಿದ್ದೇ ಒಂದು ಪವಾಡ.  ಇಂಥ ಕರ್ಮಭೂಮಿಯಲ್ಲಿ ಅರಳಿದ ಕಲಾ ಕುಸುಮಗಳೂ ಕೂಡ ಪವಾಡ ಸದೃಶವಾದಂಥವು.  ಹೀಗೆ ಕನ್ನಡ ರಂಗಭೂಮಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಕೈಲಾಸಂ ಕನ್ನಡಕ್ಕೊಬ್ಬರೇ ಅಲ್ಲದೆ ಇನ್ನೊಬ್ಬರೆಲ್ಲಿದ್ದಾರೆ?

ಎ.ವಿ. ವರದಾಚಾರ್ಯರ ರತ್ನಾವಳಿ ಥಿಯೇಟರ್ ಸೇರಿದಂತೆ ಆ ಕಾಲದ ಹಲವಾರು ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ತೊಡಗಿಸಿಕೊಂಡಿದ್ದ ಕೈಲಾಸಂ 1926ರಲ್ಲಿ ಎ.ವಿ. ವರದಾಚಾರ್ಯರು ನಿಧನರಾದ ಮೇಲೆ ರತ್ನಾವಳಿ ಥಿಯೇಟರನ್ನು ತಾವೇ ವಹಿಸಿಕೊಂಡು ಮುನ್ನಡೆಸಿದ್ದರು.  1929ರಲ್ಲಿ ಭವನಾನಿ ಎನ್ನುವವರು ಇಂಗ್ಲೆಂಡಿನ ಮುರ್ರೇ ಎಂಬುವವರೊಡಗೂಡಿ ಮೂಕಿ ಚಿತ್ರಗಳ ಕಾಲದಲ್ಲೇ ‘ವಸಂತಸೇನೆ’ ಚಲನಚಿತ್ರ ತಯಾರಿಸಲು ಮುಂದಾದಾಗ ಕೈಲಾಸಂ ಆ ಚಿತ್ರದಲ್ಲಿ ಶಕಾರನ ಪಾತ್ರ ಮಾಡಿದ್ದರು.  ಕೂತಲ್ಲಿ ಕಂಪನಿ, ನಿಂತಲ್ಲಿ ನಾಟಕ, ನಡೆದಲ್ಲಿ ಚಲನಚಿತ್ರ ಎಂಬಂತೆ ಕಾಲಿಗೆ ಚಕ್ರ ಜೋಡಿಸಿಕೊಂಡವರಂತೆ ಕೈಲಾಸಂ ಒಂದು ಕಡೆ ನಿಲ್ಲದೆ ನಿತ್ಯ ಚಲನಶೀಲರಾಗಿದ್ದರು.

ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಅತ್ಯಂತ ಸಿರಿವಂತ ಕುಟುಂಬದಲ್ಲಿ ಕೈಲಾಸಂ ಜನಿಸಿದ್ದೂ ಬಡತನದಲ್ಲೇ ಬದುಕಿದರು.  ಆದರೆ ಅವರ ಹೃದಯ ಅತ್ಯಂತ ಶ್ರೀಮಂತಿಕೆಯಿಂದ ಕೂಡಿತ್ತು.  ಎಲ್ಲರ ಕಷ್ಟ-ಸುಖಗಳಿಗೂ ಮಿಡಿಯುತ್ತಿದ್ದ ಅವರ ಹೃದಯ ವೈಶಾಲ್ಯತೆಗೆ ಕೈಲಾಸ ಪರ್ವತವೂ ಸಮನಲ್ಲವೆಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಮತ.  ಗುರು ಹಿರಿಯರ ಬಗ್ಗೆ ಅಪಾರ ಗೌರವ ಹೊಂದಿದ್ದ ಕೈಲಾಸಂ ಕಿರಿಯರನ್ನು ಪ್ರೋತ್ಸಾಹಿಸುವುದರಲ್ಲಿ ಎತ್ತಿದಕೈ.

ಆದರೆ ತಮ್ಮ ಗೌರವ, ಘನತೆ, ಸ್ವಾಭಿಮಾನಕ್ಕೆ ಕಿಂಚಿತ್ತು ದಕ್ಕೆಯಾದರೂ ಅವರು ಸಹಿಸುತ್ತಿರಲಿಲ್ಲ.  1944ರಲ್ಲಿ ರಬಕವಿಯಲ್ಲಿ ಜರುಗಬೇಕಿದ್ದ 28ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಕನ್ನಡ ಸಾಹಿತ್ಯ ಪರಿಷತ್ತು ಕೈಲಾಸಂ ಅವರನ್ನು ಆಯ್ಕೆ ಮಾಡಿತ್ತು.  ಆದರೆ ಪರಿಷತ್‌ನ ಆಹ್ವಾನ ಕೈಲಾಸಂ ಅವರ ಕೈ ತಲುಪಲೇ ಇಲ್ಲ.  ಆಗ ಸಮ್ಮೇಳನಾಧ್ಯಕ್ಷತೆಯ ಪೀಠ ಏರಲು ಕೈಲಾಸಂ ನಿರಾಕರಿಸಿಯೇ ಬಿಟ್ಟರು.

