ಕೆ.ಆರ್.ಪೇಟೆ(ಶ್ರೀನಿವಾಸ್): ತಾಲ್ಲೂಕಿನ ಕಸಬಾ ಹೋಬಳಿಯ ವಳಗೆರೆಮೆಣಸ ಗ್ರಾಮದ ದೊಡ್ಡಕೆರೆಯನ್ನು ಸುಮಾರು 300ಎಕರೆಯಷ್ಟು ಒತ್ತುವರಿ ಮಾಡಿಕೊಂಡಿದ್ದು, ಮಳೆ ಇಲ್ಲದ ಕಾರಣ ಅಕ್ಕಪಕ್ಕದ ರೈತರು ಖಾಲಿ ಇರುವ ಕೆರೆಯ ಒಡಲನ್ನು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ಬಗೆದು ಜಮೀನು ಮಾಡಿಕೊಳ್ಳುತ್ತಿದ್ದು ಕೂಡಲೇ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಿ ರೈತರ ಜೀವವಾಡಿಯಾಗಿರುವ ಕೆರೆಯನ್ನು ಉಳಿಸಿಕೊಡಬೇಕು ಎಂದು ವಳಗೆರೆಮೆಣಸ ಕೆರೆಯ ಅಚ್ಚುಕಟ್ಟು ರೈತರು ಆಗ್ರಹಿಸಿದ್ದಾರೆ.

ವಳಗೆರೆಮೆಣಸ ಕೆರೆಯನ್ನು ಮೈಸೂರು ಮಹಾರಾಜರು ಸುಮಾರು 1300ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆಯನ್ನು ಕಟ್ಟಿಸಿದ್ದರು. ಆದರೆ ಸದರಿ ಕೆರೆಯು ಸುಮಾರು 200ರಿಂದ 300ಎಕರೆಯಷ್ಟು ಪೂರ್ವ, ಪಶ್ಚಿಮ, ಉತ್ತರ ದಿಕ್ಕಿನಲ್ಲಿ ಹಲವಾರು ರೈತರಿಂದ ಒತ್ತುವರಿ ಆಗಿರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಕೆರೆಯ ಅಚ್ಚಕಟ್ಟು ಪ್ರದೇಶವಿದೆ.

ವಳಗೆರೆಮೆಣಸ ಕೆರೆಯಿಂದ ಬೊಮ್ಮನಾಯಕನಹಳ್ಳಿ, ಅಗ್ರಹಾರಬಾಚಹಳ್ಳಿ, ಚಿಲ್ಲದಹಳ್ಳಿ, ಬಿ.ಕೋಡಿಹಳ್ಳಿ, ವಳಗೆರೆಮೆಣಸ ಗ್ರಾಮಗಳ ಸಾವಿರಾರು ರೈತರ ಹೆಕ್ಟೇರ್ ಭೂಮಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿರುವ ಸದರಿ ಕೆರೆಗೆ ಎರಡು ತೂಬುಗಳ ಮೂಲಕ ರೈತರ ಜಮೀನಿಗೆ ನೀರು ಹರಿಯುತ್ತದೆ.
ಆದರೆ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ತೂಬಿನ ನಾಲೆಗಳಲ್ಲಿ ಹೂಳು ಮತ್ತು ಗಿಡಗಂಟಿಗಳು ಬೆಳೆದು ತುಂಬಿಕೊಂಡಿವೆ. ಇದರಿಂದ ನೀರು ಕಡೆಯ ಭಾಗದ ರೈತರಿಗೆ ತಲುಪುತ್ತಿಲ್ಲ ಇದರಿಂದಾಗಿ ಸಾಕಷ್ಟು ರೈತರು ಹಲವು ವರ್ಷಗಳಿಂದ ತಮ್ಮ ಭೂಮಿಯಲ್ಲಿ ನೀರಾವರಿ ಬೆಳೆ ಬೆಳೆಯಲು ಸಾಧ್ಯವಾಗದೇ ಖುಷ್ಕಿ ಬೆಳೆಗಳನ್ನು ಬೆಳೆಯುವಂತಾಗಿದೆ.

