ಮೈಸೂರು: ಬೆಂಗಳೂರಿನ ಐಷಾರಾಮಿ ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಸ್ವಚ್ಛತೆ ಮತ್ತು ಆಹಾರ ಗುಣಮಟ್ಟ ಬಗ್ಗೆ ಪರಿಶೀಲಿಸಿದಂತೆ ರಾಜ್ಯದ ಎಲ್ಲಾ ನಗರಗಳಲ್ಲೂ ಹಾಗೂ ಗ್ರಾಮಾಂತರ ಪ್ರದೇಶಗಳ ಹೋಟೆಲ್‌ಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಚಂದ್ರು ಮಂಡ್ಯ ಆಗ್ರಹಿಸಿದ್ದಾರೆ.
ಆಹಾರದ ಗುಣಮಟ್ಟ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಪರಿಶೀಲನೆ ನಡೆಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಸ್ವಚ್ಛತೆ ಇಲ್ಲದ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಹೋಟೆಲ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ.
ಆದರೆ ಇಂತಹ ಪರಿಶೀಲನೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲಾ ನಗರಗಳು ಹಾಗೂ ಗ್ರಾಮಾಂತರ ಪ್ರದೇಶಗಳ ಹೋಟೆಲ್‌ಗಳು, ಉಪಹಾರ ಮಂದಿರಗಳು, ಬೇಕರಿಗಳು ಮತ್ತು ಆಹಾರ ಮಾರಾಟ ಕೇಂದ್ರಗಳ ಮೇಲೂ ದಿಢೀರ್ ದಾಳಿ ನಡೆಸಿ ಸಮಗ್ರ ಪರಿಶೀಲನೆ ಕೈಗೊಳ್ಳಬೇಕು.

ಅನೇಕ ಕಡೆಗಳಲ್ಲಿ ಸ್ವಚ್ಛತೆಯ ಕೊರತೆ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಬಳಕೆ, ಅವಧಿ ಮೀರಿದ ಆಹಾರ ವಸ್ತುಗಳ ಮಾರಾಟ, ಅಶುಚಿಯಾದ ಅಡುಗೆ ಕೋಣೆಗಳು ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ.
ಆಹಾರ ಸುರಕ್ಷತಾ ಇಲಾಖೆ ನಿಯಮಿತವಾಗಿ ಹಾಗೂ ದಿಢೀರ್ ಪರಿಶೀಲನೆಗಳನ್ನು ನಡೆಸಬೇಕು. ನಿಯಮ ಉಲ್ಲಂಘಿಸುವ ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದಂಡ ವಿಧಿಸುವುದರ ಜೊತೆಗೆ, ಅಗತ್ಯವಿದ್ದರೆ ಪರವಾನಗಿ ರದ್ದುಪಡಿಸುವಂತಹ ಕ್ರಮಗಳನ್ನೂ ಕೈಗೊಳ್ಳಬೇಕು. ಪರಿಶೀಲನಾ ವರದಿಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
ಸಾರ್ವಜನಿಕರಿಗೆ ಶುದ್ಧ, ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ದೊರೆಯುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಆಹಾರ ಸುರಕ್ಷತಾ ಇಲಾಖೆ ರಾಜ್ಯವ್ಯಾಪಿ ವಿಶೇಷ ಪರಿಶೀಲನಾ ಅಭಿಯಾನವನ್ನು ತಕ್ಷಣ ಆರಂಭಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ.