ಮುಂದಿನ ವರ್ಷ ಪರಿಷತ್ತು ಕೈಲಾಸಂರನ್ನು ಬಿಡದೆ ಹಠವಿಡಿದು ಒಪ್ಪಿಸಿದ್ದರಿಂದ 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅವರು ಅಲಂಕರಿಸಿದ್ದರು.  ಈ ಪೀಠದಿಂದ ಪ್ರತಿಧ್ವನಿಸಿದ ಅವರ ಮಾತುಗಳಾದರೂ ಎಂಥವು? ನೋಡಿ-

ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿ ತಾವು ಹೊಸಗನ್ನಡ ನಾಟಕದ ಮೇಲೆ ತಮಗಿರುವ ಆದರವನ್ನು ವ್ಯಕ್ತಪಡಿಸಿದ್ದೀರಿ.  ಅಲ್ಲವಾದರೆ ನಾನು ಈ ಗೌರವಕ್ಕೆ ತಕ್ಕವನೆ? ತಾವು ತೋರಿಸಿದ ಈ ಗೌರವ ನಮ್ಮ ನಾಡಿನ ಸಾತು, ಪಾತು, ನಾಗತ್ತೆ, ಪೋಲಿಕಟ್ಟಿ ಇತ್ಯಾದಿ ನನ್ನ ಬಸುರಿನ ಕೂಸುಗಳಿಗೆ ಸಂದ ಗೌರವ.  ನಾನೋ ಬರಿ ನಿಮಿತ್ತ, ನೆಪ! ಸಾತು ಪಾತುಗಳನ್ನು ನಿಮ್ಮ ಮುಂದೆ ಒಪ್ಪಿಸುವ ಸೂತ್ರದಾರ, ಆ ಪಾತ್ರಗಳ ಪರವಾಗಿ ಸಮಾಜ ಬಳಸುತ್ತಿರುವ ಕನ್ನಡ ನಾಟಕದ ಪ್ರಪಂಚದ ಪರವಾಗಿ ತಮ್ಮನ್ನು ನಾನು ವಂದಿಸುತ್ತೇನೆ.  ನಾಟಕದ ಮೇಲಿದ್ದ ಕೈಲಾಸಂರ ಅನನ್ಯ ಪ್ರೇಮಕ್ಕೆ ಈ ಮಾತುಗಳೇ ಸಾಕು.

1945ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಕಾವು ಕಾಣಿಸಿಕೊಂಡಿದ್ದ ಸಮಯ.  ಆಗ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಮಾತೃಭಾಷೆಯಾಗಿರುವವರೇ ಕನ್ನಡಿಗರು.  ಅವರು ಮಾತ್ರ ಕನ್ನಡ ನಾಡು-ನುಡಿಯ ಸೇವೆ ಮಾಡಲು ಅರ್ಹರು.  ಮಿಕ್ಕವರು ಅನರ್ಹರೆಂಬ ಮಾತುಗಳು ಅಲ್ಲಲ್ಲಿ ಪಿಸುಗುಟ್ಟುವಂತೆ ಕೆಲವರು ಮಾಡಿದ್ದರು.  ಇದರ ವಾಸನೆ ಅರಿತವರಂತೆ ಕೈಲಾಸಂ ನಮ್ಮ ಕನ್ನಡ ನಾಡಿನಲ್ಲಿ ನಾನಾ ಭಾಷೆಯ ಜನರಿದ್ದೇವೆ.  ಅದರಲ್ಲೂ ತಮಿಳು, ತೆಲುಗು, ತುಳು, ಕೊಂಕಣಿ, ಉರ್ದು, ಮರಾಠಿ, ಇಂಗ್ಲೀಷ್ ಇತಿ ನಾನಾ ವಿಧದ ಜನ ಕನ್ನಡ ನಾಡಿನ ಜನರನ್ನು ಸೇರಿ ಕರ್ನಾಟಕಸ್ಥರಾಗಿದ್ದಾರೆ.  ಇವರಲ್ಲಿ ಯಾರನ್ನೂ ಕರ್ನಾಟಕರಲ್ಲವೆನ್ನುವಂತಿಲ್ಲ ಎಲ್ಲರಿಗೂ ಕನ್ನಡವೇ ಪ್ರಧಾನ.

