LatestMysore

ವಿಬಿ ಜಿ ರಾಮ್ ಜಿ ಯೋಜನೆ ಅನುದಾನ ಬರ ಪರಿಹಾರವಾಗಿ ರೈತರಿಗೆ ನೀಡಲು ಅಹಿಂದ ರೈತ ಸಂಘ ಆಗ್ರಹ

ಹುಣಸೂರು(ಮನುಕುಮಾರ್): ರಾಜ್ಯದಲ್ಲಿ ಮುಂಗಾರು ವಿಫಲವಾಗಿ ಬರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವೈಫಲ್ಯ ಪರಿಸ್ಥಿತಿ ಅಧ್ಯಯನ ನಡೆಸಿ ಪರಿಹಾರ ಘೋಷಿಸುವ ಬದಲಿಗೆ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ರೂಪಿಸಿದ ವಿಬಿ ಜಿ ರಾಮ್ ಜಿ ಯೋಜನೆ ಅನುದಾನವನ್ನು ಬರ ಪರಿಹಾರವಾಗಿ ರೈತರಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಅಹಿಂದ ರೈತ ಸಂಘದ ರಾಜ್ಯ ಅಧ್ಯಕ್ಷ ಶಿವಶೇಖರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಡಗು ಮೈಸೂರು ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಆಯ್ಕೆ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು ಬರ ಪರಿಹಾರಕ್ಕೆ ಈಗಾಗಲೇ ಸರ್ಕಾರದಿಂದ ಸಚಿವರು ತಾಲ್ಲೂಕುಗಳಿಗೆ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲಿ  ಈ ವರ್ಷ ಎಲ್ಲ ಕಡೆ    ಈಗಾಗಲೇ ಬರ ಕಾಣಿಸಿದ್ದು, ಕೃಷಿ ಕೂಲಿ ಕಾರ್ಮಿಕರು ಜೀವನೋಪಾಯಕ್ಕೆ ಗುಳೆ ಹೋಗದಂತೆ ಸೂಕ್ತ ಪರಿಹಾರ ಸರ್ಕಾರ ಪ್ರಕಟಿಸಬೇಕು.

ಕೇಂದ್ರ ಸರ್ಕಾರ ನೀಡುವ ಪರಿಹಾರದಿಂದ ರೈತರ ರಕ್ಷಣೆ ಅಸಾಧ್ಯ. ವಿಬಿ ಜಿ ರಾಮ್ ಜಿ ಯೋಜನೆ ಅನುದಾನವನ್ನು ಸಂಪೂರ್ಣ ರೈತ ಮತ್ತು ಕೃಷಿ ಕೂಲಿ ಕಾರ್ಮಿಕರ ಪರಿಹಾರವಾಗಿ ಬಳಸುವಂತಾಗಬೇಕು. ಹುಣಸೂರು ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದ್ದು, ಹಾಲಿ ಮತ್ತು ಮಾಜಿ ಶಾಸಕರ ಆಂತರಿಕ ಕಿತ್ತಾಟದಿಂದ ಯಾವುದೇ ಯೋಜನೆ ಕ್ಷೇತ್ರಕ್ಕೆ ಇಲ್ಲವಾಗಿದೆ. ಈ ಬಗ್ಗೆ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸುವರು. ಕಂದಾಯ ಇಲಾಖೆಯಲ್ಲಿ ರೈತರ ಶೋಷಣೆ ನಿರಂತರವಾಗಿದೆ. ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತ ರಾಜ್ಯ ಸರ್ಕಾರಕ್ಕೆ ಹೋರಾಟದಿಂದ ಉತ್ತರಿಸಲಿದೆ ಎಂದು ನುಡಿದರು.

ದೇವರಾಜ ಅರಸು ಶತಮಾನೋತ್ಸವ ಅಂಗವಾಗಿ 10 ವರ್ಷದ ಹಿಂದೆ ನಿರ್ಮಾಣ ಕಾಮಗಾರಿ ಆರಂಭವಾದ ಕಲಾಮಂದಿರ ಮತ್ತು ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ಈವರೆಗೂ ಉದ್ಘಾಟನೆಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ವಿಪರ್ಯಾಸ ಎಂದರು.

ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಎಚ್.ವಿ.ಮಧುಕುಮಾ‌ರ್ ಕೊಡಗು ಜಿಲ್ಲಾಧ್ಯಕ್ಷ, ಪವಿತ್ರಾ ರೈ ಮಡಿಕೇರಿ ಘಟಕದ ಅಧ್ಯಕ್ಷೆ, ಮಾನಸ್ವಿ ಕೊಡಗು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ, ದೀಲಿಪ್ ಡಿ.ಜೆ. ಕೊಡಗು ಪ್ರಧಾನ ಕಾರ್ಯದರ್ಶಿ, ಅನುಕುಮಾರ್‌ ಕುಶಾಲನಗರ ಅಧ್ಯಕ್ಷ, ಅಶ್ವಿನಿ ಸೋಮವಾರಪೇಟೆ ತಾ.ಮಹಿಳಾ ಅಧ್ಯಕ್ಷೆ, ಉದಯ ಕುಮಾರ್‌ ಮೈಸೂರು ಜಿಲ್ಲಾಧ್ಯಕ್ಷ, ಸುನಿತಾ ತಾಲ್ಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ, ಕವಿತಾ ಹುಣಸೂರು ತಾಲ್ಲೂಕು ಮಹಿಳಾ ಅಧ್ಯಕ್ಷೆ ಆಯ್ಕೆಯಾದರು.

ಬರ ಎದುರಿಸುತ್ತಿರುವ ಹಳೆ ಮೈಸೂರು ಭಾಗದ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೃಷಿ ಸಾಲ ಮನ್ನಾ, ಮೈಕ್ರೋ ಫೈನಾನ್ಸ್ ಬಡ್ಡಿ ಮನ್ನಾ, ಒಂದು ವರ್ಷ ಕಂತು ಪಾವತಿಗೆ ತಡೆ, ರೈತರ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ಮನ್ನ, ರೈತರ ಕುಟುಂಬಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿ‌ಕಿತ್ಸೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಕಂದಾಯ- ತೆರಿಗೆ ಮನ್ನಾ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗೆ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಚೆನ್ನಪ್ಪ, ನವಿಲೂರು ವಾಸುದೇವರೆಡ್ಡಿ, ಮಮತಾ. ಮೋಹಿನಿ ಪ್ರಕಾಶ್‌ ಇದ್ದರು. ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ಕೊಡಗು ಮತ್ತು ಮೈಸೂರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ರಾಜ್ಯ ಅಧ್ಯಕ್ಷ ಶಿವಶೇಖರ್ ಅಭಿನಂದಿಸಿದರು

admin
the authoradmin

Leave a Reply