ಹೇಮಾವತಿ ನೀರಾವರಿ ಇಲಾಖೆಯ ನಂ.10ರ ವ್ಯಾಪ್ತಿಗೆ ಬರುವ ಸದರಿ ವಳಗೆರೆಮೆಣಸ ಕೆರೆಯನ್ನು ಶೆಟ್ಟಿನಾಯಕನಕೊಪ್ಪಲು ಸೀಮೆಣ್ಣೆ ರಾಜಣ್ಣ, ಶೆಟ್ಟಿಗೌಡ, ಅಣ್ಣಯ್ಯ, ಮಾಳಿ ಈರೇಗೌಡ, ನಗರೂರು ಗ್ರಾಮದ ಜವರಟ್ಟಿ ಮನೆ ರಾಮಣ್ಣ, ಮುತ್ತಣ್ಣ, ಮಂಜು, ಅಣ್ಣಯ್ಯ ಸೇರಿದಂತೆ ಹಲವು ರೈತರು ಸುಮಾರು 25ಎಕರೆಯಷ್ಟು ವಿಸ್ತೀರ್ಣದ ಕೆರೆಯನ್ನು ಜೆಸಿಬಿ ಮತ್ತು ಹಿಟಾಚಿ ಮೂಲಕ ಕೆರೆಯ ಮಧ್ಯ ಭಾಗಕ್ಕೆ ಮಣ್ಣು ಸುರಿದು ಒತ್ತುವರಿ ಮಾಡಿಕೊಂಡಿರುತ್ತಾರೆ.
ಅದೂ ಅಲ್ಲದೇ ಕೆರೆಗೆ ನೂರಾರು ಪಂಪ್‌ಸೆಟ್ ಅಳವಡಿಸಿಕೊಂಡು ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಚ್ಚಕಟ್ಟುದಾರರಿಗೆ ಇಂದರಿಂದ ನೀರಿಲ್ಲದಂತಾಗಿದೆ. ಶೆಟ್ಟಿಗೌಡರ ಮಗ ಸೋಮಶೇಖರ್ ಎಂಬಾತ ದೊಡ್ಡ ತೊರೆಹಳ್ಳವನ್ನೇ ಮುಚ್ಚಿಹಾಕಿ ಜಮೀನು ಮಾಡಿಕೊಂಡಿರುತ್ತಾರೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳು ತಕ್ಷಣ ಒತ್ತುವರಿ ಮಾಡುತ್ತಿರುವ ರೈತರು ಮತ್ತು ಜೆಸಿಬಿ, ಹಿಟಾಚಿ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ಇಡೀ ಕೆರೆಯನ್ನು ಸರ್ವೆ ಮಾಡಿ ಒತ್ತುವರಿಯಾಗಿರುವ ಕೆರೆಯನ್ನು ಬಿಡಿಸಿಕೊಡುವ ಮೂಲಕ ರೈತರ ಜೀವನಾಡಿಯಾದ ಕೆರೆಯನ್ನು ಉಳಿಸಿಕೊಡಬೇಕು ಇಲ್ಲದಿದ್ದರೆ ತಾಲ್ಲೂಕು ಕಚೇರಿಯ ಮುಂದೆ ಅಚ್ಚುಕಟ್ಟು ರೈತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಒತ್ತುವರಿಯಾಗಿರುವ ಕೆರೆ ಅಂಗಳದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ವಳಗೆರೆಮೆಣಸ ಗ್ರಾಮದ ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್.ಪಿ.ಕುಮಾರ್, ಅಚ್ಚುಕಟ್ಟು ರೈತರಾದ ನವೀನ್‌ಕುಮಾರ್, ಸೋಮೇಗೌಡ, ಮೊಗಣ್ಣೇಗೌಡ, ಗಿರೀಶ್, ರಾಮೇಗೌಡ, ಕುಮಾರ್, ಪ್ರಕಾಶ್, ರಂಜಿತ್, ಕಿರಣ್, ಮೋಹನ್ ಮತ್ತಿತರರು ತಿಳಿಸಿದ್ದಾರೆ.

ವಳಗೆರೆಮೆಣಸ ಕೆರೆಯನ್ನು ಜೆಸಿಬಿ ಮತ್ತು ಹಿಟಾಚಿ ಮೂಲಕ ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ರೈತರಿಂದ ಮಾಹಿತಿ ತಿಳಿದ ತಕ್ಷಣ ಹೇಮಾವತಿ ನೀರಾವರಿ ಇಲಾಖೆಯ ನಂ.10ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಜ್ಞಾನೇಶ್, ಫಾತಿಮಾ ಮತ್ತಿತರರು ಬೇಟಿ ನೀಡಿ ಒತ್ತುವರಿ ಮಾಡಿಕೊಳ್ಳುತ್ತಿದ್ದ ರೈತರಿಗೆ ತಿಳುವಳಿಕೆ ಮೂಡಿಸಿ, ಕೆರೆಯ ಜಾಗವು ಯಾವತ್ತಿದ್ದರೂ ನಿಮ್ಮ ಹೆಸರಿಗೆ ಖಾತೆಯಾಗುವುದಿಲ್ಲ. ಅದಕ್ಕೆ ಲಕ್ಷಾಂತರ ರೂ ಖರ್ಚು ಮಾಡಿ ಏಕೆ ಒತ್ತುವರಿ ಮಾಡಿಕೊಳ್ಳುತ್ತಿರಾ, ಸುಪ್ರಿಂಕೋರ್ಟಿನ ತೀರ್ಪಿನ ಪ್ರಕಾರ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದರೆ ಕನಿಷ್ಠ 6ತಿಂಗಳು ಜೈಲು ಶಿಕ್ಷೆ, ಜೊತೆಗೆ 1ಲಕ್ಷದ ವರೆಗೆ ದಂಡವಿಧಿಸುವ ಕಠಿಣ ಕಾನೂನು ಜಾರಿಯಲ್ಲಿದೆ.

ಇದಕ್ಕೆ ರೈತರು ಅವಕಾಶ ಮಾಡಿಕೊಡದೇ ರೈತರು ಮತ್ತು ಜನಜಾನುವಾರುಗಳಿಗೆ ವರದಾನವಾಗಿರುವ ಕೆರೆಕಟ್ಟೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು. ಒಂದೆರಡು ದಿನಗಳಲ್ಲಿ ಮತ್ತೊಮ್ಮೆ ಸರ್ವೆ ಮಾಡಿ ನಿರ್ಧಾಕ್ಷಿಣ್ಯವಾಗಿ ಒತ್ತುವರಿ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.