ತಮ್ಮ ತಾಯಿನುಡಿ ಯಾವುದೇ ಇರಲಿ, ಎಲ್ಲರೂ ಸಾಧ್ಯವಿದ್ದ ಮಟ್ಟಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕರ್ನಾಟಕದ ಕೆಲಸ ಮಾಡಿದ್ದಾರೆ.  ನಾನೇ ತಮಿಳ.  ಪರಿಷತ್ತಿನ ಉಪಾಧ್ಯಕ್ಷರಾದ ನನ್ನ ಹಿರಿಯ ತಮ್ಮ ಮಾಸ್ತಿಯವರೇ ತಮಿಳರು.  ಈ ಸಮ್ಮೇಳನವನ್ನು ಉದ್ಘಾಟಿಸಿದ ನನ್ನ ಹಿರಿಯ ಅಣ್ಣ ರಾಜಾಜಿ ತಮಿಳರು ಎಂದು ತಮ್ಮ ಭಾಷಣದಲ್ಲಿ ತೀಕ್ಷ್ಣವಾಗಿಯೇ ನುಡಿದು ಕರ್ನಾಟಕದಲ್ಲಿರುವವರೆಲ್ಲರೂ ಕರ್ನಾಟಕಸ್ಥರೇ, ಕನ್ನಡದ ಕೈಂಕರ್ಯ ಮಾಡುವವರೆಲ್ಲಾ ಕನ್ನಡಿಗರೇ ಎಂಬ ಭಾವದ ಕನ್ನಡ ಪ್ರಜ್ಞೆಯನ್ನು ಪಾಂಚಜನ್ಯವಾಗಿಸಿದ್ದರು.

ಕೈಲಾಸಂರ ನೇರ ನಡೆ, ನುಡಿ, ದಿಟ್ಟ ಬದುಕಿಗೆ, ಅಖಂಡ ಕನ್ನಡಾಭಿಮಾನಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.  ಹಾಗಂತ ಕೈಲಾಸಂ ಭಾಷಾವಾರು ಪ್ರಾಂತ್ಯ ರಚನೆಯ ವಿರೋಧಿಯಾಗಿರಲಿಲ್ಲ.  ರಾಷ್ಟ್ರದ ಸಮಗ್ರತೆಗೆ ಭಂಗವಾಗಬಾರದೆಂಬ ಕಾಳಜಿ ಅವರದು.  ಅದಕ್ಕಾಗಿಯೇ ಅವರು ತಮ್ಮ ಭಾಷಣದಲ್ಲಿ ನಾವು ಕರ್ನಾಟಕರು ಎಲ್ಲ ದ್ರಾವಿಡ ಸಂಪ್ರದಾಯಕ್ಕೂ ಒಕ್ಕಲು.  ಎಲ್ಲ ದ್ರಾವಿಡ ಭಾಷೆಗೂ ಆಶ್ರಯಧಾತರು.

ಅಖಂಡ ಭಾರತದ ನಿರ್ಮಾಣಕ್ಕೆ ಮುಂಚೆ ನಮ್ಮ ನಮ್ಮ ಪ್ರಾಂತೀಯ ದ್ವೇಷ ದಮನವಾಗಬೇಕು.  ಒಳಗೂ ಹೊರಗೂ ಎಲ್ಲರೊಡನೆ ಸಮರಸವಾಗಿ ನಡೆದು ನಾವು ಕರ್ನಾಟಕರು ಉಳಿದ ದಾಕ್ಷಿಣಾತ್ಯರಿಗೆ ಮೇಲು ಪಂಕ್ತಿಯಾಗಿರೋಣ.  ದಾಕ್ಷಿಣಾತ್ಯರೆಲ್ಲ ಒಂದಾಗಿ ಉತ್ತರಾಧಿಯವರಿಗೆ ಮೇಲು ಪಂಕ್ತಿಯಾಗೋಣ.  ನಮ್ಮ ನೆರೆಯವರನ್ನು ಬಿಟ್ಟು ನಮಗೆ ಪ್ರಾಂತ್ಯ ಬಂದರೂ ಕಣ್ಣುರಿ.  ನಮಗೆ ಇಲ್ಲದೆ ಅವರಿಗೆ ಬಂದರೂ ಕಣ್ಣುರಿ.  ಎಲ್ಲರಿಗೂ ಒಂದೇ ಮೋಕ್ಷ.  ಇದು ಸಮಷ್ಟಿ ರಾಜಕೀಯ ಎಂದು ಅರಿವಿನ ದೀಪ ಹಚ್ಚಿ ಹೇಳಿದ್ದರು.

ಮಿನುಗುತಾರೆ ಕಲ್ಪನಾ… ಎಂದೂ ಮರೆಯದ, ಯಾವತ್ತೂ ಮಾಸದ ಬೆಳ್ಳಿ ನಕ್ಷತ್ರ

admin
the authoradmin

Leave a Reply